ಕಮ್ಯೂನಿಸ್ಟ್ ಆಂದೋಲನದತ್ತ
ಆಗಿನ ಹಾಸ್ಟೆಲ್ ಜೀವನ ಮಜಾ! ಒಳ್ಳೆಯ ಸ್ನೇಹಿತ ವರ್ಗವಿತ್ತು. ಖುಷಿಯ ಸ್ವತಂತ್ರ ಬದುಕು. ಹಾಸ್ಟೆಲ್ನಲ್ಲಿ ಹರಿದಾಸ ಆಚಾರ್ (ಈಗ ಲಕ್ಷ್ಮೀದಾಸ್ ಜ್ಯುವೆಲ್ಲರಿಯ ಮಾಲಕ), ಗಣೇಶ, ಶಂಕರ್.. .. ಇವರೆಲ್ಲಾ ರಾಜಕೀಯದ ಕುರಿತು ಮಾತನಾಡುತ್ತಿದ್ದರು. ಚರ್ಚಿಸುತ್ತಿದ್ದರು. ಅವರ ವಿಚಾರಗಳು ನನ್ನನ್ನು ಸೆಳೆದವು. ಎ.ರಾಘವನ್ ಅಲೋಶಿಯಸ್ ಕಾಲೇಜ್ ಹಾಸ್ಟೆಲ್ನಲ್ಲಿದ್ದರು. ಮಂಗಳೂರು ವಿದ್ಯಾರ್ಥಿ ಯೂನಿಯನ್ ಆಗಷ್ಟೇ ಶುರುವಾಗಿತ್ತು (1940). ಹಾಸ್ಟೆಲ್ನಲ್ಲಿ ಈ ಕುರಿತು ಚರ್ಚೆಯಾಗುತ್ತಿತ್ತು. ನಾನು ಮತ್ತು ಕೆಲವು ಸ್ನೇಹಿತರು ಯೂನಿಯನ್ನ ಚಟುವಟಿಕೆಗಳಲ್ಲಿ ಸಕ್ರಿಯರಾದೆವು.
1940ರಲ್ಲಿ ವಿದ್ಯಾರ್ಥಿ ಸಮ್ಮೇಳನ ಜರುಗಿತು. ಮೋಹನಕುಮಾರ್ ಮಂಗಳಂ ಎಂಬವರು ಸಮ್ಮೇಳನಕ್ಕೆ ಬಂದಿದ್ದರು. ಅವರ ಮಾತಿನ ಮೋಡಿ, ವೈಚಾರಿಕತೆಗಳು ನಮ್ಮ ಮೇಲೆ ಗಾಢ ಪ್ರಭಾವ ಬೀರಿದವು. ಮತ್ತೊಮ್ಮೆ 1941ರ ಸಮ್ಮೇಳನಕ್ಕೆ ಡಾ: ಕೆ.ಬಿ.ಕೃಷ್ಣ ಬಂದಿದ್ದರು. ಇವರೆಲ್ಲರ ವರ್ಚಸ್ಸಿಗೆ ನಾನು ಮಾರುಹೋದೆ.
