ದೇವಸ್ಥಾನಗಳ ವಾರ್ಷಿಕ ಜಾತ್ರೆಗಳು ದೂರದೂರಿನ ಜನರನ್ನು ಆಕರ್ಷಿಸುವುದು ಸಹಜ. ಆಯಾ ಗ್ರಾಮದ ಪ್ರತೀ ಮನೆಯಲ್ಲೂ ಸಂಭ್ರಮ. ನೆಂಟರಿಷ್ಟರು, ಹತ್ತಿರದ ಸಂಬಂಧಿಕರು ಒಟ್ಟಾಗಿ ಸೇರುತ್ತಿದ್ದರು. ಊಟ-ಉಪಚಾರ ಆತಿಥ್ಯಗಳಿಂದ ಮನೆಗಳಲ್ಲಿ ಹಬ್ಬದ ವಾತಾವರಣ.
ನಮ್ಮ ಊರಿನ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರೆಗೆ ಊರಿಗೆ ಊರೇ ಸೇರುತ್ತಿತ್ತು. ಆಗ ಹೆಚ್ಚಿನ ಮನೆಗಳಲ್ಲಿ ಸುಲಭವಾಗಿ ಆತಿಥ್ಯಕ್ಕೆ ಕಲ್ಲಂಗಡಿ (ಬಚ್ಚಂಗಾಯಿ) ಹೊರತು ಇತರ ಯಾವ ಹಣ್ಣೂ ಸಿಗುತ್ತಿರಲಿಲ್ಲ. ದೇವಸ್ಥಾನದ ಜಾತ್ರೆಯ ಹೊತ್ತಿನಲ್ಲಿ ಬಚ್ಚಂಗಾಯಿ ಸಮಾರಾಧನೆ ಯಥೇಷ್ಟ. ಆಗ ಹೋಟೇಲುಗಳು ವಿರಳ. ಕಬ್ಬಿನ ಹಾಲಿನ ಅಂಗಡಿಗಳು ಮತ್ತು ಸೋಜಿಯ (ಗೋಧಿ ಸಜ್ಜಿಗೆಯಿಂದ ಮಾಡಿದ ಬಿಸಿ ಪಾನೀಯ. ಈಗ ಇದು ಮಾಯವಾಗಿದೆ) ಅಂಗಡಿಗಳು ಕೆಲವೇ ಇದ್ದುವು. ಈಗಿದ್ದ ಹಾಗೆ ಐಸ್ಕ್ರೀಂ ಇಲ್ಲ. ಹಾಗಾಗಿ ಜನರಿಗೆ ಒಟ್ಟು ಸೇರಿ ಕುಳಿತುಕೊಂಡು ತಿಂದು ಖುಷಿ ಪಡಲು ಇದ್ದ ಒಂದೇ ಒಂದು ಭಕ್ಷ್ಯ ಎಂದರೆ ಕಲ್ಲಂಗಡಿ ಹಣ್ಣು ಮಾತ್ರ.
ಜಾತ್ರೆಗೆ ದೂರದೂರಿನಿಂದ ಬಂದವರು ಬಸ್ಸಿನ ವ್ಯವಸ್ಥೆ ಇಲ್ಲದಿದ್ದರೂ, ಒಂದೆರಡು ದಿನ ನೆಂಟರ ಮನೆಯಲ್ಲಿ ಇದ್ದು ಮರಳುವಾಗ ಜಾತ್ರೆಯ ನೆನಪಿಗೆ ಪ್ರಸಾದವೆಂಬಂತೆ ಕಲ್ಲಂಗಡಿ ಕೊಂಡೊಯ್ಯುತ್ತಿದ್ದರು.
