ವಡ್ಡರ ಹಟ್ಟಿಯಲ್ಲಿ ಭೂಗತ

ನನ್ನ ಬಂಧನಕ್ಕೆ ವಾರಂಟ್ ಹೊರಡಿಸಲಾಯಿತು. ಹಾಗಾಗಿ ನಾನು ಭೂಗತನಾದೆ. ಪೋಲೀಸರು ನನ್ನ ಬಂಧನಕ್ಕಾಗಿ ದಾವಣಗೆರೆ ಜಾಲಾಡತೊಡಗಿದರು. ನಾನು ಮತ್ತು ಮುರಿಗಯ್ಯ ಕುರುಬರಹಟ್ಟಿಯಲ್ಲಿ ಭೂಗತರಾಗಲು ನಿರ್ಧರಿಸಿದೆವು.

ಮರುದಿನ ನನ್ನನ್ನು ವಡ್ಡರಹಟ್ಟಿಗೆ ಕರೆದೊಯ್ಯಲಾಯಿತು. ಯಾಕೆಂದರೆ ಅಲ್ಲಿ ಮುರಿಗಯ್ಯ ಚಿರಪರಿಚಿತರು. ಎಲ್ಲರೂ ಅವರನ್ನು ಗೌರವಿಸುತ್ತಿದ್ದರು. ಈ ರೀತಿ ದಾವಣಗೆರೆಯ ವಡ್ಡರೊಂದಿಗೆ ನನ್ನ ಬದುಕಿನ ದಿನಗಳು ಆರಂಭವಾದುವು.

ವಡ್ಡರೊ೦ದಿಗೆ ನಾನು ಸುಮಾರು ಒಂದು ವರುಷ ಕಳೆದೆ. ಆ ಅವಧಿಯಲ್ಲಿ ನಡುನಡುವೆ ದಾವಣಗೆರೆ ಮತ್ತು ಹರಿಹರದ ಕೆಲವು ಗುಪ್ತಜಾಗಗಳಿಗೆ ಹೋಗಿ ಉಳಿದುಕೊಂಡಿದ್ದೆ. ನನ್ನ ಆಣ್ಣ ಕೆಲಸ ಮಾಡುತ್ತಿದ್ದ ಹೊಸಪೇಟೆಗೂ ಒಮ್ಮೆ ಹೋಗಿದ್ದೆ. ಇನ್ನೊಮ್ಮೆ  ಅಡ್ಡೂರಿಗೂ ಹೋಗಿದ್ದೆ. ಆದರೆ ಹೆಚ್ಚಿನ ಅವಧಿಯನ್ನು ನಾನು ದಾವಣಗೆರೆಯ ವಡ್ಡರ ಹಟ್ಟಿಯಲ್ಲೇ ಕಳೆದೆ. ಅಲ್ಲಿ ಅವರು ನನ್ನನ್ನು ಜೋಪಾನವಾಗಿ ರಕ್ಷಿಸಿ ನಿಷ್ಠೆಯಿಂದ ನೋಡಿಕೊ೦ಡಿದ್ದರು.

ವಡ್ಡರು ದಾವಣಗೆರೆಯಲ್ಲಿ ಎರಡು ಕಾಲೋನಿಗಳಲ್ಲಿ ವಾಸ ಮಾಡಿಕೊಂಡಿದ್ದರು. ಅವು ಪೇಟೆಯ ಅಂಚಿನಲ್ಲಿದ್ದವು. ಕಾಲೋನಿಗಳನ್ನು ಹೊಲಗಳು ಸುತ್ತುವರಿದಿದ್ದುವು. ನನ್ನ ಪತ್ತೆಗಾಗಿ ಯಾರಾದರೂ ಬಂದರೆ, ಈ ಹೊಲಗಳಿಗೆ ಓಡಿಹೋಗಿ ತಪ್ಪಿಸಿಕೊಳ್ಳಬಹುದೆಂಬ ಯೋಚನೆ ನನ್ನಲ್ಲಿ ಸುರಕ್ಷಿತ ಭಾವ ಹುಟ್ಟಿಸಿತು.