ಬ್ರಿಟಿಷ್ ಸರಕಾರದ ಕೆಂಗಣ್ಣು ಕಮ್ಯೂನಿಸ್ಟ್ ಆಂದೋಲನದ ಮೇಲಿತ್ತು. 1941ರಲ್ಲಿ ಕಮ್ಯೂನಿಸ್ಟ್ ಪಕ್ಷದ ಮೇಲೆ ನಿಷೇಧ ಹೇರಿದರೂ ಕಮ್ಯೂನಿಸ್ಟ್ ವಿಚಾರಗಳ ಮತ್ತು ಆಗುಹೋಗುಗಳ ಕುರಿತು ವಾರ್ತಾಪತ್ರಿಕೆ ಪ್ರಕಟವಾಗುತಿತ್ತು. ಅದು ಅಷ್ಟು ಸುಲಭದಲ್ಲಿ ಸಿಗುತ್ತಿರಲಿಲ್ಲ. ಗುಟ್ಟಾಗಿ ಓದಬೇಕಿತ್ತು. ಅದನ್ನು ಯಾರಲ್ಲಾದರೂ ಕಂಡರೆ ಸಾಕು, ಅವರಿಗೆ ಆರು ತಿಂಗಳು ಸೆರೆಮನೆ. ಹಾಸ್ಟೆಲ್ನ ಅಡುಗೆ ಭಟ್ಟರ ಮುಖಾಂತರ ಪತ್ರಿಕೆ ಸಿಗುತಿತ್ತು. ಬಹಳ ಆಸಕ್ತಿಯಿಂದ ಓದುತ್ತಿದ್ದೆವು. ಅದರಲ್ಲಿ ಪ್ರಕಟವಾಗುತ್ತಿದ್ದ ಕಮ್ಯೂನಿಸ್ಟ್ ಸಿದ್ಢಾಂತಗಳು ನಮ್ಮನ್ನು ಕೆರಳಿಸುತ್ತಿದ್ದುವು. ‘ಕಮ್ಯೂನಿಸ್ಟ್ ಮ್ಯಾನಿಪೆಸ್ಟೋ’ ಪುಸ್ತಕವೊ೦ದು ಅಚಾನಕವಾಗಿ ಓದಲು ಸಿಕ್ಕಿತ್ತು. ಲೈಟ್ ಆನ್ ಮೋಸ್ಕೋ, ಮಸ್ಟ್ ದ್ ವಾರ್ ಸ್ಟ್ರೆಡ್, ಪ್ರಾಬ್ಲಂ ಆಪ್ ಇಂಡಿಯಾ, ರಷ್ಯಾ ವಿದೌಟ್ ಇಲ್ಯೂಷನ್ಸ್ ಎಂಬ ಪುಸ್ತಕಗಳು, ಭೂಗತ ಪತ್ರಿಕೆ “ಕಮ್ಯೂನಿಸ್ಟ್” - ಇವುಗಳೆಲ್ಲದರ ವಿಚಾರಗಳು ಮತ್ತು ಹೂರಣಗಳು ನನ್ನ ಕಮ್ಯೂನಿಸ್ಟ್ ಜೀವನಕ್ಕೆ ಮೂಲವಾಯಿತು. ಆ ತತ್ವಗಳು ನನಗೆ ವೇದವಾಕ್ಯವಾಯಿತು. ಅಂದಿನಿಂದ ಕಮ್ಯೂನಿಸ್ಟ್ ಹೊರತಾಗಿ ಬೇರಾವುದೇ ವಿಚಾರಗಳು ನನಗೆ ಅರ್ಥವಾಗುತ್ತಿರಲಿಲ್ಲ.
ವಿದ್ಯಾರ್ಥಿ ಯೂನಿಯನ್ನ ಸಕ್ರಿಯ ಸದಸ್ಯನಾದೆ. ಹಾಸ್ಟೆಲ್ನಲ್ಲಿ ಕಮ್ಯೂನಿಸ್ಟ್ ವಿಚಾರಗಳನ್ನು ಒಪ್ಪಿದ ಸಮಾನಾಸಕ್ತರ ತಂಡ ಸಿದ್ದವಾಯಿತು. ಬಿ.ವಿ.ಕಕ್ಕಿಲ್ಲಾಯರು ಮಂಗಳೂರು ವಿದ್ಯಾರ್ಥಿ ಯೂನಿಯನ್ನ ಕಾರ್ಯದರ್ಶಿಯಾದರು. ಹರಿದಾಸರು ಟ್ರೇಡ್ ಯೂನಿಯನ್ ಆಂದೋಳನದಲ್ಲಿ ಸಕ್ರಿಯವಾಗಿದ್ದು ಕಮ್ಯೂನಿಸ್ಟ್ ತಂಡದಲ್ಲಿ ಕೆಲಸ ಮಾಡುತ್ತಿದ್ದರು.
ಕಮ್ಯೂನಿಸ್ಟ್ ಕೆಲಸವನ್ನು ಹಾಸ್ಟೆಲ್ನಲ್ಲಿ ಮಾಡುತ್ತಾನೆಂಬ ಕಾರಣಕ್ಕಾಗಿ ಸಹಪಾಠಿ ಗಣೇಶನನ್ನು ಹಾಸ್ಟೆಲ್ನಿಂದ ಹೊರಹಾಕಲು ಆಡಳಿತ ವರ್ಗ ನಿರ್ಧರಿಸಿತ್ತು. ನಾನು ಪ್ರತಿಭಟಿಸಿದೆ. ನಾನು ಗಣೇಶರ ಪರ ಮಾತನಾಡಿದೆ ಎಂಬ ಕಾರಣಕ್ಕಾಗಿ ಅಡಿಗರಿಗೆ ಮತ್ತು ವೆಂಕಟ್ರಮಣರಿಗೆ ನನ್ನ ಮೇಲೆ ಅಸಮಾಧಾನವಾಯಿತು. ನನ್ನ ಭಾವನಲ್ಲಿ ದೂರಿದರು. ಅಕ್ಕ ನನ್ನ ಪರವಾಗಿ ಮಾತನಾಡಿದ್ದರಿಂದ ಅಕ್ಕನಿಗೂ ಭಾವನಿಗೂ ವಿರಸವಾಯಿತು. ಭಾವನ ಆತ್ಮೀಯ ಡ್ರಾಯಿಂಗ್ ಮಾಸ್ತರರ ಮಧ್ಯಸ್ಥಿಕೆಯಿ೦ದ ಪ್ರಕರಣ ತಿಳಿಯಾಯಿತು.
ಕಮ್ಯೂನಿಸ್ಟ್ ನಾಯಕರಾದ ಕೆ.ಬಿ. ಕೃಷ್ಣ, ಪರಮೇಶ್ವರನ್ ಮುಂತಾದವರು ಆಗಾಗ್ಗೆ ಮಂಗಳೂರಿಗೆ ಬಂದು ಪಕ್ಷದ ಕುರಿತಾಗಿ ವಿಚಾರ ವಿನಿಮಯ ಮಾಡುತ್ತಿದ್ದರು. ಇವರ ಸಂಪರ್ಕ ಹೆಚ್ಚಿದಂತೆಲ್ಲಾ ನನ್ನ ಕಮ್ಯೂನಿಸ್ಟ್ ಮನಸ್ಸು ದೃಢವಾಗತೊಡಗಿತು.
ಕಮ್ಯೂನಿಸ್ಟ್ ವಿಚಾರಗಳ ರಾಜಕೀಯ ಚರಿತ್ರೆ, ತತ್ವಗಳನ್ನು ಓದಿ, ಮಾಹಿತಿ ಸಂಗ್ರಹಿಸಿ, ಅದನ್ನು ಆಸಕ್ತರಿಗೆ ತಿಳಿಸುವುದು ನನ್ನ ಹವ್ಯಾಸ. “ಸಮಾಜದಲ್ಲಿ ಸ್ವಾತಂತ್ರ್ಯ ಸಿಗಬೇಕಾದರೂ, ಜನರು ಸುಖವಾಗಿ ಬಾಳಬೇಕಾದರೂ ಕಮ್ಯೂನಿಸ್ಟ್ ಸರಕಾರವು ಅಧಿಕಾರಕ್ಕೆ ಬಂದರೆ ಮಾತ್ರ ಸಾಧ್ಯ” – ಎಂಬ ನಂಬುಗೆ ತಳವೂರಿತ್ತು.
ಹಾಸ್ಟೆಲ್ಗೆ ಸೀಮಿತವಾಗಿದ್ದ ನಮ್ಮ ಕಾರ್ಯವ್ಯಾಪ್ತಿ ಕ್ರಮೇಣ ವಿಸ್ತರಿಸಿತು. ಬೀಡಿ ಕೆಲಸಗಾರರ, ನೇಯ್ಗೆ ಕೆಲಸಗಾರರ ಸಂಪರ್ಕ. ಅವರಿಗೆಲ್ಲಾ ಮಾಹಿತಿ ನೀಡಲು ನಾನು ತರಗತಿಗಳನ್ನು ನಡೆಸುತ್ತಿದ್ದೆ. ಇದರಿಂದಾಗಿ ಹಲವರು ನನ್ನ ಶಿಷ್ಯರಾದರು!
