* ತಾಯಿ, ಅಮ್ಮ ಎನ್ನುವ ಪದವೇ ರೋಮಾಂಚನ. ಮಾನವನಾಗಿ ಜನಿಸಿರುವ ಪ್ರತಿಯೋರ್ವನಿಗೂ ತಾಯಿ ದೇವಿಗೆ ಸಮ. ದೇವತೆಗಳಿಗೂ ತಾಯಿ ದೇವಿ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ತಾಯಿಯ ದೇಹ, ಮನಸ್ಸಿಗೆ ಯಾವತ್ತೂ ನೋವು, ಬೇನೆ ಕೊಡಬಾರದು. ನಿರಾಕಾರನಾದ ಭಗವಂತ ಕಣ್ಣಿಗೆ ಕಾಣಿಸದವನಾದರೆ, ಕಣ್ಣಿಗೆ ಕಾಣುವ ಜೀವಂತ ದೇವರು ತಾಯಿ, ಭಗವಂತನ ಕೊಡುಗೆಯಂತೆ.

* ತಾಯಿಯಿಲ್ಲದ ಮಕ್ಕಳನ್ನು ಅಮ್ಮನಿಲ್ಲದ ತಬ್ಬಲಿಗಳು ಎನ್ನುತ್ತೇವೆ. ಅವರನ್ನು ನೋಡುವಾಗ ಯಾಕೋ ಮನಸ್ಸು ಹಿಂಡುವುದು ಸಹಜ. ಆದರೆ ತಾಯಿ ಇದ್ದೂ, ಹೆತ್ತಮ್ಮನನ್ನು ತಬ್ಬಲಿ ಮಾಡುವವರನ್ನೂ ಈ ಸಮಾಜದಲ್ಲಿ ಬಹಳಷ್ಟು ನೋಡಿದ್ದೇವೆ, ಕೇಳಿದ್ದೇವೆ ಅಲ್ಲವೇ? ಉಸಿರು ನೀಡಿ, ಬಸಿರಲಿಟ್ಟು ಭೂಮಿಯ ಬೆಳಕನ್ನು ತೋರಿಸಲು ನೋವು ಅನುಭವಿಸಿದ ತಾಯಿಯನ್ನು ಮರೆಯದಿರೋಣ ಸ್ನೇಹಿತರೇ.

* ಅಮ್ಮನ ಮಡಿಲು ಕರುಣೆಯ ಕಡಲು. ಅಮ್ಮ ಶ್ರೀಗಂಧದ ಘಮಲು. ಅಮ್ಮನ ಸೆರಗಿನ ಮರೆಯಲ್ಲಿ ಭದ್ರತೆಯ ಭಾವ. ಅಮ್ಮನ ಪ್ರೀತಿ ಭೋರ್ಗರೆವ ಶರಧಿ. ಅಮ್ಮನಿಗೆ ಅಮ್ಮನೇ ಸಾಟಿ.

* ಹೆಣ್ಣು ಮಕ್ಕಳೆಂದರೆ ಮನೆಯ ಭಾಗ್ಯವಂತೆ. ಆಕೆ ಮನೆಯ ನಂದಾದೀಪದಂತೆ ಮನೆಯ ಸೌಭಾಗ್ಯ. ಅನಗತ್ಯವಾಗಿ ಹೆಣ್ಣು ಮಗಳ ಕಣ್ಣಿನಲ್ಲಿ ನೀರು ಹಾಕಿಸಬಾರದೆಂದೂ, ಅದು ಮನೆಗೆ ಶ್ರೇಯಸ್ಸಲ್ಲವೆಂದು ಹೇಳುತ್ತಾರೆ. ಆಕೆಗೆ ಉತ್ತಮ ಗುಣನಡತೆಗಳನ್ನು ಕಲಿಸಿ, ಯೋಗ್ಯಳನ್ನಾಗಿ ‌ಬೆಳೆಸುವುದು ಹೆತ್ತವರ ಕರ್ತವ್ಯ ಮತ್ತು ಜವಾಬ್ದಾರಿ. ಹೆಂಡತಿ, ಮಗಳು, ಸಹೋದರಿ, ತಾಯಿ, ಅಜ್ಜಿಯಾಗಿ ಬದುಕಿನ ನಾನಾ ಹಂತಗಳಲ್ಲಿ ಆನಂದ, ಸಂತೋಷವಿತ್ತು, ಮನೆಯ ಗೃಹಿಣಿಯಾಗಿ ಜವಾಬ್ದಾರಿ ಹೊರುವ ನಮ್ಮ ಮನೆಯ ಹೆಣ್ಣು ಮಕ್ಕಳನ್ನು ಪ್ರೀತಿ, ಕಾಳಜಿಯಿಂದ ಜೋಪಾನ ಮಾಡಿ, ಗೌರವದಿ ನೋಡಿಕೊಳ್ಳೋಣ.

-ರತ್ನಾ ಕೆ. ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