ಓದುವ ಹವ್ಯಾಸ

ಓದು ಬರಹ ಗೊತ್ತಿದ್ದವರಿಗೆ ಮತ್ತು ದೃಷ್ಟಿ ಸರಿ ಇದ್ದವರಿಗೆ ಪುಸ್ತಕವೊಂದು ಗೆಳೆಯ. ಪುಸ್ತಕಗಳನ್ನು ಓದುವುದರಿಂದ ನಿತ್ಯ ಜೀವನಕ್ಕೆ, ಆರೋಗ್ಯಕ್ಕೆ ಹಾಗೂ ಕೆಲಸಕಾರ್ಯಗಳಿಗೆ ಬೇಕಾದ ಮಾಹಿತಿ ಸಿಗುವುದು. ಓದು ನಮ್ಮ ಜೀವನದಲ್ಲಿ ಕಷ್ಟಗಳನ್ನು ಎದುರಿಸುವ ಹಾದಿ ತೋರಿಸುವ ಒಂದು ಮಾರ್ಗವೂ ಆಗಿದೆ. ಗೆಳೆಯರೊಂದಿಗೆ, ಸಂಬಂಧಿಕರೊಂದಿಗೆ, ನಮಗೆ ಆಗದವರೊಂದಿಗೆ ಹೇಗೆ ವರ್ತಿಸಬೇಕೆಂದು ತಿಳಿಸಿ ಕೊಡುವ ಮಾರ್ಗದರ್ಶಿ ಪುಸ್ತಕ. ಒತ್ತಡ ನಿವಾರಣೆಗೆ ಯೋಗ ಮಾಡಬೇಕಾಗಿಲ್ಲ, ಒಂದು ಉತ್ತಮ ಪುಸ್ತಕವನ್ನು ಓದಿದರೆ ಸಾಕು.

ನಾವು ಯಾವುದನ್ನು ಓದಬೇಕು ಮತ್ತು ಯಾವುದನ್ನು ಓದಬಾರದು ಎಂಬ ವಿವೇಕ ನಮ್ಮಲ್ಲಿರುವುದು ಅಗತ್ಯ. ಈ ಬಗ್ಗೆ ಮೇಧಾವಿಯೊಬ್ಬರು ಹೀಗೆಂದಿದ್ದಾರೆ – ”Don`t read good books, read only the best. Life is too short to be able to read all the good books.”

ಹಲವರು ಪತ್ತೇದಾರಿ ಕಥೆಗಳನ್ನು ಓದುತ್ತಾರೆ; ಕಾಮವನ್ನು ಪ್ರಚೋದಿಸುವ ಪುಸ್ತಕಗಳನ್ನು ಓದಿ ಮೈ ಮರೆಯುತ್ತಾರೆ. ಇದರಿಂದ ಏನೂ ಪ್ರಯೋಜನವಿಲ್ಲ. ಕೆಲವರು ಹೊತ್ತು ಕಳೆಯುವುದಕ್ಕಾಗಿ ಓದುವುದುಂಟು. ಅದರಿಂದ ಹಾನಿಯೇನಿಲ್ಲ. ನಮ್ಮಲ್ಲಿರುವ ನ್ಯೂನತೆಗಳನ್ನು, ಕೆಟ್ಟ ಗುಣಗಳನ್ನು ಹೋಗಲಾಡಿಸಲು ಮತ್ತು ನಮ್ಮ ವ್ಯಕ್ತಿತ್ವ ಸರಿಪಡಿಸಲು ಸಹಾಯಕವಾಗುವ ಪುಸ್ತಕಗಳನ್ನು ಓದಬೇಕು. ಇತಿಹಾಸ ಪುರಾಣಗಳಲ್ಲಿ ಬರುವ ವ್ಯಕ್ತಿಗಳು ನಮ್ಮ ನಡತೆಗೆ ಮಾದರಿಯಾಗಬಲ್ಲರು. ಅದಕ್ಕಿಂತ ಹೆಚ್ಚಾಗಿ ಇತ್ತೀಚೆಗಿನ ಶತಮಾನಗಳ ಸಾಧಕರ ಬದುಕಿನ ಕೃತಿಗಳನ್ನು ಓದಲೇ ಬೇಕು. ಅವರೆಲ್ಲಾ ಯಾವ್ಯಾವ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಿದ್ದರು ಎಂಬುದನ್ನು ಗಮನಿಸಬೇಕು.