ಕ್ವಿಟ್ ಇಂಡಿಯಾ ಚಳುವಳಿ ಆರಂಭ. ಕಮ್ಯೂನಿಸ್ಟ್ನಲ್ಲಿದ್ದ ಕೆಲವರು ಕಾಂಗ್ರೆಸ್ ಸೇರಿದರು. ಹಲವರು ಪೋಲೀಸರ ಸೆರೆಯಾದರು. ಮಂಗಳೂರಿನ ನೆಹರೂ ಮೈದಾನದ ಒಂದಂಚಿನಲ್ಲಿ ಕಮ್ಯೂನಿಸ್ಟ್ ಪಕ್ಷದ ಕಚೇರಿಯಿತ್ತು. ನಾನು ಪತ್ರಿಕೆ, ಪುಸ್ತಕಗಳನ್ನು ಆಸಕ್ತರಿಗೆ ಕೊಡುತ್ತಿದ್ದೆ. ಚಿಕ್ಕ ವಾಚನಾಲಯ ರೂಪುಗೊ೦ಡಿತ್ತು. ಜನರ ಆಸಕ್ತಿ ಹೆಚ್ಚಾಗುತ್ತಿದ್ದಂತೆ ಮಾಹಿತಿಯನ್ನು ಇನ್ನಷ್ಟು ಜನರಿಗೆ ತಿಳಿಸಬೇಕೆಂಬ ಹಪಹಪಿಕೆ ಹೆಚ್ಚಾಯಿತು.
1943ರಲ್ಲಿ ಜಿಲ್ಲಾ ಟ್ರೇಡ್ ಯೂನಿಯನ್ ಸಮ್ಮೇಳನವು ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಮೈದಾನದಲ್ಲಿ ಜರುಗಿತ್ತು. ನಮ್ಮ ಸಂಘಟನೆಯ ಶಕ್ತಿಯೂ ಆಗ ಹೆಚ್ಚಾಗಿತ್ತು. ಹಂಚಿನ ಕೆಲಸಗಾರರ ಸಂಘಟನೆಯು ವಿವಿಧ ಬೇಡಿಕೆಗಳಿಗಾಗಿ ನಮ್ಮೊಡನೆ ಕೈಜೋಡಿಸಿತ್ತು. ಎಸ್.ಎ.ಡಾಂಗೆ ಅವರು ಅಧ್ಯಕ್ಷತೆ ವಹಿಸಿದ್ದ ಬೃಹತ್ ಸಮಾವೇಶವು ಹಂಚಿನ ಕಾರ್ಮಿಕರ ಸಂಘಟನೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿತು. ಆಗ ಮಂಗಳೂರಿನ ಬೀದಿಬೀದಿಗಳಲ್ಲಿ “ಮೂರು ತಿಂಗಳ ಬೋನಸ್ ಸಿಗಲೇ ಬೇಕು.. ..” ಮು೦ತಾದ ಘೋಷಣೆಗಳು ಪ್ರತಿಧ್ವನಿಸಿದವು. ಇಂತಹ ನ್ಯಾಯಯುತ ಬೇಡಿಕೆಗಳಿಗಾಗಿ ಹೋರಾಟ ನಡೆಸಿದ್ದು ಕಮ್ಯೂನಿಸ್ಟರು ರೂಪಿಸಿದ ಕಾರ್ಮಿಕ ಸಂಘಟನೆಗಳು ಎಂಬುದು ಗಮನಾರ್ಹ.
