ಪ್ರಖ್ಯಾತ ಸಿನಿಮಾ ನಟನೋ, ಬಹುಸಂಖ್ಯಾತ ಜಾತಿಯ ವ್ಯಕ್ತಿಯೋ, ಆಗರ್ಭ ಶ್ರೀಮಂತನೋ ಆದರೆ ಒಂದಷ್ಟು ಜನಪ್ರಿಯ ಚಟುವಟಿಕೆ ಮಾಡುವುದು ಸುಲಭ. ಅದೆಲ್ಲವೂ ಇಲ್ಲದೇ ಕೇವಲ ಪ್ರಾಮಾಣಿಕತೆ, ದಕ್ಷತೆ ಮತ್ತು ವಿಚಾರಗಳ ಆಧಾರದ ಮೇಲೆ ಪರ್ಯಾಯ ರಾಜಕೀಯ ಶಕ್ತಿ ಕಟ್ಟುವುದು ತುಂಬಾ ತುಂಬಾ ಕಷ್ಟ. ಹಾಗೆಂದು ನಿರಾಶರಾಗುವ ಅವಶ್ಯಕತೆ ಇಲ್ಲ. ಈಗಿನ ಸಂಪರ್ಕ ಕ್ರಾಂತಿಯ ಸಂದರ್ಭದಲ್ಲಿ ಜನರನ್ನು ಬೇಗ ತಲುಪುವ ಅನುಕೂಲಗಳೂ ಇವೆ. ಹೊಸ ಪ್ರಯೋಗಗಳಿಗೆ ಮಾದರಿಯಾಗಿ ದೇಶದಲ್ಲಿ ಕೆಲವು ಪ್ರಾದೇಶಿಕ ಪಕ್ಷಗಳು ಯಶಸ್ವಿಯಾಗಿವೆ. ಅದರಲ್ಲಿ ಬಹುಮುಖ್ಯ ಉದಾಹರಣೆ ದೆಹಲಿಯ ಅರವಿಂದ್ ಕೇಜ್ರೀವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ, ಇದೀಗ ವಿಜಯ್ ಅವರ ಟಿವಿಕೆ ಪಕ್ಷ ಮತ್ತು ಇತಿಹಾಸದಲ್ಲಿ ದಾಖಲಾಗಿರುವ ಕೆಲವು ಪಕ್ಷಗಳು.
ನಾಯಕತ್ವದಲ್ಲಿ ಅತ್ಯಂತ ಪ್ರಾಮಾಣಿಕ, ಶುದ್ದ ಮತ್ತು ಅಧಿಕಾರದ ಆಸೆಗಿಂತ ಜನರಿಗೆ ಒಳಿತು ಮಾಡುವ ವ್ಯಕ್ತಿತ್ವವನ್ನು ಹೊಂದಿರುವವರು ಎಂಬ ನಂಬಿಕೆ ಜನರಲ್ಲಿ ಬೆಳೆದರೆ ಅದು ಪರ್ಯಾಯ ರಾಜಕೀಯ ಶಕ್ತಿಯ ಯಶಸ್ಸಿನ ಮೊದಲ ಮೆಟ್ಟಿಲು. ಅಧಿಕಾರಕ್ಕೆ ಬಂದರೇ ಯಾವ ಯಾವ ಕೆಲಸಗಳನ್ನು ಈಗಿನ ವ್ಯವಸ್ಥೆಗಿಂತ ಭಿನ್ನವಾಗಿ ಜನರಿಗೆ ತಲುಪಿಸುತ್ತೇವೆ ಎಂದು ಜನರಿಗೆ ಮನವರಿಕೆ ಮಾಡಿಕೊಟ್ಟರೆ ಅದು ಎರಡನೇ ಮೆಟ್ಟಿಲು. ಈಗಿನ ಸಂದರ್ಭದಲ್ಲಿ ಸಂಘಟನಾತ್ಮಕ ಹೋರಾಟಕ್ಕಿಂತ ಜನ ಸಮೂಹವೇ ಆ ನಾಯಕತ್ವದ ಪರವಾಗಿ ಒಲವು ಹೊಂದಿ, ಒಬ್ಬರಿಂದೊಬ್ಬರಿಗೆ ಮಾತುಗಳ ಮುಖಾಂತರವೇ ಹರಡಿ ಮತಗಳಾಗಿ ಪರಿವರ್ತನೆ ಆಗುವ ಪ್ರಕ್ರಿಯೆಗೆ ಒಳಗಾಗುವಂತೆ ಮಾಡಿದರೆ ಅದು ಮೂರನೇ ಮೆಟ್ಟಿಲು.
