“ವಾಟ್ ಲೈಸ್ ಬಿನೀತ್?” ಇಂಗ್ಲಿಷ್ ಸಿನಿಮಾದ ಕತೆ:

ಇದು ಅತಿ ಮಾನುಷ ಘಟನೆಗಳ ಸುತ್ತ ಹೆಣೆದಿರುವ ಸಿನಿಮಾ ಕತೆ. ಕ್ಲಾರೆ ಸ್ಪೆನ್-ಸರ್ ಮತ್ತು ಅವಳ ಪತಿ ನಾರ್ಮನ್

ಅಮೆರಿಕಾದ ವೆರ್-ಮೌಂಟಿನ ಸರೋವರದ ಪಕ್ಕದ ಮನೆಯಲ್ಲಿ ವಾಸ ಮಾಡುವವರು. ನಾರ್ಮನ್ ಒಬ್ಬ ವಿಜ್ಞಾನಿ ಮತ್ತು ಒಂದು ಕಾಲೇಜಿನಲ್ಲಿ ಪ್ರೊಫೆಸರ್. ಅವರ ಮಗಳು ಕೈಟ್-ಲಿನ್ ಕಾಲೇಜು ಶಿಕ್ಷಣಕ್ಕಾಗಿ ಮನೆಯಿಂದ ಹೊರಟು ಹೋದ ನಂತರ ಇವರಿಬ್ಬರ ಸಂಬಂಧ ಹದಗೆಟ್ಟಿತು. ಇದು ಸಾಲದೆಂಬಂತೆ, ಒಂದು ವರುಷದ ಮುಂಚೆ ಕ್ಲಾರೆ ಭಾರೀ ಕಾರು ಅಪಘಾತದಿಂದ ಆಘಾತಕ್ಕೆ ಒಳಗಾಗಿದ್ದಳು.

ತಮ್ಮ ಮನೆಯಲ್ಲಿ ಒಂದು ಭೂತ ಅಡ್ಡಾಡುತ್ತಿದೆ ಎಂದು ಕ್ಲಾರೆ ಗಂಡನಿಗೆ ಹಲವು ಬಾರಿ ಹೇಳುತ್ತಾಳೆ. ನಾರ್ಮನ್ ಇದನ್ನೆಲ್ಲ ತಳ್ಳಿ ಹಾಕುತ್ತಾನೆ ಮತ್ತು ತನ್ನ ಹೆಚ್ಚುತ್ತಿರುವ ಆತಂಕ ನಿವಾರಣೆಗಾಗಿ ಕ್ಲಾರೆ ಥೆರಪಿಸ್ಟ್ ಅನ್ನು ಭೇಟಿ ಆಗಬೇಕೆನ್ನುತ್ತಾನೆ. ಥೆರಪಿಸ್ಟ್ ಜೊತೆ “ಚಿಕಿತ್ಸೆ” ಪಡೆಯುವಾಗ ಕ್ಲಾರೆ ತಿಳಿಸುವ ಸಂಗತಿ: ತನ್ನ ಮನೆಯಲ್ಲಿ ತನ್ನ ಹಾಗೆಯೇ ಇರುವ ಇನ್ನೊಬ್ಬ ಹೆಂಗಸಿನ ಛಾಯೆ ಆಗಾಗ ಕಾಣಿಸುತ್ತಿದೆ ಎಂಬುದು.

