ಪ್ರಮುಖ ಸಾಧನೆಗಳು:
ದಿನೇಶ್ ಬೀಡಿ ಸೊಸೈಟಿ – ದೇಶಕ್ಕೊಂದು ಮಾದರಿ
ಮಂಜೇಶ್ವರ ಪ್ರದೇಶದಲ್ಲಿ ೧೯೬೭ರಲ್ಲಿ ಮಂಗಳೂರಿನ ಖಾಸಗಿ ‘ಗಣೇಶ್ ಬೀಡಿ ಕಂಪೆನಿ’ಯ ಫ್ಯಾಕ್ಟರಿಗಳಲ್ಲಿ ಸಾವಿರಾರು ಕಾರ್ಮಿಕರನ್ನು ಮಾಲೀಕರು ದುಡಿಸುತ್ತಿದ್ದರು. ಮಂಜೇಶ್ವರ, ಕಾಸರಗೋಡು, ಕಾಂಞಂಗಾಡು ಮೊದಲಾದ ಸ್ಥಳಗಳಲ್ಲಿ ಅವರ ಫ್ಯಾಕ್ಟರಿಗಳಿದ್ದವು. ಅಲ್ಲದೆ, ಕಂಟ್ರಾಕ್ಟರ್ಗಳ ಮೂಲಕ ಹೊಗೆಸೊಪ್ಪು ಎಲೆಗಳನ್ನು ಕಾರ್ಮಿಕರಿಗೆ ನೀಡಿ, ಮನೆಗಳಲ್ಲಿಯೂ ಬೀಡಿ ಕಟ್ಟಿಸುತ್ತಿದ್ದರು.ಆ ಸಮಯದಲ್ಲಿ ಕೇರಳದಲ್ಲಿ ಎಡಪಕ್ಷ ಸರಕಾರ ಅಧಿಕಾರಕ್ಕೆ ಬಂತು. ಬೀಡಿ ಕಾರ್ಮಿಕರಿಗೆ ಕನಿಷ್ಠ ಮಜೂರಿ ನಿಗದಿಪಡಿಸಿ ಸರಕಾರ ಆದೇಶ ಹೊರಡಿಸಿತು. ಆದರೆ ಕನಿಷ್ಠ ಮಜೂರಿಯನ್ನು ಕಾರ್ಮಿಕರಿಗೆ ಪಾವತಿಸಲು ಗಣೇಶ್ ಬೀಡಿ ಕಂಪೆನಿ ಸಿದ್ಧವಿರಲಿಲ್ಲ. ಹಾಗಾಗಿ ಡಾ. ಸುಬ್ಬರಾಯರ ಮುಂದಾಳುತನದಲ್ಲಿ ಎಡಪಕ್ಷಗಳ ಕಾರ್ಮಿಕ ಸಂಘಟನೆಗಳು ಗಣೇಶ್ ಬೀಡಿ ಕಂಪೆನಿ ಮಾಲೀಕರೊಂದಿಗೆ ಸಮಾಲೋಚನೆ ನಡೆಸಿದವು. ಕಾರ್ಮಿಕರಿಗೆ ನ್ಯಾಯಬದ್ಧ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದವು. ಆದರೆ ಮಾಲೀಕರು ಒಪ್ಪಲಿಲ್ಲ. ಕೊನೆಗೆ ತಮ್ಮ ಬೀಡಿ ಫ್ಯಾಕ್ಟರಿಗಳನ್ನು ಮುಚ್ಚಿಯೇ ಬಿಟ್ಟರು. ಸಾವಿರಾರು ಕಾರ್ಮಿಕರಿಗೂ, ಅವರ ಕುಟುಂಬಗಳಿಗೂ ಜೀವನೋಪಾಯವಿಲ್ಲದ ಸಂಕಟದ ಸನ್ನಿವೇಶ. ಗಣೇಶ್ ಬೀಡಿ ಕಂಪೆನಿಯ ಮಂಗಳೂರಿನ ಕಚೇರಿ ಎದುರು ನಡೆಸಿದ ದೀರ್ಘ ಪ್ರತಿಭಟನೆಯೂ ನಿಷ್ಫಲ.