ನಾನು ಕಾದಂಬರಿಗಳಿಗಿಂತ ಸಣ್ಣ ಕಥೆಗಳಿಗೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತೇನೆ. ಕಾದಂಬರಿಗಳನ್ನು ಪೂರ್ತಿ ಓದಲು ಹೆಚ್ಚಿನವರಿಗೆ ಸಮಯ ಸಾಕಾಗುವುದಿಲ್ಲ. ಯಾಕೆಂದರೆ ಅವರು ಬ್ಯುಸಿ!

ಸಣ್ಣ ಕಥೆಗಳನ್ನಾದರೆ ಒಮ್ಮೆ ಕುಳಿತು ಏಳುವಷ್ಟರಲ್ಲಿ ಓದಿ ಮುಗಿಸಿಬಿಡಬಹುದು. ಇಂದಿನ ಕುಟುಂಬ ಜೀವನದ ಸಮಸ್ಯೆಗಳನ್ನು ಬಹಳ ಪರಿಣಾಮಕಾರಿಯಾಗಿ ಚಿತ್ರಿಸುವ ಸಣ್ಣ ಕಥೆಗಳು ಪುರಾಣದ ಕಥೆಗಳಿಗಿಂತ ಪರಿಣಾಮಕಾರಿ ಎಂಬುದು ನನ್ನ ಭಾವನೆ. ಹಿಂದಿ ಲೇಖಕ ಮುನ್ಶಿ ಪ್ರೇಮಚಂದ್ರರ ಸಣ್ಣ ಕಥೆಗಳನ್ನು ನಾನು ಹೆಚ್ಚು ಮೆಚ್ಚಿಕೊಂಡಿದ್ದೇನೆ. ಮನುಷ್ಯನಲ್ಲಿ ಒಳ್ಳೆಯ ಗುಣಗಳನ್ನು ತುಂಬಲು ಅವರ ಕಥೆಗಳಲ್ಲಿ ಹೇರಳವಾದ ಹೂರಣವಿದೆ. ಇ೦ತಹ ಸಾಹಿತ್ಯವನ್ನು ಓದಲು ನಮ್ಮ ಮಕ್ಕಳನ್ನು ಮತ್ತು ಇತರರನ್ನು ನಾವು ಪ್ರೋತ್ಸಾಹಿಸಬೇಕು

ಈ ವಿಚಾರದಲ್ಲಿ ನಾನು ಪುಸ್ತಕ ಭಂಡಾರ ಸ್ಥಾಪಿಸಿ ಕೆಲಸ ಮಾಡಿದ್ದೇನೆ. ಈಗಿನ ಪುಸ್ತಕಗಳನ್ನು ಎಲ್ಲರೂ ಕೊಂಡು ಓದಲು ಸಾಧ್ಯವಿಲ್ಲ. ಅಷ್ಟು ದುಬಾರಿ ಕ್ರಯ. ಹಾಗಾಗಿ ನಮ್ಮಲ್ಲಿರುವ ಪುಸ್ತಕಗಳನ್ನು ಓದಿದ ಬಳಿಕ ‘ವಾಪಾಸು ಕೊಟ್ಟಾರು’ ಎಂಬ ಭರವಸೆಯಿಂದ ಇತರರಿಗೆ ಓದಲು ಕೊಡಬಹುದು.

ಒಳ್ಳೆಯ ಪುಸ್ತಕಗಳು ನಮ್ಮ ನಿಜವಾದ ಸಂಪತ್ತು. ಇವುಗಳನ್ನು ನಾವು ಓದುವುದಲ್ಲದ, ಇತರರನ್ನೂ ಓದುವಂತೆ ಮಾಡಿದರೆ ನಾವು ಸಮಾಜವನ್ನು ಉತ್ತಮಗೊಳಿಸಲು ಸಹಕರಿಸಿದಂತಾಗುತ್ತದೆ. ನಿಜವಾದ ಜನಸೇವೆ ಮಾಡಿದಂತಾಗುತ್ತದೆ.