ಅನಂತರ, ಈ ನಿಟ್ಟಿನಲ್ಲಿ ಕ್ಲಾರೆ ಮತ್ತು ಅವಳ ಗೆಳತಿ ಜೊಡಿ “ಸ್ಪಿರಿಟ್ ಸಂಪರ್ಕ” ನಡೆಸುತ್ತಾರೆ. ಅದಾದ ನಂತರ, ಕ್ಲಾರೆಯ ಮನೆಯಲ್ಲಿ ಇನ್ನಷ್ಟು ಅತಿ ಮಾನುಷ ಘಟನೆಗಳು ಜರಗುತ್ತವೆ: ಮನೆಯ ಬಾತ್-ಟಬ್-ನಲ್ಲಿ ತಾನಾಗಿಯೇ ನೀರು ತುಂಬುತ್ತದೆ. ಬಾತ್-ರೂಮಿನ ಕನ್ನಡಿಯಲ್ಲಿ “You are next” (ಮುಂದಿನ ಸರದಿ ನಿನ್ನದು) ಎಂಬ ಪದಗಳು ಮೂಡುತ್ತವೆ! ಅವಳ ಕಂಪ್ಯೂಟರ್ MEF ಎಂಬ ಇಂಗ್ಲಿಷ್ ಅಕ್ಷರಗಳನ್ನು ತಾನಾಗಿಯೇ ಟೈಪ್ ಮಾಡುತ್ತದೆ. ಇವೆಲ್ಲದರಿಂದಾಗಿ ತನ್ನ ಮನೆಯಲ್ಲಿ ಭೂತ ಸಂಚಾರ ಆಗುತ್ತಲೇ ಇದೆಯೆಂಬ ಕ್ಲಾರೆಯ ಆತಂಕ ಜಾಸ್ತಿ ಆಗುತ್ತದೆ.

ಒಂದು ಪಾರ್ಟಿಗೆ ಹೋಗಿದ್ದ ಕ್ಲಾರೆ ಮನೆಗೆ ಹಿಂತಿರುಗುತ್ತಾಳೆ. ಆಗ ಒಂದು ವಾರ್ತಾಪತ್ರಿಕೆಯ ತುಂಡು ಕೆಳಗೆ ಬಿತ್ತು. ಅದರಲ್ಲಿ ಇದ್ದ ವರದಿಯೊಂದನ್ನು ಕ್ಲಾರೆ ಗಮನಿಸುತ್ತಾಳೆ. ಅದು ಮಾಡಿಸನ್ ಎಲಿಜಬೆತ್ ಫ್ರಾಂಕ್ ಎಂಬ ಕಾಣೆಯಾದ ಮಹಿಳೆಯ ಬಗ್ಗೆ ವರದಿ. ಅವಳು ಕಾಣಲು ಕ್ಲಾರೆಯಂತೆಯೇ ಇದ್ದಳು. ತದನಂತರ, ಮಾಡಿಸನ್ ಅವಳ ತಾಯಿಯನ್ನು ಕ್ಲಾರೆ ಭೇಟಿ ಮಾಡುತ್ತಾಳೆ. ಆ ಮನೆಯಿಂದ ಹಿಂತಿರುಗಿ ಬರುವಾಗ ಮಾಡಿಸನಳ ತಲೆಗೂದಲಿನ ಕ್ಲಿಪ್ ಒಂದನ್ನು ತರುತ್ತಾಳೆ.

ಮಾಡಿಸನಳ ಭೂತವನ್ನು ಆಹ್ವಾನಿಸಿಕೊಳ್ಳಲು ಕ್ಲಾರೆ ಪ್ರಯತ್ನಿಸುತ್ತಾಳೆ. ಆ ಭೂತ ಮಾಡಿಸನಳ ದೇಹವನ್ನು ಆಕ್ರಮಿಸಿಕೊಳ್ಳುತ್ತದೆ. ಆಗ ಮಾಡಿಸನಳ ಧ್ವನಿಯಲ್ಲೇ ಕ್ಲಾರೆ ಮಾತನಾಡುವುದನ್ನು ಕೇಳಿದ ನಾರ್ಮನ್-ಗೆ ಆಘಾತವಾಗುತ್ತದೆ. ಮಾಡಿಸನಳ ಕೂದಲಿನ ಕ್ಲಿಪ್ ಅನ್ನು ಕ್ಲಾರೆ ಕೆಳಗೆ ಹಾಕಿದಾಗ ಆ ಭೂತ ಅವಳನ್ನು ಬಿಟ್ಟು ಹೋಗುತ್ತದೆ. ಆಗ ಅಪಘಾತದಿಂದಾಗಿ ಮರೆತು ಹೋಗಿದ್ದ ಸಂಗತಿಯೊಂದು ಕ್ಲಾರೆಗೆ ನೆನಪಾಗುತ್ತದೆ. ಅದೇನೆಂದರೆ, ಕ್ಲಾರೆ ಮತ್ತು ನಾರ್ಮನನ ಸಂಬಂಧದಲ್ಲಿ ಬಿರುಕು ಉಂಟಾಗಿತ್ತು. ಆ ಸಮಯದಲ್ಲಿ ತನ್ನ ವಿದ್ಯಾರ್ಥಿಯಾಗಿದ್ದ ಮಾಡಿಸನಳ ಜೊತೆ ನಾರ್ಮನ್ ಅಫೇರ್ (ಪ್ರೇಮ ಸಂಬಂಧ) ಹೊಂದಿದ್ದ.

