ದಾವಣಗೆರೆಯಲ್ಲಿ ಕಾಟನ್ ಮಿಲ್ಲಿನ ಕಾರ್ಮಿಕರ ಸಂಘಟನಾ ಕೆಲಸದಲ್ಲಿ ತೊಡಗಿಕೊಂಡಿದ್ದ ನನ್ನನ್ನು ಮತ್ತು ಹತ್ತಿ ಗಿರಣಿಯ ಕಾರ್ಮಿಕರನ್ನು ಬಂಧಿಸಿ, ದಾವೆ ಹೂಡಿ, ನಾವು ವಿಚಾರಣಾಧೀನ ಖೈದಿಗಳಾಗಿ, ಜೈಲಿನಲ್ಲಿದ್ದಾಗ ನನಗೆ ಪರಿಚಯವಾದವನು ಶಿವು. 

ನನಗೆ ಅವನ ಪರಿಚಯವಾದದ್ದು ದಾವಣಗೆರೆ ಸಬ್ ಜೈಲಿನಲ್ಲಿ. ದಾವಣಗೆರೆ ಕಾಟನ್ ಮಿಲ್ಲಿನ (ಹತ್ತಿ ಗಿರಣಿಯ) ಸುಮಾರು ಮೂವತ್ತು ಕಾರ್ಮಿಕರೊಂದಿಗೆ ನನ್ನನ್ನೂ ಬಂಧಿಸಿ ಸಬ್ ಜೈಲಿನಲ್ಲಿ ಕೂಡಿಹಾಕಿದ್ದ ದಿನಗಳಲ್ಲಿ. 1947ರ ಮೈಸೂರಿನ ಜವಾಬ್ದಾರಿ ಸರಕಾರಕ್ಕಾಗಿ ನಡೆಸಿದ ಚಳವಳಿ ಯಶಸ್ವಿಯಾದಾಗ ಕಾರ್ಮಿಕರಲ್ಲಿ ಹೊಸ ಹುರುಪು ಮೂಡಿತ್ತು. ಅದರ ಪರಿಣಾಮವಾಗಿ ಹೊಸ ಕೇಳಿಕೆಗಳನ್ನು ಮು೦ದಿಟ್ಟು, ಕಾರ್ಮಿಕ ಸ೦ಘ ಸ್ಥಾಪಿಸಿ, ಸ೦ಘಟನಾ ಚಟುವಟಿಕೆ ಪ್ರಾರಂಭಿಸಿದ್ದರು. ಅದನ್ನು ಹೊಸಕಿ ಹಾಕಲು ಕಾಟನ್ ಮಿಲ್ಲಿನ ಮಾಲೀಕವರ್ಗ ಕಾರ್ಖಾನೆಯೊಳಗೆ ಗಲಭೆ ಹುಟ್ಟು ಹಾಕಿ, ಅನ೦ತರ ಬೀಗಮುದ್ರೆ ಹಾಕಿದ್ದರು. ಅದನ್ನು ಪ್ರತಿಭಟಿಸಿದ ಕಾರ್ಮಿಕ ಸಂಘದ ಮುಂದಾಳುಗಳನ್ನು ಬಂಧಿಸಿ ದಾವೆ ಹಾಕಲಾಗಿತ್ತು, ಕಾರ್ಮಿಕ ಸಂಘದ ಉಪಾಧ್ಯಕ್ಷನಾಗಿದ್ದ ನನ್ನನ್ನೂ ಅವರೊಂದಿಗೆ ಬಂಧನದಲ್ಲಿ ಇರಿಸಲಾಗಿತ್ತು.

ವಿಚಾರಣಾಧೀನ ಖೈದಿಗಳಾಗಿದ್ದ ನಮ್ಮನ್ನು ಜೈಲಿನಲ್ಲಿ ದುಡಿಸುತ್ತಿರಲಿಲ್ಲ. ಹಾಗಾಗಿ ನಾನು ಅವರನ್ನೆಲ್ಲ ಒಟ್ಟುಗೂಡಿಸಿ ರಾಜಕೀಯ ಕಾರ್ಮಿಕ ಚಳವಳಿ ಬಗ್ಗೆ ಪಾಠ ಮಾಡುತ್ತಿದ್ದೆ. ಇತರ ಖೈದಿಗಳೂ ಹತ್ತಿರ ಬಂದು ಕುಳಿತು ಪಾಠ ಕೇಳುತ್ತಿದ್ದರು. ಆಗ ನಮ್ಮ ಕಾರ್ಮಿಕರು “ಹೋಗ್ರಲೇ, ನಾವು ನಿಮ್ಮ ಹಾಗೆ ಕಳ್ಳತನ ಮಾಡಿ ಬ೦ದದ್ದಲ್ಲ” ಎಂದು ಹೇಳಿ ಅವರನ್ನು ದೂರ ಕಳುಹಿಸಲು ಪ್ರಯತ್ನಿಸುತ್ತಿದ್ದರು.