ಪುಸ್ತಕ ಪ್ರಚಾರ

ನಾವು ಓದಬೇಕು, ಜ್ಞಾನಾರ್ಜನೆ ಮಾಡಬೇಕು, ಮಾಹಿತಿ ಸಂಗ್ರಹಿಸಬೇಕು, ನಮ್ಮ ಜೀವನದಲ್ಲಿ ಕೆಲವು ಮುಖ್ಯ ಗುಣಗಳನ್ನು ಅಳವಡಿಸಿಕೊಳ್ಳಬೇಕು, ನಮ್ಮ ಧ್ಯೇಯಧೋರಣೆಗಳನ್ನು ರೂಪಿಸಿಕೊಳ್ಳಬೇಕು – ಇವು ಪುಸ್ತಕ ಓದುವ ಬಗ್ಗೆ ನನ್ನ ಧ್ಯೇಯಗಳು.

ನನ್ನಲ್ಲಿ ಒಳ್ಳೆಯ ಪುಸ್ತಕಗಳ ಸಂಗ್ರಹವಿದೆ. ನನ್ನ ಪುಸ್ತಕಗಳನ್ನು ಇತರರಿಗೆ ಓದಲು ಕೊಡುತ್ತಿದ್ದೆ. ಹಲವು ಮದುವೆ, ಉಪನಯನ ಸಮಾರಂಭಗಳಲ್ಲಿ ಒಳ್ಳೊಳ್ಳೆಯ ಪುಸ್ತಕಗಳನ್ನು ಉಡುಗೊರೆಯಾಗಿ ಕೊಡುತ್ತಿದ್ದೆ. ಹಣವನ್ನು ಉಡುಗೊರೆಯಾಗಿ ಕೊಡುತ್ತಿರಲಿಲ್ಲ.

ನಾನು ಉಡುಗೊರೆಯಾಗಿ ಕೊಟ್ಟ ಪುಸ್ತಕಗಳು ನಾನು ನಂಬುವ ಧ್ಯೇಯಗಳ ಪ್ರಸಾರ ಮಾಧ್ಯಮಗಳಾಗಿ ಕೆಲಸ ಮಾಡುತ್ತಿದ್ದುವು. ಹಲವರು ಇಂತಹ ಪುಸ್ತಕಗಳನ್ನು ಓದಿ ಪ್ರಭಾವಿತರಾಗಿದ್ದಾರೆ.

ಇನ್ನು ಪುಸ್ತಕ ಮಾರಾಟದ ಬಗ್ಗೆ ಒಂದೆರಡು ಮಾತು. ಕೆಲವು ಕಾಲ ನಾನು ಪುಸ್ತಕದಂಗಡಿಯಲ್ಲಿ ವಿತರಕನಾಗಿದ್ದೆ. ಆದರೆ ಪುಸ್ತಕ ವ್ಯಾಪಾರದ ಕೆಲವು ತಂತ್ರಗಳನ್ನು ಕಲಿಯುವಲ್ಲಿ ನಾನು ಸೋತೆ. ಜನರು ಓದಬೇಕು ಎಂಬ ಉದ್ದೇಶದಿಂದ ಮಾತ್ರ ಪುಸ್ತಕ ತರಿಸುತ್ತಿದ್ದೆ ವಿನಾ ಲಾಭದಾಸೆಯಿಂದಲ್ಲ.

