ಇದು “ಹಚಿಕೋ - ಎ ಡಾಗ್ಸ್ ಸ್ಟೋರಿ” ಎಂಬ ಇಂಗ್ಲಿಷ್ ಸಿನಿಮಾದ ಕತೆ.
ಆ ಸುಪ್ರಸಿದ್ಧ ನಾಯಿ ಜಪಾನಿನಲ್ಲಿ 1923 - 1935 ಅವಧಿಯಲ್ಲಿ ಬದುಕಿತ್ತು. ಅದರ ಸತ್ಯಕತೆಯನ್ನು ಆಧರಿಸಿ ಜಪಾನಿ ಭಾಷೆಯಲ್ಲಿ ಸಿನಿಮಾ ಮಾಡಲಾಗಿತ್ತು. ಅದನ್ನು ಆಧರಿಸಿ, 2009ರಲ್ಲಿ ಅಮೆರಿಕಾದಲ್ಲಿ ಈ ಸಿನಿಮಾ ಚಿತ್ರೀಕರಿಸಲಾಯಿತು.
ಪ್ರೊ. ಪಾರ್ಕರ್ ಪಾಶ್ಚಾತ್ಯ ಸಂಗೀತ ಮತ್ತು ನೃತ್ಯ ಕಲಿಸುವ ಶಿಕ್ಷಕ. ದಿನವೂ ಬೆಳಗ್ಗೆ ರೈಲಿನಲ್ಲಿ ರೋಡೆ ಐಲ್ಯಾಂಡಿನ ಪ್ರಾವಿಡೆನ್ಸಿನ ಕಾಲೇಜಿಗೆ ಹೋಗಿ, ಪಾಠ ಮಾಡಿ ಸಂಜೆ ಮನೆಗೆ ರೈಲಿನಲ್ಲಿ ಹಿಂತಿರುಗುತ್ತಿದ್ದ.
ಒಂದು ದಿನ ರೈಲು ನಿಲ್ದಾಣದಲ್ಲಿ ಪುಟ್ಟ ನಾಯಿಮರಿಯೊಂದು ಕಾಣಿಸಿತು. ಅಲ್ಲಿನ ಗಾರ್ಡ್ ತನಗೆ ಪರಿಚಿತರಾದ ಪ್ರೊಫೆಸರಿಗೆ ಅದನ್ನು ಕೊಟ್ಟು, “ಒಂದು ದಿನ ಇದನ್ನು ನೋಡಿಕೊಳ್ಳಿ. ವಾರೀಸುದಾರರು ನಾಳೆ ಬಂದು ಕೇಳಬಹುದು” ಎಂದ.
ಹೀಗೆ ಆ ನಾಯಿಮರಿ ಪ್ರೊಫೆಸರರ ಮನೆಗೆ ಬರುತ್ತದೆ. ಆದರೆ ಅವರ ಪತ್ನಿ ಕೇಟ್ ವಿಲ್ಸನಿಗೆ ನಾಯಿಮರಿ ಕಂಡರಾಗದು. “ಇದನ್ನು ಮನೆಯಿಂದ ಹೊರಗೆ ಹಾಕಿ” ಎನ್ನುತ್ತಾಳೆ. ಮರುದಿನ “ಕಳೆದದ್ದು ಸಿಕ್ಕಿದೆ - ಒಂದು ನಾಯಿಮರಿ” ಎಂಬ ಫಲಕವನ್ನು ರೈಲು ನಿಲ್ದಾಣದಲ್ಲಿ ನೇತು ಹಾಕಿಸುತ್ತಾರೆ. ಆದರೆ ಅದರ ವಾರೀಸುದಾರ ಬರಲೇ ಇಲ್ಲ. ಆ ನಾಯಿಮರಿ ಮಾರಾಟ ಮಾಡಲು ನಡೆಸಿದ ಹಲವು ಪ್ರಯತ್ನಗಳು ವ್ಯರ್ಥವಾದವು.
ಈ ನಡುವೆ ನಾಯಿಮರಿಗೆ ಆಟವಾಡಲು ಕಲಿಸುತ್ತಾರೆ ಪ್ರೊಫೆಸರ್. ಅದು ಎಲ್ಲವನ್ನೂ ಚುರುಕಾಗಿ ಕಲಿಯುತ್ತದೆ. ಆದರೆ “ಎಸೆದ ಬಾಲ್ ತರಲು” ಕಲಿಯೋದಿಲ್ಲ. ಈ “ಕಲಿಸುವ ಪರದಾಟ” ನೋಡುತ್ತಿದ್ದ ಪ್ರೊಫೆಸರರ ಪತ್ನಿಯ ಮನಃಪರಿವರ್ತನೆ ಆಗುತ್ತದೆ. “ನಾಯಿಮರಿ ಇದೆಯಾ?” ಎಂದೊಬ್ಬರು ಫೋನ್ ಮಾಡಿ ಕೇಳಿದಾಗ ಆಕೆ “ಇಲ್ಲ, ಅದನ್ನು ಕೊಟ್ಟಾಗಿದೆ” ಎನ್ನುತ್ತಾಳೆ!
