ಜನಸೇವೆಗೆ ಸದಾ ಸಿದ್ಧ

೧೯೭೭ರಲ್ಲಿ ಡಾಕ್ಟರ ಕ್ಲಿನಿಕ್‌ಗೆ ಹತ್ತಿರದ ಬಂಗ್ರಮಂಜೇಶ್ವರದಲ್ಲಿ ಭಾರೀ ನೆರೆ. ಹೊಳೆಯಲ್ಲಿ ನೀರು ಉಕ್ಕಿ ಹರಿದು ಸಮೀಪದ ಸಸಿಹಿತ್ಲು ಜಲಾವೃತವಾಗಿತ್ತು. ಆ ಸಂದರ್ಭ ದಲ್ಲಿ ಡಾಕ್ಟರ್ ಸುಬ್ಬರಾವ್ ಅಲ್ಲಿನ ಮನೆಗಳಿಂದ ಮಕ್ಕಳನ್ನು ಸ್ವತಃ ಎತ್ತಿಕೊಂಡು ಬಂದು, ಹಳೆಯ ವಿಜಯಾ ಬ್ಯಾಂಕಿನ ಮಾಳಿಗೆಯಲ್ಲಿ ತಾತ್ಕಾಲಿಕ ನೆರೆ ಪರಿಹಾರ ಶಿಬಿರಕ್ಕೆ ತಲಪಿಸಿ, ಹಗಲುರಾತ್ರಿಯೆನ್ನದೆ ಪರಿಹಾರಕಾರ್ಯದಲ್ಲಿ ತೊಡಗಿದ್ದನ್ನು ಬಿ.ವಿ. ರಾಜನ್ ನೆನಪು ಮಾಡಿಕೊಳ್ಳುತ್ತಾರೆ. ‘ಡಾಕ್ಟರರ ಪರಿಚಯವಾದ ಬಳಿಕ ಅದೇ ಮೊದಲ ಬಾರಿ ಅವರ ಸೇವಾ ಮನೋಭಾವ ಕಂಡು ದಂಗಾಗಿ ಹೋದೆ’ ಎಂದು ರಾಜನ್ ದಾಖಲಿಸಿದ್ದಾರೆ. ಕಣ್ವತೀರ್ಥದಲ್ಲಿ ನೆರೆ ಏರುತ್ತಿದ್ದಂತೆ ಡಾಕ್ಟರ್ ಕಮ್ಯುನಿಸ್ಟ್ ಪಾರ್ಟಿಯ ಕಾರ್ಯಕರ್ತ ರನ್ನು ಸಂಘಟಿಸಿದರು; ಗೋಣಿಚೀಲಗಳಲ್ಲಿ ಹೊಯಿಗೆ (ಮರಳು) ತುಂಬಿಸಿ, ಅವನ್ನು ಸಾಲಾಗಿಟ್ಟು ಅಡ್ಡಗೋಡೆ ನಿರ್ಮಿಸಿದರು. ಆ ಮೂಲಕ ಹಲವಾರು ವಸತಿ, ಸೊತ್ತು, ಜೀವಗಳನ್ನು ಉಳಿಸಿ ದುರಂತ ತಪ್ಪಿಸಿದರು ಎಂದು ಪಿ. ರಾಘವನ್ ಜ್ಞಾಪಿಸಿಕೊಳ್ಳುತ್ತಾರೆ. ಅನಂತರ ನೆರೆಪೀಡಿತರನ್ನು ಸಮೀಪದ ಎಸ್.ಎ.ಟಿ. ಹೈಸ್ಕೂಲಿನ ಶಿಬಿರಕ್ಕೆ ಸ್ಥಳಾಂತರಿಸಲಾಯಿತು. ನೆರೆ ಪರಿಹಾರ ನಿಧಿ ಸಂಗ್ರಹ, ನೆರೆಪೀಡಿತರಿಗಾಗಿ ಬಟ್ಟೆಬರೆ ಸಂಗ್ರಹ ಇತ್ಯಾದಿಗಾಗಿ ಡಾಕ್ಟರ್ ಸುಬ್ಬರಾವ್ ಎಡೆಬಿಡದೆ ಕೆಲಸ ಮಾಡಿದರು. ನೆರೆಪೀಡಿತರ ಶಿಬಿರಕ್ಕೆ ಆಗಾಗ ಭೇಟಿ ನೀಡಿ ಆಹಾರ ಸರಬರಾಜಿನ ವ್ಯವಸ್ಥೆಯನ್ನು ಸ್ವತಃ ಪರಿಶೀಲಿಸುತ್ತಿದ್ದರು. ತಮ್ಮ ಕ್ಲಿನಿಕ್‌ನ ಪಕ್ಕದ ಕೊಠಡಿಯಿಂದಲೇ ಇವೆಲ್ಲ ಪರಿಹಾರ ಕೆಲಸಗಳಿಗೆ ನಿರ್ದೇಶನ ಕೊಡುತ್ತಿದ್ದರು. ತಮ್ಮ ವೈದ್ಯವೃತ್ತಿಯ ಜೊತೆ ಜೊತೆಗೆ ಅವರು ಇಷ್ಟೆಲ್ಲ ಪರಿಹಾರ ಕೆಲಸ ಮಾಡಿದರೆಂಬುದು ನಂಬಲಸಾಧ್ಯವೆನಿಸುತ್ತದೆ.