ಅನಂತರ ನಾನು ಪುಸ್ತಕಗಳನ್ನು ಜನರ ಬಳಿಗೆ ಒಯ್ದು, ಓದುಗರನ್ನು ಹುಡುಕಿ ಮಾರಾಟ ಮಾಡುತ್ತಿದ್ದೆ. ಹೀಗೆ ಹೋದಾಗ ಪುಸ್ತಕ ವ್ಯಾಪಾರವೂ ಆಗುವುದಲ್ಲದೆ ಆಗುಹೋಗುಗಳ ಬಗ್ಗೆ ಚರ್ಚೆಯೂ ಆಗುತ್ತಿತ್ತು. ಹೀಗಾಗಿ ಮಧ್ಯಮ ವರ್ಗದ ಜನರು ನನಗೆ ಹೆಚ್ಚು ಹತ್ತಿರವಾದರು. ಕೆಲವರು ನನ್ನ ಈ ಪ್ರಯತ್ನವನ್ನು ಮೆಚ್ಚಿಕೊಂಡಿದ್ದರು. ಪುಸ್ತಕ ಮಾರಾಟವನ್ನು ‘ಮರ್ಯಾದೆ’, ಎಂಬ ಅಳತೆಗೋಲಿನಿಂದ ಅಳೆದವನಲ್ಲ. ಅದೊಂದು ಸಮಾಜಸೇವೆ ಎಂಬ ಭಾವನೆ ನನ್ನದು.

ಮೂರು ಸಲ ನಾನು ಮಂಗಳೂರಿನಲ್ಲಿ ವಾಚನಾಲಯ ಮತ್ತು ಗ್ರಂಥಾಲಯ ನಡೆಸಿದ್ದೆ. ನಡುನಡುವೆ ನಾನು ಬೇರೆಬೇರೆ ಊರಿಗೆ ಹೋಗಬೇಕಾಗಿ ಬಂದದ್ದರಿಂದ ಅದನ್ನು ನಿಯಮಿತವಾಗಿ ನಡೆಸಲು ಸಾಧ್ಯವಾಗಲಿಲ್ಲ. ಹಂಪನಕಟ್ಟೆಯಲ್ಲಿ ಸ್ಥಾಪಿಸಿದ ಲೈಬ್ರರಿಯಲ್ಲಿ ಒಂದೆರಡು ಓದುಗರ ಸಭೆಗಳನ್ನು ನಡೆಸಿದ್ದೆ. ಇತರ ಕೆಲವು ಗ್ರಂಥಾಲಯಗಳ ಸದಸ್ಯನಾಗಿದ್ದು ಅವುಗಳ ಅಭಿವೃದ್ಢಿಗೆ ಸೂಚನೆಗಳನ್ನು ಕೊಡುತ್ತಿದ್ದೆ.

ಹಿಂದೆ ನಾನು ಅನೇಕ ಪುಸ್ತಕಗಳನ್ನು ಕೊಂಡುಕೊಂಡಿದ್ದೆ. ಬಾಲ್ಯದಿಂದಲೂ ನನಗೆ ಕಾದಂಬರಿಗಳೆಂದರೆ ಅಸಕ್ತಿ. ಸಾಮಾನ್ಯ ಜ್ಞಾನ ಸಂಗ್ರಹ ನನ್ನ ಪ್ರಿಯ ಹವ್ಯಾಸ. ಬೇರೆ ಬೇರೆ ದೇಶಗಳ ಜೀವನಶೈಲಿಯನ್ನು ತಿಳಿದುಕೊಳ್ಳುವ ತುಡಿತ.

ದಿನಪತ್ರಿಕೆ ಓದಿ, ಅದರಲ್ಲಿದ್ದ ಮುಖ್ಯ ವಿಚಾರಗಳಿಗೆ ಅಡಿಗೆರೆ ಹಾಕಿ ಕತ್ತರಿಸಿ ಇಟ್ಟುಕೊಳ್ಳುತ್ತಿದ್ದೆ. ಅದರ ರಾಶಿರಾಶಿ ಸಂಗ್ರಹವಿದೆ. ಕೆಲವೊಂದನ್ನು ಡೈರಿಯಲ್ಲಿ ಬರೆದಿಡುತ್ತಿದ್ದೆ. ಈ ಅಭ್ಯಾಸ ಈಗಲೂ ಇದೆ. ಹಲವಾರು ನಿಯತಕಾಲಿಕಗಳನ್ನು ತರಿಸಿ ಅವನ್ನು ಓದುತ್ತಿದ್ದೆ. ಅನೇಕ ನಿಯತಕಾಲಿಕಗಳ ಹಿಂದಿನ ಸಂಚಿಕೆಗಳನ್ನು ಬುಕ್-ಬೈಂಡ್ ಮಾಡಿಸಿ ರಕ್ಷಿಸಿ ಇಟ್ಟಿದ್ದೇನೆ.