ಆಗ ಅಕ್ಕಿಗೆ ಕ್ರಯ ಏರಿತು. ಕಾಳಸಂತೆಯಲ್ಲಿ ಹೆಚ್ಚು ಕ್ರಯಕ್ಕೆ ಅಕ್ಕಿ ಮಾರಾಟವಾಗುತ್ತಿತ್ತು. ಹಣ ಇದ್ದವರು ಬೇಕಾದಷ್ಟು ಅಕ್ಕಿಯನ್ನು ದಾಸ್ತಾನು ಮಾಡಿದರು. ಬಡವರು ವಂಚಿತರಾದರು. ಎಲ್ಲರಿಗೂ ತೊಂದರೆಯಾಯಿತು. ನ್ಯಾಯ ಬೆಲೆ (ರೇಷನ್)ಯಲ್ಲಿ ಅಕ್ಕಿ ವಿತರಿಸುವ ವ್ಯವಸ್ಥೆಗಾಗಿ ಹೋರಾಟ ಶುರುವಾಯಿತು. ಸಂಬಂಧಪಟ್ಟವರೊಡನೆ ಸಂಪರ್ಕ. ಕಲೆಕ್ಟರರ ಭೇಟಿ. ತಾತ್ವಿಕವಾಗಿ ಒಪ್ಪಿಕೊಂಡರು. ಪ್ರತಿಯೊಂದು ಮನೆಯಲ್ಲಿ ಎಷ್ಟೆಷ್ಟು ಮಂದಿ ಸದಸ್ಯರಿದ್ದಾರೆ ಎಂಬ ಲೆಕ್ಕ ತೆಗೆಯುವ ಕೆಲಸ ನಮಗೆ ವಹಿಸಲಾಯಿತು. ರಾತ್ರಿ ಹಗಲೆನ್ನದೆ ಓಡಾಡಿ, ಮಾಹಿತಿ ಸಂಗ್ರಹಿಸಿ, ಕಾರ್ಡು ಮೂಲಕ ಜನರಿಗೆ ಅಕ್ಕಿ ಸಿಗುವಂತೆ ಮಾಡಿದೆವು. ಕ್ಯೂನಲ್ಲಿ ನಿಂತು ಅಕ್ಕಿ ಪಡೆದು ಸಂತೃಪ್ತಿಯಿಂದ ಜನರು ಹೋಗುವ ದೃಶ್ಯ ಈಗಲೂ ನನಗೆ ಕಣ್ಣಿಗೆ ಕಟ್ಟುವಂತೆ ಗೋಚರಿಸುತ್ತದೆ. ಅಲ್ಲಿಯವರೆಗೆ “ರೇಷನ್, ಕ್ಯೂ” ಎಂಬುದು ಇರಲೇ ಇಲ್ಲ!
ಅಲ್ಲಲ್ಲಿ ಮಾಹಿತಿ ವಿನಿಮಯ ತರಗತಿಗಳನ್ನು ನಡೆಸುತ್ತಿದ್ದೆ. ಇದರಿಂದಾಗಿ ಕವಲು ಮನಸ್ಸಿನಲ್ಲಿದ್ದ ಅನೇಕರು ನಮ್ಮ ತತ್ವ ಸಿದ್ದಾಂತಗಳನ್ನು ಒಪ್ಪಿಕೊಂಡರು. ಇಲಿಯಾಗಿದ್ದ ಕೆಲಸಗಾರರು ಹುಲಿಯಾದರು! ಮುದುಡಿಕೊ೦ಡಿದ್ದವರು ಕೊಡವಿ ಮೇಲೆದ್ದರು! ಇದು ಕಾಂಗ್ರೆಸ್ಸಿನ ಕೆಲವರಿಗೆ ಇರಿಸುಮುರಿಸಾಯಿತು. ಕೆಲವರನ್ನು ಒಲಿಸಿ ತನ್ನೆಡೆ ಸೆಳೆದುಕೊಳ್ಳುವ ಕಾಂಗ್ರೆಸ್ಸಿನ ತಂತ್ರ ವಿಫಲವಾಯಿತು.
