ಹಕ್ಕು ಹೋರಾಟ 4(ಅ): ತುಟ್ಟಿಭತ್ತೆ ಬಾಕಿಯನ್ನು ಜಮಾ ಮಾಡಿದರು

ಇದು ವೇದಿಕೆಯ ಹೆಸರು ನೋಡಿಯೇ ಇತ್ಯರ್ಥಗೊಂಡ ಪ್ರಕರಣ.

ರತ್ನಾಕರ ಬೈಂದೂರು ಎನ್ನುವವರ ವಾಸ ಸ್ಥಳ ಗಂಗೊಳ್ಳಿ. ಇವರು ಮಾಜಿ ಸೈನಿಕರು. ಗಂಗೊಳ್ಳಿಯ ಕೆನರಾ ಬ್ಯಾಂಕ್ ಶಾಖೆಯಲ್ಲಿರುವ ಸೇವಿಂಗ್ಸ್ ಖಾತೆಗೆ ಇವರ ಪೆನ್ಶನ್ ಹಣ ಜಮೆಯಾಗುತ್ತಿತ್ತು.

ಭಾರತ ಸರಕಾರವು 98 ಜುಲೈಯಲ್ಲಿ ಹೊರಡಿಸಿದ ಆದೇಶದಂತೆ ತಾ. 1-1-96ರಿಂದ ಪೂರ್ವಾನ್ವಯವಾಗುವಂತೆ ಮಾಜಿ ಸೈನಿಕರ ತುಟ್ಟಿ ಭತ್ತೆಯಲ್ಲಿ ಹೆಚ್ಚಳವುಂಟಾಗಿತ್ತು. ರತ್ನಾಕರ ಇವರು ಹೆಚ್ಚಳದ ತುಟ್ಟಿ ಭತ್ತೆಯು ತನ್ನ ಖಾತೆಗೆ ಜಮಾ ಮಾಡಲಾಗಿದೆಯೇ ಎಂದು ಪ್ರತಿ ತಿಂಗಳಲ್ಲಿಯೂ ಬ್ಯಾಂಕಿನಲ್ಲಿ ವಿಚಾರಿಸುತ್ತಿದ್ದರು. ಹೀಗೆ ಐದಾರು ತಿಂಗಳ ತನಕ ವಿಚಾರಿಸಿದರೂ ಇವರ ಖಾತೆಗೆ ಹಣ ಜಮೆಯಾಗಿರಲೇ ಇಲ್ಲ.

1999ರ ಮಾರ್ಚಿ ತಿಂಗಳಲ್ಲಿ ಮತ್ತು ಎಪ್ರಿಲ್ ತಿಂಗಳಲ್ಲಿ ಬ್ಯಾಂಕ್ ಅಧಿಕಾರಿಗೆ ಪತ್ರ ಬರೆದರು. ಆದರೂ ಇವರ ಖಾತೆಗೆ ಜಮೆ ಮಾಡಲಿಲ್ಲ. ಆದ್ದರಿಂದ ತಾ.10-6-99ರಲ್ಲಿ ಬ್ಯಾಂಕ್ ಮೆನೇಜರರಿಗೆ ಇನ್ನೊಂದು ಪತ್ರ ಬರೆದು ಯಥಾಪ್ರತಿಯನ್ನು ಬಸ್ರೂರು ಬಳಕೆದಾರರ ವೇದಿಕೆಗೆ ಕಳುಹಿಸಿದರು. ಈ ಪತ್ರವು ಮಾತ್ರ ಸರಿಯಾಗಿ ಕೆಲಸ ಮಾಡಿತು. ವೇದಿಕೆಯಿಂದ ಅನುಸರಣಾ ಪತ್ರ ಬರೆಯುವ ಮೊದಲೇ ರತ್ನಾಕರರು ವೇದಿಕೆಗೆ ಪತ್ರ ಬರೆದು ತನಗೆಬರಬೇಕಾಗಿರುವ ತುಟ್ಟಿ ಭತ್ತೆ ಬಾಕಿ ರೂ. 2,460/- ನಾಲ್ಕೇ ದಿನಗಳಲ್ಲಿ ತನ್ನ ಖಾತೆಗೆ ಜಮಾ ಮಾಡಿದ್ದಾರೆಂದು ತಿಳಿಸಿದ್ದಾರೆ.

ತನಗೆ ಬಹಳಷ್ಟು ಹಿಂದೆಯೇ ಕೊಡಬೇಕಾದ ಹಣವನ್ನು ತಡವಾಗಿ ಕೊಟ್ಟಿದ್ದರಿಂದ ವಿಳಂಬಿತ ಅವಧಿಗೆ ಬಡ್ಡಿ ಕೊಡಬೇಕೆಂದು ಕೇಳಿ ಶಾಖಾ ಮೆನೇಜರರಿಗೆ ಇದೀಗ ಇನ್ನೊಂದು ಪತ್ರ ಬರೆದು ಎರಡನೇ ಹೋರಾಟ ಪ್ರಾರಂಭಿಸಿದ್ದಾರೆ. ಸೈನಿಕನಾಗಿರುವಾಗ ವೈರಿಗಳ ವಿರುದ್ಧ ಹೋರಾಟ, ನಿವೃತ್ತನಾದ ಮೇಲೆ ನಮ್ಮವರ ವಿರುದ್ಧವೇ ಹೋರಾಟ!

