“ಫೋರ್ಸಸ್ ಆಫ್ ನೇಚರ್” ಇಂಗ್ಲಿಷ್ ಸಿನಿಮಾದ ಕತೆ:

ಬೆನ್ ಹೋಮ್ಸ್ ಎಂಬವನು “ಬ್ಲರ್ಬ್” ಬರೆಯುವವನು (ಅಂದರೆ ಹೊಸ ಪುಸ್ತಕಗಳ ಹಿಂಬದಿ ರಕ್ಷಾಕವಚದಲ್ಲಿ ಅಚ್ಚಾಗುವ ಪುಸ್ತಕದ ಪರಿಚಯ ಬರೆಯುವವನು). ಬ್ರಿಗೆಟ್ ಜೊತೆ ಅವನ ಮದುವೆ ನಿಶ್ಚಯವಾಗಿದೆ. ನ್ಯೂಯಾರ್ಕಿನಿಂದ ಜಾರ್ಜಿಯಾದ ಸವಾನ್ನಾದಲ್ಲಿ ಜರಗಲಿರುವ ತನ್ನ ಮದುವೆಗೆ ಅವನು ಹೊರಡುತ್ತಾನೆ. ವಿಮಾನ ಪ್ರಯಾಣವೆಂದರೆ ಅವನಿಗೆ ಭಯ. ಆದರೂ ವಿಮಾನದಲ್ಲಿ ಜಾರ್ಜಿಯಾಕ್ಕೆ ಹೊರಡುತ್ತಾನೆ.

ಆದರೆ, ತನ್ನದೇ ಮದುವೆಯ ಸ್ಥಳ ತಲಪಲು ಅವನು ಹರಸಾಹಸ ಪಡಬೇಕಾಗುತ್ತದೆ. ಯಾಕೆಂದರೆ ಹಾದಿಯುದ್ದಕ್ಕೂ ಮತ್ತೆಮತ್ತೆ ಕಲ್ಪಿಸಲಿಕ್ಕೂ ಆಗದ ಅಡೆತಡೆಗಳು ಅವನಿಗೆ ಎದುರಾಗುತ್ತವೆ.

ಮೊದಲನೆಯದಾಗಿ, ಅವನ ವಿಮಾನ ಗಗನಕ್ಕೆ ಏರಿದಾಗ ಅದರ ಎಂಜಿನಿನ ಒಳಗೆ ಒಂದು ಹಕ್ಕಿ ಸೆಳೆಯಲ್ಪಟ್ಟು ಜ್ವಾಲೆ ಉಂಟಾಗಿ, ಆ ವಿಮಾನಯಾನ ರದ್ದಾಗುತ್ತದೆ. ಹೆದರಿ ಕಂಗೆಟ್ಟ ಬೆನ್ ಇನ್ನೊಂದು ವಿಮಾನದಲ್ಲಿ ಪ್ರಯಾಣಿಸಲು ನಿರಾಕರಿಸುತ್ತಾನೆ. ಮೊದಲನೆ ವಿಮಾನದಲ್ಲಿ ಅವನ ಪಕ್ಕದ ಸೀಟಿನಲ್ಲಿದ್ದ ಸಾರಾ ಎಂಬವಳ ಪರಿಚಯವಾಗಿತ್ತು. ಅವಳು ಮತ್ತು ವಿಕ್ ಎಂಬವನ ಜೊತೆ ಬಾಡಿಗೆ ಕಾರಿನಲ್ಲಿ ಜಾರ್ಜಿಯಾಕ್ಕೆ ರಸ್ತೆಯಲ್ಲಿ ಹೊರಡುತ್ತಾನೆ ಬೆನ್.