ಆದರೆ ಒಬ್ಬ ಮಾತ್ರ ನಮ್ಮಿಂದ ದೂರ ಸರಿಯುತ್ತಿರಲಿಲ್ಲ. ಅವನೇ ಹೆಸರಾಂತ ಕಿಸೆಕಳ್ಳ “ಡಾಕು ಶಿವು”. ಕಳ್ಳತನ ಮಾಡದಿದ್ದರೂ ಬಂಧಿಸಲ್ಪಟ್ಟ ನಮ್ಮಂತಹ ಖೈದಿಗಳನ್ನು ಅವನು ಅದೇ ಮೊದಲ ಬಾರಿ ಕಂಡಿದ್ದ. ಹಾಗಾಗಿ ಅವನು ಕುತೂಹಲದಿಂದ ನನ್ನ ಮಾತುಗಳನ್ನು ಆಲಿಸುತ್ತಿದ್ದ.

ಒಂದು ದಿನ ಅವನು ನನ್ನ ಬಳಿ ಬಂದು, ತನಗೊಂದು ಮಾಫಿ (ಕ್ಷಮಾದಾನ) ಅರ್ಜಿ ಬರೆದುಕೊಡಬೇಕೆಂದು ವಿನಂತಿಸಿದ. ನಾನು ಬರೆದುಕೊಟ್ಟೆ. ಅವನು ಅದನ್ನು ಮೇಲಧಿಕಾರಿಗಳಿಗೆ ಕಳುಹಿಸಿದನಂತೆ.

ಶಿವು ಸಾಮಾನ್ಯ ಕಿಸೆಕಳ್ಳನಲ್ಲ! ಸಂತೆಗಳಲ್ಲಿ, ಜಾತ್ರೆಗಳಲ್ಲಿ, ರೈಲಿನಲ್ಲಿ ಬಸ್ ನಿಲ್ದಾಣದಲ್ಲಿ ತನ್ನ ಕೈಚಳಕದಿಂದ ಸಂಪಾದನೆ ಮಾಡುತ್ತಿದ್ದ. ಒಮ್ಮೆ ಪೊಲೀಸರು ಅವನನ್ನು ಬಂಧಿಸಿ ಹೊಡೆದಾಗ ಅವನು ತನ್ನ  ಹಲ್ಲುಗಳು ಮತ್ತು ತುಟಿಯ ನಡುವೆ ಇಟ್ಟುಕೊಂಡಿದ್ದ ಅರ್ಧ ಬ್ಲೇಡನ್ನು ಹೊರತೆಗೆದು ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ನ ಮುಖಕ್ಕೆ ಬ್ಲೇಡ್‌ನಲ್ಲಿ ಗೀರಿದ್ದನಂತೆ. ಈ ಸುದ್ದಿ ಎಲ್ಲ ಕಡೆ ಹಬ್ಬಿ ಅವನು ಹೆಸರುವಾಸಿಯಾದ. ಅದಾದ ಬಳಿಕ ಅವನ ಹೆಸರಿಗೆ “ಡಾಕು” ಎಂಬ ಬಿರುದು ಸೇರಿಕೊ೦ಡಿತು. ಪೊಲೀಸ್ ದಾಖಲೆಗಳಲ್ಲೂ ಅವನ ಹೆಸರು “ಡಾಕು ಶಿವು” ಎಂದು ದಾಖಲಾಯಿತು. ಅವನ ತಮ್ಮನೂ ಅವನಂತೆಯೇ ಚಾಲಾಕಿ. ಶಿವು ಬಂಧನವಾಗಿ ದಾವೆ ಆದಾಗ, ಅವನ ತಮ್ಮ ಕಳ್ಳತನ ಮಾಡಿ ಹಣ ಸಂಗ್ರಹಿಸಿ ವಕೀಲರನ್ನಿಟ್ಟು ದಾವೆ ನಡೆಸುತ್ತಿದ್ದ. ತಮ್ಮನು ಪೊಲೀಸರಿಗೆ ಸಿಕ್ಕಿಬಿದ್ದಾಗ ಶಿವು ಆ ಕೆಲಸ ಮಾಡುತ್ತಿದ್ದ. ಹೀಗಿತ್ತು ಅವರಿಬ್ಬರ ಪರಸ್ಪರ ಸಹಕಾರ.

