ವೇದಕಾಲದಲ್ಲಿ ಸಾವಿರಾರು ವರುಷಗಳ ಕಾಲ ವ್ಯಕ್ತಿಗಳು ಬದುಕಿದ್ದ ಉಲ್ಲೇಖಗಳಿವೆ. ಭರದ್ವಾಜ ಋಷಿ ಮುನ್ನೂರು ವರುಷ ವಿದ್ಯಾರ್ಜನೆಗಾಗಿ ಶ್ರಮಿಸಿದನೆಂಬ ಉಲ್ಲೇಖ ಪುರಾಣಗಳಲ್ಲಿ ಸಿಗುತ್ತದೆ.
ಹಿ೦ದಿನ ಕಾಲದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಹಳ್ಳಿಗರು ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ಆಗ ಲಭ್ಯವಿದ್ದ ವೈದ್ಯಕೀಯ ವ್ಯವಸ್ಥೆಗೆ ಒಗ್ಗಿಕೊಂಡಿದ್ದರು. ಆದರೆ ನಾವು ಸ್ವಾತಂತ್ರ್ಯ ಪಡೆಯುವ ಮೊದಲು ಭಾರತೀಯರ ಸರಾಸರಿ ಆಯುಷ್ಯ ಕೇವಲ ಮೂವತ್ತು ವರುಷಗಳಷ್ಟಿತ್ತು. ಅದು ಈಗ 50-60 ವರುಷಗಳಿಗೆ ಏರಿದೆ.
ಕಳೆದ ಶತಮಾನದ ಮೊದಲನೇ ದಶಕದಲ್ಲಿ ದೇಶದ ನಾನಾ ಭಾಗಗಳಲ್ಲಿ ಪ್ಲೇಗ್ ತಗಲಿ ಸತ್ತವರು ಸಾವಿರಾರು ಜನರು. ಒಂದನೇ ಮಹಾಯುದ್ಢದ ನಂತರ ವ್ಯಾಪಿಸಿದ ಇನ್ಫ್ಲುಯೆಂಜಾ ರೋಗ ಎಷ್ಟು ಜನರ ಜೀವ ತೆಗೆದಿಲ್ಲ? ಸಿಡುಬು, ಮಲೇರಿಯಾ, ಡಿಫ್ತೀರಿಯಾ, ನಾಯಿಕೆಮ್ಮು, ಕ್ಷಯ, ಕುಷ್ಠ.. ಈ ರೋಗಗಳಿಗೆ ಮುಂಚೆ ಔಷಧವಿರಲಿಲ್ಲ. ಹುಚ್ಚುನಾಯಿ ಅಥವಾ ಹಾವು ಕಡಿದರೆ ಆಗ ಮರಣವೇ ಗತಿ.
ಈಗ ಯಾವುದೇ ರೋಗಕ್ಕೂ ಔಷಧಗಳಿವೆ. ಅಲೋಪತಿ ವೈದ್ಯ ಪದ್ಧತಿಯಲ್ಲಿ ಎಲ್ಲದಕ್ಕೂ ಔಷಧಗಳಿವೆ. ಅಲೋಪತಿ ಹೊರತಾಗಿ ಆಯುರ್ವೇದ, ಹೋಮಿಯೋಪತಿ, ಯುನಾನಿ, ನಾಟಿವೈದ್ಯ ಪದ್ಧತಿಗಳೂ ಇವೆ. ಇವುಗಳಿಂದ ಏನೂ ಪ್ರಯೋಜನವಿಲ್ಲವೆಂದು ವಾದಿಸುವವರೂ ಇದ್ದಾರೆ. ಆದರೆ ಈ ಪದ್ದತಿಗಳನ್ನು ಸರಿಯಾಗಿ ಎಷ್ಟು ಜನ ತಿಳಿದಿದ್ದಾರೆ? ಈ ಪದ್ಧತಿಗಳನ್ನು ಅನುಸರಿಸಿ ಕೊನೆಗೆ ಜೀವನ್ಮರಣದ ಸ್ಥಿತಿ ತಲುಪಿದಾಗ ‘ಗುಣವಾದರೆ ಗುಣವಾಯಿತು, ಇಲ್ಲದಿದ್ದರೆ ಇಲ್ಲ.’ ಎ೦ದು ರೋಗಿಯ ಕೈಬಿಡುವವರೇ ಹೆಚ್ಚು!
ಸುಮಾರು ಐವತ್ತು ವರುಷಗಳ ಹಿಂದೆ ಅಡ್ಡೂರಿನಲ್ಲಿ ರೋಗಿಗಳಿಗೆ ಔಷಧ ಕೊಡಲು ಡಾಕ್ಟರರೇ ಇರಲಿಲ್ಲ. ನಮ್ಮ ಗ್ರಾಮಕ್ಕೆ ದೂರದ ಬಜ್ಪೆಯಿಂದ ಸೈಕಲ್ಲಿನಲ್ಲಿ ಬಂದು, ಮೂರ್ನಾಲ್ಕು ಮೈಲು ನಡೆದು ರೋಗಿಗಳಿಗೆ ಚಿಕಿತ್ಸೆ ಮಾಡುತ್ತಿದ್ದರು. ಒಮ್ಮೆ ಹೀಗಾಯಿತು: ಟೈಫಾಯಿಡ್ನಿ೦ದ ನರಳುತ್ತಿದ್ದ ವ್ಯಕ್ತಿಯನ್ನು ಮೂರ್ನಾಲ್ಕು ಮೈಲು ನಡೆಸಿಕೊಂಡು, ದೋಣಿಯಲ್ಲಿ ನದಿ ದಾಟಿ, ಪುನ: ಹತ್ತು ಮೈಲು ಮೋಟಾರು ವಾಹನದಲ್ಲಿ ಸಾಗಿಸಿ ಆಸ್ಪತ್ರೆಗೆ ಸೇರಿಸಿದರೂ ಆತನ ಜೀವ ಉಳಿಸಲಾಗಲಿಲ್ಲ.
ಆಗ ನಮ್ಮ ಊರಿನಲ್ಲಿ ಒಬ್ಬರು ನಾಟಿ ವೈದ್ಯರಿದ್ದರು. ನಮ್ಮ ಮನೆ ಹತ್ತಿರದ ಒಬ್ಬ ಕೃಷಿ ಕಾರ್ಮಿಕನಿಗೆ ವಿಷ ಹಾವು ಕಡಿದಾಗ ಅವರು ಚಿಕಿತ್ಸೆ ನೀಡಿ ಗುಣಪಡಿಸಿದ್ದರು. ಸ್ವಲ್ಪ ಸಮಯದ ನಂತರ ನಮ್ಮ ಬಂಧುವೊಬ್ಬರಿಗೆ ಕನ್ನಡಿ ಹಾವು ಕಚ್ಚಿದಾಗ ಅವರು ಹತ್ತಿರದಲ್ಲೇ ಇದ್ದ ಈ ನಾಟಿ ವೈದ್ಯರ ಮೊರೆಹೋಗದೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಹೋದರು. ಅಲ್ಲಿಂದ ಜೀವಸಹಿತ ಮರಳಿ ಬಂದರು. ಹೀಗೆ ಕೆಲವರು ನಾಟಿ ಪದ್ಧತಿಯನ್ನು ನಂಬಿದರೆ ಇನ್ನು ಕೆಲವರು ಅಲೋಪತಿಯನ್ನು ನ೦ಬುತ್ತಿದ್ದರು.
ಈಗ ಯಾವ ರೋಗಕ್ಕೂ ಹೆದರಬೇಕಾಗಿಲ್ಲ. ಸಿಡುಬು ರೋಗವಂತೂ ನಿರ್ಮೂಲನವಾಗಿದೆ. ಈಗಿನ ಔಷಧಗಳು ದುಬಾರಿ. ಜನಸಾಮಾನ್ಯರಿಗೆ ವೈದ್ಯಕೀಯ ಚಿಕಿತ್ಸೆಯ ವೆಚ್ಚ ನಿಭಾಯಿಸಲು ಬಹುತೇಕ ಸಂದರ್ಭಗಳಲ್ಲಿ ಕಷ್ಟ. ಆದರೆ ಇದೊಂದು ದೊಡ್ಡ ಸಮಸ್ಯೆಯಲ್ಲ.ಆರೋಗ್ಯ ವಿಮೆ ಮಾಡಿ ಈ ಸಮಸ್ಯೆ ಪರಿಹರಿಸಿಕೊಳ್ಳಬಹುದು.
ಅಂತೂ ಆಗಿನ ಕಾಲದಲ್ಲಿ ಆರೋಗ್ಯವು “ಭಾಗ್ಯ”ವಾಗಿದ್ದರೆ ಅದು ಅದೃಷ್ಟ. ಈಗ ಹಾಗಲ್ಲ.
ವೈದ್ಯರೊಂದಿಗೆ ಮುಖಾಮುಖಿ
“ಎಲ್ಲಾ ನಿಮಗೆ ಗೊತ್ತಿದ್ದ ಮೇಲೆ ನಾವು ಯಾಕೆ?”
