“ದ ಸೀ ಇನ್-ಸೈಡ್” ಇಂಗ್ಲಿಷ್ ಸಿನಿಮಾದ ಕತೆ:
ಇದು ರಾಮೋನ್ ಸಾಮ್-ಪೆಡ್ರೊ ಹೆಸರಿನ ಸ್ಪೇನ್ ದೇಶದ ಪ್ರಜೆ 28 ವರುಷ ತನ್ನದೇ ದಯಾಮರಣದ ಹಕ್ಕು ಚಲಾಯಿಸಲಿಕ್ಕಾಗಿ ಹೋರಾಡಿದ ಮನಕಲಕುವ ಸತ್ಯಕತೆ. ಎತ್ತರದ ಚಿಮ್ಮುಹಲಗೆಯಿಂದ ನೀರಿಗೆ ಹಾರಿದಾಗ ಆದ ಅಪಘಾತದಿಂದಾಗಿ ಅವನು ಕುತ್ತಿಗೆಯ ಕೆಳಭಾಗದ ದೇಹದ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದ. ಅವನ ದೈನಂದಿನ ಕೆಲಸಗಳನ್ನೂ ಮಾಡಲಾಗದ ಸ್ಥಿತಿ. ಪ್ರತಿಯೊಂದಕ್ಕೂ ಇತರರನ್ನು ಅವಲಂಬಿಸ ಬೇಕಾಗಿತ್ತು. ತನ್ನದು ಘನತೆಯಿಲ್ಲದ ಬದುಕು ಎಂದು ನಂಬಿದ್ದ. ಅದನ್ನು ಕೊನೆಗಾಣಿಸುವ ಸಲುವಾಗಿ “ದಯಾ ಮರಣ”ಕ್ಕಾಗಿ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದ.
ಇಬ್ಬರು ಮಹಿಳೆಯರೊಂದಿಗೆ ಅವನ ಸಂಬಂಧವನ್ನು ಈ ಸಿನಿಮಾ ಮನಮುಟ್ಟುವಂತೆ ಚಿತ್ರಿಸುತ್ತದೆ. ಒಬ್ಬಳು ಜೂಲಿಯಾ ಹೆಸರಿನ ವಕೀಲೆ; ಕಡಾಸಿಲ್ ಸಿಂಡ್ರೋಮ್ ಎಂಬ ದೈಹಿಕ ದುರ್ಬಲತೆಯಿಂದ ಬಳಲುತ್ತಿದ್ದ ಅವಳು ರಾಮೋನನ ಹೋರಾಟವನ್ನು ಬೆಂಬಲಿಸುವವಳು. ರೋಸಾ ಎಂಬ ಇನ್ನೊಬ್ಬ ಮಹಿಳೆಯದು ಅವನ ಜೀವನ ಬದುಕಲು ಯೋಗ್ಯವೆಂದು ಅವನನ್ನು ಒಪ್ಪಿಸುವ ಪ್ರಯತ್ನ.
56 ವರುಷ ವಯಸ್ಸಿನ ರಾಮೋನನಿಗೆ ತನ್ನ ಪ್ರಾಣ ತಾನೇ ತೆಗೆಯಲು ಸಾಧ್ಯವಿಲ್ಲದ ಸ್ಥಿತಿ. ಅದಕ್ಕಾಗಿ ಅವನ ಕುಟುಂಬ ಸದಸ್ಯರು ಅಥವಾ ಗೆಳೆಯರು ಸಹಕರಿಸಿದರೆ, ಸ್ಪ್ಯಾನಿಷ್ ಕಾಯಿದೆಯ ಅನುಸಾರ ಅವರ ವಿರುದ್ಧ ಅವನ ಆತ್ಮಹತ್ಯೆಗೆ ಸಹಕರಿಸಿದ ಅಥವಾ ಕೊಲೆ ಮಾಡಿದ ಆರೋಪ ಬರುತ್ತದೆ! ರಾಮೋನನ ತಾಯಿಯ ಮರಣಾ ನಂತರ ಅವನ ಅತ್ತಿಗೆ ಮ್ಯಾನುಯೆಲಾ ಅವನ ಆರೈಕೆ ಮಾಡುತ್ತಾಳೆ. ರಾಮೋನನ ಅಣ್ಣ ಜೋಸ್-ಗೆ ರಾಮೋನನಿಗೆ ಸಾಯುವ ಹಕ್ಕು ಇದೆ ಎಂಬ ನಂಬಿಕೆಯಿಲ್ಲ. ಆದರೆ, ಮ್ಯಾನುಯೆಲಾ ಮತ್ತು ಅವಳ ಮಗ ಜೇವಿಯರ್ ರಾಮೋನನಿಗೆ ಆ ಹಕ್ಕು ಇದೆ ಎಂದು ನಂಬುತ್ತಾರೆ.