ಆಗಿನ ಕೈಗಾರಿಕಾ ಸಚಿವ ಸಿ.ಪಿ.ಐ. ನೇತಾರ ಟಿ.ವಿ. ಥಾಮಸ್ರನ್ನು ಡಾ. ಸುಬ್ಬರಾವ್, ರಾಮಪ್ಪ ಮಾಸ್ಟರ್, ಸಿ.ಎಚ್. ಕೃಷ್ಣನ್ ಹಾಗೂ ಇತರ ಮುಖಂಡರು ಭೇಟಿ ಮಾಡಿ ಚರ್ಚಿಸಿದರು. ಅನಂತರ ಜಿಲ್ಲಾ ಕೇಂದ್ರ ಕಣ್ಣಾನೂರಿನಲ್ಲಿ ಒಂದು ವಾರದ ಶಿಬಿರ ನಡೆಸಿ ಸುದೀರ್ಘ ಸಮಾಲೋಚನೆ ನಡೆಯಿತು. ಅಂತಿಮವಾಗಿ, ಕಾರ್ಮಿಕರೇ ನಿರ್ವಹಿಸುವ ಸಹಕಾರಿ ರಂಗದ ದಿನೇಶ್ ಬೀಡಿ ಸಹಕಾರಿ ಸೊಸೈಟಿ ಸ್ಥಾಪಿಸಲು ನಿರ್ಧಾರ. ಕಣ್ಣಾನೂರನ್ನು ಕೇಂದ್ರವಾಗಿರಿಸಿಕೊಂಡು ದಿನೇಶ್ ಬೀಡಿ ಸೊಸೈಟಿ ಕಾರ್ಯಾರಂಭ ಮಾಡಿತು. ತಲಶ್ಶೇರಿಯಿಂದ ಮಂಜೇಶ್ವರ ತನಕ ಅನೇಕ ಪ್ರಾದೇಶಿಕ ಸೊಸೈಟಿಗಳನ್ನು ಸ್ಥಾಪಿಸಿ, ಕೆಲಸಗಾರರನ್ನು ನೋಂದಾಯಿಸಿ, ಬೀಡಿ ಉತ್ಪಾದನೆ ಆರಂಭ. ಮಂಜೇಶ್ವರ ಪ್ರೈಮರಿ ಸೊಸೈಟಿಯ ಅಧ್ಯಕ್ಷರಾಗಿ ಡಾ. ಸುಬ್ಬರಾಯರ ಆಯ್ಕೆ. ಅವರು ಅದೇ ಸ್ಥಾನದಲ್ಲಿ ಮುಂದಿನ ೨೩ ವರುಷ ಮುಂದುವರಿದು, ದಿನೇಶ್ ಬೀಡಿ ಸೊಸೈಟಿಗೆ ಭದ್ರ ಬುನಾದಿ ಹಾಕಿದರು. ಆರಂಭದಲ್ಲಿ ಖಾಸಗಿ ಬೀಡಿ ಕಂಪೆನಿಗಳೊಂದಿಗೆ ಸ್ಪರ್ದಿಸುವುದು ಸುಲಭವಾಗಿರಲಿಲ್ಲ. ಆದರೂ ಕಾರ್ಮಿಕರ ಸಹಕಾರದಿಂದಾಗಿ ದಿನೇಶ್ ಬೀಡಿ ಸೊಸೈಟಿ ಬೆಳೆಯಿತು. ಉತ್ತಮ ಗುಣಮಟ್ಟ ಕಾದುಕೊಂಡು ಜನಪ್ರಿಯವಾಯಿತು. ಖಾಸಗಿ ಬೀಡಿ ಕಂಪೆನಿಗಳಿಗಿಂತ ೩೦-೪೦% ಜಾಸ್ತಿ ಮಜೂರಿ ಪಾವತಿ ದಿನೇಶ್ ಬೀಡಿ ಸೊಸೈಟಿಯ ಹೆಗ್ಗಳಿಕೆ. ಜೊತೆಗೆ ಆದಿತ್ಯವಾರದ ರಜಾವೇತನ, ಹೆರಿಗೆ ಭತ್ತೆ, ವೈದ್ಯಕೀಯ ಚಿಕಿತ್ಸೆಗೆ ಸಹಾಯಧನ ಪಾವತಿ. ಇದರೊಂದಿಗೆ ಮರಣಾನಂತರ ಹಣ ಸಹಾಯ, ವಾರ್ಷಿಕ ರಜಾವೇತನ, ಹಬ್ಬ ಹರಿದಿನಗಳಿಗೆ ವಿಶೇಷ ವೇತನ ಪಾವತಿ. ಇಷ್ಟೆಲ್ಲ ಸವಲತ್ತುಗಳನ್ನು ಒದಗಿಸಿಯೂ ದಿನೇಶ್ ಬೀಡಿ ಸೊಸೈಟಿ ಲಾಭದಲ್ಲಿ ವಹಿವಾಟು ನಡೆಸಲು ಸಮರ್ಥವಾಯಿತು. ಇದಕ್ಕೆಲ್ಲಾ ಕಾರಣ ಡಾ. ಸುಬ್ಬರಾಯರಂತಹ ನಿಸ್ವಾರ್ಥಿ ನಾಯಕರು. ಮಂಜೇಶ್ವರದಲ್ಲಿ ಡಾ. ಸುಬ್ಬರಾಯರ ಕ್ಲಿನಿಕ್ನ ಹತ್ತಿರದಲ್ಲಿಯೇ ದಿನೇಶ್ ಬೀಡಿಯ ಮೈನ್ ಡಿಪೋ ಫ್ಯಾಕ್ಟರಿ. ಅಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ವಾರಕ್ಕೊಮ್ಮೆ ಒಟ್ಟು ಸೇರಿಸಿ ಸಭೆ ನಡೆಸುತ್ತಿದ್ದರು. ಇತ್ತೀಚೆಗಿನ ರಾಜಕೀಯ ಬೆಳವಣಿಗೆಗಳು, ಕಮ್ಯುನಿಸ್ಟ್ ಪಕ್ಷದ ಧೋರಣೆ, ಕಾರ್ಮಿಕ ವರ್ಗದ ಮುಂದಿರುವ ಸವಾಲುಗಳನ್ನು ಸರಳ ಭಾಷೆಯಲ್ಲಿ ವಿವರಿಸುತ್ತಿದ್ದರು. ಇತರ ಫ್ಯಾಕ್ಟರಿಗಳಲ್ಲಿಯೂ ತಿಂಗಳಿಗೊಮ್ಮೆ ಫ್ಯಾಕ್ಟರಿ ಸಮಿತಿಯ ಸಭೆ ನಡೆಸುತ್ತಿದ್ದರು. ಈ ರೀತಿಯಲ್ಲಿ ದಿನೇಶ್ ಬೀಡಿ ಕಾರ್ಮಿಕರೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿದ್ದರು. ಫ್ಯಾಕ್ಟರಿ ಸಮಿತಿಯ ವಾರ್ಷಿಕ ಮಹಾಸಭೆಯನ್ನು ಪ್ರತಿ ವರುಷವೂ ಜರಗಿಸಿ, ಎಐಟಿಯುಸಿ ಸಮಿತಿಯನ್ನು ಪ್ರಜಾಸತ್ತಾತ್ಮಕ ನೆಲೆಯಲ್ಲಿ ಆರಿಸುತ್ತಿದ್ದರು. ಈ ಕ್ರಮವನ್ನು ಶಾಸಕರಾಗಿ ಹೋಗುವ ತನಕ ನಿಯಮಬದ್ಧವಾಗಿ ಶಿಸ್ತಿನಿಂದ ನಡೆಸಿದ ಹಿರಿಮೆ ಅವರದು.