ಪರ್ಯಾಯ ರಾಜಕೀಯ ಪಕ್ಷ ಸಾಂಪ್ರದಾಯಿಕ ಪಕ್ಷಗಳಿಗಿಂತ ನಡೆ ನುಡಿಗಳಲ್ಲಿ, ಆಡಳಿತಾತ್ಮಕ ದಕ್ಷತೆಯಲ್ಲಿ, ತನ್ನ ಅಭಿವೃದ್ಧಿಯ ಚಿಂತನೆಗಳಲ್ಲಿ, ಅಧಿಕಾರದ ಹಂಚಿಕೆಯಲ್ಲಿ, ಹಣಕಾಸಿನ ವ್ಯವಹಾರದಲ್ಲಿ, ಎಲ್ಲಕ್ಕಿಂತ ಮುಖ್ಯವಾಗಿ ತಾನು ರೂಪಿಸುವ ಯೋಜನೆಗಳು ಜನರನ್ನು ಹೇಗೆ ಸಮರ್ಪಕವಾಗಿ ತಲುಪುತ್ತವೆ ಎಂಬುದನ್ನು ಸ್ಪಷ್ಟವಾಗಿ ಜನರಿಗೆ ಮನವರಿಕೆ ಮಾಡಿಕೊಟ್ಟರೆ ಅದು ಪ್ರತಿ ಹಳ್ಳಿಗಳನ್ನು ತಲುಪುವಂತಾದರೆ ಮಾತ್ರ ಯಶಸ್ಸು ಕಾಣಲು ಸಾಧ್ಯ.
ಹೌದು, ಇದು ಅಕ್ಷರಗಳಲ್ಲಿ ಬರೆದಷ್ಟು ಸುಲಭವಲ್ಲ ಎಂಬ ಅರಿವಿದೆ. ಅಸಾಧ್ಯ ಎಂಬುದೇ ಹೆಚ್ಚು ಸೂಕ್ತ. ಆದರೆ ಅಸಾಧ್ಯವೂ ಸಾಧ್ಯ ಎಂಬುದನ್ನು ಸಹ ಮರೆಯಬಾರದು. ಜನ ವ್ಯವಸ್ಥೆಯ ವಿರುದ್ಧ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಪರ್ಯಾಯ ಆಡಳಿತ ವ್ಯವಸ್ಥೆ ರೂಪಿಸಲು ಇದು ಸೂಕ್ತ ಸಮಯ ಎಂದು ಭಾವಿಸಬಹುದು. ಆಸಕ್ತ ಮನಸ್ಸುಗಳು ಈ ಬಗ್ಗೆ ಹೆಚ್ಚು ಹೆಚ್ಚು ತಮ್ಮನ್ನು ತೊಡಗಿಸಿಕೊಳ್ಳಬಹುದು. ಆದರೆ ಬಹುದೊಡ್ಡ ನಿರೀಕ್ಷೆ ಬೇಡ. ಅದು ನಿರಾಸೆಯ ಕೂಪಕ್ಕೆ ತಳ್ಳುತ್ತದೆ. ಪ್ರಾಮಾಣಿಕ ಪ್ರಯತ್ನ, ನಿಸ್ವಾರ್ಥ ಸೇವೆ, ಏನನ್ನೂ ತನಗಾಗಿ ನಿರೀಕ್ಷಿಸದ ನಿರ್ಲಿಪ್ತತೆ ಖಂಡಿತ ಜನರ ಮನವೊಲಿಸಲು ಯಶಸ್ವಿಯಾಗುತ್ತದೆ. ಈಗಲೂ ಸಾಕಷ್ಟು ಜನ ಒಳ್ಳೆಯವರು ಇದ್ದಾರೆ. ಆದರೆ ಅವರಿಗೆ ಸೂಕ್ತ ವೇದಿಕೆ ಮತ್ತು ಪರ್ಯಾಯ ಇಲ್ಲ. ಅದನ್ನು ಒದಗಿಸಿದರೆ ಖಂಡಿತ ಜನ ಸಮೂಹ ಒಪ್ಪಬಹುದು. ಆ ದಿನಗಳು ಬೇಗ ಬರಲಿ ಎಂದು ನಿರೀಕ್ಷಿಸುತ್ತಾ....
ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷದ ಅವಶ್ಯಕತೆ ಎಷ್ಟು ? ಕನ್ನಡಿಗರ ಒಳಧ್ವನಿ. ಒಂದು ಮಾಹಿತಿಯಂತೆ ಇಡೀ ಭಾರತದಲ್ಲಿ ಪ್ರಾದೇಶಿಕ ಭಾಷೆಗಾಗಿ ಹೋರಾಟ ಮಾಡಬೇಕಾದ ಮತ್ತು ಮಾಡುತ್ತಿರುವ ಅತಿ ಹೆಚ್ಚು ಸಂಘಟನೆಗಳಿರುವುದು ಕರ್ನಾಟಕದಲ್ಲಿ. ಬಹುಶಃ ಕನ್ನಡ ಭಾಷೆಯ, ಕನ್ನಡ ಸಂಸ್ಕೃತಿಯ ಅಸ್ಮಿತೆಯನ್ನು ಉಳಿಸಲು ಭಾಷಾವಾರು ಪ್ರಾಂತ ರಚನೆಯಾದ ದಿನದಿಂದಲೂ, ಕರ್ನಾಟಕ ಏಕೀಕರಣದ ನಂತರವೂ ಸಾಕಷ್ಟು ಹೋರಾಟಗಳು ನಡೆಯುತ್ತಲೇ ಇವೆ. ಅದಕ್ಕೆ ಹಲವಾರು ಕಾರಣಗಳು ಇವೆ. ದಕ್ಷಿಣದ ಇತರ ರಾಜ್ಯಗಳಿಗೆ ಹೋಲಿಸಿದರೆ ನಮ್ಮೊಳಗಿನ ಭಾಷಾಭಿಮಾನ ಒಂದಷ್ಟು ಕಡಿಮೆ ಇರುವ ಮೂಲ ಕಾರಣ ಮಾತ್ರವಲ್ಲದೆ, ಪರಭಾಷಿಕರ ಹಾವಳಿಗೆ ದಕ್ಷಿಣ ಭಾರತದ ದ್ರಾವಿಡ ಭಾಷೆಗಳಲ್ಲಿ ಅತಿ ಹೆಚ್ಚು ದೌರ್ಜನ್ಯಕ್ಕೆ ಒಳಗಾಗುತ್ತಿರುವುದು ಕನ್ನಡವೇ. ಭೌಗೋಳಿಕವಾಗಿ ಕರ್ನಾಟಕ ಭಾರತ ದೇಶದಲ್ಲಿಯೇ ಇರುವುದರಲ್ಲಿ ಅತ್ಯಂತ ಸುರಕ್ಷಿತ ಪ್ರದೇಶ ಎಂಬ ಭಾವನೆ ಉತ್ತರ ಭಾರತೀಯರಲ್ಲಿದೆ. ಜೊತೆಗೆ ಕರ್ನಾಟಕ ಪ್ರಾಕೃತಿಕವಾಗಿಯೂ ಒಳ್ಳೆಯ ಸಂಪನ್ಮೂಲಭರಿತ ರಾಜ್ಯವಾಗಿದೆ. ಇಲ್ಲಿನ ವಾತಾವರಣ ಅತ್ಯುತ್ತಮ ಸ್ಥಿತಿಯಲ್ಲಿದೆ. ಪ್ರಾಕೃತಿಕ ವಿಕೋಪಗಳು ತುಂಬಾ ಕಡಿಮೆ. ಭದ್ರತೆ ಮತ್ತು