ದಾವಣಗೆರೆಯ ವಡ್ಡರನ್ನು ಕ್ರಿಮಿನಲ್‌ಗಳೆಂದು ಪರಿಗಣಿಸುತ್ತಿರಲಿಲ್ಲ. ಆದರೆ ಭದ್ರಾವತಿಯ ವಡ್ಡರಿಗೆ ಕ್ರಿಮಿನಲ್‌ಗಳೆಂಬ ಹಣೆಪಟ್ಟಿ ಹಚ್ಚಲಾಗಿತ್ತೆಂದು ಕೇಳಿದ್ದೆ.  ಅವರು ಕತ್ತಲಾಗುವ ಮುನ್ನ ತಮ್ಮ ಕಾಲೋನಿಗೆ ವಾಪಾಸಾಗಬೇಕೆಂಬ ನಿರ್ಬಂಧವೂ ಇತ್ತು. ದಾವಣಗೆರೆಯ ವಡ್ಡರಿಗೆ ಆ ರೀತಿಯ ನಿರ್ಬಂಧವಿರಲಿಲ್ಲ.

ದಾವಣಗೆರೆಯ ವಡ್ಡರು ಮೈ ಬಗ್ಗಿಸಿ ದುಡಿಯುವವರಾಗಿದ್ದರು. ಮುಂಜಾನೆ ತಮ್ಮ ಎತ್ತಿನಗಾಡಿಗಳಲ್ಲಿ ಪೇಟೆಯ ಹೊರವಲಯಕ್ಕೆ ಸಾಗಿ, ಕಲ್ಲುಗಳನ್ನು ಸ೦ಗ್ರಹಿಸಿ  ಲೋಕೋಪಯೋಗಿ ಇಲಾಖೆಗೆ ಸರಬರಾಜು ಮಾಡುತ್ತಿದ್ದರು. ಬಹುಪಾಲು ಮನೆಗಳಲ್ಲಿ ಒಂದೊಂದು ಗಾಡಿ ಇತ್ತು. ಇದನ್ನು ಎಳೆಯಲು ಎಮ್ಮೆಗಳನ್ನೇ ಬಳಸುತ್ತಿದ್ದರು. ಆದರೆ ಎಮ್ಮೆಗಳು ಹಾಲು ಕೊಡುವ ಅವಧಿಯಲ್ಲಿ ಅವನ್ನು ಗಾಡಿಗಳಿಗೆ ಬಿಗಿಯುತ್ತಿರಲಿಲ್ಲ. ಎಮ್ಮೆಗಳನ್ನು ಮನೆಯೊಳಗೇ ಇರಿಸಿ ಆರೈಕೆ ಮಾಡುತ್ತಿದ್ದರು. ಯಾಕೆಂದರೆ ತಮ್ಮ ಜೀವನೋಪಾಯಕ್ಕಾಗಿ ವಡ್ಡರು ಎಮ್ಮೆಗಳನ್ನು ಅವಲಂಬಿಸಿದ್ದರು.

ವಡ್ಡರ ಮನೆಗಳಲ್ಲಿ ವಾಸ 

ಕೋಣೆಯ ಮೂಲೆಯೊ೦ದರಲ್ಲಿ ಮರದ ಚೌಕಟ್ಟಿಗೆ ಹುರಿಹಗ್ಗದ ಎಳೆಗಳನ್ನು ಬಿಗಿದು ಮಾಡಿದ ಮಂಚದಲ್ಲಿ ನಾನು ಮಲಗುತ್ತಿದ್ದೆ. ಅದೇ ಕೋಣೆಯಲ್ಲಿ ಎಮ್ಮೆಗಳನ್ನೂ ಕಟ್ಟಿಹಾಕುತ್ತಿದ್ದರು. ಎಮ್ಮೆಗಳು ಬಾಲ ಬೀಸಿದಾಗ, ಬಾಲಗಳಿಗೆ ಅಂಟಿಕೊಂಡಿದ್ದ ಸೆಗಣಿ ಮತ್ತು ಮೂತ್ರ ಅನೇಕ ಬಾರಿ ನನ್ನ ಮೇಲೆ ಸಿಂಚನವಾಗಿತ್ತು. ಕೆಲವೊಮ್ಮೆ ಮನೆಯ ಹೊರಗೆ ಜಗಲಿಯಲ್ಲಿ ಮಲಗುತ್ತಿದ್ದೆ. ಆದರೆ ಅಂತಹ  ಜಗಲಿಗಳಿದ್ದ ಮನೆಗಳು ವಿರಳವಾಗಿದ್ದುವು.

ವಡ್ಡರು ನನಗೇನೂ ಕೊಟ್ಟರೂ ಅದನ್ನೇ ತಿನ್ನುತ್ತಿದ್ದೆ. ನನಗೆ ಅನ್ನ, ಜೋಳದ ರೊಟ್ಟಿ, ಹಿಟ್ಟಿನ ಮುದ್ದೆ ಮತ್ತು ಒಣಗಿದ ಮೀನಿನ ಪದಾರ್ಥವನ್ನೇ  ಕೊಡುತ್ತಿದ್ದರು. ಇದರ ಹೊರತಾಗಿ ಬೇರೇನನ್ನೂ ತಿಂದುದು ನನಗೆ ನೆನಪಿಲ್ಲ.