ಹೀಗಾಗಿ ಪೊಳಲಿಯಲ್ಲಿ ಕಲ್ಲಂಗಡಿ ಪ್ರಸಿದ್ಧ. ಇಲ್ಲಿ ಮಾರಾಟವಾಗುತ್ತಿದ್ದ ಕಲ್ಲಂಗಡಿ ಹಣ್ಣುಗಳು ಇಲ್ಲಿನ ರೈತರೇ ಬೆಳೆಸಿದವುಗಳು. ಅಥವಾ ಪಕ್ಕದ ಹಳ್ಳಿಯಲ್ಲಿ ಬೆಳೆದವುಗಳು. ಜಾತ್ರೆಯ ಸಮಯದಲ್ಲಿ ಮಾರಾಟ ಮಾಡಲೆಂದೇ ಬೆಳೆಯುತ್ತಿದ್ದರು. ಬೇರೆ ಸಮಯದಲ್ಲಿ ಇಲ್ಲಿ ಹಣ್ಣು ಸಿಗದು. ಜಾತ್ರೆ ಸಮಯದ ಕಲ್ಲಂಗಡಿ ವ್ಯಾಪಾರವು ಅವರ ಮಳೆಗಾಲದ ಮನೆವೆಚ್ಚವನ್ನು ಸರಿದೂಗಿಸುತ್ತಿತ್ತು.
ಇಲ್ಲಿನ ಕಲ್ಲಂಗಡಿ ಹಣ್ಣುಗಳು ರುಚಿಯಲ್ಲಿ ಸಪ್ಪೆ. ಬಾಯಾರಿಕೆಯೇನೋ ನೀಗುತ್ತಿತ್ತು. ಕೆಲವರು ದೂರದ ಹಾಸನದಿಂದ ಬೀಜಗಳನ್ನು ತಂದು ಬಿತ್ತಿದರು. ಅದು ಕೂಡಾ ಸಪ್ಪೆ. ಇಂತಹ ಸನ್ನಿವೇಶದಲ್ಲಿ ಒಳ್ಳೆಯ ಬಚ್ಚಂಗಾಯಿ ತಳಿ ಬೆಳೆದು, ಎಲ್ಲರೂ ಪೊಳಲಿ ಕಲ್ಲಂಗಡಿಯನ್ನು ನೆನೆಯಬೇಕೆಂಬ ಉದ್ದೇಶದಿಂದ ಕಲ್ಲಂಗಡಿ ಕೃಷಿ ಶುರು ಮಾಡಿದೆ.
ಭಾರತದ ಉತ್ತಮ ಬೀಜ ಮಾರಾಟಗಾರರನ್ನು ಸಂಪರ್ಕಿಸಿ ಬೀಜ ತರಿಸಿದೆ. ಫರೂಕ್ಕಾಬಾದಿ, ಫೈಜಾಬಾದಿ, ಶುಗರ್ಬೇಬಿ, ಅಶಾಯಿ ಯಮಾಟೋ ಮತ್ತು ಮಧು ತಳಿಗಳ ಬಳ್ಳಿಗಳು ತೋಟದಲ್ಲಿ ಬೆಳೆದು ಹಬ್ಬಿದವು. ಅಶಾಯಿ ಯಮಾಟೋ ಮತ್ತು ಮಧು ತಳಿಗಳು ಬಹಳ ಉತ್ತಮ. ರುಚಿಯಲ್ಲೂ, ಇಳುವರಿಯಲ್ಲೂ ಅವಕ್ಕೆ ಸರಿಸಾಟಿ ಮತ್ತೊಂದಿಲ್ಲ. ಶುಗರ್ಬೇಬಿ ರುಚಿಯಿದ್ದರೂ ಗಾತ್ರದಲ್ಲಿ ಚಿಕ್ಕದು. ಹಾಗಾಗಿ ಅಶಾಯಿ ಯಮಾಟೋ ಮತ್ತು ಮಧು ತಳಿಗಳನ್ನು ಹೆಚ್ಚಾಗಿ ಬೆಳೆಸಿದೆ.