ರಕ್ಷಣೆ ಉತ್ತಮವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಕರ್ನಾಟಕದ ಜನ ಉದಾರವಾದಿಗಳು, ಆತ್ಮೀಯರು. ತೀರಾ ಒರಟಾಗಿ ನಡೆದುಕೊಳ್ಳುವುದಿಲ್ಲ. ಇರುವುದರಲ್ಲಿ ಒಂದಷ್ಟು ಸಂಸ್ಕಾರವಂತರಾಗಿ ಇತರ ರಾಜ್ಯಗಳ ಜನರಿಗೂ ಗೌರವ ಕೊಡುತ್ತಾರೆ. ಹೆಚ್ಚು ತಂಟೆತಕರಾರು ಮಾಡುವುದಿಲ್ಲ. ವೈವಿಧ್ಯಮಯ ಆಹಾರ ಪದ್ಧತಿಯೂ ಇಲ್ಲಿದೆ.
ಇದರಿಂದಾಗಿ ಪರಭಾಷಿಕರ ವಲಸೆ ಒಂದು ಹಂತದವರೆಗೆ ಯಾವುದೇ ಸಮಸ್ಯೆ ಉಂಟುಮಾಡಲಿಲ್ಲ. 70-80-90 ರ ದಶಕದಲ್ಲಿ ತಮಿಳು ಭಾಷಿಕರಿಂದ ಒಂದಷ್ಟು ಸಮಸ್ಯೆ ಉಂಟಾಗಿ, ಅಸಮಾಧಾನ ಜಾಸ್ತಿಯಾಗಿ ಕಾವೇರಿ ಗಲಾಟೆಯಲ್ಲಿ ಅದು ಉತ್ತುಂಗಕ್ಕೇರಿ, ಒಂದಷ್ಟು ಘರ್ಷಣೆಗಳು ನಡೆದು, ಇತ್ತೀಚಿನ ವರ್ಷಗಳಲ್ಲಿ ಅದು ತಹಬಂಧಿಗೆ ಬಂದಿದೆ. ಆದರೆ ಕಳೆದ ಹತ್ತು ಹದಿನೈದು ವರ್ಷಗಳಲ್ಲಿ ಉತ್ತರ ಭಾರತೀಯರು ತೀರಾ ತೀರಾ ಅತಿಯಾಗಿ ಕರ್ನಾಟಕದ ಎಲ್ಲ ಭಾಗಗಳ ಮೇಲೆ ಬಹುತೇಕ ದಾಳಿ ಎನ್ನುವಂತೆ ಬಂದು ಸೇರತೊಡಗಿದ್ದಾರೆ. ಅದು ಕೇವಲ ರೈಲ್ವೆ ಇಲಾಖೆ, ಬ್ಯಾಂಕಿಂಗ್, ಆಡಳಿತ ಮಾತ್ರವಲ್ಲದೆ ಕಟ್ಟಡ ಕಾರ್ಮಿಕರು, ವ್ಯಾಪಾರಿಗಳು, ಹೋಟೆಲ್ ಕೆಲಸಗಾರರು ಮುಂತಾದ ಇತರ ಎಲ್ಲಾ ಸ್ಥಳೀಯ ಕೆಲಸಗಳಿಗೂ ಕೂಡ ಬಹಳಷ್ಟು ಉತ್ತರ ಭಾರತೀಯರು ಬಂದು ಸೇರಿಕೊಂಡಿದ್ದಾರೆ.