ರಾಮೋನನ ಗೆಳತಿ ಜೀನೆ “ದಯಾಮರಣ”ದ ಹಕ್ಕುಸಾಧನೆಗಾಗಿ ಹೋರಾಡುತ್ತಿರುವ ಒಂದು ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದಳು. ಅವಳು ಜೂಲಿಯಾ ಎಂಬ ವಕೀಲೆಯನ್ನು ರಾಮೋನನಿಗೆ ಪರಿಚಯಿಸುತ್ತಾಳೆ. ರಾಮೋನನ ಪ್ರಕರಣದಲ್ಲಿ ಕೋರ್ಟಿನಲ್ಲಿ ವಾದ ಮಾಡಲಿಕ್ಕಾಗಿ ಅವಳು ಅವನ ಬಗ್ಗೆ ಮಾಹಿತಿ ಸಂಗ್ರಹಿಸಲು ಶುರು ಮಾಡುತ್ತಾಳೆ. ಆ ಸಮಯದಲ್ಲಿ ರಾಮೋನ್ ತನ್ನ ಗತ ಜೀವನದ ಬಗ್ಗೆ ನೆನಪು ಮಾಡಿಕೊಳ್ಳುತ್ತಾನೆ. ಕ್ರಮೇಣ ಇವನ ಹಿಂದಿನ ಬದುಕಿನ ಬಗ್ಗೆ ಆಸಕ್ತಿ ತೋರುತ್ತಾಳೆ. ಮನೆಯಲ್ಲಿದ್ದ ಹಳೆಯ ಫೋಟೋಗಳನ್ನು ನೋಡುತ್ತಾಳೆ. “ಅವಳೊಬ್ಬಳು ಹಿಂದಿನ ಹಲವು ಫೋಟೋಗಳಲ್ಲಿ ಕಾಣಿಸುತ್ತಾಳೆ. ಅವಳು ಯಾರು?” ಎಂದು ಕೇಳುತ್ತಾಳೆ. ರಾಮೊನ್ ಸಿಟ್ಟಾಗಿ, “ನನ್ನ ಭಾವನೆಗಳು ನಿನಗೆ ಯಾಕೆ?” ಎಂದು ಪ್ರಶ್ನಿಸುತ್ತಾನೆ.