ಅನ೦ತರ ಕೆಲವೇ ದಿನಗಳಲ್ಲಿ ನನ್ನ ಬಿಡುಗಡೆ ಆಯಿತು. ಕಾಟನ್ ಮಿಲ್ಲಿನ ಕಾರ್ಮಿಕರು, ಮುಖ್ಯವಾಗಿ ಮಹಿಳಾ ಕಾರ್ಮಿಕರು ರೈಲಿನಲ್ಲಿ ಬೆಂಗಳೂರಿಗೆ ಪ್ರಯಾಣಿಸಿ, ನಮ್ಮ ಬಿಡುಗಡೆಗೆ ಒತ್ತಾಯಿಸಿ, ಸರಕಾರದ ಕಚೇರಿ ಎದುರು ಸತ್ಯಾಗ್ರಹ ಮಾಡಿದರು. ಜನಸಾಮಾನ್ಯರ  ಬಲದಿಂದ ಅಧಿಕಾರಕ್ಕೇರಿದ್ದ ಹೊಸ ಸರಕಾರ ಮುಜುಗರಪಟ್ಟು ನಮ್ಮನ್ನೆಲ್ಲ ಬಿಡುಗಡೆ ಮಾಡಿತು. ಅದಲ್ಲದೆ ಕಾರ್ಮಿಕರ ಬೇಡಿಕೆಗಳನ್ನು ಪರಿಶೀಲಿಸಲು ಒಂದು ಕಾರ್ಮಿಕ ನ್ಯಾಯಾಲಯವನ್ನು ಸ್ಥಾಪನೆ ಮಾಡಿತು. 

ನಾವು ಬಿಡುಗಡೆಯಾಗಿ ಬಂದೊಡನೆ ಕಾರ್ಮಿಕರನ್ನು ಪುನ: ಒಂದುಗೂಡಿಸಲು ಪ್ರಾರಂಭಿಸಿದೆವು. ಆಗ ಜನ ಒಟ್ಟು ಸೇರದಂತೆ ಸೆಕ್ಷನ್ 144ರನ್ವಯ ನಿಷೇಧಾಜ್ಞೆ ಜಾರಿಯಲ್ಲಿತ್ತು. ಆದ್ದರಿಂದ ನಮಗೆ ಕಾರ್ಮಿಕರನ್ನು ಒಂದುಗೂಡಿಸಲು ಕಷ್ಟವಾಗುತ್ತಿತ್ತು. ಆಗೊಂದು ದಿನ ಶಿವು ನನ್ನೆದುರಿಗೆ ಹಾಜರಾದ.  “ನೀನು ಹೇಗೆ ಜೈಲಿನಿ೦ದ ಹೊರಬಂದೆ”  ಎಂದು ಕೇಳಿದೆ.  ‘ನೀವು ಬರೆದ ಮಾಫಿ ಅರ್ಜಿಯಿಂದಾಗಿ ನನ್ನ ಬಿಡುಗಡೆಯಾಯಿತು’. ಎಂದು ತಿಳಿಸಿದ.  ತಾನು ಇನ್ನು ಮುಂದೆ ಕಳ್ಳತನ ಮಾಡುವುದಿಲ್ಲವೆಂದೂ ನನ್ನೊಂದಿಗೆ ಕೆಲಸ ಮಾಡುವೆನೆಂದೂ ದುಂಬಾಲು ಬಿದ್ದ. ಕೆಲವು ದಿನಗಳು ನನ್ನ ಅಂಗರಕ್ಷಕನಂತೆ ನನ್ನೊಂದಿಗೆ ತಿರುಗಾಡಿದ.

ಕಾರ್ಮಿಕರ ಒಗ್ಗಟ್ಟನ್ನು ಮುರಿಯಲಿಕ್ಕಾಗಿ ಮಿಲ್ಲಿನ ಮಾಲೀಕರ ಪರ ಒಲಿಸಿಕೊಂಡ ಚೇಲಾಗಳನ್ನು ಒಟ್ಟುಗೂಡಿಸಿ ದಿನದಿನವೂ ಪೇಟೆಯ ಬೀದಿಗಳಲ್ಲಿ ಅವರ ಮೆರವಣಿಗೆ ಮಾಡಿಸಿದರು. ಅದಲ್ಲದೆ ನಮ್ಮ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸಿದರು. ಮಾಲೀಕರ ಚೇಲಾಗಳಿಗೆ ಸೆಕ್ಷನ್ 144 ಅನ್ವಯವಾಗಲಿಲ್ಲ! ನಮ್ಮ ಪಕ್ಷದ ಕೆಲಸಗಳನ್ನು ಮಾತ್ರ ನಿಷೇಧಾಜ್ಞೆಯ ಹೆಸರಿನಲ್ಲಿ ಪ್ರತಿಬಂಧಿಸಲಾಗಿತ್ತು.

