“ದ ಬೋನ್ ಕಲೆಕ್ಟರ್” ಸಿನಿಮಾದ ಕತೆ:
ಅಮೆರಿಕಾದ ನ್ಯೂಯಾರ್ಕಿನ ಪೊಲೀಸ್ ಇಲಾಖೆಯ ಪೊಲೀಸ್ ಅಧಿಕಾರಿ ಲಿಂಕನ್ ರೈಮೆ ಭೀಕರ ಅಪಘಾತದಲ್ಲಿ ಕುತ್ತಿಗೆಯ ಕೆಳಭಾಗದ ದೇಹದ ನಿಯಂತ್ರಣ ಕಳೆದುಕೊಂಡಿದ್ದು, ಹಾಸಿಗೆಯಿಂದ ಏಳಲಾರ. ಹಾಸಿಗೆಯಲ್ಲೇ ಇದ್ದುಕೊಂಡು, ಕಂಪ್ಯೂಟರಿನಲ್ಲಿ ಕೆಲಸ ಮಾಡುತ್ತಾ, ಅಪರಾಧಿಗಳ ಪತ್ತೆಗೆ ಪೊಲೀಸ್ ಇಲಾಖೆಗೆ ಸಹಾಯ ಮಾಡುತ್ತಿದ್ದ.
ಕೆಲವೇ ದಿನಗಳ ಮುಂಚೆ ಲಿಂಕನನ ಸಹಾಯಕಳಾಗಿ ನೇಮಕವಾಗಿದ್ದ ಮಹಿಳಾ ಪೊಲೀಸ್ ಅಧಿಕಾರಿಣಿ ಅಮೇಲಿಯಾ ತಾನು ಉದ್ಯೋಗಕ್ಕೆ ರಾಜೀನಾಮೆ ಕೊಡುತ್ತೇನೆ ಎನ್ನುತ್ತಾಳೆ. ಆಗ ಲಿಂಕನ್ “ನೀನೊಬ್ಬಳು ಪೊಲೀಸ್ ಅಧಿಕಾರಿಣಿ. ನೀನು ಅತ್ಯಂತ ದಕ್ಷ ಪತ್ತೇದಾರಿ ಆಗಲು ಸಾಧ್ಯವಿದೆ. ಇದೊಂದು ದೊಡ್ಡ ಅವಕಾಶ. ಅದನ್ನು ಕೈಯಾರೆ ಎಸೆಯಬೇಡ” ಎಂದು ಹೇಳಿ, ಅವಳು ಹುದ್ದೆಯಲ್ಲಿ ಮುಂದುವರಿಯಲು ಪ್ರೇರೇಪಿಸುತ್ತಾನೆ.
ಆ ಸಮಯದಲ್ಲಿ ನಗರದಲ್ಲಿ ಕೊಲೆಗಳ ಸರಣಿ ಶುರು. ಪ್ರತಿಯೊಂದು ಶವದ ಪಕ್ಕದಲ್ಲಿ ವಿಚಿತ್ರ ರೇಖಾ ಚಿತ್ರ ಬರೆದಿದ್ದ ಕಾಗದದ ಚೂರನ್ನು ಕೊಲೆಗಾರ ಇರಿಸುತ್ತಿದ್ದ. ಜೊತೆಗೆ, ಶವದ ಪಕ್ಕದಲ್ಲಿ ಕೊಲೆಯಾದ ವ್ಯಕ್ತಿಯ ಎಲುಬಿನ ತುಂಡನ್ನೂ ಇರಿಸುತ್ತಿದ್ದ - ಪೊಲೀಸರನ್ನು ಲೇವಡಿ ಮಾಡಲಿಕ್ಕಾಗಿ.
ಮೊದಲ ಜೋಡಿ ಕೊಲೆಯಲ್ಲಿ ಟ್ಯಾಕ್ಸಿ ಚಾಲಕನಂತೆ ನಟಿಸಿ, ಗಂಡ ಮತ್ತು ಹೆಂಡತಿಯನ್ನು ಅಪಹರಿಸುತ್ತಾನೆ ಕೊಲೆಗಾರ.