ಡಾ. ಸುಬ್ಬರಾವ್ ದಿನೇಶ್ ಬೀಡಿ ಸೊಸೈಟಿಯ ಕಣ್ಣಾನೂರಿನ ಕೇಂದ್ರ ಸಂಘದ ನಿರ್ದೇಶಕರು. ಕೇಂದ್ರ ಸಂಘದ ಸಭೆಗಳಲ್ಲಿ ತಪ್ಪದೆ ಭಾಗವಹಿಸುತ್ತಿದ್ದರು. ಕಾರ್ಮಿಕರ ಹಿತದ ಬಗ್ಗೆ ಅವರಿಗೆ ಸದಾ ಕಾಳಜಿ. ಆ ಸಭೆಗಳಲ್ಲಿ ಕಾರ್ಮಿಕರ ಸಮಸ್ಯೆಗಳನ್ನು ಪ್ರಸ್ತಾಪಿಸಿ, ಪರಿಹಾರ ಕ್ರಮಗಳಿಗಾಗಿ ಆಗ್ರಹಿಸುತ್ತಿದ್ದರು. ಕಾರ್ಮಿಕರಿಗೆ ಕಳಪೆ ಬೀಡಿ ಎಲೆಗಳನ್ನು ವಿತರಿಸಿದಾಗ, ಅದರ ಸ್ಯಾಂಪಲನ್ನು ಡಾ. ಸುಬ್ಬರಾವ್ ತನ್ನ ಬ್ಯಾಗಿನಲ್ಲಿ ಒಯ್ದು, ಕೇಂದ್ರ ಸಮಿತಿಯ ಸಭೆಯಲ್ಲೇ ಪ್ರದರ್ಶಿಸಿ, ‘ಇಂತಹ ಎಲೆಗಳಿಂದ ಉತ್ತಮ ಬೀಡಿ ತಯಾರಿಸುವುದು ಹೇಗೆ?’ ಎಂದು ಪ್ರಶ್ನಿಸಿದ್ದರು. ಮಂಜೇಶ್ವರದ ದಿನೇಶ್ ಬೀಡಿಯ ಮೈನ್ ಡಿಪೊ, ಉದ್ಯಾವರ, ಕುಂಜತ್ತೂರು, ಕೆದಂಬಾಡಿ, ವರ್ಕಾಡಿ, ಪಾವೂರು, ದೈಗೋಳಿ, ಕಡಂಬಾರ್, ಮಜಿಬೈಲು, ಮೂಡಂಬೈಲು, ಉಪ್ಪಳ, ಭಗವತೀ ಗೇಟ್, ಪುಳಿಕುತ್ತಿ – ಈ ೧೨ ಫ್ಯಾಕ್ಟರಿಗಳಲ್ಲಿ ದುಡಿಯುತ್ತಿದ್ದ ಸುಮಾರು ೧೫೦೦ ಕಾರ್ಮಿಕರ ಬದುಕಿಗೊಂದು ನೆಲೆ ಒದಗಿಸಿದವರು ಡಾ. ಸುಬ್ಬರಾವ್. ಇವೆಲ್ಲ ಫ್ಯಾಕ್ಟರಿಗಳು ಡಾ. ಸುಬ್ಬರಾವ್ ಅಧ್ಯಕ್ಷರಾಗಿದ್ದ ಅವಧಿಯಲ್ಲೇ ಸ್ಥಾಪನೆಯಾದವುಗಳು. ಅವರು ಅಧ್ಯಕ್ಷ ಸ್ಥಾನ ತೆರವು ಮಾಡಿದ ಬಳಿಕ ಯಾವುದೇ ಹೊಸ ಫ್ಯಾಕ್ಟರಿ ಆರಂಭವಾಗಲಿಲ್ಲ ಎಂಬುದು ಗಮನಿಸಬೇಕಾದ ವಿಷಯ. ‘ಕಾರ್ಮಿಕರಿಂದ ಕಾರ್ಮಿಕರಿಗಾಗಿ’ ಎಂಬ ತತ್ವದ ನೆಲೆಯಲ್ಲಿ ದಿನೇಶ್ ಬೀಡಿ ಸೊಸೈಟಿಯನ್ನು ಮುನ್ನಡೆಸಿ, ಅದನ್ನು ದೇಶಕ್ಕೇ ಒಂದು ಮಾದರಿ ಉತ್ಪಾದನಾ ಸಂಸ್ಥೆಯಾಗಿ ಕಟ್ಟಿ ಬೆಳೆಸುವಲ್ಲಿ ಡಾ. ಸುಬ್ಬರಾಯರದು ಪ್ರಧಾನ ಪಾತ್ರ.
ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜು
ಮಂಜೇಶ್ವರಕ್ಕೆ ಒಂದು ಕಾಲೇಜು ಬೇಕೆಂಬುದು ಅಲ್ಲಿನ ಜನರ ಬಹುದಿನಗಳ ಬೇಡಿಕೆ. ಅಲ್ಲಿನ ಹಲವಾರು ವಿದ್ಯಾರ್ಥಿಗಳು ಕಾಲೇಜು ಶಿಕ್ಷಣಕ್ಕಾಗಿ ದೂರದ ಮಂಗಳೂರಿಗೆ ಪ್ರತಿದಿನ ಹೋಗಿ ಬರಬೇಕಾದ ಪರಿಸ್ಥಿತಿ ಇತ್ತು. ಈ ಬವಣೆ ತಪ್ಪಿಸಲಿಕ್ಕಾಗಿ ರಾಷ್ಟ್ರಕವಿ ಗೋವಿಂದ ಪೈಗಳ ಸ್ಮಾರಕವಾಗಿ ಸರಕಾರಿ ಕಾಲೇಜನ್ನೇ ಸ್ಥಾಪಿಸಬೇಕೆಂಬುದು ಡಾ. ಸುಬ್ಬರಾಯರ ಕನಸು. ಈ ಕನಸು ನನಸಾಗುವ ಅವಕಾಶ ಒದಗಿದ್ದು ಅವರು ಶಾಸಕರಾದಾಗ. ಒಂದೂರಿಗೆ ಸರಕಾರಿ ಕಾಲೇಜು ಮಂಜೂರು ಮಾಡಿಸಿ, ಅಂತಿಮವಾಗಿ ಅದು ಕಾರ್ಯಾರಂಭ ಮಾಡುವವರೆಗಿನ ವಿವಿಧ ಹಂತಗಳ ಅಡಚಣೆಗಳು ಅವನ್ನೆಲ್ಲ ಅನುಭವಿಸಿದವರಿಗೇ ಗೊತ್ತು. ಅಂತೂ ಮಂಜೇಶ್ವರಕ್ಕೊಂದು ಕಾಲೇಜೆಂಬ ಕನಸು ನನಸಾಗುವಲ್ಲಿ ಹಲವರ ಶ್ರಮವಿದೆ. ಜಯಂತ ಕಿಣಿ, ಡಾ. ಗಣಪತಿ ಭಟ್, ದಿವಂಗತ ಎಂ. ರಾಮಪ್ಪ ಮಾಸ್ಟರ್ ಇವರೆಲ್ಲರೊಂದಿಗೆ ಛಲ ಬಿಡದೆ ಶ್ರಮಿಸಿದವರು ಡಾ. ಸುಬ್ಬರಾವ್. ಕಾಲೇಜು ಕಾರ್ಯಾರಂಭ ಮಾಡಿದ ನಂತರವೂ ಅದರ ಆಗುಹೋಗುಗಳಲ್ಲಿ ವಿಶೇಷ ಆಸಕ್ತಿ ವಹಿಸಿದವರು. ಸರಕಾರದ ಅನುದಾನಗಳು ಕಾಲ ಕಾಲಕ್ಕೆ ಕಾಲೇಜಿಗೆ ದೊರಕಲು ಅವರ ಮುತುವರ್ಜಿಯೇ ಕಾರಣ. ಅದೇ ರೀತಿಯಲ್ಲಿ ರಾಷ್ಟ್ರಕವಿಯ ನಿವಾಸವಿರುವ ಜಾಗದಲ್ಲೂ ಗ್ರಂಥಾಲಯ ಮತ್ತು ವಾಚನಾಲಯ ಸ್ಥಾಪನೆಗೂ ಡಾಕ್ಟರರ ಆಸಕ್ತಿಯೇ ಕಾರಣ.