ಕೆಲವೊಂದು ಪುಸ್ತಕಗಳಲ್ಲಿ ನನಗೆ ಆಸಕ್ತಿಯಿಲ್ಲದಿದ್ದರೂ, ಅವುಗಳ ಬಗ್ಗೆ ಬೇರೆಯವರಿಗೆ ತಿಳಿಸಲಿಕ್ಕಾಗಿಯೇ ಆ ಪುಸ್ತಕಗಳನ್ನು ಖರೀದಿಸಿ, ಓದುತ್ತಿದ್ದೆ. ಒಮ್ಮೆ ನಾನು ಹನ್ನೊಂದು ತಾಸು ನಿರಂತರ ಪುಸ್ತಕವನ್ನು ಓದಿದ ನೆನಪು. ನನ್ನ ಬಗ್ಗೆ ನನಗೇ ಆಶ್ಚರ್ಯವಾಗುತ್ತದೆ. ನಾನು ಮನುಷ್ಯನೋ? ಅಥವಾ….?

ಈಗ ಪುಸ್ತಕದಂಗಡಿಗಳಿಗೆ ಹೋಗಲು ಹಿಂಜರಿಯುತ್ತೇನೆ. ಯಾಕೆಂದರೆ ಪುಸ್ತಕಗಳ ಕ್ರಯ ದುಬಾರಿ. ಓದಲು ಮನಸ್ಸಿದೆ. ಆದರೆ ಕೊಂಡು ಓದಲು ಸಾಧ್ಯವಿಲ್ಲ. ಹಿಂದೆ 42 ರೂಪಾಯಿ ಕೊಟ್ಟು “Rice” ಎಂಬ ಪುಸ್ತಕವನ್ನು ಕೊಂಡುಕೊಂಡಿದ್ದೆ. ಆಗಿನ ಕಾಲದಲ್ಲೇ ಅದಕ್ಕೆ ದುಬಾರಿ ಕ್ರಯ. ಅದಕ್ಕೆ ಯಾರೋ ಕೈಕೊಟ್ಟರು. ಪುನ: ಖರೀದಿಸಲೆಂದು ಮಂಗಳೂರಿನ ಪುಸ್ತಕದ ಅಂಗಡಿಗೆ ಹೋದೆ. ಈಗ ಅದರ ಮರುಮುದ್ರಣ ಪ್ರತಿಯ ಬೆಲೆ ರೂ.960. ಆ ಪುಸ್ತಕದ ಬೈಂಡ್ ನೋಡಿ ಹಿಂದಿರುಗಿದೆ.

ನನಗೀಗ ಇಳಿ ವಯಸ್ಸು. ಅಡ್ಡೂರಿನ ನನ್ನ ಮನೆಯಲ್ಲಿರುವ ಹಳೆಯ ಪುಸ್ತಕಗಳನ್ನೇ ಈಗ ಓದುತ್ತಿದ್ದೇನೆ.

ಫೋಟೋ: ಇಳಿ ವಯಸ್ಸಿನಲ್ಲಿಯೂ ದಿನವೂ ಓದಿ-ಬರೆಯುತ್ತಿದ್ದ ಅಡ್ಡೂರು ಶಿವಶಂಕರ ರಾಯರು

ಆಕರ ಪುಸ್ತಕ: ಅಡ್ಡೂರು ಶಿವಶಂಕರರಾಯರ ಎಂಬತ್ತರ ಕೊಯ್ಲಿನ ಕಾಳುಗಳು

ಲೇಖಕರು: ಅಡ್ಡೂರು ಕೃಷ್ಣರಾವ್, ನಾ. ಕಾರಂತ ಪೆರಾಜೆ