ಸುಮಾರು ೨೦ ವರುಷಗಳ ನಂತರ, ೧೯೯೬ರಲ್ಲಿ ಒಂದು ದಿನ ರಾತ್ರಿ ೨ ಗಂಟೆಗೆ ಉಪ್ಪಳ ಹೊಳೆಯ ರೈಲ್ವೇ ಸೇತುವೆ ಬಳಿ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿ, ಬೋಗಿಗಳು ಮಗುಚಿ ಬಿದ್ದವು. ಆಗ ರೈಲ್ವೆ ಇಲಾಖೆಯವರಿಗೂ ನೆನಪಾದದ್ದು ಡಾ. ಸುಬ್ಬರಾಯರು ಎಂದು ಬಿ.ವಿ. ರಾಜನ್ ದಾಖಲಿಸಿದ್ದಾರೆ. ತಕ್ಷಣವೇ ಡಾಕ್ಟರ್ ಸುಬ್ಬರಾವ್ ಇನ್ನೂ ಹಲವು ವೈದ್ಯರಿಗೆ ತಿಳಿಸಿ ಪ್ರಥಮ ಚಿಕಿತ್ಸೆಗೆ ಬೇಕಾದ ಔಷದಿ – ಸಲಕರಣೆಗಳೊಂದಿಗೆ ಅಪಘಾತದ ಸ್ಥಳಕ್ಕೆ ಧಾವಿಸಿ, ಗಾಯಗೊಂಡವರಿಗೆ ಪ್ರಥಮ ಚಿಕಿತ್ಸೆ ನೀಡಿ, ಆಸ್ಪತ್ರೆಗೆ ಕಳಿಸಿಕೊಟ್ಟರೆಂದು ಪಿ. ರಾಘವನ್ ಸ್ಮರಿಸುತ್ತಾರೆ. ಆಗ ಡಾಕ್ಟರ್ ಸುಬ್ಬರಾಯರಿಗೆ ಸುಮಾರು ೭೭ ವರುಷ ವಯಸ್ಸು. ಆ ಇಳಿವಯಸ್ಸಿನಲ್ಲಿ ಮಧ್ಯರಾತ್ರಿ ದಾಟಿದ ಹೊತ್ತಿನಲ್ಲಿ ಗಾಯಾಳುಗಳ ಶುಶ್ರೂಷೆಗಾಗಿ ತಕ್ಷಣವೇ ಧಾವಿಸಿ ಹೋದದ್ದು ಅವರ ಮಾನವೀಯತೆಗೆ ಸಾಕ್ಷಿ. ಮಂಜೇಶ್ವರದಲ್ಲಿ ಸಾಂಕ್ರಾಮಿಕ ರೋಗ ಕಾಲರಾ ಹರಡಿದಾಗ ಡಾ. ಸುಬ್ಪರಾವ್ ಸಮಾರೋಪಾದಿಯಲ್ಲಿ ಚಿಕಿತ್ಸೆ ನೀಡಿದ್ದನ್ನೂ, ಯುವಕರನ್ನು ಸಂಘಟಿಸಿ ಬಾವಿಗಳಿಗೆ ಮದ್ದು ಹಾಕಿದ್ದನ್ನೂ ಬಿ.ಎಂ. ಅನಂತ್ ನೆನಪು ಮಾಡಿಕೊಳ್ಳುತ್ತಾರೆ. ಅವರ ಸೇವಾ ತತ್ಪರತೆಗೆ ಪುರಾವೆಯಾಗಿ ಅವರ ಜೀವನದುದ್ದಕ್ಕೂ ಇಂತಹ ಹಲವಾರು ಘಟನೆಗಳನ್ನು ದಾಖಲಿಸಬಹುದು.

ಬಹುಮುಖಿ ಡಾ. ಸುಬ್ಬರಾವ್

ವೈದ್ಯರಾಗಿ ಡಿಸೆಂಬರ್ ೧೯೪೩ರಲ್ಲಿ ಮಂಜೇಶ್ವರಕ್ಕೆ ಕಾಲಿಟ್ಟ ಡಾ. ಸುಬ್ಬರಾವ್ ‘ಡಾಕ್ಟರ್ ಎಂದರೆ ಅವರೊಬ್ಬರೇ’ ಆಗಿ ಬೆಳೆದರು. ಅವರು ಅಲ್ಲಿ ಇಂದಿಗೂ ಜನಮನದಲ್ಲಿ ಡಾಕ್ಟರ್ ಆಗಿ ಉಳಿದಿದ್ದಾರೆ. ಅವರು ಹೇಗೆ ಚಿಕಿತ್ಸೆ ನೀಡುತ್ತಿದ್ದರು? ಮಂಜೇಶ್ವರದ ಶ್ರೀಮತಿ ಲಿಲ್ಲಿಬಾಯಿ ಟೀಚರ್ ಹೀಗೆ ಜ್ಞಾಪಿಸಿಕೊಳ್ಳುತ್ತಾರೆ: ಅವರು ನಮ್ಮ ನೆರೆಹೊರೆಯವರು. ಇಂಗ್ಲಿಷ್ ಮದ್ದಿನ ಡಾಕ್ಟರೆಂದು ಅವರನ್ನು ನಮ್ಮ ಮನೆಯಲ್ಲಿ ಕರೆಯುವ ರೂಡಿ. ಯಾಕೆಂದರೆ ಅವರು ಇಂಗ್ಲಿಷ್ ಮದ್ದು, ಇಂಜೆಕ್ಷನ್ ಕೊಡುವವರು. ಚಿಕಿತ್ಸೆಗಾಗಿ ಅವರ ಕ್ಲಿನಿಕ್ ಹತ್ತಿರದಲ್ಲಿ ಆಯುರ್ವೇದ ಔಷಧಾಲಯವೂ ಇತ್ತು. ಅದು ‘ಅಪ್ಪಾ ಭಟ್ಟರ ಷಾಫು’! ನಮಗೆ ಕಾಯಿಲೆಯಾದಾಗ ನಾವು ಕ್ಲಿನಿಕ್‌ಗೆ ಹೋಗಿ ಔಷಧಿ ತರುವ ಕ್ರಮ. ಆದರೆ ನಮ್ಮ ನೆರೆಮನೆಯಲ್ಲಿ ಹೃದಯ ಕಾಯಿಲೆಗೆ ಒಳಗಾದ ಮಹಿಳೆಯೊಬ್ಬರಿಗೆ ಡಾ. ಸುಬ್ಬರಾವ್ ಮನೆಗೆ ಬಂದು ಶುಶ್ರೂಷೆ ನೀಡುತ್ತಿದ್ದರು. ದಿನಂಪ್ರತಿ ತಪಾಸಣೆಗೂ ಬರುತ್ತಿದ್ದರು. ಆ ಮಹಿಳೆಗೆ ಮಾತ್ರೆ, ಮದ್ದು ತರಲಿಕ್ಕಾಗಿ ಆಗಾಗ ಡಾಕ್ಟರ ಕ್ಲಿನಿಕಿಗೆ ಹೋಗಬೇಕಾಗುತ್ತಿತ್ತು. ಇಂಗ್ಲಿಷ್ ಮದ್ದು, ಇಂಜೆಕ್ಷನ್ ಭಯದಿಂದ ಅವರೊಂದಿಗೆ ಹೆದರಿಕೊಂಡೇ ಮಾತಾಡುತ್ತಿದ್ದೆ. ಒಮ್ಮೆ ಕಾಲು ಉಳುಕಿದಾಗ ಅಯೋಡೆಕ್ಸ್ ಪಡೆಯಲೆಂದು ಡಾಕ್ಟರಲ್ಲಿಗೆ ಹೋಗಿದ್ದೆ. ಆ ಕಾಲದಲ್ಲಿ ಅಯೋಡೆಕ್ಸನ್ನು ಚಿಲ್ಲರೆಯಾಗಿ ಮಾರಾಟ ಮಾಡುತ್ತಿದ್ದರು. ಡಾಕ್ಟರ್ ಅಯೋಡೆಕ್ಸ್ ಪ್ಯಾಕ್ ಮಾಡಿಕೊಟ್ಟು ‘ನಾಲ್ಕು ಆಣೆಯದ್ದು ಇದೆ’ ಎಂದರು. ನನ್ನ ಬಳಿ ಅಷ್ಟು ದುಡ್ಡಿಲ್ಲವೆಂದೆ. ‘ಎಷ್ಟಿದೆ?’ ಎಂದು ಕೇಳಿದರು. ಬರೇ ೧೦ ಪೈಸೆಯ ಪಾವಲಿ ತೋರಿಸಿದಾಗ, ‘ಸಾಕು ಹೋಗು’ ಎಂದರು.