ಪಕ್ಷದ ಮುಖ್ಯಸ್ಥರು ತಮ್ಮ ಕೈಯಿಂದ ನನಗೆ ಖರ್ಚಿಗಾಗಿ ಇಪ್ಪತ್ತೈದು ರೂಪಾಯಿಗಳನ್ನು ಕೊಡುತ್ತಿದ್ದರು. ಹೇಗೋ ಸರಿದೂಗಿಸುತ್ತಿದ್ದೆ. ಪತ್ರಿಕೆಗಳನ್ನು ಮಾರುವ ವೃತ್ತಿ ಕೈಗೊ೦ಡೆ. “Peoples War” “Cross Road” ಪತ್ರಿಕೆಗಳನ್ನು ಮಾರಾಟ ಮಾಡಲು ಮನೆಮನೆಗೆ ಹೋದೆ. ಪ್ರತೀ ಮನೆಯಲ್ಲಿ ಕನಿಷ್ಟ ಹತ್ತು ನಿಮಿಷವಾದರೂ ಇದ್ದು, ಪ್ರಚಲಿತ ವಿದ್ಯಮಾನಗಳನ್ನು ಚರ್ಚಿಸುತ್ತಿದ್ದೆ. ಹೆಚ್ಚೆಚ್ಚು ಮನೆಗಳ ಸಂಪರ್ಕವಾಯಿತು. ಅವರೆಲ್ಲರ ವಿಶ್ವಾಸ ಗಳಿಸಿಕೊಂಡೆ. ನಾನು ‘ಪೋಲಿ ಅಲ್ಲ’ ಎಂಬ ಪ್ರಮಾಣ ಪತ್ರ ಸಿಕ್ಕಿತ್ತು! ಪೇಪರ್ ಮಾರಾಟದಿಂದ ನನ್ನ ಬೌದ್ಢಿಕ ವಿಚಾರವೇನೋ ಪಕ್ವವಾಯಿತು. ಆದರೆ ಪತ್ರಿಕೆಯ ಹಣವನ್ನು ವಸೂಲಿ ಮಾಡಲು ಹರಸಾಹಸ ಮಾಡಬೇಕಾಯಿತು! ಕೆಲವರಂತೂ ಬಾಯುಪಚಾರದಲ್ಲೇ ಸುಧಾರಿಸಿದರು.
ಅಮ್ಮ, ನಾನು, ತಂಗಿ ಜೊತೆಯಾಗಿ ಮಂಗಳೂರಿನ ಸನ್ಯಾಸಿಗುಡ್ಡೆಯಲ್ಲಿ ಬಿಡಾರ ಮಾಡಿದೆವು. “ನಿನ್ನ ಗಣಗಳನ್ನು (ಸ್ನೇಹಿತರನ್ನು) ಮಾತ್ರ ಕರೆದುಕೊಂಡು ಬರಬಾರದು” ಎಂದು ಅಮ್ಮ ಮೊದಲೇ ತಾಕೀತು ಮಾಡಿದ್ದರು. ಮುಂದೆ ನನ್ನ ಕೆಲವು ಸ್ನೇಹಿತರ ಒಡನಾಟದಿಂದ ಅಮ್ಮ ತಮ್ಮಲ್ಲೇ ರಾಜಿ ಮಾಡಿಕೊಂಡಂತೆ ಕಂಡಿತು. ಬಹಳ ವಿರೋಧ ತೋರಲಿಲ್ಲ ಅಥವಾ ಇವನನ್ನು ತಿದ್ದಲು ತನ್ನಿಂದ ಸಾಧ್ಯವಿಲ್ಲವೆಂದು ಗ್ರಹಿಸಿ ಸುಮ್ಮನಿದ್ದರೋ ಏನೋ?
ಸಣ್ಣಣ್ಣ ಸುಬ್ಬರಾವ್ ಆಗಾಗ್ಗೆ ಮನೆಗೆ ಬರುತಿದ್ದ. ಪಕ್ಷದ ಬಗ್ಗೆ ಬಿಸಿಬಿಸಿ ಚರ್ಚೆಯಾಗುತಿತ್ತು. ನಮ್ಮ ವಾಗ್ಯುದ್ದ ನೋಡಿ ಕೆಲವರು ದಂಗಾದುದೂ ಇದೆ. ಅಣ್ಣ ಪ್ರತೀ ಸಲ ಬಂದಾಗಲೂ ಚರ್ಚೆ ಪರಾಕಾಷ್ಠೆಗೆ ಮುಟ್ಟುತ್ತಿತ್ತು. ಇದನ್ನು ಅಮ್ಮನೂ ಆಕ್ಷೇಪಿಸಿದ್ದರು.
