ಇದು ಬಳಕೆದಾರರ ವೇದಿಕೆ ಪತ್ರ ಬರೆಯದಿದ್ದರೂ ಪರಿಹಾರವಾದ ಪ್ರಕರಣ.
ಕುಂದಾಪುರ ತಾಲೂಕು ಗೋಪಾಡಿಯ ಯು.ಕಾಂತರಾಜ್ ಇವರು ಮಿಟಾ ಮ್ಯಾನ್ ಪವರ್ ಕನ್ಸಲ್ಟೆಂಟ್ಗೆ
ತಾ. 13-6-98ರಂದೇ ಪಾಸ್-ಪೋರ್ಟ್ ಕೊಟ್ಟಿದ್ದರು. ಆ ಬಗ್ಗೆ ಸ್ವೀಕೃತ ರಶೀದಿಯನ್ನೂ ಪಡೆದಿದ್ದರು. ಅಸೌಖ್ಯದ ಕಾರಣ ಅವರು ವಿದೇಶಕ್ಕೆ ಹೋಗುವ ಆಲೋಚನೆಯನ್ನು ಕೈಬಿಟ್ಟರು. ತನ್ನ ಸ್ನೇಹಿತರೊಬ್ಬರೊಡನೆ ಒಂದು ಅಧಿಕಾರ ಪತ್ರ (Authorisation Letter) ನೀಡಿ, ಸ್ನೇಹಿತರ ಕೈಯಲ್ಲಿ ಪಾಸ್-ಪೋರ್ಟ್ ಕೊಟ್ಟು ಕಳುಹಿಸುವಂತೆ ತಿಳಿಸಿದರು. ಆದರೆ ಮೂರು ನಾಲ್ಕು ಬಾರಿ ಮಂಗಳೂರಿಗೆ ಹೋದರೂ ಸದ್ರಿ ಸಂಸ್ಥೆಯವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಕೊನೆಗೊಮ್ಮೆ ಅವರನ್ನು ಭೇಟಿ ಮಾಡಿದ ಸ್ನೇಹಿತರೊಡನೆ ಸಂಸ್ಥೆಯವರು ಹೇಳಿದ್ದೇನು ಗೊತ್ತೆ?“ಕಾಂತರಾಜ್ ಅವರು ತನ್ನ ಅಸೌಖ್ಯದ ಬಗ್ಗೆ ವೈದ್ಯಕೀಯ ಪ್ರಮಾಣಪತ್ರವನ್ನು ಒದಗಿಸಿದರೆ ಅವರ ಪಾಸ್-ಪೋರ್ಟ್ ಹಿಂತಿರುಗಿಸಲಾಗುವುದು” ಎಂದು. ಇದು ಯಾವ ಕಾನೂನು ಎಂದು ಕಾಂತರಾಜರಿಗೆ ತಿಳಿದುಕೊಳ್ಳಲಾಗದಿದ್ದರೂ ಪಾಸ್-ಪೋರ್ಟ್ ಹಿಂದಕ್ಕೆ ಪಡೆಯಬೇಕಾದುದರಿಂದ ವೈದ್ಯಕೀಯ ಪ್ರಮಾಣ ಪತ್ರವನ್ನೂ ಮಾಡಿಸಿ ಕಳುಹಿಸಿ ಕೊಟ್ಟರು.
ಇಷ್ಟೆಲ್ಲ ಮಾಡಿದರೂ ಪಾಸ್-ಪೋರ್ಟ್ ಮಾತ್ರ ಬರಲೇ ಇಲ್ಲ. ನಿರುಪಾಯರಾದ ಕಾಂತರಾಜರು ತಾ. 11-6-99ರಲ್ಲಿ ಅವರಿಗೊಂದು ಪತ್ರ ಬರೆದು ಕೆಳಗಡೆಯಲ್ಲಿ ಬಳಕೆದಾರರ ವೇದಿಕೆಯ ಹೆಸರನ್ನು ಹಾಕಿದರು. ಈ ಪತ್ರ ತಲುಪಿ ಕೇವಲ ಹತ್ತೇ ದಿನಗಳಲ್ಲಿ ನೋಂದಣಿ ಅಂಚೆಯಲ್ಲಿ ಪಾಸ್-ಪೋರ್ಟ್ ಕಾಂತರಾಜರ ಕೈಸೇರಿತು. ಆ ಸಂಸ್ಥೆಯು ಒಂದೇ ಒಂದು ಪತ್ರ ಬರೆಯಲೂ ವೇದಿಕೆಗೆ ಅವಕಾಶ ನೀಡಲಿಲ್ಲ
ಹಕ್ಕು ಹೋರಾಟ 3. (ಆ) ಬಾಕಿ ಉಳಿದ ಜಿ.ಪಿ.ಎಫ್. ಹಣ ಬಂತು
ಇದು ಬಳಕೆದಾರರ ವೇದಿಕೆ ಪತ್ರ ಬರೆಯದಿದ್ದರೂ ಪರಿಹಾರವಾದ ಇನ್ನೊಂದು ಪ್ರಕರಣ.
ಬೈಂದೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದ ಜಿ.ಎಸ್.ಅಬ್ದುಲ್ ಖಾದರ್ ಇವರು ತಾ. 30-5-98ರಂದು ವಯೋ ನಿವೃತ್ತಿ ಹೊಂದಿದರು. ತನ್ನ ಸಾಮಾನ್ಯ ಭವಿಷ್ಯ ನಿಧಿ (G.P.F.)ಯ ಹಣವನ್ನು ಹಿಂತಿರುಗಿಸಬೇಕೆಂದು ಕೋರಿ ನಿವೃತ್ತಿ ದಿನಾಂಕಕ್ಕಿಂತ ಒಂದು ತಿಂಗಳು ಮುಂಚಿತವಾಗಿಯೇ ಕರ್ನಾಟಕ ಸರಕಾರದ ಮಹಾಲೇಖಪಾಲರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಹಣ ಬಂದದ್ದು ಮಾತ್ರ ಜೂನ್ ತಿಂಗಳಲ್ಲಿ.
ಹಣವಂತೂ ಬಂತು. ಆದರೆ ಪೂರ್ತಿ ಬರಲಿಲ್ಲ. ಭಾಗಶ: ಹಣ ಮಾತ್ರ ಕಳುಹಿಸಿದ್ದರು. ಮಹಾಲೇಖಪಾಲರ ಕಚೇರಿಯಿಂದಲೇ ಬಂದಿದ್ದ Account Statement ಪ್ರಕಾರ ಇವರಿಗೆ ಸಲ್ಲಬೇಕಾಗಿದ್ದ ಹಣ ರೂ. 1,02,614/-. ಆದರೆ ಕಳುಹಿಸಿದ್ದು
ರೂ. 76,489/- ಮಾತ್ರ. ರೂ. 26,125/- ಇನ್ನೂ ಬರಬೇಕಾಗಿತ್ತು. ಉಳಿದ ಹಣವನ್ನು ಕಳುಹಿಸಿಕೊಡಬೆಕೆಂದು ಇವರು ಮೂರು ಮನವಿ ಪತ್ರಗಳನ್ನು ಕಳುಹಿಸಿಕೊಟ್ಟರು. ಮಹಾಲೇಖಪಾಲರ ಮೇಲೆ ಏನೂ ಪರಿಣಾಮವಾಗಲಿಲ್ಲ. ನಾಲ್ಕನೇ ಮನವಿ ಪತ್ರದಲ್ಲಿ “ಯಥಾ ನಕಲನ್ನು ಸಂಚಾಲಕರು,ಬಳಕೆದಾರರ ವೇದಿಕೆ, ಬಸ್ರೂರು ಇವರಿಗೆ ಕಳುಹಿಸಲಾಗಿದೆ” ಎಂದು ಬರೆದರು.
ಕೂಡಲೇ ಎಚ್ಚರಗೊಂಡ ಮಹಾಲೇಖಪಾಲರು ಹಣ ಕಳುಹಿಸಿ ಕೊಟ್ಟಿದ್ದಾರೆಂದು ಅಬ್ದುಲ್ ಖಾದರ್ರವರು ವೇದಿಕೆಗೆ ಪತ್ರ ಬರೆದು ತಿಳಿಸಿದ್ದಾರೆ. ವೇದಿಕೆ ಒಂದೇ ಒಂದು ಪತ್ರವನ್ನೂ ಬರೆಯಲಿಲ್ಲ ಎಂಬುದನ್ನು ಇಲ್ಲಿ ಗಮನಿಸಬಹುದಾಗಿದೆ.
ಸಂಗ್ರಹ: ಬಳಕೆದಾರರ ಶಿಕ್ಷಣ - ಪಾಕ್ಷಿಕ
ಫೋಟೋ: ಭಾರತೀಯ ಪಾಸ್-ಪೋರ್ಟ್
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!