ನಾವೂರು ಕೃಷ್ಣ ಆಳ್ವರ ನೆನಪುಗಳು ಹೀಗಿವೆ : ಡಾಕ್ಟರ್ ಸುಬ್ಬರಾಯರು, ನನ್ನಜ್ಜ ಅಪ್ಪಯ್ಯ ಭಂಡಾರಿಗಳ ಮನೆ ವೈದ್ಯರು. ನಾನು ಮೊದಲು ಅವರನ್ನು ಕಂಡದ್ದು ಹಾಗೆ. ದುರ್ಗಿಪಳ್ಳದಿಂದ ಬೆಜ್ಜದ ಮಾಗಂದಡಿ ತನಕ ಅವರು ನಡೆದುಬರುವಾಗ ದಾರಿಯುದ್ದಕ್ಕೂ ಅವರಿಗೆ ಜನರಿಂದ ವಂದನೆ. ಆಗ ಅವರಿಂದ ಕಷ್ಟ ಸುಖಗಳ ವಿಚಾರಣೆ. ಧೂಮಾವತಿಯ ಉಯ್ಯಾಲೆಯಿರುವ ನಮ್ಮ ಚಾವಡಿಗೆ ಹತ್ತಿ, ಇರುವ ಒಂದೇ ಕುರ್ಚಿಯಲ್ಲಿ ಅಂಗಿ ತೆಗೆದು ಕುಳಿತು ಮೊದಲ ಬೊಂಡ ಕುಡಿದು ಆರಾಮವಾಗಿ ಚಿಕಿತ್ಸೆ ಶುರು ಮಾಡುತ್ತಿದ್ದರು. ಡಾಕ್ಟರರ ಆಗಮನದ ಮುಂಚಿತವಾಗಿ ಬಿಸಿನೀರು, ಸಾಬೂನು ರೆಡಿಯಾಗಿರಬೇಕು. ಸ್ವಲ್ಪ ಹೆಚ್ಚು ಕಡಿಮೆಯಾದರೆ ‘ಎಂಚಿನ ಮಾರಾಯ..’ ಎಂಬಲ್ಲಿಂದ ಶುರುವಾಗುವ ಅವರ ಬೈಗುಳ ಕೇಳಬೇಕಾಗುತ್ತಿತ್ತು. ಚಿಕಿತ್ಸೆ ಮುಗಿದಾದ ಕೂಡಲೇ ಎರಡನೇ ಸೀಯಾಳ ಕುಡಿದು ಹೊರಡುತ್ತಾರೆ. ನನ್ನಜ್ಜನಿಗೂ ಕೆಲವು ಸಲ ಬೇಕಾದದ್ದು ಅಷ್ಟೇ. ಡಾಕ್ಟರರು (ಡಾಕ್ಟರರೆಂದರೆ ಒಬ್ಬರೇ) ಬಂದರೆ, ಬಂದು ಮಾತನಾಡಿದರೆ, ‘ಇತ್ತೆ ದಾಲ ಸೈಪುಜರ್’ (ಈಗ ಅಂತ್ಯಕಾಲ ಬಂದಿಲ್ಲ) ಅಂತ ಹೇಳಿದರೆ, ಸಂತೋಷದಿಂದ ಬೊಚ್ಚುಬಾಯಿ ಬಿರಿದು ನಗುತ್ತಾ ಬೀಳ್ಕೊಡುತ್ತಾರೆ.