ಕೇನ್ ಎಂಬ ಹೆಸರಿನ ಜಪಾನಿ ಸ್ನೇಹಿತ ಅದು ಅಕಿತಾ ತಳಿ ನಾಯಿಮರಿ ಎಂದು ಪ್ರೊಫೆಸರಿಗೆ ತಿಳಿಸುತ್ತಾನೆ. ಅದರ ಕುತ್ತಿಗೆ ಪಟ್ಟಿಯಲ್ಲಿದ್ದ “ಹಾಚಿ” ಚಿಹ್ನೆಯ ಅರ್ಥ ಜಪಾನಿ ಭಾಷೆಯಲ್ಲಿ ಸಂಖ್ಯೆ 8. ಇದು ಶುಭ ಸಂಕೇತ.) ಹಾಗಾಗಿ ನಾಯಿಮರಿಗೆ ಅದೇ ಹೆಸರಿಡುತ್ತಾರೆ. ಆ ಜಪಾನಿ ಸ್ನೇಹಿತ “ಈ ತಳಿಯ ನಾಯಿಗಳಿಗೆ ಎಲ್ಲ ತರಬೇತಿ ನೀಡಲಾಗದು. ಇವು ವಿಶೇಷ ಕಾರಣವಿದ್ದರೆ ಮಾತ್ರ ಎಸೆದ ಬಾಲ್ ವಾಪಾಸು ತರುತ್ತವೆ” ಎನ್ನುತ್ತಾನೆ.
ಆ ನಾಯಿಮರಿ ಪ್ರತಿ ದಿನವೂ ಬೆಳಗ್ಗೆ ಪಾರ್ಕರ್ ಜೊತೆ ರೈಲು ನಿಲ್ದಾಣಕ್ಕೆ ಹೋಗಿ, ಅವರು ರೈಲು ಏರಿದ ನಂತರ ಮನೆಗೆ ಮರಳುತ್ತಿತ್ತು. ಸಂಜೆ 5 ಗಂಟೆಗೆ ಪ್ರೊಫೆಸರ್ ವಾಪಾಸು ಬರುವಾಗ ರೈಲು ನಿಲ್ದಾಣದಲ್ಲಿ ಅವರಿಗಾಗಿ ಕಾದು ನಿಂತಿರುತ್ತಿತ್ತು.
ಹೀಗೆಯೇ ವರುಷಗಳು ಉರುಳಿದವು. ಪ್ರೊಫೆಸರರ ಮಗಳು ಆಂಡಿಗೆ ಮೈಕಲ್ ಜೊತೆ ಮದುವೆ ಆಗುತ್ತದೆ. ಅವರಿಗೆ ರೊನ್ನಿ ಎಂಬ ಹೆಸರಿನ ಮಗ ಹುಟ್ಟುತ್ತಾನೆ.
ಒಂದು ದಿನ ನಾಯಿ ಹಚಿಕೊ ಪ್ರೊಫೆಸರ್ ಜೊತೆಗೆ ಬೆಳಗ್ಗೆ ಹೊರಡಲಿಲ್ಲ. ಪ್ರೊಫೆಸರ್ ಮನೆಯಿಂದ ಹೊರಟು ಹೋದ ನಂತರ ಬಾಯಲ್ಲೊಂದು ಬಾಲ್ ಕಚ್ಚಿ ಒಯ್ದು, ರೈಲು ನಿಲ್ದಾಣದಲ್ಲಿ ಬಾಲ್ ಕೆಳಕ್ಕೆ ಹಾಕಿತು. ಪ್ರೊಫೆಸರ್ ಅದನ್ನು ಎಸೆದಾಗ ಮೊಟ್ಟ ಮೊದಲ ಬಾರಿ ಅದನ್ನು ವಾಪಾಸು ತಂದು ಅವರ ಜೊತೆ ಆಟವಾಡಿತು!