ಆದರೆ, ಕಾರು ಚಲಾಯಿಸುವಾಗ ವಿಕ್ ಮರಿಜುವಾನಾ (ಮಾದಕ ದ್ರವ್ಯ) ಸೇವಿಸಿದ ಕಾರಣ ಅವರು ಮೂವರನ್ನೂ ಬಂಧಿಸಲಾಗುತ್ತದೆ. ಬಂಧನದಿಂದ ಹೇಗೋ ಬೆನ್ ಮತ್ತು ಸಾರಾ ಬಿಡುಗಡೆಯಾಗುತ್ತಾರೆ. ನಂತರ, ರೈಲು ಟಿಕೆಟ್ ಖರೀದಿಸಿ ಇಬ್ಬರೂ ರೈಲು ಏರುತ್ತಾರೆ. ರೈಲು-ಕಾರಿನಲ್ಲಿ ಮೋಜಿನ ಕ್ಷಣಗಳನ್ನು ಅನುಭವಿಸುತ್ತಾ ಮೈಮರೆಯುತ್ತಾರೆ. ಆಗ ಅವರ ರೈಲು ಪ್ರತ್ಯೇಕಿಸಲ್ಪಡುತ್ತದೆ. ಹಾಗಾಗಿ, ಅವರೀಗ ಚಿಕಾಗೋಕ್ಕೆ ಹೋಗುವ ರೈಲಿನಲ್ಲಿದ್ದರು!

ಚಲಿಸುತ್ತಿರುವ ಆ ರೈಲಿನಿಂದ ಅವರಿಬ್ಬರೂ ಇಳಿಯುತ್ತಾರೆ. ತದನಂತರ, ಮದುವೆಯಾಗಲಿರುವ ತನ್ನ ಅಭದ್ರತೆಯ ಭಾವನೆಗಳ ಬಗ್ಗೆ ಸಾರಾಳ ಜೊತೆ ಬೆನ್ ಚರ್ಚಿಸುತ್ತಾನೆ. ಆಗ, ತಾನು ಈಗಾಗಲೇ ಎರಡು ಮದುವೆ ಆಗಿರುವುದನ್ನು ತಿಳಿಸುತ್ತಾಳೆ ಸಾರಾ. ಅವಳ ಮೊದಲನೇ ವಿಚ್ಛೇದಿತ ಪತಿ ಕಾರ್ಲ್. ಅವನ ಜೊತೆ ಬಗೆಲ್ (ತಿನಿಸು) ಮಳಿಗೆ ನಡೆಸುತ್ತಿದ್ದು, ಈಗ ಅದನ್ನು ಮಾರಿ ಸಿಗಲಿರುವ ದೊಡ್ಡ ಮೊತ್ತದ ಹಣ ಪಡೆಯಲಿಕ್ಕಾಗಿ ತಾನು ಜಾರ್ಜಿಯಾಕ್ಕೆ ಹೋಗುತ್ತಿದ್ದೇನೆ ಎಂದು ತಿಳಿಸುತ್ತಾಳೆ ಸಾರಾ.

ಆ ಸಮಯದಲ್ಲಿ, ಮಳಿಗೆಯ ಮಾರಾಟಕ್ಕೆ ಕಾರ್ಲ್ ಅಡ್ಡಿ ಪಡಿಸುತ್ತಿದ್ದಾನೆ ಎಂದು ಸಾರಾಳಿಗೆ ತಿಳಿದು ಬರುತ್ತದೆ. ಅದನ್ನು ತಡೆಯಲಿಕ್ಕಾಗಿ ತನಗೆ ಸಹಾಯ ಮಾಡಬೇಕೆಂದು ಅಂದರೆ ಸವನ್ನಾ ತಲಪಿದಾಗ ತನ್ನ ಗಂಡನೆಂದು “ನಟನೆ” ಮಾಡಬೇಕೆಂದು ಸಾರಾ ಬೆನ್-ಗೆ ದುಂಬಾಲು ಬೀಳುತ್ತಾಳೆ. ಅದಕ್ಕಾಗಿ, ಮರುದಿನ ಅವರು ಫ್ಲೋರಿಡಾಕ್ಕೆ ಸಾಗುತ್ತಿದ್ದ ನಿವೃತ್ತ ಪ್ರಯಾಣಿಕರಿದ್ದ ಬಸ್ಸಿನಲ್ಲಿ ಪ್ರಯಾಣ ಮುಂದುವರಿಸುತ್ತಾರೆ. ಆ ಬಸ್ಸಿನಲ್ಲಿ ಸೀಟು ಗಿಟ್ಟಿಸಲು ತಾವು ಗಂಡ-ಹೆಂಡತಿ ಎಂದು ಸುಳ್ಳು ಹೇಳಿರುತ್ತಾರೆ.

