ನಾವು ಉಸಿರಾಡುವ ಗಾಳಿ, ತಿನ್ನುವ ಆಹಾರ, ಕುಡಿಯುವ ನೀರು ಕಲುಷಿತವಾಗುತ್ತಿವೆ. ಇದರಿಂದಾಗಿ ನಮ್ಮ ಆರೋಗ್ಯಕ್ಕೆ ಹಾನಿಯಾಗುತ್ತಿದೆ.

ಕಾರ್ಖಾನೆಗಳಿಂದ ಮತ್ತು ವಾಹನಗಳಿಂದ ಆಗುತ್ತಿರುವ ವಾಯುಮಾಲಿನ್ಯ, ಜಲಮಾಲಿನ್ಯ ಒಂದೆಡೆ. ನಾವು ಉಸಿರಾಡುವುದಕ್ಕೆ ಬೇಕಾದ ಆಮ್ಲಜನಕವನ್ನು ಉತ್ಪತ್ತಿಮಾಡುವ ಸಸ್ಯಜಾತಿಗಳ ನಾಶ ಮತ್ತೊಂದೆಡೆ. ಕಾರ್ಖಾನೆಗಳ ತ್ಯಾಜ್ಯ ಮತ್ತು ಮನುಷ್ಯರ ತ್ಯಾಜ್ಯಗಳನ್ನು ನಮ್ಮ ನದಿಗಳಿಗೆ ಬಿಡುತ್ತಿರುವುದರಿಂದ ನದಿಗಳ ನೀರು ವಿಷವಾಗುತ್ತಿದೆ.

ಅರಣ್ಯ ನಾಶ ಮಾಡಿ ಕೃಷಿ ಭೂಮಿ ವಿಸ್ತರಿಸುತ್ತ, ತೋಟಗಾರಿಕಾ ಬೆಳೆಗಳನ್ನು ಹೆಚ್ಚೆಚ್ಚು ಬೆಳೆಯುತ್ತ ನಾವು ಕೃತಕ ಗೊಬ್ಬರಗಳ ಮತ್ತು ಪೀಡೆನಾಶಕಗಳ ಬಳಕೆ ಅನಿವಾರ್ಯ ಎಂಬ ಭ್ರಮೆಗೆ ಒಳಗಾಗುತ್ತಿದ್ದೇವೆ. ಈ ಸಂದರ್ಭದಲ್ಲಿ ಪೀಡೆಕೀಟ ಮತ್ತು ರೋಗನಿಯಂತ್ರಣಕ್ಕಾಗಿ ಬಳಕೆ ಮಾಡುವ ಪೀಡೆನಾಶಕಗಳಿಂದಾಗಿ ಪ್ರಯೋಜನ ಎಷ್ಟು, ಹಾನಿ ಎಷ್ಟು ಎಂದು ನಾವೆಲ್ಲರೂ ಚಿಂತಿಸಬೇಕಾಗಿದೆ. ಮಾನವಕುಲದ ಚರಿತ್ರೆಯಲ್ಲಿ ಮಧ್ಯ ಏಷ್ಯಾ, ಉತ್ತರ ಆಫ್ರಿಕಾ, ಚೀನಾ ಮುಂತಾದೆಡೆಗಳಲ್ಲಿ ಆಗಾಗ ಮಿಡತೆಗಳ ಹಾವಳಿ ವಿಪರೀತವಾಗುತ್ತಿತ್ತು ಎಂಬ ಉಲ್ಲೇಖಗಳಿವೆ. ಕೀಟಗಳ ಹಾವಳಿ ಶತಮಾನಗಳಿಂದಲೂ ಇದೆ. ಆಗ ಅವುಗಳ ಹತೋಟಿಗೆ ಯಾವುದೇ ರಾಸಾಯನಿಕ ಇರಲಿಲ್ಲ ಎಂಬುದು ಗಮನಿಸಬೇಕಾದ ವಿಷಯ.