ಆ ದಿನ ಕಾಲೇಜಿನಲ್ಲಿ ಅದ್ಭುತವಾಗಿ ಸಂಗೀತ ಪಾಠ ಮಾಡಿದ ಪ್ರೊಫೆಸರ್ ಕೊನೆಗೆ ತರಗತಿಯಲ್ಲಿ ಕುಸಿದು ಬಿದ್ದು ಅಲ್ಲೇ ತೀರಿಕೊಳ್ಳುತ್ತಾರೆ. ಅವರು ಹಿಂತಿರುಗದಿದ್ದರೂ ಆ ನಾಯಿ ಅವರಿಗಾಗಿ ರೈಲು ನಿಲ್ದಾಣದಲ್ಲಿ ಕಾಯುತ್ತಿತ್ತು. ರಾತ್ರಿ 9.30 ಗಂಟೆಗೆ ಅಳಿಯ ಮೈಕಲ್ ಬಂದು, ನಾಯಿಯನ್ನು ಮನೆಗೆ ಕರೆದೊಯ್ಯುತ್ತಾನೆ. ಮರುದಿನ ಬೆಳಗ್ಗೆ ಪ್ರೊಫೆಸರ್ ಪಾರ್ಕರ್ ಅವರ ಅಂತ್ಯ ಸಂಸ್ಕಾರಗಳಿಗಾಗಿ ಕುಟುಂಬದವರು ಮತ್ತು ಬಂಧುಬಳಗದವರು ಒಟ್ಟು ಸೇರುತ್ತಾರೆ. ಆದರೆ ಆ ನಾಯಿ ಮಾತ್ರ ಎಂದಿನಂತೆ ರೈಲು ನಿಲ್ದಾಣಕ್ಕೆ ಹೋಗಿ ಕಾಯುತ್ತದೆ! ಅನಂತರ ಪ್ರತಿ ದಿನವೂ ಸಂಜೆ 5 ಗಂಟೆಗೆ ರೈಲು ನಿಲ್ದಾಣದಲ್ಲಿ ಪ್ರೊಫೆಸರಿಗಾಗಿ ಕಾಯುವ ಪರಿಪಾಠವನ್ನು ಮುಂದುವರಿಸುತ್ತದೆ.
ಅನಂತರ ಪ್ರೊಫೆಸರ್ ಪಾರ್ಕರ್ ಅವರ ಪತ್ನಿ ಕೇಟ್ ತಮ್ಮ ಮನೆಯನ್ನು ಮಾರಿ ಹೋಗುತ್ತಾರೆ. ಪ್ರೊಫೆಸರರ ಮಗಳು ಮತ್ತು ಅಳಿಯ, ಆ ನಾಯಿಯನ್ನು ತಮ್ಮ ಮನೆಗೆ ಒಯ್ಯುತ್ತಾರೆ. ಆದರೆ ಅದು ರೈಲು ಹಳಿಯ ಗುಂಟ ನಡೆದು ಬೆಡ್-ರಿಡ್ಜ್ ರೈಲು ನಿಲ್ದಾಣಕ್ಕೆ ವಾಪಾಸು ಬರುತ್ತದೆ. ಆಂಡಿ ಮಾತು ಮೈಕಲ್ ಅದನ್ನು ಪತ್ತೆ ಮಾಡಿ, ಪುನಃ ತಮ್ಮ ಮನೆಗೆ ಕರೆದು ತರುತ್ತಾರೆ. ಆದರೆ, ಹಚಿಕೊ ನಾಯಿ ಪ್ರೊಫೆಸರ್-ಗಾಗಿ ಹಂಬಲಿಸಿತ್ತಿದೆ ಎಂದು ಅರ್ಥ ಮಾಡಿಕೊಂಡ ಆಂಡಿ, ಗೇಟು ತೆರೆದು ಅದು ಹೊರಗೆ ಹೋಗಲು ಅನುವು ಮಾಡುತ್ತಾಳೆ. ಹಚಿಕೊ ಕೃತಜ್ಞತೆ ಸೂಚಿಸಿ, ಪುನಃ ಬೆಡ್-ರಿಡ್ಜ್ ರೈಲು ನಿಲ್ದಾಣಕ್ಕೆ ಹಿಂತಿರುಗುತ್ತದೆ. ಅಲ್ಲಿಯೇ ಉಳಿದು, ಪ್ರತಿದಿನವೂ ಪ್ರೊಫೆಸರ್ ಪಾರ್ಕರ್ ಅವರ ನಿರೀಕ್ಷೆಯಲ್ಲಿ ಕಾದು ಕುಳಿತುಕೊಳ್ಳುತ್ತದೆ. ರೈಲು ನಿಲ್ದಾಣದಲ್ಲಿ ಇದನ್ನು ಗಮನಿಸಿದ ಕೆಲವರು ದಯೆ ತೋರಿ ಅದಕ್ಕೆ ಆಹಾರ ನೀಡಲು ಶುರು ಮಾಡುತ್ತಾರೆ.