ಕಾಸರಗೋಡು ಜಿಲ್ಲೆಗಾಗಿ
ಈಗ ಕಾಸರಗೋಡು ಒಂದು ಜಿಲ್ಲೆ. ಈ ಹೊಸ ಜಿಲ್ಲೆ ರಚನೆಯಾಗಲು ಶತಪ್ರಯತ್ನ ಮಾಡಿದವರಲ್ಲಿ ಡಾ. ಸುಬ್ಬರಾವ್ ಪ್ರಮುಖರು. ಆದರೆ ಡಾಕ್ಟರ್ ಅದು ತನ್ನ ಸಾಧನೆ ಎಂದು ಹೇಳಿಕೊಳ್ಳಲಿಲ್ಲ. ಯಾಕೆಂದರೆ ಅವರು ಹೆಸರಿಗಾಗಿ ಕೆಲಸ ಮಾಡಿದವರೇ ಅಲ್ಲ. ಈ ಬಗ್ಗೆ ಸಿ. ರಾಘವನ್ ಮುಖ್ಯ ಸಂಗತಿಯೊಂದನ್ನು ತಿಳಿಸುತ್ತಾರೆ : ‘‘ಜಿಲ್ಲಾ ಸುವರ್ಣ ಸ್ವಾತಂತ್ರ್ಯ ಸಮಿತಿಯ ಸಮಾರಂಭಕ್ಕಾಗಿ ದಾಖಲೆಗಳನ್ನು ಹುಡುಕಾಡಿದಾಗ, ಕಾಸರಗೋಡು ಜಿಲ್ಲೆಯ ಸ್ಥಾಪನೆಗಾಗಿ ಡಾ. ಸುಬ್ಬರಾವ್ ಮಾಡಿದ ಕೆಲಸದ ಅಗಾಧತೆ ನನಗೆ ತಿಳಿಯಿತು’’. ಕಾಸರಗೋಡು ಜಿಲ್ಲೆ ರಚನೆಯಾದಾಗ, ಕಮ್ಯುನಿಸ್ಟ್ ಪಾರ್ಟಿಯ ಅಲ್ಲಿನ ಜಿಲ್ಲಾ ಸಮಿತಿಗೆ ಸಹಜವಾಗಿಯೇ ಡಾ. ಸುಬ್ಬರಾವ್ ಅಧ್ಯಕ್ಷರಾದರು. ಜಿಲ್ಲಾ ಸಮಿತಿಯ ಕಚೇರಿ ಸ್ಥಾಪಿಸಲು ಕಮ್ಯುನಿಸ್ಟ್ ಪಾರ್ಟಿಯ ರಾಜ್ಯ ಸಮಿತಿ ನಿರ್ದೇಶನ ನೀಡಿತು. ಅದಕ್ಕಾಗಿ ರೂ. ೮ ಲಕ್ಷ ಹಣ ಬೇಕಾಗಿತ್ತು. ಡಾ. ಸುಬ್ಬರಾವ್ ಜಿಲ್ಲೆಯ ಪ್ರತಿಯೊಬ್ಬ ಕಾರ್ಯಕರ್ತನ ಮನೆಗೆ ಹೋಗಿ, ದೇಣಿಗೆ ವಿನಂತಿಸಿದರು. ಈ ರೀತಿಯಲ್ಲಿ ಒಂದು ತಿಂಗಳಿಡೀ ಕೆಲಸ ಮಾಡಿ ರೂ. ೮ ಲಕ್ಷ ಸಂಗ್ರಹಿಸಿ, ಜಿಲ್ಲಾ ಸಮಿತಿಯ ಕಚೇರಿ ಸ್ಥಾಪಿಸಿದರು. ಸಂಘಟನೆ ಕಟ್ಟುವುದರಲ್ಲಿ ಪ್ರತಿಯೊಬ್ಬ ಕಾರ್ಯಕರ್ತನ ಪಾತ್ರವೂ ಮುಖ್ಯ ಎಂಬುದನ್ನು ಅವರು ಕೊನೆಯವರೆಗೂ ಅನುಸರಿಸಿದರು.