ಮಂಗಳೂರಿನಲ್ಲಿ ಕಾಲೇಜಿಗೆ ಹೋಗುತ್ತಿದ್ದಾಗ ಒಂದು ದಿನ ನನ್ನ ಹಳೆ ರೋಗವಾದ ತಲೆಸಿಡಿತ ಆರಂಭವಾಗಿ ಒಂದು ಬದಿ ಕಾಣದಂತಾಯಿತು. ಮಂಜೇಶ್ವರದ ರೈಲ್ವೆ ಸ್ಟೇಶನ್‌ನಲ್ಲಿ ವಾಂತಿ ಮಾಡಲಾರಂಬಿಸಿದೆ. ಸೀದಾ ಡಾಕ್ಟರರಲ್ಲಿಗೆ ಹೋಗು ಎಂದು ಗೋವಿಂದಣ್ಣ ಅಪ್ಪಣೆ ಮಾಡಿದಾಗ, ಸೀದಾ ಮಾಳಿಗೆ ತಲುಪಿದೆ. ಅಲ್ಲಿ ಎಷ್ಟು ಸಲ ವಾಂತಿ ಮಾಡಿದೆ ಎಂದು ನೆನಪಿಲ್ಲ. ಕಂಪೌಂಡರಾಗಲಿ, ನರ್ಸ್ ಆಗಲೀ ಇಲ್ಲದ ಡಾಕ್ಟರರು ಸ್ವತಃ ಸ್ವಚ್ಛಗೊಳಿಸಿದರು. ಸಾಮಾನ್ಯ ಮದ್ದಿಗೆ ಗುಣವಾಗದ್ದರಿಂದ ಕೂಡಲೇ ಒಂದು ಕಾರು ತರಿಸಿದರು. ಹೊಳ್ಳರ ಆಸ್ಪತ್ರೆಗೆ ಹೋಗುವಾಗ ಹೊಸಂಗಡಿಯಿಂದ ಯಾರಲ್ಲಿಯೋ ನನ್ನ ಮಾವ ವಿಠಲ ಶೆಟ್ಟಿಗೆ ಹೇಳಿ ಕಳುಹಿಸಿದರು. ಉಪ್ಪಳದಲ್ಲಿ ಎಡ್ಮಿಟ್ ಮಾಡಿಸಿ ಹೊಳ್ಳರೊಂದಿಗೆ ಸೇರಿ ಡ್ರಿಪ್ ಹಾಕಿದ ನಂತರ ಮಾವ ಬಂದಾಗ, ಏಳು ಗಂಟೆ ಆಗಿತ್ತು. ಅನಂತರ ಅವರು ಮಂಜೇಶ್ವರಕ್ಕೆ ಹಿಂತಿರುಗಿದರು. ಒಂದು ವಾರದ ಅನಂತರ ಚಿಕಿತ್ಸೆ ಮುಗಿದು ಹೊರಡುವಾಗ, ಒಂದು ಮಾತ್ರೆಯ ಹೆಸರು ಬರೆದಿತ್ತರು. ‘ಯಾವಾಗ ನಿನಗೆ ತಲೆಸಿಡಿತ ಆರಂಭವಾದರೂ ಈ ಮಾತ್ರೆ ತಗೋ’ ಎಂದು ಅವರು ಹೇಳಿದ್ದು ಈಗ ಕೇಳಿದಂತಿದೆ.

ಹಲವಾರು ವರ್ಷಗಳ ಕಾಲ ಬಡವರ ಮನೆಗಳಿಗೆ ಸೈಕಲಿನಲ್ಲಿ ಹೋಗಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು ಡಾಕ್ಟರ್ ಸುಬ್ಬರಾವ್. ಔಷದಿಗೆ ಹಣ ಪಾವತಿಸಲಾಗದ ಬಡವರಿಂದ ಹಣವನ್ನು ಪಡೆಯುತ್ತಿರಲಿಲ್ಲ. ಇಂತಹ ಡಾಕ್ಟರನ್ನು ಜನರು ‘ತಮ್ಮ ಪಾಲಿನ ದೇವರು’ ಎಂದು ಪರಿಗಣಿಸಿದ್ದರಲ್ಲಿ ಅಚ್ಚರಿಯೇನಿದೆ? ‘ಡಾಕ್ಟರರು ಪ್ರಾಕ್ಟೀಸು ನಡೆಸುತ್ತಿದ್ದುದು ಮಧ್ಯಾಹ್ನದವರೆಗೆ ಮಾತ್ರ’ ಎಂದು ನೆನಪು ಮಾಡಿಕೊಳ್ಳುತ್ತಾರೆ ಬಿ.ವಿ. ರಾಜನ್. ಮಧ್ಯಾಹ್ನದ ಬಳಿಕ ಅವರ ಸಮಯವೆಲ್ಲ ಕಮ್ಯುನಿಸ್ಟ್ ಪಕ್ಷಕ್ಕೆ ಮೀಸಲಾಗಿತ್ತು. ಚುನಾವಣೆಯಲ್ಲಿ ಪ್ರಥಮ ಬಾರಿ ಗೆದ್ದು ಶಾಸಕರಾಗುವ ತನಕ ಡಾಕ್ಟರರು ಈ ರೂಢಿ ಮುಂದುವರಿಸಿಕೊಂಡು ಬಂದಿದ್ದರು. ಮಧ್ಯಾಹ್ನದ ಬಳಿಕ ಚಿಕಿತ್ಸೆಗಾಗಿ ಯಾರೇ ಬಂದರೂ ಡಾಕ್ಟರ್ ಜೋರು ಮಾಡುತ್ತಿದ್ದರು. ಆದರೆ ಕ್ಲಿನಿಕ್‌ನಲ್ಲಿದ್ದರೆ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ರೋಗಿಯನ್ನು ಪರೀಕ್ಷಿಸುತ್ತಿದ್ದರು. ‘ಯಾರೆಲ್ಲ ರೋಗಿಗಳು ಬರುತ್ತಾರೆಂದು’ ಬಕಪಕ್ಷಿಯಂತೆ ಕಾಯುವ ಸ್ವಭಾವ ಅವರದ್ದಲ್ಲ. ಆದ್ದರಿಂದಲೇ ಒಂದು ನರ್ಸಿಂಗ್ ಹೋಂ ಮಾಡುವ ಅಥವಾ ಕಾರು ಖರೀದಿಸುವ ಆಶೆ ಅವರಲ್ಲಿ ಯಾವತ್ತೂ ಸುಳಿಯಲಿಲ್ಲ.