ಇದರಿಂದ ವಿಚಲಿತಳಾದ ಕ್ಲಾರೆ ಆ ರಾತ್ರಿಯನ್ನು ತನ್ನ ಗೆಳತಿ ಜೊಡಿಯೊಂದಿಗೆ ಕಳೆಯುತ್ತಾಳೆ. ಆಗ ಜೊಡಿ ನೆನಪು ಮಾಡಿಕೊಳ್ಳುತ್ತಾಳೆ: ಒಂದು ವರುಷದ ಮುಂಚೆ ತಾನು ಅಡಮಂಟ್ ಎಂಬ ಹತ್ತಿರದ ಪಟ್ಟಣಕ್ಕೆ ಹೋಗಿದ್ದೆ; ಅಲ್ಲಿ ಒಬ್ಬಳು ಮಹಿಳೆಯ ಜೊತೆ ನಾರ್ಮನ್ ವಾದ ಮಾಡುತ್ತಿದ್ದುದನ್ನು ಕಂಡಿದ್ದೆ.

ಕ್ಲಾರೆ ಮನೆಗೆ ಹಿಂತಿರುಗಿದಾಗ ನಾರ್ಮನ್ ಬಾತ್-ಟಬ್-ನಲ್ಲಿ ಪ್ರಜ್ಞಾಶೂನ್ಯನಾಗಿ ಬಿದ್ದಿದ್ದ. ತಾನು ಆಯ ತಪ್ಪಿ ಬಿದ್ದೆ ಎನ್ನುತ್ತಾನೆ ಅವನು. ಮಾಡಿಸನ್ ಜೊತೆ ಅವನ ವಾಗ್ವಾದದ ಬಗ್ಗೆ ಕ್ಲಾರೆ ಪ್ರಶ್ನಿಸುತ್ತಾಳೆ. ಅದಕ್ಕೆ ಅವನ ವಿವರಣೆ: ತನ್ನ ಮತ್ತು ಮಾಡಿಸನಳ ಸಂಬಂಧವನ್ನು ತಾನು ಕೊನೆಗಾಣಿಸಿದಾಗ ಅವಳು ವಾಗ್ವಾದ ಮಾಡಿದ್ದಳು. ಆದರೆ ತಾನು ಅವಳ ಕೊಲೆ ಮಾಡಿಲ್ಲ.

ಅನಂತರ ಕ್ಲಾರೆ ಸರೋವರದ ಪಕ್ಕದಲ್ಲಿ ನಿಂತಿದ್ದಾಗ, ಯಾವುದೋ ಶಕ್ತಿ ಅವಳನ್ನು ನೀರಿನೊಳಗೆ ಸೆಳೆದುಕೊಳ್ಳುತ್ತದೆ. ಅವಳು ನೀರಿನಲ್ಲಿ ಮುಳುಗಿದ್ದಾಗ, ಅವಳಿಗೆ ಒಂದು ಆಭರಣ ಪೆಟ್ಟಿಗೆ ಕಾಣಿಸುತ್ತದೆ. ಅದರ ವಿನ್ಯಾಸವು ಫೋಟೋದಲ್ಲಿ ಮಾಡಿಸನ್ ಧರಿಸಿದ್ದ ನೆಕ್-ಲೆಸ್-ನ ವಿನ್ಯಾಸದಂತೆಯೇ ಇತ್ತು. ಅಷ್ಟರಲ್ಲಿ ಕ್ಲಾರೆಯನ್ನು ನಾರ್ಮನ್ ನೀರಿನಿಂದ ಹೊರಗೆ ಎಳೆಯುತ್ತಾನೆ. ಬಳಿಕ ಅವರಿಬ್ಬರೂ ಮಾಡಿಸನಳ ಕೂದಲ ಕ್ಲಿಪ್ ಅನ್ನು ಸುಟ್ಟು ಹಾಕುತ್ತಾರೆ.