ಹಲವು ವರುಷಗಳ ಹಿಂದೆ ನಾನು ಒಂದು ಚಲನಚಿತ್ರ ನೋಡಿದ್ದೆ. ಅದು ಅಮೇರಿಕಾದ ಕಥೆಗಾರ್ತಿ ಪರ್ಲ್ ಬಕ್ ಬರೆದ ಗುಡ್ ಅರ್ಥ್ ನ ಚಿತ್ರಣ. ಅದರಲ್ಲಿ ಒಂದು ದೃಶ್ಯ. ಮಿಡತೆಯ ದಾಳಿ! ಅದನ್ನು ನೋಡಿಯೇ ಮಿಡತೆ ಹಾವಳಿಯ ಘೋರ ಪರಿಣಾಮವನ್ನು ಊಹಿಸಿದ್ದೆ. ಎರಡನೇ ಜಾಗತಿಕ ಯುದ್ಢದ ನಂತರ ವಿಶ್ವಸಂಸ್ಥೆಯ ಘಟಕವಾದ ಎಫ್.ಎ.ಒ. ಮಿಡತೆ ನಿಯಂತ್ರಣ ಅಧ್ಯಯನಕ್ಕಾಗಿ ಒಂದು ಸಮಿತಿಯನ್ನೇ ರಚಿಸಿತ್ತು.

ಪೀಡೆನಾಶಕಗಳ ಸೃಷ್ಟಿ: ಎರಡನೇ ಮಹಾಯುದ್ಢದಲ್ಲಿ ಶತ್ರುಗಳನ್ನು ಕೊಲ್ಲಲು ಎರಡು ಪಕ್ಷದವರೂ ವಿಷಭರಿತ ರಾಸಾಯನಿಕಗಳನ್ನು ತಯಾರಿಸಿದ್ದರು. ಆಗಲೇ ಫಾಲಿಡಾಲ್, ಡಿ.ಡಿ.ಟಿ.ಯಂತಹ ವಿಷ ರಾಸಾಯನಿಕಗಳು ಸೃಷ್ಟಿಯಾದವು. ಆದರೆ ಅವುಗಳ ಪ್ರಯೋಗ ಆಗುವುದರ ಮೊದಲೇ ಯುದ್ಢ ಮುಗಿಯಿತು.

1941ರಲ್ಲಿ ಬಂಗಾಳದ ಭತ್ತ ಬೆಳೆಯುವ ಪ್ರದೇಶದಲ್ಲಿ ಕಂದುಚುಕ್ಕೆ ರೋಗ (helmenthosporium) ತಲೆದೋರಿ ವ್ಯಾಪಕ ಹಾನಿಯಾಯಿತು. ಮಿಲಿಯಗಟ್ಟಲೆ ಜನರು ಆಹಾರವಿಲ್ಲದೆ ಸತ್ತರು. ಕಲ್ಕತ್ತಾದ ಬೀದಿಬೀದಿಗಳಲ್ಲಿ ಹೆಣ. ಅಷ್ಟು ಭೀಕರವಾದ ರೋಗ ಹಿಂದೆಂದೂ ಬಂದಿರಲಿಲ್ಲ. ಮತ್ತೆಯೂ ಬಂದಿಲ್ಲ.

ಭಾರತದಲ್ಲಿ, ಅದರಲ್ಲೂ ದಕ್ಷಿಣ ಕನ್ನಡದಲ್ಲಿ ಮಲೇರಿಯಾ ಜ್ವರ ವ್ಯಾಪಕವಾಯಿತು. ಅನಾಫಿಲಿಸ್ ಸೊಳ್ಳೆಯಿಂದ ಮಲೇರಿಯಾ ಹರಡುತ್ತದೆ. ಚಿಕ್ಕಮಗಳೂರು ಮತ್ತು ಕೊಡಗಿನ ಕಾಫಿ ತೋಟಗಳಲ್ಲಿ ಆದರ ಹಾವಳಿ ಹೇಳತೀರದು. ದ.ಕ. ಜಿಲ್ಲೆಯಿಂದ ಅಲ್ಲಿಗೆ ಕೆಲಸಕ್ಕೆ ಹೋದ ಕಾರ್ಮಿಕರು ಜ್ವರ ಹಿಡಿದು ಊರಿಗೆ ಮರಳಿ ಬಂದು ಸರಿಯಾದ ಔಷಧಿ ಇಲ್ಲದೆ ಸಾಯುತ್ತಿದ್ದರು. ಇಂತಹ ಸಂದರ್ಭಗಳಲ್ಲಿ ನಮ್ಮ ದೇಶದಲ್ಲಿ ಪೀಡೆನಾಶಕಗಳ ಬಳಕೆ ಶುರುವಾಯಿತು.