ರೋಗಿಗಳು ಗುಣಮುಖರಾಗುವ ಬಗ್ಗೆ ಡಾ. ಸುಬ್ಬರಾಯರಿಗೆ ಅತೀವ ಕಾಳಜಿ. ಔಷದಿ ಸೇವನೆ, ಆರೈಕೆ ಮತ್ತು ರೋಗಿಗಳ ಸ್ಥಿತಿ ತಿಳಿಸುವ ಬಗ್ಗೆ ತಾನಿತ್ತ ನಿರ್ದೇಶನಗಳ ಕುರಿತು ಅವರು ಬಹಳ ಕಟ್ಟುನಿಟ್ಟು. ಅವನ್ನು ಪಾಲಿಸದಿದ್ದರೆ ನಿಷ್ಠುರರಾಗಿ ವ್ಯವಹರಿಸುತ್ತಿದ್ದರು. ಅಂತಹ ಸಂದರ್ಭವೊಂದನ್ನು ಸ್ಮರಿಸುತ್ತಾರೆ ಸಿ.ಪಿ.ಐ. ಜಿಲ್ಲಾ ಸಮಿತಿ ಸದಸ್ಯರಾದ ಪಿ. ರಾಘವನ್ : ೧೯೬೫ರಲ್ಲಿ ಒಮ್ಮೆ ನನ್ನ ಮಗುವಿಗೆ ಜ್ವರ ಬಂದಾಗ ಅವರ ಕ್ಲಿನಿಕಿಗೆ ಮಗುವನ್ನು ಎತ್ತಿಕೊಂಡು ಹೋಗಿದ್ದೆ. ಅವರು ಮಗುವನ್ನು ಸೂಕ್ಷ್ಮವಾಗಿ ತಪಾಸಣೆ ಮಾಡಿ ಮದ್ದು ಕೊಟ್ಟರು. ಎರಡು ದಿನಗಳ ಮದ್ದು ನೀಡಿ, ಮಗುವನ್ನು ಜಾಗ್ರತೆಯಿಂದ ನೋಡಿಕೊಳ್ಳ ಬೇಕೆಂದೂ ಮರುದಿನವೇ ಬಂದು ಮಗುವಿಗೆ ಹೇಗಿದೆಯೆಂದು ತಿಳಿಸಬೇಕೆಂದೂ ಹೇಳಿದರು. ನಾನು ಮಗುವಿನೊಂದಿಗೆ ಮನೆಗೆ ಮರಳಿ ಆ ದಿನ ಮಧ್ಯಾಹ್ನ, ರಾತ್ರಿ ಹಾಗೂ ಮರುದಿನ ಬೆಳಗ್ಗೆ ಮದ್ದು ಕೊಡುವಷ್ಟರಲ್ಲಿ ಮಗು ಸಂಪೂರ್ಣ ಗುಣವಾಗಿ ಆಟವಾಡತೊಡಗಿತು. ಎರಡನೇ ದಿನದ ಮದ್ದು ಕೊಡಲಿಕ್ಕಿದೆ; ಆದ್ದರಿಂದ ಮೂರನೇ ದಿನವೇ ಡಾಕ್ಟರ ಕ್ಲಿನಿಕಿಗೆ ಹೋಗುವುದೆಂದು ನಿರ್ಧರಿಸಿದೆ. ಆದರೆ ಡಾಕ್ಟರ್ ಸುಬ್ಬರಾವ್ ಏನೆಂದುಕೊಳ್ಳುತ್ತಾರೆಂದು ನಾನು ಯೋಚಿಸಲಿಲ್ಲ. ಮಗು ಗುಣವಾದ ಬಗ್ಗೆ ಡಾಕ್ಟರಿಗೆ ತಿಳಿಸಲು ಮೂರನೇ ದಿನ ನಾನು ಅವರ ಕ್ಲಿನಿಕಿಗೆ ಹೋದೆ. ಆಗ ಅಲ್ಲಿ ಹೆಚ್ಚು ಜನ ಇರಲಿಲ್ಲ. ನಾನು ಕಾದು ಕುಳಿತೆ. ನನ್ನ ಸರತಿ ಬಂದಾಗಲೂ ಡಾಕ್ಟರ್ ನನ್ನನ್ನು ಕರೆಯಲಿಲ್ಲ. ನನ್ನ ನಂತರ ಬಂದವರಿಗೆ ಔಷಧಿ ನೀಡಿ ಕಳಿಸಿದರೂ ನನ್ನನ್ನು ಕರೆಯಲಿಲ್ಲ.