ಅಲ್ಲಿ ಸೊಳ್ಳೆಗಳ ಕಾಟಕ್ಕಿಂತಲೂ, ತಿಗಣೆಗಳ ಕಾಟ ಜೋರಿತ್ತು.  ಸಾವಿರಾರು ಸಂಖ್ಯೆಯಲ್ಲಿದ್ದ ತಿಗಣೆಗಳು ಸಾಲುಗಟ್ಟಿ ಗೋಡೆ ಹತ್ತುತ್ತಿದ್ದುದು ಈಗಲೂ ಕಣ್ಣಿಗೆ ಕಟ್ಟುತ್ತಿದೆ. ಅಂತಹ ಸ್ಥಳದಲ್ಲಿ ನಾನು ನಿದ್ದೆ ಮಾಡಿದ್ದೆನೆಂಬುದನ್ನು ಈಗ  ನಂಬಲೂ ಸಾಧ್ಯವಾಗುತ್ತಿಲ್ಲ.

ಒಮ್ಮೆ ನಾನು ಇದ್ದ ಹಟ್ಟಿಗೆ ನಮ್ಮನ್ನು ಹುಡುಕಲೆಂದು ಹಲವು ಪೊಲೀಸ್ ಅಧಿಕಾರಿಗಳು ಬ೦ದಿದ್ದರು. ಅವರು ಹುಡುಕಾಡುವಾಗ ನಮ್ಮ ಹುಡುಗರು ಆತಂಕದಿಂದ ನೋಡುತ್ತಾ ಇದ್ದರು. ಆಗ ಒಬ್ಬ ಪೊಲೀಸ್ ಅಧಿಕಾರಿಯು ಅವರ ಹಿಂದೆ ಬರುತ್ತಿದ್ದ ಪೊಲೀಸರೊಂದಿಗೆ ಅನ್ನುತ್ತಿದ್ದನಂತೆ – “ಲೋ, ಅವರನ್ನು ನೋಡಿದೊಡನೆ ಗಬಕ್ಕನೆ ಹಿಡಕ್ಕೊಂಡು ಬಿಟ್ಟಿರಾ, ಹುಶಾರ್. ಅವರು ಜೀವದ ಮೇಲೆ ಆಸೆ ಇಲ್ಲದ ಸೂ….ಮಕ್ಕಳು” ಇದನ್ನು ಆ ಯುವಕರು ನನ್ನೊಂದಿಗೆ ಹೇಳಿದಾಗ ನನಗೆ ನಗು ಬಂತು. ಯಾಕೆ೦ದರೆ ಆಗಿನ ನನ್ನ ಆತಂಕ ನನಗೇ ಗೊತ್ತು. ಎಲ್ಲಿಯಾದರೂ ಹಿಡಿದುಬಿಟ್ಟಾರೋ ಅಂತ. ಅಂತೂ ಅಂದು ಪೊಲೀಸರಿಂದ ತಪ್ಪಿಸಿಕೊಂಡೆ.

ಇನ್ನೊಮ್ಮೆ ನಾನು ಪೇಟೆಯ ಕೇಂದ್ರದಲ್ಲಿರುವ ಒಬ್ಬರ ಮನೆಗೆ ಸಂಜೆಯಾಗುತ್ತಲೇ ಹೋಗಿದ್ದೆ. ಅಲ್ಲಿಗೆ ನಾನು ಭೂಗತನಾದ ಮೇಲೆ ಹೋದುದು ಅದೇ ಮೊದಲು. ಎದೆ ಡವಡವ ಅನ್ನುತ್ತಿತ್ತು. ಎಲ್ಲಾದರೂ ಪೊಲೀಸಿನವನು ಗುರುತಿಸಿದರೆ ಕೆಲಸ ಕೆಟ್ಟಂತೆ. ಮಧ್ಯಮ ವರ್ಗದವರ ವಠಾರದಲ್ಲಿ ನಮಗೆ ಹಲವು ಬೆಂಬಲಿಗರಿದ್ದರೂ ಅಲ್ಲಿ ವಾಸವಾಗಿರಲು ಹಿಂಜರಿಯುತ್ತಿದ್ದೆ. ಕಾರ್ಮಿಕರ ವಸತಿಗಳಲ್ಲಿ, ಅದರಲ್ಲೂ ವಡ್ಡರ ಹಟ್ಟಿಯಲ್ಲಿ, ನಾನು ಸುರಕ್ಷಿತನೆಂಬ ಭರವಸೆಯಿತ್ತು.

