“ನೆಲಗಡಲೆ ಬೆಳೆಯಿರಿ. ಲಾಭ ಪಡೆಯಿರಿ. ನಿಮ್ಮ ಮಣ್ಣು ಚೆನ್ನಾಗಿದೆ” ಎಂದು ಕೃಷಿ ಇಲಾಖೆಯ ಅಧಿಕಾರಿಗಳಿಂದ ಸಲಹೆಯ ಹೊಸ ಅವತಾರ ಬಂತು! ಹೊಳೆಯ ಬದಿಯ ಗದ್ದೆಗಳಲ್ಲಿ ನೆಲಗಡಲೆ ಬಿತ್ತಿದೆ. ಇಡೀ ಹಳ್ಳಿಯಲ್ಲಿ ನನ್ನದು ಮಾತ್ರ ನೆಲಗಡಲೆ ಕೃಷಿ. ಆಗ ಎಲ್ಲಿಂದ ಬಂತೋ ಏನೋ ಇರುವೆಗಳ ಸಾಲು ಸಾಲು! ನೆಲಗಡಲೆ ಬೀಜಗಳನ್ನು ತಿಂದು ಮುಕ್ಕಿದವು. ಅವುಗಳ ಬಾಯಿಗೆ ಸಿಕ್ಕದ ಕೆಲವು ಬೀಜಗಳು ಮೊಳೆತವು. ಇಲ್ಲಿಗೆ ನೆಲಗಡಲೆಯ ಅಧ್ಯಾಯಕ್ಕೆ ತೆರೆಬಿತ್ತು.

ಹಲವು ವರುಷಗಳ ಬಳಿಕ ಜೋಳ ಬೆಳೆದೆ. ಕಳ್ಳರ ಭಯವೂ ಇತ್ತು. ಆಳೆತ್ತರ ಬೆಳೆದ ಸಸಿಗಳಲ್ಲಿ ಹಾಲು ತುಂಬಿ ಕಾಳುಕಟ್ಟುವ ಹೊತ್ತಿನಲ್ಲಿ ಗಿಳಿಗಳ ಸೈನ್ಯ ಆಕ್ರಮಿಸಿತು. ನೇರವಾಗಿ ಹೊಲಕ್ಕಿಳಿದ ಅಸಂಖ್ಯಾತ ಗಿಳಿಗಳು ತೆನೆಗಳನ್ನು ಕಬಳಿಸಿದುವು. ಹೊಲದಲ್ಲಿ ಕೊನೆಗೆ ಉಳಿದದ್ದು ಎರಡು ಬುಟ್ಟಿಯಷ್ಟು ಜೋಳದ ತೆನೆಗಳು ಮಾತ್ರ.

‘ಸೀ-ಐಲ್ಯಾಂಡ್’ ಎಂಬ ಹತ್ತಿ ತಳಿಯತ್ತ ಆಕರ್ಷಿತನಾದೆ. ಶುದ್ಧ ಹತ್ತಿಯಿದು. ಆಗ ಎಕ್ಕಾರು ಸುಬ್ಬಯ್ಯ ಹೆಗಡೆಯವರು ಸೀ ಐಲ್ಯಾಂಡ್ ಹತ್ತಿ ಬೆಳೆಗಾರರ ಸಂಘದ ಅಧ್ಯಕ್ಷರಾಗಿದ್ದರು. ಅವರ ಸೂಚನೆಯಂತೆ ಹತ್ತಿ ಬೆಳೆ ಮಾಡಿದೆ. ಲಾಭವೂ ಆಗಲಿಲ್ಲ. ನಷ್ಟವೂ ಆಗಲಿಲ್ಲ. ಸರಕಾರ ಹತ್ತಿ ಬೆಳೆಯ ಯೋಜನೆಯನ್ನು ರದ್ದು ಮಾಡಿತು. ಒಂದು ವೇಳೆ ಹತ್ತಿ ಬೆಳೆ ಬೆಳೆಸಿದರೂ ಮಾರಾಟಕ್ಕೆ ಅರಸೀಕೆರೆಗೆ ಹೋಗಬೇಕಾಗಿತ್ತು. ಅದಲ್ಲದೆ ವರುಷಕ್ಕೆ ನಾಲ್ಕೈದು ಬಾರಿ ಪೀಡೆನಾಶಕ ಸಿಂಪಡಿಸಬೇಕಾಗಿತ್ತು.