ಅವರ ಬಸ್ ಪ್ರಯಾಣದ ಮೊದಲ ದಿನ ರಾತ್ರಿ ಒಂದು ಸ್ಥಳದಲ್ಲಿ ಪ್ರಯಾಣಕ್ಕೆ ವಿರಾಮ ನೀಡಲಾಗುತ್ತದೆ. ಅಲ್ಲಿ ಹೋಟೆಲಿನ ಲಾಬಿಯಲ್ಲಿ ಅಚಾನಕ್ ಆಗಿ, ಇವರಿಬ್ಬರಿಗೆ ಡೆಬ್ಬಿ ಎಂಬವಳು ಎದುರಾಗುತ್ತಾಳೆ. ಅವಳು ಮದುಮಗಳು ಬ್ರಿಗೆಟಳ “ಮೆಯಿಡ್ ಆಫ್ ಹಾನರ್”. ಆಕೆಗೆ ಬೆನ್ ಮತ್ತು ಸಾರಾ ಮಾಡುತ್ತಿರುವ ವಂಚನೆ ತಿಳಿಯುತ್ತದೆ. ಮದುಮಗಳು ಬ್ರಿಗೆಟಳಿಗೆ ಈ ಮಾಹಿತಿ ನೀಡಲಿಕ್ಕಾಗಿ ಡೆಬ್ಬಿ ಸವಾನ್ನಾಕ್ಕೆ ಧಾವಿಸುತ್ತಾಳೆ.

ಆ ದಿನ ರಾತ್ರಿ ಹೋಟೆಲ್ ರೂಮಿನಲ್ಲಿ ಬೆನ್ ಮತ್ತು ಸಾರಾ ವಾಗ್ವಾದ ನಡೆಸುತ್ತಾರೆ. ಸಾರಾ ತನ್ನ ಜೀವನಕ್ಕೆ ತೊಂದರೆ ಮಾಡುತ್ತಿದ್ದಾಳೆ ಎಂದು ಸಿಟ್ಟಿನಿಂದ ಆಪಾದಿಸುತ್ತಾನೆ ಬೆನ್. ಅವನಿಗೆ ಪ್ರಾಮಾಣಿಕವಾಗಿ ಜೀವಿಸಲು ಭಯವಿದೆ ಎಂದು ಸಾರಾ ಆಪಾದಿಸುತ್ತಾಳೆ. ಆಗ, ಬೆನ್-ಗೆ ಅವನ ಹೆತ್ತವರು ಕಳಿಸಿದ್ದ ಹಣ ಪಡೆಯಲು ಗಡಿಬಿಡಿಯಲ್ಲಿ ಬ್ಯಾಂಕಿಗೆ ಹೋಗುತ್ತಾರೆ. ಆದರೆ, ಆ ಬ್ಯಾಂಕಿಗೆ ಬೆಂಕಿ ಬಿದ್ದಿತ್ತು! ಇನ್ನೇನು ಅವಘಡ ಆಗಲಿದೆಯೋ ಎಂದು ಇಬ್ಬರೂ ಬಿದ್ದುಬಿದ್ದು ನಗುತ್ತಾರೆ. ನಂತರ ಅವರು ತಾವು ಉಳಿದಿದ್ದ ಹೋಟೆಲಿಗೆ ಮರಳಿದಾಗ ಇನ್ನೊಂದು ಫಜೀತಿ ಆಗಿತ್ತು. ಬಸ್ಸಿನಲ್ಲಿದ್ದ ನಿವೃತ್ತರಿಗೆ ಇವರಿಬ್ಬರ ಮೋಸ ಗೊತ್ತಾಗಿತ್ತು. ಹಾಗಾಗಿ ಇಬ್ಬರೂ ಅಲ್ಲಿಂದ ಪರಾರಿ ಆಗುತ್ತಾರೆ.