ಒ೦ದು ದಿನ ಕೆಲವು ಕಾರ್ಮಿಕರು ಬಂದು ಅವರಗೆರೆ ಗ್ರಾಮದ ಕಾಟನ್‌ಮಿಲ್ ಕಾರ್ಮಿಕರು ನಮ್ಮ ಒಗ್ಗಟ್ಟನ್ನು ಮುರಿದು ಕೆಲಸಕ್ಕೆ ಹಾಜರಾಗುವರೆಂದೂ, ನಾನು ಹೋಗಿ ಅವರೊಡನೆ ಮಾತನಾಡಬೇಕೆಂದೂ ಕೇಳಿಕೊಂಡರು. ಮರುದಿನ ಅಲ್ಲಿಗೆ ಹೋಗಲು ಒಪ್ಪಿಕೊಂಡೆ. ಅನಂತರ ನಮ್ಮ ಕಚೇರಿಯಿಂದ ಕೆಳಗಿಳಿಯುತ್ತಿದ್ದಾಗ ಚೇಲಾ ಕಾರ್ಮಿಕರು ನಮ್ಮ ಮೇಲೆ ಮುಗಿಬಿದ್ದರು. ಅವರಲ್ಲೊಬ್ಬ ನನ್ನ ಕುತ್ತಿಗೆಗೆ ಚಾಕುವಿನಿಂದ ಇರಿದ. ಆಗ ಸಾರ್ವಜನಿಕರು ಮತ್ತು ಪೊಲೀಸರು ಬ೦ದು ನನ್ನನ್ನು ರಕ್ಷಿಸಿದರು. ಇಲ್ಲದಿದ್ದರೆ ಅಂದೇ ನನ್ನ ಇತಿಶ್ರೀ ಆಗುತ್ತಿತ್ತು.

ಮರುದಿನ ಸ೦ಜೆ ನಾವು ಹದಿನೈದು ಮಂದಿ ಕಾರ್ಯಕರ್ತರು ಅವರಗೆರೆ ಗ್ರಾಮದ ಕಾರ್ಮಿಕರೊಂದಿಗೆ ಮಾತನಾಡಲು ಹೋದೆವು. ಅಲ್ಲಿಗೆ ನಾವು ತಲಪಿದಾಗ ಮುನ್ನಾದಿನ ನಮ್ಮನ್ನು ಕರೆದಿದ್ದವರು ನಮ್ಮನ್ನೆಲ್ಲಾ ಒಂದು ಮನೆಯ ಅಂಗಳಕ್ಕೆ ಕರೆದೊಯ್ದರು. ಅಲ್ಲಿ ಕೆಲವು ಜನರು ಸೇರಿದರು. ನಾನು ಅವರೊಂದಿಗೆ ಮಾತನಾಡುತ್ತಿದ್ದಂತೆ, ಉದ್ದವಾದ ಕೋಲುಗಳನ್ನು ಹಿಡಿದುಕೊಂಡ ಕೆಲವರು ನಮ್ಮನ್ನು ಸುತ್ತುವರಿದು  ಏಕಾ‌ಏಕಿ ಹಲ್ಲೆ ಮಾಡಿದರು. ನನಗೆ ಬಿದ್ದ ಏಟಿನಿಂದ  ಮೂರ್ಛೆ ತಪ್ಪುವಂತಾಯಿತು. ನಾನು ನೆಲಕ್ಕೆ ಬಿದ್ದೆ. ನನ್ನೊಂದಿಗೆ ಬಂದಿದ್ದವರು ಓಡಿಹೋದರು. ನಾನು ಸತ್ತು ಬಿದ್ದೆ ಎಂದು ಭಾವಿಸಿದ ಹಲ್ಲೆಕೋರರು ಮತ್ತೆ ನನ್ನ ಮೇಲೆ ಪ್ರಹಾರ ಮಾಡಲಿಲ್ಲ.. ಆ ಹಲ್ಲೆಕೋರರು ನಮ್ಮ ಮುಂದಾಳು ಕಾಮ್ರೆಡ್ ಮುರಿಗಯ್ಯನವರನ್ನು ಬಡಿದು ಹಾಕಬೇಕೆಂದು ಬ೦ದಿದ್ದರು. ಅವರು  ಸಿಕ್ಕಿದ್ದರೆ ಅವರನ್ನು ಅಂದು ಕೊಲೆ ಮಾಡುತ್ತಿದ್ದರು. ಆದರೆ ಅವರು ತಪ್ಪಿಸಿಕೊಂಡರು. ನನ್ನ ಹತ್ತಿರವೇ ನಿಂತಿದ್ದ ಹಲ್ಲೆಕೋರನಲ್ಲೊಬ್ಬ, “ನಮಗೆ ಮುರಿಗಯ್ಯ ಸಿಕ್ಕಬೇಕಿತ್ತು. ಪಾಪ, ಇವ ಯಾವ ಊರಿನವನೋ ಏನೋ ! ಇಲ್ಲಿ ಬಂದು ಸಾಯಬೇಕಾಯಿತು” ಎಂದು ಹೇಳಿದ್ದು ನನಗೆ ಕೇಳಿಸಿತು.