ಆನ್-ಲೈನ್ ಚಾನೆಲಿನ ಮೂಲಕ ರಾಮೋನನ ಬದುಕಿನ ಬಗ್ಗೆ ತಿಳಿದುಕೊಂಡ ರೋಸಾ ಅವನನ್ನು ಭೇಟಿಯಾಗಿ ಅವನು ಜೀವಿಸಬೇಕೆಂದು ಒತ್ತಾಯಿಸುತ್ತಾಳೆ. ಆಗ ರಾಮನ್ ಸಿಡಿಮಿಡಿಯಾಗಿ ತನ್ನ ಆಶೆಯನ್ನು ಅವಳು ಗೌರವಿಸಬೇಕು ಎನ್ನುತ್ತಾನೆ. ಅವಳು ಅಸಹನೆಯಿಂದ ಹೊರಟು ಹೋಗುತ್ತಾಳೆ. ಅನಂತರ ತನ್ನ ಪಾರ್ಟ್-ಟೈಮ್ ರೇಡಿಯೋ ಶೋದಲ್ಲಿ ಸಾರ್ವಜನಿಕವಾಗಿ ಆಕೆ ರಾಮೋನನ ಕ್ಷಮೆ ಕೇಳುತ್ತಾಳೆ. ಅಷ್ಟೇ ಅಲ್ಲ, ತನ್ನ ಮಕ್ಕಳೊಂದಿಗೆ ಅವನ ಮನೆಗೆ ಹಲವು ಬಾರಿ ಭೇಟಿ ನೀಡಿ, ರಾಮೋನನ ಸ್ನೇಹ ಗಳಿಸುತ್ತಾಳೆ. “ಎದ್ದೇಳಲು ಆಗದ ವ್ಯಕ್ತಿಯೊಬ್ಬನನ್ನು ನಾನು ಪ್ರೀತಿಸಬಾರದೇ?” ಎಂಬುದು ಅವಳ ಪ್ರಶ್ನೆ. ಹೀಗೆ, ಇಬ್ಬರು ಮಹಿಳೆಯರೊಂದಿಗೆ ಆತ್ಮೀಯ ಸಂಬಂಧ ಬೆಳೆಸಿಕೊಂಡರೂ ತನ್ನ ಸಾವಿನ ನಿರ್ಧಾರದಿಂದ ರಾಮೋನ್ ಹಿಂದೆ ಸರಿಯುವುದಿಲ್ಲ.
ಹಾಸಿಗೆಯಿಂದ ಎದ್ದೇಳಲಾಗದ ವ್ಯಕ್ತಿಯಾಗಿ ರಾಮೋನನ ಬದುಕು ಮತ್ತು ಅನುಭವಗಳನ್ನು ದಾಖಲಿಸಿದ ಜೂಲಿಯಾ ಅವನ್ನು ಅವನಿಗೆ ಓದಿ ಹೇಳುತ್ತಾಳೆ. ಅವನ್ನು ಪ್ರಕಟಿಸಬೇಕೆಂದು ಅವಳು ಆಗ್ರಹಿಸುತ್ತಾಳೆ. ಆ ಸಂದರ್ಭದಲ್ಲಿ ತನ್ನ ಹಾಸಿಗೆಯಿಂದ ಹಾರಿ ಹೋಗಿ ಜುಲಿಯಾಳನ್ನು ಸಮುದ್ರತೀರದಲ್ಲಿ ಭೇಟಿಯಾಗುವುದನ್ನು ರಾಮೋನ್ ಕಲ್ಪಿಸಿಕೊಳ್ಳುತ್ತಾನೆ.
ಅನಂತರ ಜೂಲಿಯಾಳಿಗೆ ಸ್ಟ್ರೋಕ್ ಆಗಿ, ಆಸ್ಪತ್ರೆಗೆ ಸೇರಿಸಲಾಗುತ್ತದೆ. ಚಿಕಿತ್ಸೆಯ ಬಳಿಕ ಅವಳನ್ನು ಪುನರ್ವಸತಿ ಕೇಂದ್ರಕ್ಕೆ ಸೇರಿಸಲಾಗುತ್ತದೆ - ನಡೆಯುವುದನ್ನು ಪುನಃ ಕಲಿಯಲಿಕ್ಕಾಗಿ. ಜೂಲಿಯಾ ಮತ್ತು ರಾಮೋನ್ ಪರಸ್ಪರರಿಗೆ ಪತ್ರಗಳನ್ನು ಬರೆಯಲು ಶುರು ಮಾಡುತ್ತಾರೆ.