1949ರಲ್ಲಿ ಒಮ್ಮೆ ಒಬ್ಬ ವ್ಯಕ್ತಿಯನ್ನು ಹುಡುಕಿಕೊಂಡು ಸಾಗರ ತಾಲೂಕಿನ ನಗರದ ಹತ್ತಿರ ಒಂದು ಹಳ್ಳಿಗೆ ಹೋಗಿದ್ದೆ. ಅಲ್ಲಿಗೆ ತಲುಪಿದಾಗ ಕತ್ತಲೆಯಾಗಿತ್ತು. ಕಾಡಿನ ಪ್ರೆದೇಶವಾದ್ದರಿಂದ ನನಗೆ ಹೆದರಿಕೆಯೂ ಆಗಿತ್ತು. ಅಂತೂ ನಾನು ಕಾಣಬೇಕಿದ್ದ ವ್ಯಕ್ತಿಯ ಮನೆಯನ್ನು ತಲಪಿದೆ. ಆ ಮನೆಯಲ್ಲಿ ಕಳೆದ ಆ ಒಂದು ವರುಷದಲ್ಲಿ ಮಲೇರಿಯಾ ಜ್ವರದಿಂದ ಮೂರು ಮಂದಿ ಸಾವಿಗೆ ಬಲಿಯಾಗಿದ್ದರು – ಎಂಬ ಸುದ್ದಿಯಿಂದ ನಾನು ಕಂಗಾಲಾದೆ. ನಾಲ್ಕನೇಯವನು ನಾನ್ಯಾಕೆ ಆಗಬಾರದು ಎಂಬ ಭಯವೂ ಆವರಿಸಿತು! ಮರುದಿನವೇ ಅಲ್ಲಿಂದ ಕಾಲ್ಕಿತ್ತೆ. ಇದು ಮಲೇರಿಯಾದ ಬಗ್ಗೆ ಆಗಿದ್ದ ಹೆದರಿಕೆ. ಮಲೇರಿಯಾದ ತೀವ್ರತೆ ಹಾಗಿತ್ತು. ಅಂತಹ ಮಲೇರಿಯಾ ಹರಡುವ ಸೊಳ್ಳೆಗಳ ಹತೋಟಿಗೆ ಡಿ.ಡಿ.ಟಿ.ಪ್ರಯೋಗ ದೊಡ್ಡ ಪ್ರಮಾಣದಲ್ಲಿ ಆರಂಭವಾಯಿತು.

ಇದೇ ಸಮಯದಲ್ಲಿ ನಮ್ಮ ಜಿಲ್ಲೆಯ ಭತ್ತದ ಗದ್ದೆಗಳಲ್ಲಿ ಕೀಟ ನಿಯಂತ್ರಣಕ್ಕಾಗಿ ಡಿ.ಡಿ.ಟಿ., ಎಂಡ್ರೆಕ್ಸ್, ಫಾಲಿಡಾಲ್ ಮುಂತಾದ ಮಾರಕ ಕೀಟನಾಶಕಗಳನ್ನು ಪ್ರಯೋಗಿಸಲಾಯಿತು.