ಕಡಿಮೆ ಬೆಲೆಗೆ ಲಭ್ಯವಿದ್ದ ಕಾರು ಖರೀದಿಸಿ, ಅದರಲ್ಲಿ ಜಾರ್ಜಿಯಾಕ್ಕೆ ಪ್ರಯಾಣಿಸಲು ಬೆನ್ ಮತ್ತು ಸಾರಾ ನಿರ್ಧರಿಸುತ್ತಾರೆ. ಕಾರು ಖರೀದಿಗೆ ಬೇಕಾಗಿದ್ದ ಹಣದ ಸಂಪಾದನೆಗಾಗಿ ಸಾರಾ ಒಂದು “ಬಾರ್” (ಮದ್ಯ ಕುಡಿಯುವ ಮಳಿಗೆ)ನಲ್ಲಿ ನರ್ತಿಸಲು ತಯಾರಾಗುತ್ತಾಳೆ. ಅಲ್ಲಿ ಅವಳು ನರ್ತಿಸಲಾಗದು ಎಂದು ಬಾರ್ ಸಿಬ್ಬಂದಿ ತಿಳಿಸುತ್ತಾರೆ; ಯಾಕೆಂದರೆ ಅದು ತೃತೀಯ ಲಿಂಗಿಗಳ ಬಾರ್. ಆದ್ದರಿಂದ ಅಲ್ಲಿ ಬೆನ್ ನರ್ತಿಸುತ್ತಾನೆ ಮತ್ತು ಕಾರು ಖರೀದಿಗೆ ಅಗತ್ಯವಾದ ಹಣ ಗಳಿಸುತ್ತಾನೆ.

ಆ ಕಾರಿನಲ್ಲಿ ಸವಾನ್ನಾಕ್ಕೆ ಸಾಗುವಾಗ, ತನ್ನ ಮದುವೆ ರದ್ದು ಮಾಡಲು ತಾನು ಸಿದ್ಧ ಎಂದು ಸಾರಾಳಿಗೆ ಬೆನ್ ತಿಳಿಸುತ್ತಾನೆ! ಅದು ಅವಸರದ ನಿರ್ಧಾರ ಆಗುತ್ತದೆ ಎಂದು ಸಾರಾ ತಿಳಿಯ ಹೇಳುತ್ತಾಳೆ.

ಅಷ್ಟರಲ್ಲಿ ಸವಾನ್ನಾಕ್ಕೆ ಬಿರುಗಾಳಿ ಅಪ್ಪಳಿಸುತ್ತದೆ. ಬಿರುಗಾಳಿಯ ರಭಸದಿಂದಾಗಿ ಅವರಿಬ್ಬರೂ ಕಾರು ತೊರೆದು, ಮದುವೆ ಜರಗಲಿರುವ ಚರ್ಚಿಗೆ ಓಡತೊಡಗುತ್ತಾರೆ!

ಕೊನೆಗೂ ಮದುವೆಯ ಚರ್ಚ್ ತಲಪಿದ ಬೆನ್ ಮಧುಮಗಳು ಬ್ರಿಗೆಟಳಿಗೆ ಮುಖಾಮುಖಿ ಆಗುತ್ತಾನೆ. ತಾನು ಅವಳನ್ನು ಪ್ರೀತಿಸುತ್ತಿದ್ದೇನೆ ಮತ್ತು ಅವಳ ಜೊತೆಯೇ ಜೀವನ ನಡೆಸಲು ಬಯಸುತ್ತಿದ್ದೇನೆ ಎಂದು ಅವನಿಗೆ ಸ್ಪಷ್ಟವಾಗುತ್ತದೆ. ಇವರಿಬ್ಬರು ಜೊತೆಯಾದದ್ದನ್ನು ನೋಡಿದ ಸಾರಾ ಮೌನವಾಗಿ ಅಲ್ಲಿಂದ ಹೊರಡುತ್ತಾಳೆ. ಬೆನ್ ಮತ್ತು ಬ್ರಿಗೆಟ್ ಮದುವೆಯಾಗಿ, ಮಧುಚಂದ್ರಕ್ಕೆ ಹವಾಯಿಗೆ ಹೋಗುತ್ತಾರೆ. ಎಲ್ಲವೂ ಸುಖಾಂತ್ಯ.

(15 ವರುಷಗಳ ಮುಂಚೆ, ಬ್ಯಾಂಕಿನ ಸಿಬ್ಬಂದಿಗೆ ತರಬೇತಿ ನೀಡಲಿಕ್ಕಾಗಿ ಬೆಂಗಳೂರಿಗೆ ಹೋಗಿದ್ದಾಗ 20-04-2011ರ ಬುಧವಾರ ನೋಡಿದ ಸಿನಿಮಾದ ನೋಟ್ಸಿನ ಆಧಾರದಿಂದ ಬರೆದ ಕಥಾ ಸಾರಾಂಶ.)