ವೀರಸಿರಿ ಕಲೆ ಬೀಡು ನನ್ನ ತಾಯ್ನಾಡು

ನಾಲಿಗೆಗೆ ನಿಲುಕದಾ ನುಡಿಗಳುಂಟು

ನುಡಿಗಳಿಗೂ ನಿಲುಕದಾ ಭಾವವುಂಟು

ಹಿರಿಯ ಕವಿ ವಿ.ಸೀತಾರಾಮಯ್ಯನವರ ಹೊನ್ನಿನ ಸಾಲುಗಳಿವು. ಕನ್ನಡದ ಕಾವ್ಯದಲ್ಲಿ ಹುರುಳು-ತಿರುಳು ಎರಡೂ ಇದ್ದು ಓದುಗರ ರಂಜಿಸಲೆಂಬ ಆಶಯ ಶ್ರೀಯುತರದು. ಬರೆದು, ಬರೆದು ಕಲಿಯಬೇಕು, ಓದಬೇಕು, ಅನಂತರ ಪ್ರಯತ್ನವಿರಲೆನ್ನುತ್ತಾರೆ. ಕವಿತೆ ಅಥವಾ ಬರೆಹ ಕವಿ ಹೃದಯದ ಭಾವನೆಗಳ ಸರಮಾಲೆ.ಅಂತರಂಗದ ಆಲೋಚನೆಗಳೇ ಅಕ್ಷರಗಳಾಗಬಹುದಲ್ಲವೇ? ಒಂದೊಂದು ಅಕ್ಷರಗಳಲ್ಲಿ ಕನ್ನಡದ ಮುತ್ತುಗಳಡಗಿವೆ. ಆ ಮುತ್ತಿನ ಮಣಿಗಳನ್ನು ಪೋಣಿಸುವ ಕೆಲಸವನ್ನು ನಾವು (ಕನ್ನಡಿಗರು) ಮಾಡಬೇಕು. ಮಕ್ಕಳಿಗೂ ಕಲಿಸಬೇಕು. ದೃಢಸಂಕಲ್ಪ ಬೇಕು ಅಷ್ಟೆ.

ಎತ್ತಿ ಮಡಿಲಲಿ ತೂಗಿ ಜಗಕೆಲ್ಲ ತೋರಿತಣಿವ

ಹಾಲ್ ಬೆಣ್ಣೆ ಹೆಜ್ಜೇನು ಕೆನೆಮೊಸರ ಮಾಡಿ

ಒಳ್ಪನುಪಚರಿಸಿ  ಉಪಚರಿಸಿ ಮಣಿವ

ಧನ್ಯದಾನದ ನೆಲೆಯು ನಮ್ಮ ಹೊನ್ನಾಡು

ಕನ್ನಡ ಭಾಷೆಯ ಬಗೆಗಿನ ಅಭಿಮಾನ ದೊಡ್ಡದು. ಹಿರಿಯರ ಆಶಯವನು ಈಡೇರಿಸುವಲ್ಲಿ ವರ್ತಮಾನದ ಸಾಹಿತಿಗಳ, ಬರವಣಿಗೆಯವರ ಸಹಕಾರ ಅತಿ ಅಗತ್ಯವಾಗಿ ಬೇಕಾಗಿದೆ. ತಾವು ಕಲಿತು ಇತರರಿಗೂ ಕಲಿಸುವ ಮನ ಮಾಡಬೇಕು. ಕಲೆ, ಕವನವೆಂದರೆ ಅದೊಂದು ಸಿಹಿಯಾದ ಖಾದ್ಯದ ಪಾಕವಿದ್ದಂತೆ. ಈ ಮರ್ತ್ಯವೇ ಒಂದು ಒರೆಗಲ್ಲು ಇದ್ದಂತೆ. ಇದರೆದುರು ನಿಂತು ಗೆಲ್ಲುವುದು ನಮ್ಮ ಜಾಣತನ. ಹೀಗೆಯೇ ಬರೆ, ಹಾಗೆಯೇ ಬರೆ ಮೊದಮೊದಲು ಬೇಡ, ಬರವಣಿಗೆಯಾಗಲಿ. ದೃಷ್ಟಿಯಲಿ ಸೃಷ್ಟಿ ಅಲ್ಲವೇ? ಮೊದಲ ಪ್ರೀತಿ,ಒಲವು ಕನ್ನಡವಾಗಲಿ. ಬರೆಯೋಣ-ಕಲಿಯೋಣ.

(ಸಂಗ್ರಹ)

-ರತ್ನಾ ಕೆ ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