ಆ ಸಂಖ್ಯೆ ಕನ್ನಡಿಗರ ದಿನನಿತ್ಯದ ಚಟುವಟಿಕೆಗಳಲ್ಲಿಯೇ ಎದ್ದು ಕಾಣುತ್ತಿದೆ. ಯಾವ ಹೋಟೆಲ್ ಗೆ ಹೋದರು, ಯಾವ ಅಂಗಡಿಗೆ ಹೋದರು, ಯಾವ ಮನರಂಜನಾ ಸ್ಥಳಕ್ಕೆ ಹೋದರು ಬಹುತೇಕ ಹಿಂದಿ ಭಾಷಿಕರು ಕಾಣಿಸುತ್ತಿದ್ದಾರೆ. ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲೂ ಅವರೇ ತುಂಬುತ್ತಿದ್ದಾರೆ. ಆ ಸಂಖ್ಯೆ ಹೆಚ್ಚಾದಾಗ ಸ್ಥಳೀಯ ಸಂಸ್ಕೃತಿ, ಭಾಷೆ, ಉಡುಗೆ ತೊಡುಗೆ, ಆಹಾರ ಮುಂತಾದವುಗಳ ವಿಷಯದ ಮೇಲೆ ಅನಧಿಕೃತವಾಗಿ ದಾಳಿಯಂತ ಒತ್ತಡ ಹೆಚ್ಚಾಗುತ್ತಿದೆ. ಅದು ಸ್ಥಳೀಯರ ಗಮನಕ್ಕೂ ಬರುತ್ತಿದೆ.
ಈ ನಡುವೆ ಕೇಂದ್ರ ಸರ್ಕಾರದಿಂದ ಹಿಂದಿ ಭಾಷೆಯ ಒತ್ತಾಯದ ಹೇರಿಕೆ, ಅಲ್ಲಲ್ಲಿ ಕಿಡಿಗೇಡಿ ಉತ್ತರ ಭಾರತೀಯರ ಕೆಲವು ಸಣ್ಣಪುಟ್ಟ ಘಟನೆಗಳು ಮಾಧ್ಯಮದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ ಅದು ಕನ್ನಡಿಗರಲ್ಲಿ ಹೆಚ್ಚು ಹೆಚ್ಚು ಆಕ್ರೋಶವನ್ನುಂಟು ಮಾಡುತ್ತಿದೆ. ಇದು ಮುಂದಿನ ಹಂತಕ್ಕೆ ಹೋಗುವ ಅಪಾಯಕಾರಿ ಹಂತ ತಲುಪುವ ಮೊದಲೇ ಸರ್ಕಾರ ಏನಾದರೂ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ.