ಹಕ್ಕು ಹೋರಾಟ 4 (ಆ): ಒಂದೇ ದಿನದಲ್ಲಿ ಹೊಲಿಗೆ ಬಿಚ್ಚಿದ ರೈನ್ ಕೋಟ್

ಇದು ವೇದಿಕೆಯ ಹೆಸರು ನೋಡಿಯೇ ಇತ್ಯರ್ಥಗೊಂಡ ಇನ್ನೊಂದು ಪ್ರಕರಣ.

ಮಂಗಳೂರಿನ ಗೋಪಾಲಕೃಷ್ಣ ಎಂಬುವವರಿಂದ ಬಸ್ರೂರು ವೇದಿಕೆಗೆ ಒಂದು ಪತ್ರ ಬಂದಿತ್ತು. ಅದು ಜಿಲ್ಲಾ ಸಾರ್ವಜನಿಕ ದೂರು ಇತ್ಯರ್ಥ ಅಧಿಕಾರಿಗೆ ಬರೆದ ದೂರಿನ ಪ್ರತಿಯಾಗಿದ್ದು, ಅದರಲ್ಲಿ ಅವರು ತಾನು ರೂ. 325/- ಕೊಟ್ಟು ಖರೀದಿಸಿದ್ದ ಪ್ರಸಿದ್ಧ ಕಂಪೆನಿಯೊಂದರ ರೈನ್ ಕೋಟ್, ಖರೀದಿಸಿದ ಒಂದೇ ದಿನದಲ್ಲಿ ಹೊಲಿಗೆ ಬಿಚ್ಚಿ ಮಳೆ ನೀರು ಒಳಗೆ ಬರುತ್ತಿದ್ದುದಾಗಿ ದೂರಿದ್ದರು.

ಮಾರನೇ ದಿನ ಬೆಳಿಗ್ಗೆಯೇ ಅವರು ಅಂಗಡಿಗೆ ಹೋಗಿ, ಹೊಲಿಗೆ ಬಿಚ್ಚಿರುವುದನ್ನು ಅವರಿಗೆ ತೋರಿಸಿ, ಅದನ್ನು ಬದಲಾಯಿಸಿ ಕೊಡುವಂತೆ ಕೇಳಿದಾಗ ಅಂಗಡಿ ಮಾಲೀಕರು ಅದನ್ನು ಬದಲಾಯಿಸಲು ಅಥವಾ ಹಿಂದೆ ಪಡೆಯಲು ನಿರಾಕರಿಸಿದ್ದರು.

ದುಬಾರಿ ಬೆಲೆಯ ರೈನ್ ಕೋಟ್ ಕೂಡಾ ಒಂದೇ ದಿನದಲ್ಲಿ ಹೊಲಿಗೆ ಬಿಟ್ಟಿರುವುದರಿಂದ, ಗ್ರಾಹಕರಿಗೆ ತಾವು ಪಡೆದ ವಸ್ತುವಿನ ಬಗ್ಗೆ ಯಾವುದೇ ಭದ್ರತೆ ಇಲ್ಲದಂತಾಗಿದೆ. ಆದುದರಿಂದ ತನಗೆ ಆಗಿರುವ ನಷ್ಟ ಭರಿಸಿ, ಅಂಗಡಿ ಮಾಲೀಕರಿಗೆ ಸೂಕ್ತ ಎಚ್ಚರಿಕೆ ನೀಡುವಂತೆ ಅಧಿಕಾರಿಯನ್ನು ಬಳಕೆದಾರರು ವಿನಂತಿಸಿದ್ದರು. ದೂರಿನ ಯಥಾ ಪ್ರತಿಗಳನ್ನು ಬಸ್ರೂರು ವೇದಿಕೆಗೂ, ಅಂಗಡಿ ಮಾಲೀಕರಿಗೂ ಕಳುಹಿಸಿಕೊಟ್ಟರು. ದೂರಿನ ಪ್ರತಿ ತಲುಪಿದ ಕೂಡಲೇ ಅಂಗಡಿ ಮಾಲೀಕರು ಎಚ್ಚೆತ್ತು, ರೈನ್ ಕೋಟನ್ನು ಹಿಂದಕ್ಕೆ ಪಡೆದು ಗ್ರಾಹಕರಿಗೆ ಅವರ ಹಣ ಹಿಂದಿರುಗಿಸಿದರು!

ಪ್ರಾತಿನಿಧಿಕ ಫೋಟೋ: ರೈನ್ ಕೋಟ್

ಸಂಗ್ರಹ: ಬಳಕೆದಾರರ ಶಿಕ್ಷಣ - ಪಾಕ್ಷಿಕ, 20-7-1999