ಗಂಡನನ್ನು ಕೊಂದು, ಶವವನ್ನು ಹಳೆಯ ರೈಲು ಹಳಿಗಳ ಹತ್ತಿರ ಹೂತು ಹಾಕಿರುತ್ತಾನೆ. ಆ ಜಾಗಕ್ಕೆ ಅಮೇಲಿಯಾ ಹೋಗಿ ಕೊಲೆಗಾರ ಬಿಟ್ಟು ಹೋಗಿದ್ದ ಸುಳಿವುಗಳನ್ನು ಸಂಗ್ರಹಿಸುತ್ತಾಳೆ; ಜೊತೆಗೆ ಅಲ್ಲಿಂದಲೇ ಲಿಂಕನನಿಗೆ ಆ ಜಾಗದ ವಿಡಿಯೋ ತೋರಿಸುತ್ತಾಳೆ. ಅವುಗಳ ಆಧಾರದಿಂದ, ಪತ್ನಿ ಇರುವ ಜಾಗವನ್ನು ಲಿಂಕನ್ ಸೂಚಿಸುತ್ತಾನೆ. ಆದರೆ, ಅಲ್ಲಿಗೆ ಅಮೇಲಿಯಾ ಮತ್ತು ಪೊಲೀಸ್ ಅಧಿಕಾರಿಗಳು ಹೋದಾಗ ಪತ್ನಿಯನ್ನೂ ಕೊಲೆಗಾರ ಕೊಲೆ ಮಾಡಿರುತ್ತಾನೆ.
ಅನಂತರ ನ್ಯೂಯಾರ್ಕ್ ವಿಶ್ವವಿದ್ಯಾಲಯದ ಒಬ್ಬ ವಿದ್ಯಾರ್ಥಿಯ ಅಪಹರಣ ಆಗುತ್ತದೆ. ಅವನನ್ನು ಪ್ರಾಣಿಗಳ ವಧಾ ಸ್ಥಳದಲ್ಲಿ ಒಂದು ಸ್ತಂಭಕ್ಕೆ ಕಟ್ಟಿ ಹಾಕಿರುತ್ತಾನೆ ಕೊಲೆಗಾರ. ಆ ವಿದ್ಯಾರ್ಥಿಯ ಮೈಯಲ್ಲಿ ಒಂದು ಗಾಯ ಮಾಡಿರುತ್ತಾನೆ. ಗಾಯದ ರಕ್ತದ ವಾಸನೆಗೆ ಬಂದ ಇಲಿಗಳು ಅವನನ್ನು ಕಚ್ಚಿಕಚ್ಚಿ ಹಾಕಿರುತ್ತವೆ. ಶವದ ಪಕ್ಕದಲ್ಲಿ ರೇಖಾ ಚಿತ್ರವಿರುವ ಕಾಗದದ ಚೂರು ಮತ್ತು ಎಲುಬಿನ ತುಂಡು ಸಿಗುತ್ತವೆ. ಆದರೆ ಕೊಲೆಗಾರ ಪತ್ತೆ ಆಗೋದಿಲ್ಲ.
ಅನಂತರ ಸರಣಿ ಕೊಲೆಗಾರನಿಂದ ಕಾರಿನಲ್ಲಿದ್ದ ಒಬ್ಬಳು ಹುಡುಗಿ ಹಾಗೂ ಅವಳ ಅಜ್ಜನ ಅಪಹರಣ ನಡೆಯುತ್ತದೆ. ಅಷ್ಟರಲ್ಲಿ, ನಾಲ್ಕು ಶವಗಳ ಪಕ್ಕ ಸಿಕ್ಕಿದ್ದ ಕಾಗದದ ಚೂರುಗಳನ್ನು ಮತ್ತೆಮತ್ತೆ ತಿರುಗಿಸಿ ಜೋಡಿಸಿ ನೋಡಿದ ಲಿಂಕನನಿಗೆ ಮಿಂಚು ಹೊಳೆದಂತೆ ಸುಳಿವು ಸಿಗುತ್ತದೆ. ಅಮೇಲಿಯಾಳನ್ನು ಕರೆದು ಹೇಳುತ್ತಾನೆ, “ಇದು ಹಳೆಯ ಪತ್ತೇದಾರಿ ಪುಸ್ತಕ ಪ್ರಕಾಶನ ಸಂಸ್ಥೆಯ ಲಾಂಛನ. ಲೈಬ್ರರಿಗೆ ಹೋಗಿ ಹುಡುಕು.”
ಅಮೇಲಿಯಾ ಲೈಬ್ರರಿಗೆ ಧಾವಿಸುತ್ತಾಳೆ. ಅಲ್ಲಿ ಹುಡುಕಿದಾಗ ಆ ಲಾಂಛನದ ಪುಸ್ತಕ ಸಿಗುತ್ತದೆ. ಅದರ ಶೀರ್ಷಿಕೆ “ಬೋನ್ ಕಲೆಕ್ಟರ್”(ಎಲುಬು ಸಂಗ್ರಹಕಾರ). ಆ ಪುಸ್ತಕದಲ್ಲಿ ವಿವರಿಸಿದಂತೆಯೇ ಈ ವರೆಗಿನ ಕೊಲೆಗಳು ಆಗಿದ್ದವು.