ಹೀಗೇ ಅತಿಯಾದ ವಲಸೆ ಮುಂದುವರಿದರೆ ಇಲ್ಲಿನ ಸ್ಥಳೀಯ ಸಾಂಸ್ಕೃತಿಕ ವ್ಯವಸ್ಥೆಗೆ ಧಕ್ಕೆಯಾಗುವುದು ಶತಸಿದ್ಧ. ಭಾರತ ಒಂದು ಒಕ್ಕೂಟ ವ್ಯವಸ್ಥೆ. ಇಲ್ಲಿ ರಾಜ್ಯಗಳ ಮಧ್ಯೆ ವಲಸೆಗೆ ಯಾವುದೇ ನೀತಿ ನಿಯಮ ಅಥವಾ ಮಿತಿ ಇಲ್ಲ. ಆದರೆ ವಲಸೆಗೆ ಒಂದು ಮಿತಿ ಖಂಡಿತ ಇರಲೇಬೇಕು. ಗರಿಷ್ಠ ಶೇಕಡ 20 ರಷ್ಟು ವಲಸೆಯನ್ನು ಯಾವುದೇ ಸಂಸ್ಕೃತಿ ಸಾಮಾನ್ಯವಾಗಿ ತಡೆದುಕೊಳ್ಳಬಹುದು. ಅದಕ್ಕಿಂತ ಹೆಚ್ಚಾಗಿ ಯಾವುದೇ ಕಾರಣದಿಂದಾದರೂ ವಲಸೆ ಹೆಚ್ಚಾಗಿ ಸ್ಥಳೀಯ ಜನಸಂಖ್ಯೆಯ ಮೇಲೆ, ಸಂಸ್ಕೃತಿಯ ಮೇಲೆ ಒತ್ತಡ ಹೆಚ್ಚಾದರೆ ಆಗ ಘರ್ಷಣೆ ಪ್ರಾರಂಭವಾಗುತ್ತದೆ. ಅದರಲ್ಲೂ ಉದ್ದೇಶಪೂರ್ವಕವಾಗಿ ಭಾಷೆ ಮೇಲೆ, ಧರ್ಮದ ಮೇಲೆ ರಾಜಕೀಯವಾಗಿ ಒತ್ತಾಯ ಹೇರಿದರೆ, ಪರೋಕ್ಷ ಪ್ರೋತ್ಸಾಹ ದೊರೆತರೆ, ಆಗ ಪರಿಣಾಮ ಮತ್ತಷ್ಟು ಭೀಕರವಾಗಲಿದೆ. ಕರ್ನಾಟಕದಲ್ಲಿ ಆ ಪರಿಸ್ಥಿತಿ ನಿಧಾನವಾಗಿ ಉದ್ಭವವಾಗುತ್ತಿದೆ. ದಯವಿಟ್ಟು ಆಡಳಿತ ಮಾಡುತ್ತಿರುವ ಎಲ್ಲಾ ರಾಜಕೀಯ ನೇತಾರರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಜೊತೆಗೆ ಹೋರಾಟಗಾರರು ಸಹ ಕೇವಲ ಘಟನೆಗಳ ವಿರುದ್ಧ ಹೋರಾಟ ಮಾತ್ರ ಮಾಡದೆ ಆಡಳಿತದ ಮೇಲೆ ಈ ವಿಷಯದಲ್ಲಿ ಗಮನಹರಿಸಿರುವಂತೆ ಸರ್ಕಾರದ ಮೇಲೆಯೇ ಹೆಚ್ಚು ಒತ್ತಡ ತರಬೇಕಾಗಿದೆ. ಎಲ್ಲೋ ಕೆಲವು ಘಟನೆಗಳನ್ನು ನಮ್ಮ ವೈಯಕ್ತಿಕ ನೆಲೆಯಲ್ಲಿ ತಡೆಗಟ್ಟಿ ಪ್ರತಿಭಟಿಸುವುದು ಸಾಕಾಗುವುದಿಲ್ಲ.
ಈ ವಲಸೆಯನ್ನು ನಿಯಂತ್ರಿಸಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಲು ಮತ್ತು ಪರ್ಯಾಯ ಮಾರ್ಗಗಳನ್ನು ತಿಳಿದುಕೊಳ್ಳಲು ಸರ್ಕಾರದ ಮೇಲೆ ಒತ್ತಡ ಹೇರಲೇಬೇಕಾಗಿದೆ. ವಲಸೆಯು ಯಾವುದೇ ಕಾರಣದಿಂದ ದೊಡ್ಡ ಪ್ರಮಾಣದಲ್ಲಿಯಾದರೆ ವಿಶ್ವದ ಯಾವುದೇ ನಾಗರಿಕತೆಯು ಉಳಿಯುವುದು ಕಷ್ಟ.