ನನ್ನ ಸಣ್ಣ ತಂಗಿಗೆ ಭದ್ರಾವತಿಯ ಡಾ: ಜಿ.ವಾಸುದೇವ ರಾವ್ ಅವರೊ೦ದಿಗೆ ವಿವಾಹವಾಯಿತು. ಅವರು ಆಗ ಮುಂಬಯಿಯಲ್ಲಿ ನೌಕಾದಳದಲ್ಲಿ ಇದ್ದರು. ಅನಂತರ ಸ್ವಲ್ಪ ದಿವಸ ನಾನು ಅವರೊಂದಿಗೆ ಮುಂಬೈಯಲ್ಲಿದ್ದೆ.
1945ರಲ್ಲಿ ಜರ್ಮನ್ – ರಷ್ಯಾ ಯುದ್ಧ ನಿಲುಗಡೆಯಾಯಿತು. ಭಾರತದಲ್ಲಿ ಬ್ರಿಟಿಷರ ವಿರುದ್ದ ಹೋರಾಡುವ ಛಲ ಹೆಚ್ಚಾಗುತ್ತಿದ್ದಂತೆ, ಕಮ್ಯೂನಿಸ್ಟರನ್ನು ಬಗ್ಗುಬಡಿಯಲು ಸರಕಾರ ಮುಂದಾಗಿತ್ತು. ಸರಕಾರದ ಧಾಳಿಯೂ ಆರಂಭವಾಗಿತ್ತು. ಕೆಲವರು ಬಂಧನಕ್ಕೊಳಗಾದರು. ಸರಕಾರದ ವಿರುದ್ದ ರಣಕಹಳೆ ಜೋರಾಯಿತು. ಒಂದು ಹಂತದಲ್ಲಿ ನಾನೂ ಪೋಲೀಸರ ಕೋಳಕ್ಕೆ ಕೈ ಕೊಡಬೇಕಾಯಿತು. ಆಗ ಕೆದಿಲಾಯರು ಮ್ಯಾಜಿಸ್ಟ್ರೇಟ್, ರಾಮಚಂದ್ರ ರಾವ್ ಎಪಿಪಿ (ಅಸಿಸ್ಟೆಂಟ್ ಪಬ್ಲಿಕ್ ಪ್ರಾಸಿಕ್ಯೂಟರ್) ಆಗಿದ್ದರು. ಮೂರು ಮಂದಿಯ ಜಾಮೀನಿನೊಂದಿಗೆ ನಾನು ಹೊರಬಂದೆ. ಉಳಿದವರೆಲ್ಲಾ ಆರು ತಿಂಗಳ ಸೆರೆಮನೆವಾಸ ಅನುಭವಿಸಿದರು.
1947ರಲ್ಲಿ ಸ್ವಾತಂತ್ರ್ಯ ಸಿಕ್ಕಿತು. ಆಗ ಕಮ್ಯೂನಿಸ್ಟರ ಮೇಲೆ ಪುನ: ಸರಕಾರದ ಧಾಳಿ. ಸಿಂಪ್ಸನ್ ಸೋನ್ಸ್ ಮತ್ತು ನಾನು ಮಾತ್ರ ಉಳಿದಿದ್ದೆವು; ಮಿಕ್ಕವರೆಲ್ಲಾ ಬಂಧನಕ್ಕೊಳಗಾಗಿದ್ದರು. ಸೋನ್ಸರು ಭೂಗತರಾಗಿ ಪಕ್ಷದ ಕೆಲಸ ಮಾಡುತ್ತಿದ್ದರೆ, ನಾನು ಹೊರಗಿದ್ದುಕ್ಕೊಂಡು ಕೆಲಸ ಮಾಡಿದೆ. ಮೈಸೂರಿನ ಜವಾಬ್ದಾರಿ ಸರಕಾರಕ್ಕಾಗಿ ಹೋರಾಟಕ್ಕೆ ಜಾತಾ ಕರೆದುಕೊಂಡು ಹೋದೆ. ಕುಂದಾಪುರ, ಪುತ್ತೂರು, ಕಾರ್ಕಳಗಳಲ್ಲಿ ಪಕ್ಷದ ಕೆಲಸಕ್ಕೆ ಹೋದವ ಕೆಲವರೊಂದಿಗೆ ಆಗುಂಬೆಯಲ್ಲಿ ಸೇರಿದೆ. ಅನಂತರ ಬೇರೆ ಬೇರೆ ದಿಕ್ಕುಗಳಿಗೆ ಹೊರಟುಹೋದೆವು. ಯಾಕೆಂದರೆ ಒಂದೇ ಕಡೆಯಲ್ಲಿದ್ದರೆ ಸರಕಾರದ ಗಮನಕ್ಕೆ ಬಂದೀತು, ಮಾತ್ರವಲ್ಲದೆ ಬಂಧನವೂ ಆದೀತು. ಇದರಿಂದಾಗಿ ಪಕ್ಷದ ಕೆಲಸಕ್ಕೆ ತೊಡಕಾದೀತೆಂಬ ಭಯ.