ಆ ಪುಸ್ತಕದಲ್ಲಿ ಬರೆದಿದ್ದ ಮುಂದಿನ ಹಾಗೂ ಕೊನೆಯ ಕೊಲೆಯನ್ನು ಕೊಲೆಗಾರ ಮಾಡಿದ್ದು ಒಂದು ಬಂದರಿನಲ್ಲಿ - ವ್ಯಕ್ತಿಯನ್ನು ಸಮುದ್ರದ ಭರತದ ನೀರಿನಲ್ಲಿ ಮುಳುಗಿಸಿ ಕೊಲ್ಲಲಾಗಿತ್ತು. ಆಕೆ ಪೊಲೀಸ್ ಕಚೇರಿಗೆ ಸಹಾಯಕ್ಕಾಗಿ ಸಂದೇಶ ರವಾನಿಸಿ, ನಗರದ ಬಂದರಿಗೆ ಧಾವಿಸುತ್ತಾಳೆ. ಆಗ ಕತ್ತಲಾಯಿತು. ಹುಡುಕಾಟಕ್ಕಾಗಿ ಹೆಲಿಕಾಪ್ಟರ್ ತರಿಸಲಾಯಿತು. ಅದರ ಬೆಳಕಿನಲ್ಲಿ ಅಪಹರಣವಾಗಿದ್ದ ಹುಡುಗಿ ಮತ್ತು ಅಜ್ಜ ಪತ್ತೆಯಾದರು. ಅವರಿಬ್ಬರೂ ಭರತದ ನೀರಿನಲ್ಲಿ ಮುಳುಗುವಂತೆ ಅವರನ್ನು ಕಟ್ಟಿ ಹಾಕಲಾಗಿತ್ತು. ಹುಡುಗಿಯನ್ನು ನೀರಿನಿಂದ ಎತ್ತಿ, ಕೃತಕ ಉಸಿರಾಟ ನೀಡಿ ಬದುಕಿಸಲಾಯಿತು. ಆದರೆ ಅಜ್ಜನನ್ನು ಉಳಿಸಲಾಗಲಿಲ್ಲ.
ಆ ಸ್ಥಳದಲ್ಲಿ ಅಮೇಲಿಯಾಳಿಗೆ ಮೂರು ವಸ್ತುಗಳು ಸಿಗುತ್ತವೆ: ಒಂದು ಎಲುಬಿನ ತುಂಡು, ಹಳೆಯ ಪೊಲೀಸ್ ಬ್ಯಾಜಿನ ಚೂರು ಮತ್ತು ಸಬ್-ವೇ ರೈಲು ದಾರಿಗಳ ನಕ್ಷೆ. ಇವುಗಳ ಆಧಾರದಿಂದ, ಅಮೇಲಿಯಾ ಒಂದು ಹಳೆಯ ರೈಲು ನಿಲ್ದಾಣ ತಲಪುತ್ತಾಳೆ. ಅಲ್ಲಿ ಒಂದು ರೈಲು ಬೋಗಿಯ ಸಂಖ್ಯೆಯನ್ನು ತಿದ್ದಲಾಗಿತ್ತು! ಅದೀಗ ಲಿಂಕನನ ಪೊಲೀಸ್ ಬ್ಯಾಜ್ ನಂಬರನ್ನು ಸೂಚಿಸುತ್ತಿತ್ತು. (ಅಂದರೆ ಕೊಲೆಗಾರನ ಮುಂದಿನ ಗುರಿ ಲಿಂಕನ್ ಎಂದರ್ಥ.) ಅವಳು ಲಿಂಕನ್ ಇದ್ದ ಮನೆಗೆ ಧಾವಿಸಿದಳು.
