ನನ್ನ ಮೇಲೆ ಮಾರಕ ಹಲ್ಲೆಯಾದ ಸುದ್ದಿ ತಿಳಿದ ಹೊಸಪೇಟೆ ಸರಕಾರಿ ಆಸ್ಪತ್ರೆಯ ಸರ್ಜನ್ ಆಗಿದ್ದ ನನ್ನ ಅಣ್ಣ ಡಾ. ಎ.ತಿಮ್ಮಪ್ಪಯ್ಯ, ಮರುದಿನವೇ ಬಂದು ನನ್ನನ್ನು ಆಸ್ಪತ್ರೆಯಲ್ಲಿ ನೋಡಿದರು. ಹತ್ತಿರ ಇದ್ದವರೊಡನೆ “ಎಸ್.ಪಿ.ಯವರ ಕಚೇರಿಯೆಲ್ಲಿದೆ?” ಎಂದು ಕೇಳಿದರು. ಆಗ ಹತ್ತಿರವೇ ಇದ್ದ ಶಿವು “ನಾನು ತೋರಿಸುತ್ತೇನೆ” ಎಂದ. ಅವನನ್ನು ಕಾರಿನಲ್ಲಿ ಕೂರಿಸಿಕೊಂಡು ನನ್ನ ಅಣ್ಣ ಎಸ್.ಪಿ.ಯವರನ್ನು ಕಾಣಲು ಹೋದರು. ಪೊಲೀಸ್ ಕಚೇರಿಯವರು ಸರ್ಜನ್ರ ಕಾರಿನ ಮುಂದಿನ ಆಸನದಲ್ಲಿ ಕುಳಿತಿದ್ದ ಶಿವುವನ್ನು ನೋಡಿ ವಿಸ್ಮಿತರಾದರು. ತಕ್ಷಣವೇ ಅಣ್ಣನನ್ನು ಎಸ್.ಐ.ಯವರ ಬಳಿ ಕರೆದೊಯ್ದರು.
ಅಣ್ಣ ನನ್ನನ್ನು ನೋಡಿ ಹಿಂತಿರುಗಿದ ಹತ್ತು ಹದಿನೈದು ದಿನಗಳಲ್ಲಿ ನಾನು ಚೇತರಿಸಿಕೊಂಡು ಆಸ್ಪತ್ರೆಯಿಂದ ಹೊರಬ೦ದೆ. ನನ್ನ ತಲೆಯ ಗಾಯಕ್ಕೆ ಬ್ಯಾಂಡೇಜ್ ಕಟ್ಟಿಕೊಂಡೇ ಕಾರ್ಮಿಕರನ್ನು ಸಂಘಟಿಸುವ ಕೆಲಸ ಮುಂದುವರಿಸಿದೆ. ಆಗಲೂ ಶಿವು ಜೊತೆಗೆ ಇರುತ್ತಿದ್ದ. ಕಾರ್ಮಿಕರನ್ನು ಭೇಟಿ ಮಾಡುತ್ತಾ, ದೀರ್ಘ ಹೋರಾಟಕ್ಕಾಗಿ ಸಜ್ಜಾಗಲು ಅವರನ್ನು ಹುರಿದುಂಬಿಸತೊಡಗಿದೆ. ಆದಾಗಲೇ ಸೆಕ್ಷನ್ 144ನ್ನು ಹಿಂದೆಗೆಯಲಾಗಿತ್ತು. ಸಂಘಟಿತ ಹೋರಾಟಕ್ಕಾಗಿ ಕಾರ್ಮಿಕರ ಉತ್ಸಾಹ ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿತು.
ರಾತ್ರಿ ಹೊತ್ತಿನಲ್ಲಿ ಕಾರ್ಮಿಕರನ್ನು ಭೇಟಿಯಾಗುತ್ತಾ ಸಂಘಟನೆಯ ಕೆಲಸ ಮುಂದುವರಿಸಿದಾಗ ನನ್ನನ್ನು ಕಾಣಬೇಕೆಂದು ಶಿವು ಬಹಳ ಹವಣಿಸಿದ್ದ. ಆದರೆ ಅವನನ್ನು ನನ್ನ ಬಳಿಗೆ ಕರೆದುಕೊಂಡು ಬರಲು ನನ್ನ ಸಹಚರರು ಸಿದ್ಢರಿಲ್ಲ. ಹಾಗಾಗಿ ನಾನು ಭೂಗತನಾದ ಬಳಿಕ ಅವನ ಭೇಟಿಯಾಗಲಿಲ್ಲ.