ನನ್ನನ್ನು ಕರೆದುಕೊಂಡು ಹೋಗುತ್ತಿದ್ದ ವಡ್ಡರ ಯುವಕ ಸುಂಕಪ್ಪ ನನಗೆ ಅಂಗರಕ್ಷಕ. ಅವನು ನನಗೆ ಧೈರ್ಯ ಹೇಳುತ್ತಿದ್ದ. ನನ್ನ ಆತಂಕ ನೋಡಿ ಕೊನೆಗೆ ಹೇಳಿದ. “ಹಾಗೇನಾದರೂ ನಿಮ್ಮನ್ನು ಪೊಲೀಸರು ಹಿಡಿದುಕೊಂಡರೆ ನಾನು ಅವರನ್ನು ಗಟ್ಟಿಯಾಗಿ ಅಪ್ಪಿಕೊಳ್ಳುತ್ತೇನೆ. ನೀವು ಓಡಿಬಿಡಿ…” ಪಾಪ, ಅದರ ಪರಿಣಾಮ ಅವನು ಯೋಚಿಸಿರಲಿಲ್ಲ. ನಾನೇನೋ ಪಾರಾದೇನು. ಆದರೆ ಪೊಲೀಸರ ಕೈಗೆ ಸಿಕ್ಕಿದ ಅವನ ಗತಿ! ಅವರ ಪ್ರೀತಿ ನನ್ನನ್ನು ಮಂತ್ರಮುಗ್ಧಗೊಳಿಸಿತು. ಅದರ ಗುಂಗು ಈಗಲೂ ನನ್ನಲ್ಲಿ ಉಳಿದು, ಎಲ್ಲಾ ಮಾನವರೂ ಸಮಾನರು ಎಂಬ ಮನೋಭಾವ ನಿತ್ಯ ಸ್ಪುರಿಸುತ್ತದೆ.

ವಡ್ಡರು ನನ್ನ ಬಗ್ಗೆ ತೋರಿದ ನಿಷ್ಠೆ ಮತ್ತು ಪ್ರೀತಿಯನ್ನಂತೂ ಮರೆಯಲಾಗದು. ಅವರೊಂದಿಗೆ ದಿನಕಳೆದಂತೆ ಅವರ ಬಗ್ಗೆ ನನ್ನಲ್ಲೂ ಪ್ರೀತಿ ಭಾವ ಬೆಳೆಯಿತು. ಅವರೂ ನನ್ನಂತೆಯೇ ಮನುಷ್ಯರೆಂಬ ಅರಿವು ಅನುಭವದಲ್ಲಿ ಬೇರೂರಿತು. ಇದರಿಂದಾಗಿ ಜನಸಾಮಾನ್ಯರ ಬಗ್ಗೆ ನನ್ನ ಧೋರಣೆಯೇ ಸಕಾರಾತ್ಮಕವಾಯಿತು. “ನಾವೆಲ್ಲರೂ ಸಮಾನರು, ನಾವೆಲ್ಲರೂ ಅಣ್ಣ ತಮ್ಮಂದಿರು ಹಾಗೂ ಅಕ್ಕತಂಗಿಯರು” ಎಂದು ನಮ್ಮಲ್ಲಿ ಅನೇಕರು ಘೋಷಣೆ ಕೂಗುವುದುಂಟು. ಭೂಗತನಾಗಿದ್ದ ನನಗೆ ಒಂದು ವರುಷ ಅನ್ನ ಆಶ್ರಯವಿತ್ತ ವಡ್ಡರು ಅದನ್ನು ಕಾರ್ಯದಲ್ಲಿ ತೋರಿಸಿದರು. ವಡ್ಡರಿಂದ ಕಲಿತ ಇಂತಹ ಅಮೂಲ್ಯ ಪಾಠವನ್ನು ಬದುಕಿನಲ್ಲಿ ಮರೆಯಲಿಕ್ಕುಂಟೇ?

ಪ್ರಾತಿನಿಧಿಕ ಫೋಟೋ: ಹಳ್ಳಿಯ ಗುಡಿಸಲು   

ಆಕರ ಪುಸ್ತಕ: ಅಡ್ಡೂರು ಶಿವಶಂಕರರಾಯರ ಎಂಬತ್ತರ ಕೊಯ್ಲಿನ ಕಾಳುಗಳು