ನನ್ನ ಕಣ್ಣಿನ ದೃಷ್ಟಿಯಲ್ಲಿ ನ್ಯೂನತೆ ಆಗಿದೆ ಎಂಬ ಕಾರಣಕ್ಕಾಗಿ ಮಂಗಳೂರಿನ ನುರಿತ ವೈದ್ಯರೊಬ್ಬರಲ್ಲಿಗೆ ಕಣ್ಣುಗಳನ್ನು ತೋರಿಸಲು ಹೋಗಿದ್ದೆ. ‘ನನಗೆ ದೂರದ ವಸ್ತುಗಳು ಮಾತ್ರ ಕಾಣುತ್ತವೆ. ಹತ್ತಿರದಿಂದ ಪತ್ರಿಕೆಗಳನ್ನು ಓದುವುದಕ್ಕಾಗುವುದಿಲ್ಲ’ ಎಂದು ನನ್ನ ಸಮಸ್ಯೆಯನ್ನು ಅವರಲ್ಲಿ ತಿಳಿಸಿದಾಗ ಈ ಮೇಲಿನ ಮಾತನ್ನು ಹೇಳಿದರು!
ನಮಗೆ ಕಾಯಿಲೆ ಬಂದಾಗ ವೈದ್ಯರ ಹತ್ತಿರ ಹೋಗುತ್ತೇವೆ. ಅನೇಕ ಡಾಕ್ಟರರು ಪರೀಕ್ಷೆ ಮಾಡಿ ಔಷಧಿ ಬರೆದು ಕೊಡುತ್ತಾರೆ ವಿನಾ ನಮ್ಮ ಖಾಯಿಲೆ ಏನೆಂಬುದನ್ನು ನಮಗೆ ತಿಳಿಸುವುದಿಲ್ಲ. ನಾವು ಏನಾದರೂ ಕೇಳಿದರೆ ಸಿಡಿಮಿಡಿಗೊಳ್ಳುತ್ತಾರೆ, ನಮ್ಮ ಸಂಶಯಗಳನ್ನು ನಿವೇದಿಸಿಕೊಂಡರೆ ಕೆಂಡಾಮಂಡಲವಾಗುತ್ತಾರೆ.
ಯುವಕನಾಗಿದ್ದಾಗ ನನಗೆ ಅಂಡಾಶಯದ ಊತವಾಗಿತ್ತು. ಮಿತ್ರರೊಬ್ಬರಿಗೆ ತಿಳಿಸಿದೆ. ಕಾಫಿ ತೋಟದ ಮಾಲಕರಾದ ಆ ನನ್ನ ಮಿತ್ರರು ಬಹಳ ಪ್ರಭಾವಿ ಮನುಷ್ಯ. ಅವರು ಬೆಂಗಳೂರಿನ ಪ್ರಸಿದ್ಢ ಡಾಕ್ಟರರಾದ ತನ್ನ ಮಿತ್ರರೊಡನೆ ಮಾತನಾಡಿ ನನ್ನನ್ನು ಅವರ ಬಳಿಗೆ ಕಳುಹಿಸಿದರು. ವಿಶ್ವಾಸದಿ೦ದ ಆ ಡಾಕ್ಟರರ ಹತ್ತಿರ ಹೋದೆ. ಅವರು ದೀರ್ಘ ಹೊತ್ತು ಪರೀಕ್ಷಿಸಿ, “ನೀನು ನಿನ್ನ ಅಂಡಾಶಯವನ್ನು ಕಳೆದುಕೊಳ್ಳಬೇಕಾಗಿ ಬರಬಹುದು. ಶಸ್ತ್ರಚಿಕಿತ್ಸೆಯಾಗಬೇಕು” ಎಂದರು. ನನ್ನನ್ನು ಪರೀಕ್ಷಿಸುವಾಗ ಅಲ್ಲಿದ್ದವರು ಪರಸ್ಪರ ಮಾತನಾಡುವಾಗ ‘ಸೆಮಿನೋಮಾ’ ಎಂಬ ಶಬ್ದವನ್ನು ಹಲವು ಸಲ ಬಳಸಿದ್ದನ್ನು ಕೇಳಿಸಿಕೊಂಡೆ.