ಅನಂತರ ರಾಮೋನನನ್ನು ಕೋರ್ಟಿಗೆ ಕರೆದೊಯ್ಯುತ್ತಾರೆ. ಅವನ ಹೇಳಿಕೆ ಕೇಳಲು ಕೋರ್ಟ್ ತಯಾರಿಲ್ಲ. “ಕಾನೂನಿನ ಅನುಸಾರ ನಾವು ಈತನ ದಯಾಮರಣಕ್ಕೆ ಅನುಮತಿ ಕೊಟ್ಟರೆ ಅದು ಅಪರಾಧ ಆಗುತ್ತದೆ’ ಎಂಬುದು ಕೋರ್ಟಿನ ನಿಲುವು.
ಆ ಕೋರ್ಟ್ ರಾಮೋನನ ಸಾವಿನ ಬೇಡಿಕೆಯನ್ನು ತಿರಸ್ಕರಿಸಿ ತೀರ್ಪು ನೀಡುತ್ತದೆ. ಆ ಸಮಯದಲ್ಲಿ ರೋಸಾ ಅವನ ಮನೆಗೆ ಭೇಟಿ ನೀಡಿದಾಗ ಭಾವಪರವಶಳಾಗುತ್ತಾಳೆ. ಬೇರೊಬ್ಬರ ನೇರ ಮತ್ತು ಸ್ಪಷ್ಟ ಸಹಾಯವಿಲ್ಲದೆ ಆತ್ಮಹತ್ಯೆ ಮಾಡಿಕೊಳ್ಳಲು ತಾನೊಂದು ಉಪಾಯ ಮಾಡಿರುವುದಾಗಿ ರಾಮೋನ್ ಅವಳಿಗೆ ತಿಳಿಸುತ್ತಾನೆ. ಒಂದು ದಿನ ರಾಮೋನ್-ಗಾಗಿ ರೋಸಾ ತಿನಿಸು ತಂದಾಗ ಅತ್ತಿಗೆ ಗದರಿಸುತ್ತಾಳೆ, “ಅವನಿಗಾಗಿ ನೀನು ಅಡುಗೆ ಮಾಡಬೇಡ. ಅವನ ಕೂದಲು ತೆಗೆಯಬೇಡ. ಅವೆಲ್ಲ ನನ್ನ ಕೆಲಸ.”
ರಾಮೋನನ ಮನೆಗೆ ಜೂಲಿಯಾ ಆಗಾಗ ಭೇಟಿ ನೀಡುತ್ತಾಳೆ - ಅವನ ಬದುಕಿನ ನೆನಪುಗಳನ್ನು ದಾಖಲಿಸಲಿಕ್ಕಾಗಿ. ಇದೇ ಸಮಯದಲ್ಲಿ ರಾಮೋನನ ಕುಟುಂಬದ ಸದಸ್ಯರು ಮತ್ತು ಗೆಳೆಯರು ಅವನ “ದಯಾಮರಣದ ಹಕ್ಕು” ಬಗ್ಗೆ ಚರ್ಚಿಸುತ್ತಾ ಇರುತ್ತಾರೆ. ಭಿನ್ನಾಭಿಪ್ರಾಯಗಳಿಂದಾಗಿ ಅವರೊಳಗೆ ಜಗಳವಾಗುತ್ತಾ ಇರುತ್ತದೆ. ಆದರೆ ರಾಮೋನನದು ಅಚಲ ನಿರ್ಧಾರ. ಆಗೊಮ್ಮೆ ತಾನು ಆರೋಗ್ಯವಂತನಾಗಿದ್ದೇನೆ ಮತ್ತು ಜೂಲಿಯಾಳನ್ನು ಚುಂಬಿಸಿದೆನೆಂದು ಅವನು ಕಲ್ಪಿಸಿಕೊಳ್ಳುತ್ತಾನೆ. ತದನಂತರ ಒಮ್ಮೆ, ತನ್ನ ಅನಾರೋಗ್ಯ ಇನ್ನಷ್ಟು ಬಿಗಡಾಯಿಸಲಿದೆ ಮತ್ತು ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯೋಜಿಸುತ್ತಿದ್ದೇನೆ ಎಂದು ಜೂಲಿಯಾ ರಾಮೋನನಿಗೆ ತಿಳಿಸುತ್ತಾಳೆ.