ಆ ರಾಸಾಯನಿಕಗಳ ದುಷ್ಪರಿಣಾಮದಿಂದ ಜೀವಕ್ಕೆ ಕುತ್ತು ಬರಬಹುದೆಂದು ತಿಳಿದಿತ್ತು. ಒಮ್ಮೆ ಹೀಗಾಯಿತು – ಹತ್ತಿಗೆ ಪೀಡೆನಾಶಕ ದ್ರಾವಣ ಸಿಂಪಡಿಸಲು ಒಬ್ಬನನ್ನು ನೇಮಿಸಿದ್ದೆ. ಆತ ಅದನ್ನು ಸಿಂಪಡಿಸುತ್ತಿದ್ದ. ನಾನು ಮನೆಗೆ ಹೋಗಿ ಬರುವಷ್ಟರಲ್ಲಿ ಆತ ನಾಪತ್ತೆ. ಹುಡುಕಿದೆ. ಆತ ತಲೆ ತಿರುಗುವುದೆಂದು ಮರದ ಕೆಳಗೆ ಒರಗಿದ್ದ. ಇದು ನಾನು ಹತ್ತಿ ಬೆಳೆಗೆ ಸಿಂಪಡಿಸಿದ ಪೀಡೆನಾಶಕದ ಪರಿಣಾಮವೆಂದು ತಿಳಿಯಿತು. ಅಲ್ಲಿಗೆ ಹತ್ತಿ ಕೃಷಿಯ ಸಹವಾಸವನ್ನು ಪೂರ್ತಿ ತೊರೆದೆ.

ನಂತರ ಕಬ್ಬಿನ ಸರದಿ. ಎರಡು ವರುಷ ಲಾಭವಾಯಿತು. ಒಂದು ಎಕ್ರೆಗೆ ಕನಿಷ್ಠ ಮೂವತ್ತು ಟನ್ ಬರಬೇಕು. ನಾನು 40-45 ಟನ್ ಇಳುವರಿ ತೆಗೆದೆ. ನಂತರದ ವರುಷದಲ್ಲಿ ಇಳುವರಿ ಕಡಿಮೆಯಾಯಿತು. ನರಿಯ ಉಪದ್ರವೂ ಜೋರಿತ್ತು. ಬ್ರಹ್ಮಾವರ ಸಕ್ಕರೆ ಕಾರ್ಖಾನೆಗೆ ಕಬ್ಬಿನ ಸರಬರಾಜು. ಕೊನೆಗೆ ಹಣ ಕೊಡಲು ವಿಳಂಬಿಸಿ ನಮ್ಮನ್ನು ಸತಾಯಿಸಿದರು! (ಈಗಲೂ ಕಬ್ಬು ಬೆಳೆಗಾರರಿಗೆ ಇದೇ ಪಾಡು. 2003ರಲ್ಲಿ ಈ ಕಷ್ಟ ಸಹಿಸಲಾಗದೆ ಕಬ್ಬು ಬೆಳೆಗಾರರೊಬ್ಬರು ಆತ್ಮಹತ್ಯೆ ಮಾಡಿಕೊ೦ಡರು.) ಅದರ ವಸೂಲಿಗಾಗಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದೆ. ಅಂತೂ ಹಣ ಸಿಕ್ಕಿತು.

ಕೃಷಿಯನ್ನು ಬದಲಿಸಿ ಬದಲಿಸಿ ಸುಸ್ತಾಯಿತು. ಮರಗಳನ್ನು ಬೆಳೆದರೆ ಹೇಗೆ? ಮಂಗಳೂರಿನ ಪಿ.ಎಸ್.ರೈಗಳು ಬೀಟಿ ಮರದ ಬಗ್ಗೆ ಹೇಳಿದರು. ಇಲಾಖೆಯ ಕಚೇರಿಗೆ ಭೇಟಿ. ಅಧಿಕಾರಿಗಳ ಸಂಪರ್ಕ.