ತದನಂತರ ಕೆಲವು ಸಮಯ ಕ್ಲಾರೆ ಮತ್ತು ನಾರ್ಮನ್ ಸಮಾಧಾನದಿಂದ ಇರುವಂತೆ ಕಾಣಿಸುತ್ತದೆ. ಆದರೆ ಕ್ಲಾರೆ ಅಡಮಂಟ್ ಪಟ್ಟಣಕ್ಕೆ ಭೇಟಿ ನೀಡೋಣ ಎಂದಾಗ ನಾರ್ಮನ್ ಆ ಪಟ್ಟಣದ ಬಗ್ಗೆ ಏನೂ ತಿಳಿಯದವನಂತೆ ವರ್ತಿಸುತ್ತಾನೆ. ಇದರಿಂದಾಗಿ ಕ್ಲಾರೆಯ ಸಂಶಯ ಮರುಕಳಿಸುತ್ತದೆ. ಹಾಗಾಗಿ ಕ್ಲಾರೆ ಒಬ್ಬಳೇ ಆ ಪಟ್ಟಣಕ್ಕೆ ಭೇಟಿ ನೀಡುತ್ತಾಳೆ. ಅಲ್ಲಿ ಒಂದು ಆಭರಣ ಮಳಿಗೆಯ ಪ್ರದರ್ಶನ ಸಂಪುಟದಲ್ಲಿ ಮಾಡಿಸನ್ ಧರಿಸಿದ್ದ ನೆಕ್-ಲೆಸ್ ಮತ್ತು ಸರೋವರದ ನೀರಿನಲ್ಲಿ ಕಂಡಿದ್ದ ಆಭರಣ ಪೆಟ್ಟಿಗೆಯ ತದ್ರೂಪವನ್ನು ಗುರುತಿಸುತ್ತಾಳೆ.

ಮನೆಗೆ ಮರಳಿದ ಕ್ಲಾರೆ ಸರೋವರದ ನೀರಿನಿಂದ ಆ ಆಭರಣ ಪೆಟ್ಟಿಗೆಯನ್ನು ಹೊರ ತೆಗೆಯುತ್ತಾಳೆ. ನಾರ್ಮನನ ಕಚೇರಿಯಿಂದ ತಂದಿದ್ದ ಬೀಗದ ಕೈಯಿಂದ ಆಭರಣ ಪೆಟ್ಟಿಗೆಯ ಮುಚ್ಚಳ ತೆರೆಯುತ್ತಾಳೆ. ಅದರೊಳಗಿತ್ತು ಮಾಡಿಸನಳ ನೆಕ್-ಲೆಸ್! ಈ ಪುರಾವೆ ಎದುರಿಟ್ಟು, ನಾರ್ಮನನನ್ನು ಕ್ಲಾರೆ ಪ್ರಶ್ನಿಸುತ್ತಾಳೆ. ಈಗ ನಾರ್ಮನನ ವಿವರಣೆ: ಮಾಡಿಸನ್ ಆತ್ಮಹತ್ಯೆ ಮಾಡಿಕೊಂಡಳು ಮತ್ತು ಕಂಗಾಲಾದ ತಾನು, ಮಾಡಿಸನ್ ಕಾರಿನೊಳಗೆ ಇದ್ದಂತೆಯೇ ಅವಳ ಕಾರನ್ನು ಸರೋವರಕ್ಕೆ ತಳ್ಳಿದೆ.