ರಾಮೋನ್ ಮತ್ತು ಜೇವಿಯರ್ ಒಂದು ವೀಲ್-ಚೇರನ್ನು ವಿನ್ಯಾಸಗೊಳಿಸಿ ನಿರ್ಮಿಸಬೇಕೆಂದು ಜೊತೆಯಾಗಿ ಕೆಲಸ ಮಾಡುತ್ತಾರೆ - ಕೋರ್ಟಿನ ತೀರ್ಪಿನ ವಿರುದ್ಧ ರಾಮೋನ್ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯಲ್ಲಿ ಅವನು ಕೋರ್ಟಿಗೆ ಸ್ವತಃ ಹಾಜರಾಗಲಿಕ್ಕಾಗಿ. ಅಂತಿಮವಾಗಿ ಕೋರ್ಟ್ ಅವನ ಮೇಲ್ಮನವಿಯನ್ನೂ ತಿರಸ್ಕರಿಸುತ್ತದೆ.
ಅದೇನಿದ್ದರೂ ರಾಮೋನ್ ತನ್ನ ದೈನೇಸಿ ಬದುಕಿನಿಂದ ಬಿಡುಗಡೆ ಪಡೆಯಲಿಕ್ಕಾಗಿ ಸಾಯಲು ನಿರ್ಧರಿಸುತ್ತಾನೆ. ತನ್ನ ಯಾವುದೇ ಕುಟುಂಬ ಸದಸ್ಯ ಅಥವಾ ಗೆಳೆಯನ ವಿರುದ್ಧ ತನ್ನ ಕೊಲೆ ಅಥವಾ ಆತ್ನಹತ್ಯೆಗೆ ಸಹಕರಿಸಿದ ಆಪಾದನೆ ಬಾರದಂತೆ ಉಪಾಯ ಮಾಡಿರುತ್ತಾನೆ. ಅವನನ್ನು ಮನೆಯಿಂದ ಒಂದು ಗುಪ್ತ ಸ್ಥಳಕ್ಕೆ ಕರೆದೊಯ್ಯುತ್ತಾರೆ. ಒಂದು ಗ್ಲಾಸಿನಲ್ಲಿದ್ದ ನೀರಿಗೆ ಅವನ ಇಚ್ಚೆ ಮತ್ತು ನಿರ್ಧಾರದಂತೆ ವಿಷ ಬೆರೆಸಿ, ಅವನ ಪಕ್ಕದಲ್ಲಿ ಇರಿಸಲಾಗುತ್ತದೆ. ರಾಮೋನ್ ಅಲ್ಲಿ ಏನೇನು ನಡೆಯುತ್ತಿದೆ ಎಂದು ಹೇಳಿಕೆ ಕೊಡುತ್ತಾನೆ. ಅದೆಲ್ಲವನ್ನೂ ವಿಡಿಯೋ ದಾಖಲೆ ಮಾಡಲಾಗುತ್ತದೆ. ಅನಂತರ ಆ ವಿಷಬೆರೆತ ನೀರನ್ನು ಕುಡಿದು, “ಓಕೆ” ಎನ್ನುವಾಗಲೇ, ಅವನ ಕಣ್ಣು ಗುಡ್ಡೆ ಮೇಲಾಗಿ ಅವನ ಪ್ರಾಣ ಹೋಗುತ್ತದೆ.
(15 ವರುಷಗಳ ಹಿಂದೆ, ಬ್ಯಾಂಕಿನ ಸಿಬ್ಬಂದಿಗೆ ತರಬೇತಿ ನೀಡಲಿಕ್ಕಾಗಿ ಬೆಂಗಳೂರಿಗೆ ಹೋಗಿದ್ದಾಗ 07-04-2011ರ ಗುರುವಾರ ನೋಡಿದ್ದ ಸಿನಿಮಾದ ನೋಟ್ಸಿನ ಆಧಾರದಿಂದ ಬರೆದ ಕಥಾ ಸಾರಾಂಶ.)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!