ಕೊನೆಗೆ ನಾನೇ ಎದ್ದು ಹೋಗಿ ಡಾಕ್ಟರರ ಎದುರು ನಿಂತು, ‘ನನ್ನ ಮಗು ಹುಷಾರಾಗಿದೆ’ ಎಂದೆ. ಡಾಕ್ಟರ್ ಸಿಟ್ಟಿನಿಂದ ನನ್ನನ್ನು ನೋಡಿದರು. ಅವರ ತೀಕ್ಷ್ಣ ನೋಟದಿಂದಾಗಿ ಅವರ ಮುಖ ನೋಡಲು ನನಗೆ ಭಯವಾಯಿತು. ‘‘ಈಗ ಯಾಕೆ ಬಂದೆ?’’ ಎಂದು ಗಡಸು ದನಿಯಲ್ಲಿ ಕೇಳಿದರು. ಮಗುವಿಗೆ ಸಂಪೂರ್ಣ ಗುಣವಾಗಿದೆ ಎಂದು ತೊದಲುತ್ತಲೇ ಹೇಳಿದೆ. ‘‘ಹೌದು, ನಿನ್ನ ಮಗುವಿಗೆ ಗುಣವಾಗಿದೆ. ಆದರೆ ನನ್ನ ಆತಂಕ ನಿನಗೆ ಹೇಗೆ ಗೊತ್ತಾಗಬೇಕು? ನಿನ್ನ ಮಗುವಿಗೆ ಮೊನ್ನೆ ನಿಮೋನಿಯಾ ಜ್ವರ ಏರಿತ್ತು. ಅದಕ್ಕೇ ನಾನು ಹೇಳಿದ್ದು, ಮರುದಿನವೇ ಬಂದು ಮಗುವಿಗೆ ಹೇಗಿದೆ ಅಂತ ತಿಳಿಸಬೇಕು. ನನಗೆ ಆ ಮಗುವಿನ ಸ್ಥಿತಿ ತಿಳಿಯದೆ ಮನಸ್ಸಿಗೆ ನೆಮ್ಮದಿಯಿರಲಿಲ್ಲ. ಕೊನೆಗೆ ನಿನ್ನ ನೆರೆಮನೆಯವರಿಂದ ವಿಷಯ ತಿಳಿದುಕೊಳ್ಳಬೇಕಾಯಿತು’’ ಎಂದು ರೇಗಿದರು. ಅಷ್ಟಕ್ಕೇ ಮಾತು ಮುಗಿಸದೆ, ಡಾಕ್ಟರ್ ಹೇಳಿದರು, ‘‘ಡಾಕ್ಟರ್ ಔಷದಿ ಕೊಟ್ಟರೆ ಅವರ ಜವಾಬ್ದಾರಿ ಮುಗಿಯುತ್ತದೇನು? ರೋಗಿ ಪೂರ್ಣ ಗುಣವಾಗುವವರೆಗೆ ಜವಾಬ್ದಾರಿ ವಹಿಸುವವನೇ ಸರಿಯಾದ ಡಾಕ್ಟರ್’’.

ಜನತಾ ರಂಗಭೂಮಿ ಕಲಾವಿದ

ಡಾ. ಸುಬ್ಬರಾಯರಿಗೆ ಕಲಾ ಚಟುವಟಿಕೆಗಳಲ್ಲಿ ಬಹಳ ಆಸಕ್ತಿ. ನಾಟಕ ಮಾಧ್ಯಮವನ್ನು ಜನಜಾಗೃತಿಗಾಗಿ ಪರಿಣಾಮಕಾರಿಯಾಗಿ ಬಳಸಿದವರು ಅವರು. ಸಭೆಗಳಲ್ಲಿ ಜನರನ್ನು ಹುರಿದುಂಬಿಸಲಿಕ್ಕಾಗಿ ಮತ್ತು ಜನಸಮೂಹಗಳಲ್ಲಿ ವಿದ್ಯುತ್ ಸಂಚಾರ ಉಂಟು ಮಾಡಲಿಕ್ಕಾಗಿ ಗೀತೆಗಳನ್ನು ಹಾಡುವುದರಲ್ಲಿ ಅವರು ಎತ್ತಿದ ಕೈ. ೧೯೪೩ರಲ್ಲಿ ಮಂಜೇಶ್ವರದಲ್ಲಿ ನೆಲೆಸಿ, ವೈದ್ಯವೃತ್ತಿ ಆರಂಭಿಸಿದಾಗ, ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ಅವರು ಕಟ್ಟಿದ ವೇದಿಕೆ ‘ಜನತಾ ರಂಗಭೂಮಿ’. ಇಂದು ಅದು ಸಕ್ರಿಯವಾಗಿಲ್ಲ. ಆದರೆ ಡಾ. ಸುಬ್ಬರಾಯರ ಯೌವನದ ದಿನಗಳಲ್ಲಿ ಜನಸಾಮಾನ್ಯರಿಗೆ ಜನಪರ ಸಂದೇಶಗಳನ್ನು ತಲುಪಿಸಲು ಅದು ಸಮರ್ಥ ಸಾಧನವಾಗಿತ್ತು. ಐದು ದಶಕಗಳ ಹಿಂದಿನ ಆ ದಿನಗಳಲ್ಲಿ, ಜನತಾ ರಂಗಭೂಮಿಯ ನಾಟಕ ಪ್ರದರ್ಶನಗಳು, ರೈತ ಸಂಘದ ಪ್ರತಿಭಟನೆಗಳು ಮತ್ತು ಕಮ್ಯುನಿಸ್ಟ್ ಪಕ್ಷದ ಸಂಘಟನಾ ಚಟುವಟಿಕೆಗಳು ಒಳ್ಳೆಯ ಬದುಕಿನ ಆಶಯದತ್ತ ಮಂಜೇಶ್ವರದ ಅನೇಕ ಯುವಕರನ್ನು ಸೆಳೆದದ್ದಂತೂ ನಿಜ.