ಕುವೆಂಪು ಅವರ " ವಿಶ್ವಮಾನವ ಪ್ರಜ್ಞೆ " ಬಸವಣ್ಣನವರ " ಇವ ನಮ್ಮವ ಇವ ನಮ್ಮವ " ಎನ್ನುವ ಭಾವನೆ ಎಲ್ಲವೂ ನಮ್ಮ ರಕ್ಷಣೆಯ ಮೊದಲ ಆದ್ಯತೆಯ ನಿಬಂಧನೆಗೆ ಒಳಪಟ್ಟಿರುತ್ತದೆ. ನಾವು ಯಾರನ್ನೂ ದ್ವೇಷಿಸಬಾರದು, ಹಿಂಸಿಸಬಾರದು. ಆದರೆ ನಮ್ಮ ಅಸ್ಮಿತೆಗೆ, ಸ್ವಾಭಿಮಾನಕ್ಕೆ ಸಂಸ್ಕೃತಿಗೆ, ಸಹಜ ಜೀವನಶೈಲಿಗೆ ಹೊರಗಿನಿಂದ ಧಕ್ಕೆ ಉಂಟಾಗ ಅದನ್ನು ರಕ್ಷಿಸಿಕೊಳ್ಳುವುದು ನಮ್ಮ ಕರ್ತವ್ಯ, ಜವಾಬ್ದಾರಿ ಮತ್ತು ನಾಗರಿಕ ಸಾಮಾನ್ಯ ಪ್ರಜ್ಞೆ.
ಇಲ್ಲಿನ ನೀತಿ ನಿಯಮಗಳು, ಕಾನೂನು ಸುವ್ಯವಸ್ಥೆ ಮತ್ತು ನಮ್ಮ ಸಂಪೂರ್ಣ ರಕ್ಷಣೆಯ ಮಿತಿಯಲ್ಲಿ ವಲಸೆ ಇದ್ದಾಗ ಅವರನ್ನು ಅತಿಥಿಗಳಂತೆ ಸತ್ಕರಿಸುವುದು ಸಹ ನಮ್ಮ ಕರ್ತವ್ಯ. ಇದು ಈಗ ಮಿತಿ ಮೀರುತ್ತಿರುವುದರಿಂದ ನಮ್ಮ ಪ್ರತಿಭಟನೆ ಅವಶ್ಯ. ಈ ಕಾರಣದಿಂದಾಗಿಯೇ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷ ಹೆಚ್ಚು ಕಡಿಮೆ ಅನಿವಾರ್ಯವಾಗಿದೆ. ಏನ್ ನಿಟ್ಟಿನಲ್ಲಿ ಎಲ್ಲರೂ ಯೋಚಿಸಬೇಕಾಗಿದೆ.
ಇದು ಒಂದು ವೈಯಕ್ತಿಕ ಅಭಿಪ್ರಾಯ. ನೀಡಿದ ಮಾಹಿತಿಗಳಲ್ಲಿ ತಪ್ಪು ಇದ್ದರೆ ಒಪ್ಪಿಕೊಳ್ಳುವೆ, ಹಾಗೆಯೇ ಇದು ಅಂತಿಮವಲ್ಲ. ಈ ಬಗ್ಗೆ ವಾಸ್ತವ ನೆಲೆಯಲ್ಲಿ ಇನ್ನಷ್ಟು ಚರ್ಚೆಗಳನ್ನು ಆಹ್ವಾನಿಸುತ್ತಾ.... ಮನಸ್ಸುಗಳ ಅಂತರಂಗದ ಚಳವಳಿ ಸಹ ಜನರ ಒಟ್ಟು ಚಿಂತನೆ ಮತ್ತು ವ್ಯಕ್ತಿತ್ವಗಳನ್ನು ವಿಶಾಲ ಗೊಳಿಸುವ ನಿಟ್ಟಿನಲ್ಲಿ ಸದಾ ಕಾರ್ಯನಿರ್ವಹಿಸುತ್ತದೆ ಎಂದು ಪ್ರತಿಜ್ಞೆ ಮಾಡುತ್ತಾ.....
-ವಿವೇಕಾನಂದ. ಎಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!