ಮಂಜೇಶ್ವರದ ಕರ್ಮಭೂಮಿಯಲ್ಲಿ
ಡಾ. ಎ. ಸುಬ್ಬರಾಯರ ಕರ್ಮಭೂಮಿ ಕೇರಳದ ಉತ್ತರ ತುದಿಯ ಮಂಜೇಶ್ವರ. ಅವರಲ್ಲಿಗೆ ವೈದ್ಯರಾಗಿ ಕಾಲಿಟ್ಟದ್ದು ೧೯೪೩ರಲ್ಲಿ. ವೈದ್ಯವೃತ್ತಿಯಿಂದಲೂ, ಜನತಾ ರಂಗಭೂಮಿಯ ಕಲಾ ಚಟುವಟಿಕೆಗಳಿಂದಲೂ ಅಲ್ಲೇ ಜನಾನುರಾಗ ಗಳಿಸಿದರು. ಕಮ್ಯೂನಿಸ್ಟ್ ಪಕ್ಷ ಸೇರಿ ಸಂಘಟನೆ ಕಟ್ಟಿ ಬೆಳೆಸಿದರು. ದಿನೇಶ್ ಬೀಡಿ ಸೊಸೈಟಿ ಹಾಗೂ ಮಂಜೇಶ್ವರ ಸಹಕಾರಿ ಬ್ಯಾಂಕಿನಲ್ಲಿ ಜವಾಬ್ದಾರಿಯ ಸ್ಥಾನಗಳನ್ನು ಹಲವಾರು ವರುಷ ನಿರ್ವಹಿಸಿದರು. ನಿಸ್ವಾರ್ಥದಿಂದ ಜನಸೇವೆ ಮಾಡುತ್ತಲೇ ಜನನಾಯಕರಾದರು. ಸರಳತೆಯಿಂದಲೇ ಪ್ರತಿಯೊಬ್ಬರ ಮನ ಗೆದ್ದರು. ನೇರ ನಡೆನುಡಿ, ಶುದ್ಧ ಚಾರಿತ್ರ್ಯದಿಂದಾಗಿ ಎಲ್ಲರ ಗೌರವ ಗಳಿಸಿದರು. ರಾಜ್ಯಸಭಾ ಸದಸ್ಯರಾಗಿ, ಶಾಸಕರಾಗಿ, ಮಂತ್ರಿಯಾಗಿ ನಿಷ್ಕಳಂಕವಾಗಿ ಕರ್ತವ್ಯ ನಿರ್ವಹಣೆ ಮಾಡಿ, ಜನರ ಹೃದಯಗಳಲ್ಲಿ ಶಾಶ್ವತ ಸ್ಥಾನ ಗಳಿಸಿದರು. ೧೪ ಸಪ್ಟಂಬರ್ ೨೦೦೩ರಂದು ನಿಧನರಾದ ಅವರು ತನಗಾಗಿ ಏನನ್ನೂ ಬಯಸಲಿಲ್ಲ. ಕೂಡಿ ಹಾಕಲಿಲ್ಲ. ತನ್ನ ಮಕ್ಕಳು ಹಾಗೂ ಕುಟುಂಬದವರಿಗೂ ಪ್ರೀತಿ ವಿಶ್ವಾಸಗಳನ್ನಷ್ಟೇ ಕೊಟ್ಟರು. ಶ್ರೀಮದ್ ಅನಂತೇಶ್ವರ ದೇವಸ್ಥಾನದ ಎದುರಿನ ಕಟ್ಟಡದ ಮಾಳಿಗೆಯ ಕೋಣೆಯಲ್ಲಿ ಕ್ಲಿನಿಕ್ ಆರಂಬಿಸಿ, ಅಲ್ಲಿಯೇ ವೈದ್ಯವೃತ್ತಿ ನಡೆಸಿದರು. ಮಂತ್ರಿಯಾದಾಗ, ಅದನ್ನೂ ವೈದ್ಯರೊಬ್ಬರಿಗೆ ಧಾರೆಯೆರೆದರು. ಮಂಜೇಶ್ವರದ ಕ್ಲಿನಿಕ್ನ ಎದುರಿನ ಬಾಡಿಗೆ ಮನೆಯಲ್ಲೇ ಕೊನೆಯವರೆಗೂ ಬದುಕಿ, ಬಾಳಿ, ಮಹಾನ್ ವ್ಯಕ್ತಿಯಾಗಿ ಬೆಳೆದರು.
ಆಕರ ಪುಸ್ತಕಗಳು: (1) ಅಡ್ಡೂರು ಶಿವಶಂಕರರಾಯರ ಎಂಬತ್ತರ ಕೊಯ್ಲಿನ ಕಾಳುಗಳು
(2) ರಾಜನೀತಿಯ ಅಪರಂಜಿ ಡಾ. ಅಡ್ಡೂರು ಸುಬ್ಬರಾವ್
ಲೇಖಕರು: ಅಡ್ಡೂರು ಕೃಷ್ಣರಾವ್
ಪ್ರತಿಕ್ರಿಯೆ (1)
ಸರ್, ಕೆಲವೊಂದು ವಾರಗಳಿಂದ ಮೂಡಿ ಬರುತ್ತಿದ್ದ ಡಾ ಸುಬ್ಬರಾಯರ ಜೀವನಗಾಥೆಯನ್ನು ಓದಿ ಕಣ್ಣಾಲಿಗಳು ತೇವವಾದವು. ಇಂದಿನ ಕಾಲದಲ್ಲಿ ಒಬ್ಬನೇ ಒಬ್ಬ ರಾಜಕಾರಣಿ ಡಾ ಸುಬ್ಬರಾಯರಂತೆ ಇಲ್ಲ. ಅಪರೂಪದಲ್ಲಿ ಅಪರೂಪವಾಗಿದ್ದ ಈ ವ್ಯಕ್ತಿ ನಮ್ಮ ನಡುವೆ ಇದ್ದರು ಎನ್ನುವುದೇ ಹೆಮ್ಮೆಯ ಸಂಗತಿ. ಈ ಸರಣಿ ಬರಹಗಳಿಂದ ಬಹಳಷ್ಟು ಸಂಗತಿಗಳು ಬೆಳಕಿಗೆ ಬಂದವು. ಲೇಖಕರಿಗೆ ಅಭಿನಂದನೆಗಳು ಮತ್ತು ಕೃತಜ್ಞತೆಗಳು