“ನಾನಿನ್ನು ಕಳ್ಳತನ ಮಾಡುವುದಿಲ್ಲ, ನಿಮ್ಮೊಂದಿಗೆ ಇದ್ದು ಕೆಲಸ ಮಾಡುವೆ” ಎಂದು ಶಿವು ಹೇಳಿದ್ದನ್ನು ನಾನು ನಂಬಿದ್ದೆ. ಜೈಲಿನಲ್ಲಿರುವಾಗ ಸಂತೆಯ ದಿನ ಜೈಲಿನ ಸಿಬ್ಬಂದಿ ತನ್ನನ್ನು ಹೊರಗೆ ಬಿಟ್ಟು, ಕಳ್ಳತನ ಮಾಡಿ ಹಣ ತಂದು ಕೊಡಬೇಕೆಂದು ಹೇಳುತಿದ್ದರೆಂದೂ ತಾನು ಹಾಗೆ ಮಾಡುತ್ತಿದ್ದುದಾಗಿಯೂ ಶಿವು ನನಗೆ ಹೇಳಿದ್ದ. ಅವನನ್ನು ಯಾರೂ ನಂಬದಿದ್ದಾಗ ಜೀವನ ನಡೆಸಲಿಕ್ಕಾಗಿ ಅವನು ಪುನಃ ಕಳ್ಳತನಕ್ಕೆ ಇಳಿದಿರಬೇಕೆಂದು ಊಹಿಸಿದೆ.
ಅನಂತರ ನಾನು ಅವನನ್ನು ನೋಡದಿದ್ದರೂ ನನ್ನ ಅಣ್ಣ ಶಿವುವನ್ನು ಒಮ್ಮೆ ನೋಡಿದ್ದಾಗಿ ತಿಳಿಸಿದ. ಬಳ್ಳಾರಿ ಜೈಲಿನ ಮೇಲುಸ್ತುವಾರಿಕೆಗಾಗಿ ಅಣ್ಣ ವೈದ್ಯಕೀಯ ಅಧಿಕಾರಿಯಾಗಿ ಹೋಗಿದ್ದಾಗ, ಒಬ್ಬ ಖೈದಿ ಸಲಾಂ ಹೊಡೆದನಂತೆ. “ನೀನು ಯಾರು?” ಎಂದು ನನ್ನ ಅಣ್ಣ ಕೇಳಿದಾಗ, “ನಾನು ನಿಮ್ಮ ತಮ್ಮನ ಸ್ನೇಹಿತ” ಎಂದು ಉತ್ತರಿಸಿದನಂತೆ. ದಾವಣಗೆರೆಯಲ್ಲಿ ಎಸ್.ಪಿ.ಕಚೇರಿಗೆ ಕರೆದೊಯ್ದದ್ದನ್ನು ಜ್ಞಾಪಿಸಿದನಂತೆ. ಜೈಲಿನಲ್ಲಿ ನಿನ್ನ ಸ್ನೇಹಿತ ನನಗೆ ಸಿಕ್ಕಿದ್ದ ಎಂದು ಅಣ್ಣ ಹೇಳಿದಾಗ ‘ಅದ್ಯಾರು’ ಎಂದು ಆಶ್ಚರ್ಯಪಟ್ಟಿದ್ದೆ. ಕೊನೆಗೆ ಗೊತ್ತಾಯಿತು ಅವನೇ ಡಾಕು ಶಿವು ಅಂತ.
ಸಹ ಕಾರ್ಯಕರ್ತರ ಸಲಹೆಗಳನ್ನು ಕಡೆಗಣಿಸಿ ನಾನು ಆ ದಿನಗಳಲ್ಲಿ ಶಿವುನೊಂದಿಗೆ ಸಹವಾಸ ಮುಂದುವರಿಸಿದ್ದರೆ ಅವನೂ ಒಬ್ಬ ಒಳ್ಳೆಯ ಮನುಷ್ಯನಾಗಿ ಪರಿವರ್ತನೆ ಆಗುತ್ತಿದ್ದನೋ ಏನೋ? ಒ೦ದು ವೇಳೆ ಶಿವು ಬದಲಾಗಿದ್ದರೂ ಅವನ ಹೆಸರಿಗೆ ಅಂಟಿಕೊಂಡ “ಡಾಕು” ಎಂಬ ಬಿರುದು ತೊಲಗುತ್ತಿರಲಿಲ್ಲ.
ಪ್ರಾತಿನಿಧಿಕ ಫೋಟೋ: ಹತ್ತಿ ಗಿರಣಿ - ಒಳಾಂಗಣ
ಆಕರ ಪುಸ್ತಕ: ಅಡ್ಡೂರು ಶಿವಶಂಕರರಾಯರ ಎಂಬತ್ತರ ಕೊಯ್ಲಿನ ಕಾಳುಗಳು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!