ನನ್ನ ದೊಡ್ಡಣ್ಣ ಮಂಗಳೂರಿನಲ್ಲಿ (1959) ಜಿಲ್ಲಾ ವೈದ್ಯಾಧಿಕಾರಿಯಾಗಿದ್ದರು. ಅವರಿಗೆ ನಮ್ಮ ಊರಿನಿಂದ ಖರೀದಿಸಿದ ದನವೊಂದನ್ನು ಕೊಟ್ಟಿದ್ದೆ. ದನಕ್ಕೆ ಅಮ್ಮುಂಜೆಯಿಂದ ಒಣಹುಲ್ಲು (ಬೈಹುಲ್ಲು) ಕಳುಹಿಸಿದ್ದೆ. ಆ ದನ ಹುಲ್ಲು ತಿನ್ನುವುದನ್ನು ದಿನದಿಂದ ದಿನಕ್ಕೆ ಕಡಿಮೆ ಮಾಡುತ್ತಾ ಸೊರಗಿತು. ಕೊನೆಯುಸಿರೆಳೆಯಲು ಹತ್ತಿರವಾಯಿತು. ಪಶು ವೈದ್ಯರನ್ನು ಸಂಪರ್ಕಿಸಲಾಯಿತು. ಅವರು ‘ಭತ್ತದ ಗದ್ದೆಗಳಿಗೆ ಎಂಡ್ರೆಕ್ಸ್ ಮೊದಲಾದ ಭಯಂಕರ ವಿಷ ಸಿಂಪಡಿಸಿರುವ ಕಾರಣ ಒಣಹುಲ್ಲು ಕೂಡ ವಿಷಪೂರಿತವಾಗುತ್ತದೆ. ದನದ ಈ ಸ್ಥಿತಿಗೆ ಇದೇ ಕಾರಣ ಇರಬೇಕು’ ಎಂದರು. ಈ ವಿಷಯ ಕಂಕನಾಡಿಯ ಭತ್ತ ಸಂಶೋಧನಾ ಕೇಂದ್ರದ ಅಧಿಕಾರಿ ಹನುಮಂತರಾಯರಿಗೆ ತಿಳಿಸಿದೆ. ಅವರು ಸರ್ವಥಾ ಒಪ್ಪಲಿಲ್ಲ. ಸಭೆಯೊಂದರಲ್ಲಿ ಈ ವಿಚಾರ ಕುರಿತು ಹಿಗ್ಗಾಮುಗ್ಗಾ ಚರ್ಚೆಯಾಯಿತು. ಕೆಲವು ಸಮಯದ ಬಳಿಕ ಪಂಜಾಬಿನಲ್ಲಿ ಹಾಲು ಕೊಡುವ ಎಮ್ಮೆಗಳು ಹುಲ್ಲು ತಿಂದು ಸತ್ತ ಸುದ್ದಿ ಪತ್ರಿಕೆಯಲ್ಲಿ ಪ್ರಕಟವಾಯಿತು. ಪಶು ವೈದ್ಯರು ಹೇಳಿದ ಮಾತು ಸತ್ಯವೆಂದು ತೋರಿತು. ಪ್ರತ್ಯಕ್ಷ ಪ್ರಮಾಣವಿದ್ದರೂ ನಮ್ಮ ಅಧಿಕಾರಿಗಳು ಮಾತ್ರ ಯಾವುದನ್ನೇ ಒಪ್ಪಲು ತಯಾರಿರುವುದಿಲ್ಲ. ಕೀಟನಾಶಕಗಳ ದುಷ್ಪರಿಣಾಮಗಳು ಒಂದೇಟಿಗೆ ಗೋಚರಕ್ಕೆ ಬರುವುದಿಲ್ಲ. ಆದ್ದರಿಂದಲೇ ಅವು ಅತ್ಯಂತ ಅಪಾಯಕಾರಿ.