ಜನತಾ ರಂಗಭೂಮಿಯಲ್ಲಿ ಡಾ. ಸುಬ್ಬರಾಯರೊಂದಿಗೆ ಸಕ್ರಿಯರಾಗಿದ್ದವರು ಕುಂಞಿಕಣ್ಣ ಮಾಸ್ಟರ್, ಹರಿಶ್ಚಂದ್ರ ಮಾಸ್ಟರ್ (ಹರಿ ಮಾಸ್ಟರ್), ಮಂಜಪ್ಪ ಬಂಗೇರ, ಕೇಶವ ಕಾಮತ್ ಮತ್ತು ಬಾಲಚಂದ್ರ. ಇವರೆಲ್ಲ ಡಾ. ಸುಬ್ಬರಾಯರ ನಿಧನದ ಮುಂಚೆಯೇ ನಮ್ಮನ್ನಗಲಿದರು. ಇವರೆಲ್ಲ ಡಾ. ಸುಬ್ಬರಾವ್ ಅವರೊಂದಿಗೆ ಸೇರಿ ಹಲವಾರು ನಾಟಕಗಳನ್ನು ಪ್ರದರ್ಶಿಸಿದರು. ಅನೇಕ ನಾಟಕ ಸ್ಪರ್ಧೆಗಳಲ್ಲಿಯೂ ಭಾಗವಹಿಸಿದರು. ಕಾಸರಗೋಡಿನ ಲಲಿತಕಲಾ ಸದನದ ಸ್ಪರ್ಧೆಗಳಲ್ಲಿಯೂ ಪ್ರಶಸ್ತಿ ಪಡೆದರು. ಆ ಹಿರಿಯರೊಂದಿಗೆ ಬಿ.ಎಂ. ಅನಂತ, ಬಿ.ಎಂ. ಜಗನ್ನಾಥ್, ಶೇಷಗಿರಿ, ದಿನಕರ ಶೆಟ್ಟಿ ಹಾಗೂ ಇನ್ನೂ ಕೆಲವು ಪ್ರತಿಭಾವಂತರು ಜನತಾ ರಂಗಭೂಮಿಯ ಜನಪ್ರಿಯತೆಗೆ ಕಾರಣಪುರುಷರು. ಜನತಾ ರಂಗಭೂಮಿಗೆ ಮರುಜನ್ಮ ನೀಡಬೇಕೆಂಬುದು ಡಾ. ಸುಬ್ಬರಾಯರ ಆಶೆಯಾಗಿತ್ತು. ಯಾಕೆಂದರೆ ಅವರ ಕಲಾ ಆಸಕ್ತಿ ಯಾವತ್ತೂ ಹಸಿರಾಗಿತ್ತು. ಆದರೆ ಅವರ ಆಶೆ ಈಡೇರಲಿಲ್ಲ. ಅದೇನಿದ್ದರೂ ಜನಸಮುದಾಯಗಳಲ್ಲಿ ಜಾಗೃತಿ ಮೂಡಿಸಲು ನಾಟಕ ಮಾಧ್ಯಮದ ಶಕ್ತಿಯ ಬಗ್ಗೆ ತಿಳಿಯಬೇಕೆಂಬವರಿಗೆ ಜನತಾ ರಂಗಭೂಮಿ ಒಂದು ಚಾರಿತ್ರಿಕ ಪಾಠ. ಗಾಯಕ ಮತ್ತು ವಾಗ್ಮಿ ಡಾ. ಸುಬ್ಬರಾವ್ ಹಾಡುವುದನ್ನು ಕೇಳಿದವರಿಗೆ ಗೊತ್ತು ಅವರ ಕಂಠದ ತಾಕತ್ತು. ಸಂಘಟನೆ ಕಟ್ಟುವ ಆರಂಭದ ದಿನಗಳಲ್ಲಿ ಕೆ. ವೆಂಕಟರಾವ್ ಬರೆದ ಕ್ರಾಂತಿಯ ಹಾಡುಗಳನ್ನು ಸಭೆಗಳಲ್ಲಿ ಉತ್ಸಾಹದಿಂದ ಹಾಡುತ್ತಿದ್ದರು.

ಅವರ ಹಾಡುಗಾರಿಕೆಯನ್ನು ಕೆ.ವಿ. ಕೃಷ್ಣನ್ ಹೀಗೆ ನೆನಪು ಮಾಡಿಕೊಳ್ಳುತ್ತಾರೆ : ಕಾಸರಗೋಡಿನಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಯಿತು. ಅದರ ಮುಕ್ತಾಯದಲ್ಲಿ ಡಾ. ಸುಬ್ಬರಾವ್ ಹಾಡಿದ ಹಾಡು, ‘ವಿಪ್ಲವ ಗಾನ’. ನೆರೆದಿದ್ದ ಸಾವಿರಾರು ಜನರ ಮನ ತಟ್ಟಿದ ಆ ಗಾನವೇ ಅಂದಿನ ಸಭೆಯ ವಿಶೇಷ. ಅನಂತರ ಹಲವಾರು ಸಭೆಗಳಲ್ಲಿ ಜನಸಾಗರದಲ್ಲಿ ಅಲೆಗಳನ್ನೆಬ್ಬಿಸಿದ ಗಾನವೆಂದೇ ಅದು ಜನಪ್ರಿಯವಾಯಿತು. ಈ ಬಗ್ಗೆ ನಾರಾಯಣನ್ ಪೆರಿಯ ಅವರೂ ಜ್ಞಾಪಿಸಿಕೊಳ್ಳುತ್ತಾರೆ, ‘‘ಕಾಂಞಂಗಾಡ್ ನಲ್ಲಿ ಜಿಲ್ಲಾ ಸಮ್ಮೇಳನದಲ್ಲಿ ಭಾಷಣಗಳು ಮುಗಿದ ಬಳಿಕ ಡಾ. ಸುಬ್ಬರಾವ್ ಎದ್ದುನಿಂತು ಹಾಡಿದ್ದು ‘ವಿಪ್ಲವಗಾನ’. ಅದನ್ನು ಕೇಳುತ್ತಿದ್ದಂತೆ ಅಲ್ಲಿ ಸೇರಿದ್ದ ಜನರಿಗೆ ರೋಮಾಂಚನ. ಅಲ್ಲಿ ಸಾವಿರಾರು ಜನರು ಒಟ್ಟಾಗಿ ಎದ್ದು ನಿಂತು, ತಮ್ಮ ತಮ್ಮ ಬಿಗಿಮುಷ್ಠಿ ಮೇಲೆತ್ತಿ ಜಯಘೋಷವನ್ನು ಮಾಡಿದ ಚಿತ್ರ ಈಗಲೂ ನನ್ನ ಕಣ್ಣ ಮುಂದಿದೆ’’.