ಅದನ್ನೆಲ್ಲ ನಾರ್ಮನ್ ಪೋಲಿಸರಿಗೆ ವರದಿ ಮಾಡಲೇ ಬೇಕೆಂದು ಕ್ಲಾರೆ ಹಟ ಹಿಡಿಯುತ್ತಾಳೆ. ಆದ್ದರಿಂದ ನಾರ್ಮನ್ ಪೊಲೀಸರಿಗೆ ಫೋನ್ ಮಾಡಿ ವಿಷಯ ತಿಳಿಸುತ್ತಾನೆ. ಆದರೆ ಅವನು ಉದ್ದೇಶಪೂರ್ವಕವಾಗಿ ಬೇರೊಂದು ನಂಬರಿಗೆ ಫೋನ್ ಮಾಡಿದ್ದ ಎಂಬುದನ್ನು ಕ್ಲಾರೆ ಪತ್ತೆ ಮಾಡುತ್ತಾಳೆ.

ತಕ್ಷಣವೇ ಕ್ಲಾರೆಯ ಮೇಲೆ ನಾರ್ಮನ್ ದಾಳಿ ಮಾಡಿ, ಅವಳು ನಿಷ್ಕ್ರಿಯಳಾಗುವಂತೆ ಮಾಡುವ ಚುಚ್ಚುಮದ್ದು ಚುಚ್ಚುತ್ತಾನೆ. ನಂತರ, ತಮ್ಮ ಅಫೇರ್ ಅನ್ನು ಮೇಲಧಿಕಾರಿಗೆ ವರದಿ ಮಾಡುತ್ತೇನೆಂದು ಮಾಡಿಸನ್ ಹೆದರಿಸಿದಾಗ ತಾನು ಅವಳನ್ನು ಕೊಲೆ ಮಾಡಿದ್ದು ನಿಜವೆಂದು ಕ್ಲಾರೆಗೆ ತಪ್ಪೊಪ್ಪಿಗೆ ಹೇಳಿಕೆ ನೀಡುತ್ತಾನೆ. ಬಳಿಕ ಕ್ಲಾರೆಯನ್ನು ಬಾತ್-ಟಬ್-ನಲ್ಲಿಟ್ಟು ಅದಕ್ಕೆ ನೀರು ತುಂಬಿಸುತ್ತಾನೆ - ಕ್ಲಾರೆಯನ್ನು ಕೊಂದು, ಅವಳು ಆತ್ಮಹತ್ಯೆ ಮಾಡಿಕೊಂಡಂತೆ ತೋರಿಸುವುದು ಅವನ ಉದ್ದೇಶ.

ಕ್ಲಾರೆಯ ಕುತ್ತಿಗೆಯಿಂದ ಮಾಡಿಸನಳ ನೆಕ್-ಲೆಸನ್ನು ಅವನು ತೆಗೆದಾಗ, ಅವಳ ಮುಖ ಮಾಡಿಸನಳ ಹೆಣದ ಮುಖದಂತೆ ಆಗುತ್ತದೆ. ಬೆಚ್ಚಿಬಿದ್ದ ನಾರ್ಮನ್ ಆಯ ತಪ್ಪಿ ಹಿಂದಕ್ಕೆ ವಾಲಿದಾಗ, ಅವನ ತಲೆ ಸಿಂಕಿಗೆ ಬಡಿದು ಅವನ ಪ್ರಜ್ಞೆ ತಪ್ಪುತ್ತದೆ.