ಅಷ್ಟರಲ್ಲಿ ಕೊಲೆಗಾರ ಲಿಂಕನನ ಕೋಣೆ ತಲಪಿದ್ದ. ಲಿಂಕನನ ಶುಶ್ರೂಷಕಿ ಥೆಲ್ಮಾ ಮತ್ತು ಅಲ್ಲಿಗೆ ಬಂದಿದ್ದ ಪೊಲೀಸ್ ಕ್ಯಾಪ್ಟನ್ ಹೊವಾರ್ಡ್ ಚೆನೆ - ಇಬ್ಬರನ್ನೂ ಕೊಲೆ ಮಾಡಿದ ಕೊಲೆಗಾರ ಲಿಂಕನನ ಹತ್ತಿರ ಬಂದೇ ಬಿಟ್ಟ. “ನನ್ನ ಗುರುತಾಯಿತಾ? ನೀನು ಕೊಟ್ಟಿದ್ದ ತಪ್ಪು-ರಿಪೋರ್ಟಿನಿಂದಾಗಿ ನನಗೆ ಆರು ವರುಷ ಜೈಲು ಶಿಕ್ಷೆ ಆಯಿತು. ಈಗ ನಿನ್ನನ್ನು ಮುಗಿಸುತ್ತೇನೆ” ಎನ್ನುತ್ತಾ ಕೊಲೆಗಾರ ತೀರಾ ಹತ್ತಿರ ಬಂದ.
ಆ ಕೊಲೆಗಾರನ ಹೆಸರು ಮಾರ್ಕಸ್ ಆಂಡ್ರುಸ್. ಅವನು ಅಪರಾಧ ಶಾಸ್ತ್ರದಲ್ಲಿ ಪರಿಣತ. ಅವನು ಆರು ಜನರ ವಿರುದ್ಧ “ಪುರಾವೆ”ಗಳನ್ನು ಅವರಿಗೆ ತಿಳಿಯದಂತೆ ಇರಿಸಿದ್ದ. ಅದರಿಂದಾಗಿ ಅವರು ಆರು ಜನ ನಿರಪರಾಧಿಗಳಿಗೆ ಶಿಕ್ಷೆಯಾಗಿತ್ತು. ಈ ಮೋಸವನ್ನು ಒಂದು ವರದಿಯಲ್ಲಿ ಲಿಂಕನ್ ಬಹಿರಂಗ ಪಡಿಸಿದ್ದ. ಹಾಗಾಗಿ, ಮಾರ್ಕಸನಿಗೆ ಶಿಕ್ಷೆ ಆಗಿತ್ತು. ಲಿಂಕನನಿಗೆ ಸರಣಿ ಕೊಲೆಗಳ ಮೂಲಕ ಅವಮಾನ ಮಾಡಿ, ಕೊನೆಗೆ ಅವನನ್ನು ಕೊಂದು ಸೇಡು ತೀರಿಸಲು ಮಾರ್ಕಸ್ ಬಂದಿದ್ದ.
ಅಷ್ಟರಲ್ಲಿ ಲಿಂಕನ್ ತನ್ನ ಮಡಚುವ ಮಂಚವನ್ನು ನೇರ ಮಾಡಿದ್ದ. ಅದನ್ನು ಜಗ್ಗಿದಾಗ ಕೊಲೆಗಾರನ ಬಲ ಮುಂಗೈ ಅಪ್ಪಚ್ಚಿಯಾಯಿತು. ಆದರೆ ಕೊಲೆಗಾರ ಎಡಗೈಯಲ್ಲಿ ಚಾಕು ಹಿಡಿದು, ಲಿಂಕನನ ಕುತ್ತಿಗೆ ಸೀಳಲಿಕ್ಕಾಗಿ ತೆವಳಿಕೊಂಡು ಬರತೊಡಗಿದ. ಆಗ ಲಿಂಕನ್ ಬಾಗಿ ಕೊಲೆಗಾರನ ಕುತ್ತಿಗೆ ಕಚ್ಚಿ ಹಿಡಿದ. ಕೊಲೆಗಾರ ಬಿಡಿಸಿಕೊಂಡಾಗ ಅಲ್ಲಿಗೆ ನುಗ್ಗಿದ ಅಮೇಲಿಯಾ ಬುಲೆಟ್ ಹಾರಿಸಿ, ಅವನನ್ನು ಕೊಲ್ಲುತ್ತಾಳೆ.
(15 ವರುಷಗಳ ಹಿಂದೆ, ಬ್ಯಾಂಕಿನ ಸಿಬ್ಬಂದಿಗೆ ತರಬೇತಿ ನೀಡಲಿಕ್ಕಾಗಿ ಬೆಂಗಳೂರಿಗೆ ಹೋಗಿದ್ದಾಗ 06-04-2011ರ ಬುಧವಾರ ನೋಡಿದ್ದ ಸಿನಿಮಾದ ನೋಟ್ಸಿನ ಆಧಾರದಿಂದ ಬರೆದ ಕಥಾ ಸಾರಾಂಶ.)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!