ನೀರಾವರಿ ಪ್ರದೇಶದ ವಿಸ್ತರಣೆ, ಪಂಪುಸೆಟ್ಟುಗಳ ಮೂಲಕ ನೀರಾವರಿ, ಕೃತಕ ಗೊಬ್ಬರಗಳ ಉಪಯೋಗ ಮತ್ತು ಪೀಡೆನಾಶಕಗಳ ಬಳಕೆಯಿಂದ ಭಾರತದ ಧಾನ್ಯ ಉತ್ಪಾದನೆ ಬಹಳಷ್ಟು ಹೆಚ್ಚಿತು. ಇದರಿಂದಾಗಿ ಆಹಾರ ಧಾನ್ಯಕ್ಕಾಗಿ ಕೈಯೊಡ್ಡುವುದು ಕೊನೆಗೊಂಡಿತು ಎಂಬುದೇನೋ ನಿಜ. ಆದರೆ ಪೀಡೆನಾಶಕಗಳ ವಿವೇಚನಾರಹಿತ ಬಳಕೆಗಾಗಿ ನಾವು ತೆರಬೇಕಾದ ಬೆಲೆ ಏನು?

ವಿಜ್ಞಾನಿಗಳು ಹೊಸಹೊಸ ಭಯಂಕರ ವಿಷಕಾರಿ ಪೀಡೆನಾಶಕಗಳನ್ನು ಸೃಷ್ಟಿಸುತ್ತಲೇ ಇದ್ದಾರೆ. ಬಿ.ಎಚ್.ಸಿ, ಲಿಂಡೇನ್, ಕ್ಲೋರ್‌ಡೇನ್, ಎಂಡ್ರಿನ್, ಡೀಲ್ಡ್ರಿನ್, ಎಂಡೋಸಲ್ಪಾನ್ ಇತ್ಯಾದಿ ಮಾರಕ ವಿಷರಾಸಾಯನಿಕಗಳ ಬಳಕೆ ರಾಕ್ಷಸ ಸಂತತಿಯಂತೆ ಬೆಳೆಯುತ್ತಲೇ ಇದೆ. ಇದರಿಂದಾಗಿ ಲಾಭವಾದುದು ಇವನ್ನು ಸೃಷ್ಟಿಸಿದ ಪಾಶ್ಚಾತ್ಯ ಉತ್ಪಾದಕ ಕಂಪೆನಿಗಳಿಗೆ ಮಾತ್ರ. ಮಾನವಕುಲದ ನಾಶಕ್ಕೆ ಈ ಪ್ರಬಲ ವಿಷಯುಕ್ತ ಪೀಡೆನಾಶಕಗಳು ಕಾರಣವಾಗುತ್ತಿವೆ ಎಂಬುದರ ಬಗ್ಗೆ ಹೆಚ್ಚೆಚ್ಚು ಪುರಾವೆಗಳು ಇತ್ತೀಚೆಗೆ ಬೆಳಕಿಗೆ ಬರುತ್ತಿವೆ. ಆದರೂ ಪೀಡೆನಾಶಕಗಳ ವಿವೇಚನಾಯುಕ್ತ ಬಳಕೆಗಾಗಿ ಪರಿಣಾಮಕಾರಿ ಕ್ರಮಗಳು ಜ್ಯಾರಿಯಾಗುತ್ತಿಲ್ಲ. ಇದು ನಮಗೆಲ್ಲರಿಗೂ ಅಪಾಯದ ಕರೆಗಂಟೆ.

ಸಾಂದರ್ಭಿಕ ಫೋಟೋ: ಕಾಸರಗೋಡಿನ ಸರಕಾರಿ ಗೇರುತೋಟಗಳಿಗೆ ಹೆಲಿಕಾಪ್ಟರಿನಿಂದ ಸಿಂಪಡಿಸಿದ ಎಂಡೋಸಲ್ಫಾನಿನ ಘೋರ ವಿಷದ ಪರಿಣಾಮದಿಂದ ನರಳುವ ಸಂತ್ರಸ್ತರು

ಆಕರ ಪುಸ್ತಕ: ಅಡ್ಡೂರು ಶಿವಶಂಕರರಾಯರ ಎಂಬತ್ತರ ಕೊಯ್ಲಿನ ಕಾಳುಗಳು

ಲೇಖಕರು: ಅಡ್ಡೂರು ಕೃಷ್ಣರಾವ್, ನಾ. ಕಾರಂತ ಪೆರಾಜೆ