ನನ್ನ ಮೇಲೆ ಮಾರಕ ಹಲ್ಲೆಯಾದ ಸುದ್ದಿ ಕೇಳಿ, ದಾವಣಗೆರೆಯ ನನ್ನ ಹಿತೈಷಿಗಳು ಹಲ್ಲೆಯ ಸ್ಥಳಕ್ಕೆ ಧಾವಿಸಿ ಬಂದರು. ನನ್ನನ್ನು ದಾವಣಗೆರೆಗೆ ಒಯ್ದರು. ಅನಂತರ ಪೋಲೀಸ್ ವಾಹನದಲ್ಲಿ  ನನ್ನನ್ನು ಒಯ್ದು ಆಸ್ಪತ್ರೆಗೆ ಸೇರಿಸಲಾಯಿತು.

ಇಷ್ಟೆಲ್ಲಾ ಆಗುವಾಗ ಈ ಎರಡೂ ದಿನಗಳು ಶಿವು ನನ್ನೊಂದಿಗೆ ಇರಲಿಲ್ಲ. ಇದರಿ೦ದಾಗಿ ಅವನ ಬಗ್ಗೆ ಸಂಶಯಪಟ್ಟ ಕಾರ್ಮಿಕ ಸಂಘದ ಕಾರ್ಯಕರ್ತರು ಅವನನ್ನು ಹತ್ತಿರ ಸೇರಿಸಲು ಒಪ್ಪಲಿಲ್ಲ. ಅವನನ್ನು ಅನುಮಾನದಿಂದಲೇ ನೋಡಿದರು. ಆದರೆ ಶಿವು ಮಾತ್ರ ಅಸ್ಪತ್ರೆಯಲ್ಲಿ ನನ್ನ ಪಕ್ಕದಿಂದ ಕದಲಲಿಲ್ಲ.

ತನಗೆ ಏನಾಗಿತ್ತೆಂದು ಶಿವು ತಿಳಿಸಿದ. ನಿಮ್ಮೊಂದಿಗೆ ನಾನಿದ್ದರೆ ಹಲ್ಲೆ ಮಾಡಲಾಗುವುದಿಲ್ಲವೆಂದೂ, ಅದಕ್ಕಾಗಿ ನಿಮ್ಮಿಂದ ನನ್ನನ್ನು ದೂರ ಮಾಡಬೇಕೆಂದೂ ಬಾಡಿಗೆ ಗೂಂಡಾಗಳು ಹೇಳಿದ ಕಾರಣ ಪೊಲೀಸರು ಆ ಎರಡು ದಿನಗಳಲ್ಲಿ ನನ್ನನ್ನು ಲಾಕಪ್‌ನಲ್ಲಿ ಕೂಡಿಹಾಕಿದ್ದರು. ಆದ್ದರಿಂದ ನನ್ನೊಂದಿಗೆ ಇರಲಾಗಲಿಲ್ಲ ಎಂದು ಶಿವು ನನಗೆ ಹೇಳಿದ. ಇತರರು ನಂಬದಿದ್ದರೂ ನಾನು ಅವನ ಮಾತನ್ನು ನಂಬಿದೆ.

ಪ್ರಾತಿನಿಧಿಕ ಫೋಟೋ: ಹತ್ತಿಗಿರಣಿ 

ಆಕರ ಪುಸ್ತಕ: ಅಡ್ಡೂರು ಶಿವಶಂಕರರಾಯರ ಎಂಬತ್ತರ ಕೊಯ್ಲಿನ ಕಾಳುಗಳು