ನನ್ನ ಅಣ್ಣ ಅಲೋಪತಿ ವೈದ್ಯ. ಅವನಿಗೆ ಈ ವಿಚಾರ ತಿಳಿಸಿದೆ. ಮದ್ರಾಸಿನಲ್ಲಿರುವ ಸ್ಟಾನ್ಲಿ ಆಸ್ಪತ್ರೆಯ ಮುಖ್ಯಸ್ಥರನ್ನು ಭೇಟಿಯಾಗೆಂದ. ಕೂಡಲೇ ಮದರಾಸಿಗೆ ಹೋದೆ. ಸಂಬಂಧಪಟ್ಟವರನ್ನು ಸಂಪರ್ಕಿಸಿದೆ. “ಸೆಮಿನೋಮಾ! ಅದನ್ನು ಶಸ್ತ್ರಚಿಕಿತ್ಸೆ ಮಾಡಿದರೆ, ಅದು ಇತರ ಭಾಗಗಳಿಗೂ ಹರಡುವುದು” ಎಂದರು. ನನಗೆ ಗಾಬರಿಯಾಯಿತು; ಅದು ಕ್ಯಾನ್ಸರ್ ಎಂಬುದು ಖಚಿತವಾಯಿತು.
ಆದರೂ ಆಸ್ಪತ್ರೆಗೆ ದಾಖಲಾದೆ. ಅಲ್ಲಿ ನನಗೆ ಶಸ್ತ್ರಚಿಕಿತ್ಸೆ ಮಾಡುವ ವೈದ್ಯರು ನನ್ನ ತಂದೆಯವರ ಸಹೋದ್ಯೋಗಿಯಾಗಿದ್ದು ನಮ್ಮ ಕುಟುಂಬದ ಮಿತ್ರರಾಗಿದ್ದವರು. ಶಸ್ತ್ರಚಿಕಿತ್ಸೆಯ ದಿವಸ ಆಪರೇಷನ್ ಮೇಜಿನಲ್ಲಿ ನನ್ನನ್ನು ಮಲಗಿಸಿದರು. ನನ್ನ ಸುತ್ತಲೂ ವೈದ್ಯಕೀಯ ವಿದ್ಯಾರ್ಥಿಗಳು ನಿಂತಿದ್ದರು.
ಅವರೊಡನೆ ಮಾತನಾಡುತ್ತಾ ನನ್ನ ಪರಿಚಯದ ಸರ್ಜನರು – “ಇವನ ತಂದೆ ಈ ಆಸ್ಪತ್ರೆಯಲ್ಲೇ ವೈದ್ಯರಾಗಿದ್ದರು. ಇವನ ಅಣ್ಣಂದಿರು ಕೂಡಾ ವೈದ್ಯರಾಗಿದ್ದು, ಇವನು ವೈದ್ಯರ ಕುಟುಂಬದಲ್ಲೇ ಬೆಳೆದವನು. ಹಾಗಾಗಿ ಇವನಿಗೂ ಸ್ವಲ್ಪ ವೈದ್ಯಕೀಯ ವಿಷಯ ತಿಳಿದಿದೆ. ಯಾರೋ ಅರ್ಧರ್ಧ ತಿಳಿದ ಡಾಕ್ಟರರು ಇವನಿಗೆ ಸೆಮಿನೋಮಾ (ಕ್ಯಾನ್ಸರ್) ಇದೆ ಎಂದು ಹೇಳಿರಬೇಕು. ಇದು ಸೆಮಿನೋಮಾ ಅಲ್ಲ” ಅಂದರು.
ಅವರು ಅಂದು ಹೇಳಿದ್ದ ಅರೆಬರೆ ವೈದ್ಯಕೀಯ ಜ್ಞಾನ ಒಳ್ಳೆಯದಲ್ಲ ಎಂಬ ಮಾತು ನನಗೆ ಆಗಾಗ ನೆನಪಾಗುತ್ತದೆ. ಹಾಗಾಗಿ ಈ ಅರೆಜ್ಞಾನದ ಆಧಾರದಲ್ಲಿ ಡಾಕ್ಟರರುಗಳೊ೦ದಿಗೆ ನನ್ನ ಸಂಶಯಗಳನ್ನು ಹೇಳಿಕೊಳ್ಳಲು ಅಂದಿನಿಂದ ನನಗೆ ಹಿಂಜರಿಕೆ.
ಸಾಂದರ್ಭಿಕ ಫೋಟೋ: ರೋಗಿ ಮತ್ತು ವೈದ್ಯ … ಕೃಪೆ: ಅಡೋಬ್ ಸ್ಟಾಕ್
ಆಕರ ಪುಸ್ತಕ: ಅಡ್ಡೂರು ಶಿವಶಂಕರರಾಯರ ಎಂಬತ್ತರ ಕೊಯ್ಲಿನ ಕಾಳುಗಳು
ಲೇಖಕರು: ಅಡ್ಡೂರು ಕೃಷ್ಣರಾವ್, ನಾ. ಕಾರಂತ ಪೆರಾಜೆ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!