ವಿಷದ ಪ್ರಭಾವ ಕಡಿಮೆಯಾದಾಗ ಕ್ಲಾರೆಗೆ ಎಚ್ಚರವಾಗಿ, ಅವಳು ಬಾತ್-ಟಬ್ಬಿನ ಪ್ಲಗ್ ಕಿತ್ತು, ನೀರೆಲ್ಲ ಸೋರಿ ಹೋಗುವಂತೆ ಮಾಡಿ, ಉಸಿರುಗಟ್ಟಿ ಸಾಯದೆ ಬಚಾವಾಗುತ್ತಾಳೆ. ಆಗ ನಾರ್ಮನನಿಗೆ ಪ್ರಜ್ಞೆ ಮರಳಿ ಬಂದು, ಅವನು ಕ್ಲಾರೆಯ ಬೆನ್ನಟ್ಟುತ್ತಾನೆ. ಆಗ ಕ್ಲಾರೆ ತಮ್ಮ ಟ್ರಕ್ ಏರಿ ಧಾವಿಸುತ್ತಾಳೆ; ಆ ಟ್ರಕ್ಕಿಗೆ ಅವರ ಬೋಟ್ ಜೋಡಿಸಲಾಗಿತ್ತು. ನಾರ್ಮನ್ ಆ ಟ್ರಕ್ ಏರಿ, ಕ್ಲಾರೆ ಮೇಲೆ ದಾಳಿ ಮಾಡುತ್ತಾನೆ. ಈ ಗದ್ದಲದಲ್ಲಿ ಟ್ರಕ್ ಸರೋವರದ ನೀರಿಗೆ ಬೀಳುತ್ತದೆ.

ನೀರಿನಲ್ಲಿ ಮುಳುಗಿದ್ದರೂ ನಾರ್ಮನ್, ಅಲ್ಲೇ ಕ್ಲಾರೆಯನ್ನು ಕೊಲ್ಲಲು ಪ್ರಯತ್ನಿಸುತ್ತಾನೆ. ಆಗ ಸರೋವರದಲ್ಲಿ ಮುಳುಗಿದ್ದ ಮಾಡಿಸನಳ ಕಾರು ಮೇಲಕ್ಕೇಳುತ್ತದೆ. ಬೋಟಿನ ಭಾಗ ತಗಲಿ ಕಾರಿನ ಚಾವಣಿ ಕಿತ್ತು ಹೋಗುತ್ತದೆ. ಆಗ ಮಾಡಿಸನಳ ಕೊಳೆತು ಹೋದ ಹೆಣ ಮೇಲಕ್ಕೆದ್ದು ಬಂದು, ಚೈತನ್ಯದುಂಬಿ ನಾರ್ಮನನನ್ನು ಎಳೆದುಕೊಳ್ಳುತ್ತದೆ. ಕ್ಲಾರೆ ಅಲ್ಲಿಂದ ಪಾರಾಗುತ್ತಾಳೆ. ಆದರೆ ನಾರ್ಮನ್ ಮುಳುಗಿ ಸಾಯುತ್ತಾನೆ. ನಾರ್ಮನನ ಕೈಯಿಂದ ಮಾಡಿಸನಳ ನೆಕ್-ಲೆಸ್ ಜಾರುತ್ತಿದ್ದಂತೆ, ಅವಳ ಶವ ಚೈತನ್ಯರಹಿತವಾಗಿ, ಸರೋವರದ ನೀರಿನ ಆಳಕ್ಕೆ ಮುಳುಗುತ್ತದೆ.

ಮುಂದಿನ ಚಳಿಗಾಲದಲ್ಲಿ ಮಾಡಿಸನಳ ಸಮಾಧಿಗೆ ಭೇಟಿ ನೀಡಿದ ಕ್ಲಾರೆ ಅದರ ಮೇಲೆ ಕೆಂಪು ಗುಲಾಬಿ ಇರಿಸುತ್ತಾಳೆ.

(15 ವರುಷಗಳ ಹಿಂದೆ, ಬ್ಯಾಂಕಿನ ಸಿಬ್ಬಂದಿಗೆ ನೀಡಲಿಕ್ಕಾಗಿ ಬೆಂಗಳೂರಿಗೆ ಹೋಗಿದ್ದಾಗ 20-04-2011ರ ಬುಧವಾರ ನೋಡಿದ್ದ ಸಿನಿಮಾದ ನೋಟ್ಸಿನ ಆಧಾರದಿಂದ ಬರೆದ ಕಥಾ ಸಾರಾಂಶ.)