ತದನಂತರ, ಒಬ್ಬ ಪತ್ರಿಕಾ ವರದಿಗಾರ ಈ ನಾಯಿಯ ಅಪರೂಪದ ನಡವಳಿಕೆಯ ಬಗ್ಗೆ ಒಂದು ವರದಿ ಬರೆದು ಪ್ರಕಟಿಸುತ್ತಾನೆ. ಅದನ್ನು ಓದಿದ ಹಲವರು, ನಾಯಿಯ ಸಲುವಾಗಿ ಅವನಿಗೆ ಹಣ ಕಳಿಸುತ್ತಾರೆ. ಇದನ್ನೆಲ್ಲ ಓದಿ ತಿಳಿದ ಜಪಾನಿ ಗೆಳೆಯ ಕೆನ್ ಆ ರೈಲು ನಿಲ್ದಾಣಕ್ಕೆ ಬಂದು, ನಾಯಿಯ ಜೊತೆ ಜಪಾನಿ ಭಾಷೆಯಲ್ಲಿ ಮಾತನಾಡುತ್ತಾನೆ.
ಪ್ರೊಫೆಸರ್ ಪಾರ್ಕರ್ ಅವರ ನಿಧನವಾಗಿ ಹತ್ತು ವರುಷಗಳು ದಾಟುತ್ತವೆ. ಬೆಡ್-ರಿಡ್ಜ್ ರೈಲು ನಿಲ್ದಾಣದಲ್ಲಿ ಈಗಲೂ ಪ್ರತಿ ದಿನ ಸಂಜೆ 5 ಗಂಟೆಗೆ ನಾಯಿ ಹಚಿಕೋ ಪ್ರೊಫೆಸರಿಗಾಗಿ ಕಾಯುತ್ತಲೇ ಇರುತ್ತದೆ. ಆ ವರುಷ ಪತ್ನಿ ಕೇಟ್ ಆ ಊರಿಗೆ ಬರುತ್ತಾಳೆ - ಪ್ರೊಫೆಸರ್ ಅವರ ಸಮಾಧಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಿಕ್ಕಾಗಿ. ಆಗ ಕೆನ್ ಕೂಡ ತನ್ನ ದಿವಂಗತ ಗೆಳೆಯನ ಸಮಾಧಿಗೆ ಭೇಟಿ ನೀಡುತ್ತಾನೆ. ಆ ದಿನ, ರೈಲು ನಿಲ್ದಾಣದಲ್ಲಿ ವಯಸ್ಸಾದ ಹಚಿಕೊ ನಾಯಿಯನ್ನು ಕಂಡು ಕೇಟ್ ಭಾವಪರವಶಾಗುತ್ತಾಳೆ. ಮನೆಗೆ ಹಿಂತಿರುಗಿದ ಅವಳು ಮೊಮ್ಮಗ ರೊನ್ನಿಗೆ ನಾಯಿ ಹಚಿಕೋದ “ಕತೆ” ಹೇಳುತ್ತಾಳೆ. ನಂತರ ಒಂದು ದಿನ ರೈಲು ನಿಲ್ದಾಣದಲ್ಲಿ ನಿಶ್ಚಿತ ಜಾಗದಲ್ಲಿ ಪ್ರೊಫೆಸರ್ ಪಾರ್ಕರಿಗಾಗಿ ಕಾಯುತ್ತಿದ್ದ ನಾಯಿ ಹಚಿಕೋ ಸಾಯುತ್ತದೆ.
ಮೊಮ್ಮಗ ರೊನ್ನಿ ತನ್ನ ಸಹಪಾಠಿಗಳಿಗೆ ನಾಯಿ ಹಚಿಕೊದ ಮನಕಲಕುವ ಕತೆ ಹೇಳುವ ದೃಶ್ಯದ ಮೂಲಕ, ಸಿನೆಮಾವನ್ನು ಪ್ರಸ್ತುತಪಡಿಸಲಾಗಿದೆ.
(15 ವರುಷಗಳ ಹಿಂದೆ, ಬ್ಯಾಂಕಿನ ಸಿಬ್ಬಂದಿಗೆ ತರಬೇತಿ ನೀಡಲಿಕ್ಕಾಗಿ ಬೆಂಗಳೂರಿಗೆ ಹೋಗಿದ್ದಾಗ 05-04-2011ರ ಮಂಗಳವಾರ ನೋಡಿದ್ದ ಸಿನಿಮಾದ ನೋಟ್ಸಿನ ಆಧಾರದಿಂದ ಬರೆದ ಕಥಾ ಸಾರಾಂಶ.)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!