ಆಗ ಅಣ್ಣ ಒಂದು ಘಟನೆ ಹೇಳಿದ. ವರ್ಕಾಡಿಯ ಒಬ್ಬ ಭಟ್ಟರ ಮನೆಯ ಅಂಗಳದಲ್ಲೊಂದು ಹಲಸಿನ ಮರವಿತ್ತು. ಒಮ್ಮೆ ಮಧ್ಯರಾತ್ರಿ ಹೊತ್ತಿಗೆ ಗರಗಸದ ಸದ್ದು ಕೇಳಿಸಿತು. ಭಟ್ಟರು ಬಾಗಿಲು ತೆಗೆದು ನೋಡಿದಾಗ ಹತ್ತಿಪ್ಪತ್ತು ಮಂದಿ ಮರವನ್ನು ತುಂಡರಿಸುತ್ತಿದ್ದರು. ಹತ್ತಿರದಲ್ಲಿ ಲಾರಿಯೂ ನಿಂತಿತ್ತು. ಇವರು ಪ್ರತಿಭಟಿಸಲು ಮುಂದಾದಾಗ ಜೀವ ಬೆದರಿಕೆ ಹಾಕಿದರು. ಜೀವದಾಸೆಯಿಂದ ಭಟ್ಟರು ಬಾಗಿಲು ಹಾಕಿ, ತಮ್ಮ ಅಂಗಳದ ಮರವು ಕಳ್ಳರ, ಭಯೋತ್ಪಾದಕರ ಮೂಲಕ ಲಾರಿಯೇರುತ್ತಿರುವುದನ್ನು ಕಣ್ಣಾರೆ ಕಂಡು ಕಣ್ಣೀರು ಸುರಿಸಿದರು. ಹಾಗಾಗಿ ನಾವು ಬೆಳೆಸಿದ ಮರವೇ ನಮಗೆ ಸಿಗುವುದಿಲ್ಲ. ಅಣ್ಣನ ಮಾತು ಸತ್ಯ ಎಂದು ತೋರಿತು.

ಒಂದು ವೇಳೆ ಮರ ಬೆಳೆದರೂ ಇಲಾಖೆಯ ಕಿರಿಕಿರಿ. ನನ್ನ ತೋಟದಲ್ಲಿದ್ದ ಐದಾರು ಗಂಧದ ಮರಗಳನ್ನು ನಾನಿಲ್ಲದಿದ್ದ ವೇಳೆಯಲ್ಲಿ ಬುಡ ಸಹಿತ ಹೊತ್ತೊಯ್ದರು. ಯಾರನ್ನು ಬೈಯಲಿ? ಮ್ಯಾಂಜಿಯಂ, ಸಾಗುವಾನಿ.. .. ಮುಂತಾದ ಮರಗಳು ಹದಿನೈದು ವರುಷಗಳಲ್ಲಿ ಬೆಳೆದು ಕಡಿಯಲು ಸಿಗುತ್ತದೆ ಎಂದು ಪ್ರಚಾರ ಮಾಡಲಾಗುತ್ತದೆ. ಇದು ಸುಳ್ಳು. ಇಂತಹ ಮರಗಳು ಬೆಳೆಯಲು ಮೂವತ್ತು ವರುಷಗಳಾದರೂ ಬೇಕು. ಅವರದು ದಾರಿ ತಪ್ಪಿಸುವ ಪ್ರಚಾರ. ಹಾಗಾಗಿ ಮರ ಬೆಳೆಸುವ ಆಶೆ ಕಮರಿತು.

ಒಮ್ಮೆ ‘ಪೂರ್ಣ’ ಎಂಬ ರಾಗಿ ತಳಿ ಬೆಳೆಸಿದೆ. ಒಂದು ಎಕ್ರೆ ಭತ್ತ ಮಾಡುವ ನೀರಿನಲ್ಲಿ ಮೂರು ಎಕ್ರೆ ರಾಗಿ ಮಾಡಬಹುದು ಎಂದು ಮಹಾನುಭಾವರೊಬ್ಬರು ಹೇಳಿದರು. ನಂಬಿದೆ. ಇಳುವರಿ ಚೆನ್ನಾಗಿ ಬಂತು. ಆದರೆ ಹೇಳುವಂತಹ ಲಾಭವಾಗಲಿಲ್ಲ. ಜೋಳದ ಮತ್ತು ರಾಗಿಯ ರೊಟ್ಟಿಗಳು ಅನ್ನದೊಂದಿಗೆ ಹೊಟ್ಟೆಗೆ ಸೇರಿದುದೇ ಈ ಎಲ್ಲಾ ಪ್ರಯೋಗಗಳಿಂದ ನನಗಾದ ಲಾಭ.

ಫೋಟೋ: ಅಡ್ಡೂರಿನ “ಕೃಷ್ಣಾ ಫಾರ್ಮ್”ನಲ್ಲಿ ಶಿವಶಂಕರರಾಯರು 

ಆಕರ ಪುಸ್ತಕ: ಅಡ್ಡೂರು ಶಿವಶಂಕರರಾಯರ ಎಂಬತ್ತರ ಕೊಯ್ಲಿನ ಕಾಳುಗಳು