ಆ ಸಮಯದಲ್ಲಿ ದಾವಣಗೆರೆಯಲ್ಲಿ ಬಿ.ಮುರುಗಯ್ಯ ಅವರು ಕಾರ್ಮಿಕರನ್ನು ಸಂಘಟಿಸಿ ಆಂದೋಳನಕ್ಕೆ ಚಾಲನೆ ನೀಡಿದ್ದರು. ಕಾರ್ಮಿಕರಲ್ಲಿ ರಾಜಕೀಯ ಪ್ರಜ್ಞೆ ಮೂಡಿಸಿ ಆಂದೋಳನವನ್ನು ಬಲಪಡಿಸಲಿಕ್ಕಾಗಿ ಅವರೊಂದಿಗೆ ಕೆಲಸ ಮಾಡಬೇಕೆಂದು ಕಮ್ಯೂನಿಸ್ಟ್ ಪಕ್ಷ (ಅವಿಭಜಿತ) ನನ್ನನ್ನು ಕೇಳಿಕೊಂಡಿತು. 1947 ಜನವರಿ 1ರಿಂದ ನಾನು ದಾವಣಗೆರೆಯಲ್ಲಿ ಕಮ್ಯೂನಿಸ್ಟ್ ಪಾರ್ಟಿಯ ಕಾರ್ಯಕರ್ತನಾಗಿ ದುಡಿಯಲು ಆರಂಭ.
ದಾವಣಗೆರೆಯಲ್ಲಿ ಕಮ್ಯೂನಿಸ್ಟ್ ಪಕ್ಷದ ರಾಜ್ಯಮಟ್ಟದ ಸಮಾವೇಶ ನಡೆಯಿತು. ಕೇಂದ್ರ ಸಮಿತಿಯ ಮೋಹನ ಕುಮಾರ ಮಂಗಲಂ ಅಧ್ಯಕ್ಷತೆ ವಹಿಸಿದ್ದರು. ಆ ಸಮ್ಮೇಳನವು ಕೈಗಾರಿಕಾ ಕಾರ್ಮಿಕರಲ್ಲಿ ಜಾಗೃತಿಯ ಅಲೆಯನ್ನೇ ಹಬ್ಬಿಸಿ, ಸಂಘಟನೆ ಬಲಗೊಂಡಿತು. ಅಂತಿಮವಾಗಿ ದಾವಣಗೆರೆ ಹತ್ತಿ ಗಿರಣಿ ಲಾಕೌಟ್ ಘೋಷಿಸಿತು.
ನಮ್ಮ ಹೋರಾಟ ಮುಂದುವರಿಯಿತು. ಪೊಲೀಸರು ನನ್ನನ್ನು ಮತ್ತು ಇತರ ಕಾರ್ಮಿಕ ನಾಯಕರನ್ನು ಬಂಧಿಸಿ, ನಮ್ಮ ಮೇಲೆ ದಾವೆ ಹೂಡಿದರು. ನಮಗೆಲ್ಲರಿಗೂ ಒಂದೂವರೆ ತಿಂಗಳ ಕಠಿಣ ಶಿಕ್ಷೆಯಾಯಿತು. ನಮ್ಮನ್ನು ಜೈಲಿನಲ್ಲಿ ಬಂಧನದಲ್ಲಿಟ್ಟರು.
ಆಕರ ಪುಸ್ತಕ: ಅಡ್ಡೂರು ಶಿವಶಂಕರರಾಯರ ಎಂಬತ್ತರ ಕೊಯ್ಲಿನ ಕಾಳುಗಳು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!