ಡಾ. ಸುಬ್ಬರಾಯರ ಮಾತು ಕೇಳುವುದೇ ಒಂದು ವಿಶೇಷ ಅನುಭವ. ಸತ್ಯಾಂಶಗಳನ್ನು ಆಧರಿಸಿ, ತರ್ಕಬದ್ಧವಾಗಿ ಅವರು ವಾದ ಮಂಡನೆ ಮಾಡುವ ರೀತಿ ಅಮೋಘ. (ರಾಜ್ಯಸಭೆ ಮತ್ತು ವಿಧಾನಸಭೆಗಳಲ್ಲಿ ಅವರು ಮಾಡಿದ ಭಾಷಣಗಳು ದಾಖಲೆಗಳಲ್ಲಿವೆ.) ನಾರಾಯಣನ್ ಪೆರಿಯ ಸ್ಮರಿಸುತ್ತಾರೆ : ‘‘ಕಣ್ಣೂರಿನಲ್ಲಿ ಕಾಲೇಜು ಬೇಕೇ? ಬೇಡವೇ? ಎಂಬುದನ್ನು ಚರ್ಚಿಸಲು ಒಂದು ಸಭೆ ಏರ್ಪಡಿಸಲಾಗಿತ್ತು. ಅಲ್ಲಿ ಡಾಕ್ಟರ ಭಾಷಣ ಕೇಳಿ, ಭಾಷಣಗಳಿಗೆ ಪೂರ್ವತಯಾರಿ ಯಾಕೆ ಬೇಕು? ಎಂಬ ವಿಷಯ ನನಗೆ ತಿಳಿಯಿತು’’. ಯಾವುದೇ ಸಭೆಗೆ ಭಾಷಣ ಮಾಡಲು ಹೋಗುವುದಿದ್ದರೂ ಅವರು ಪೂರ್ವ ತಯಾರಿ ಮಾಡಿಯೇ ಹೋಗುತ್ತಿದ್ದರು.

ನಾರಾಯಣನ್ ಪೆರಿಯ ಅವರು ಇನ್ನೊಂದು ಸಂಗತಿಯನ್ನು ತಿಳಿಸಿದ್ದಾರೆ. ಡಾ. ಸುಬ್ಬರಾಯರಿಗೆ ಜನರಿಗೆ ಅರ್ಥವಾಗುವ ಭಾಷೆಯಲ್ಲಿಯೇ ಭಾಷಣ ಮಾಡಲು ಆಸಕ್ತಿ. ಒಂದು ಸಭೆಯಲ್ಲಿ ಆಯೋಜಕರು ‘‘ಡಾಕ್ಟರೇ, ನೀವು ಇಂಗ್ಲಿಷಿನಲ್ಲಿ ಮಾತಾಡಿದರೂ ಆದೀತು’’ ಎಂದಾಗ, ತಟ್ಟನೆ ಡಾಕ್ಟರರ ಪ್ರತಿಕ್ರಿಯೆ ‘‘ನಿಮಗೆ ನನಗೆ ಇಂಗ್ಲಿಷ್ ಅರ್ಥವಾಗುತ್ತದೆ. ಅಲ್ಲಿ ಸೇರಿದ ಜನರಿಗೆ ಅರ್ಥವಾಗುತ್ತದೆಯೇ? ನನ್ನ ಮಲೆಯಾಳ ಕೆಟ್ಟದಾದರೂ ಪರವಾಗಿಲ್ಲ, ಅದರಲ್ಲೇ ಮಾತಾಡುತ್ತೇನೆ’’. ಅಂದಿನ ಡಾಕ್ಟರ ಮಲೆಯಾಳ ಭಾಷಣ ಮನಸ್ಸಿಗೆ ನಾಟಿದ್ದಂತೂ ನಿಜ. ಕರ್ನಾಟಕದ ಕಮ್ಯುನಿಸ್ಟ್ ನಾಯಕ ಬಿ.ವಿ. ಕಕ್ಕಿಲ್ಲಾಯರ ನೆನಪಿನಲ್ಲಿ ಹಸಿರಾಗಿರುವ ಒಂದು ಘಟನೆ : ಕಮ್ಯುನಿಸ್ಟ್ ಪಾರ್ಟಿಯ ಆಲ್ ಇಂಡಿಯಾ ಪಾರ್ಟಿ ಕಾಂಗ್ರೆಸ್‌ನಲ್ಲಿ ಕರ್ನಾಟಕದ ಪ್ರತಿನಿಧಿಗಳಿಗೆ ಒಂದು ಹಾಡು ಹಾಡಬೇಕೆಂದು ಸೂಚಿಸಲಾಯಿತು. ಆಗ ದುಡಿಯುವ ಜನರೆಲ್ಲಾ ಒಂದುಗೂಡಬೇಕೆಂದು ಕರೆ ನೀಡುವ ಹಾಡು ಹಾಡಿದವರು ಎಂ.ಎಸ್. ಕೃಷ್ಣನ್ ಮತ್ತು ಡಾ. ಸುಬ್ಬರಾವ್. ಆ ಮಹಾ ಸಮ್ಮೇಳನದಲ್ಲಿ ಆ ಹಾಡು ಎಂತಹ ಮಿಂಚಿನ ಸಂಚಾರ ಉಂಟುಮಾಡಿತೆಂದರೆ ಅಲ್ಲಿ ನೆರೆದವರೆಲ್ಲೂ ಎದ್ದು ನಿಂತು ಆ ಇಬ್ಬರು ಗಾಯಕರಿಗೆ ಗೌರವ ಸೂಚಿಸಿದರು.

(ಭಾಗ 4ರಲ್ಲಿ ಮುಂದುವರಿಯುತ್ತದೆ.)

ಆಕರ ಪುಸ್ತಕ: ಅಡ್ಡೂರು ಶಿವಶಂಕರರಾಯರ ಎಂಬತ್ತರ ಕೊಯ್ಲಿನ ಕಾಳುಗಳು

ಲೇಖಕರು: ಅಡ್ಡೂರು ಕೃಷ್ಣರಾವ್