ಆ ವರುಷ ಮಾರಾಟದ ವ್ಯವಸ್ಥೆ ಸರಿಯಿರಲಿಲ್ಲ. ಆಗ ನನ್ನ ಮನೆಗೆ ಬಂದವರಿಗೆಲ್ಲಾ ಕಲ್ಲಂಗಡಿ ಆತಿಥ್ಯ. ಊರಿನ ಹಲವರಿಗೆ ಮತ್ತು ಕೆಲವು ಅಂಗಡಿಗಳಿಗೆ ಕೊಟ್ಟೆ. ಸಪ್ಪೆಯನ್ನು ತಿಂದು ತಿಂದು ಸಾಕಾದ ಕಾರಣ ಸಿಹಿ ಬಚ್ಚಂಗಾಯಿಯನ್ನು ಜನರು ಕೇಳಿಕೇಳಿ ಪಡಕೊಂಡರು. ಅದರಲ್ಲಿ ನನಗೆ ಲಾಭವಾಗಲಿಲ್ಲ. ಕೆಲವರ ಮೆಚ್ಚುಗೆಯಲ್ಲಿ ಸಮಾಧಾನಪಟ್ಟುಕೊಂಡೆ.
ಇಷ್ಟು ಕಲ್ಲಂಗಡಿಯನ್ನು ನಾನು ಕೊಟ್ಟರೂ ಮುಂದಿನ ವರುಷ ಈ ತಳಿಗಳನ್ನು ಬೆಳೆಯಲು ಯಾರೂ ಮುಂದೆ ಬರಲಿಲ್ಲ. ಕಾರಣ ಹಣ್ಣಿನ ಬೀಜದಿಂದ ಗಿಡ ಮಾಡಿದರೆ ಪ್ರಯೋಜನವಿಲ್ಲ. ಕಂಪೆನಿಯವರ ಬೀಜೋಪಚಾರದಿಂದಲೇ ತಯಾರಾದ ಬೀಜಗಳನ್ನು ಮಾತ್ರ ಬಿತ್ತಿದರೆ ಬಳ್ಳಿಯೂ ಬಲಿಯುತ್ತದೆ, ಹಣ್ಣು ಸಿಗುತ್ತದೆ. ‘ಮಧು’ ಇಂಡೋ ಅಮೇರಿಕನ್ ಹೈಬ್ರಿಡ್ ಸೀಡ್ಸ್ ಕಂಪೆನಿಯಿಂದ ತಯಾರಾದ ತಳಿ. ಬೀಜ ದುಬಾರಿ. ಹಾಗಾಗಿ ಹಣ ಕೊಟ್ಟು ಬೀಜ ಕೊಳ್ಳಲು ಯಾರೂ ತಯಾರಿರಲಿಲ್ಲ. ನಾನು ಪೂನಾದಿಂದ ಬೀಜ ತರಿಸುತ್ತಿದ್ದೆ. ಮುಂದೆ ಒಂದೆರಡು ವರುಷ ನಾನು ಮಾತ್ರ ಮಧು ತಳಿ ಬೆಳೆದೆ. ಆಗಲೂ ನಾನು ಮಾರಾಟಕ್ಕೆ ಪ್ರಾಮುಖ್ಯತೆ ಕೊಡಲಿಲ್ಲ.
ಮಧುವನ್ನು ಪ್ರಚಾರ ಮಾಡಲು ಒಂದು ಉಪಾಯ ಮಾಡಿದೆ. ನನ್ನ ಸ್ನೇಹಿತನೊಬ್ಬನಿಗೆ ಮಧುವನ್ನು ಬೆಳೆಸಲು ಪ್ರೋತ್ಸಾಹಿಸಿದೆ. ಪೇಟೆಯ ಮುಖ್ಯ ಸ್ಥಳಗಳಲ್ಲಿ “ಮಧು, ಮಧು, ಮಧುರಾ…. ಬೇಕೇ ಮಧು” ಎನ್ನುತ್ತಾ ಅವನು ಸ್ವತ: ಹಣ್ಣನ್ನು ಮಾರುತ್ತಿದ್ದ. ಇದರಿಂದಾಗಿ ಮಧು ತಳಿಗೆ ಚೆನ್ನಾಗಿ ಪ್ರಚಾರ ಸಿಕ್ಕಿತು. ದಾಖಲೆ ಮಾರಾಟವೂ ಆಯಿತು. ಅದರ ಬೆನ್ನಿಗೆ ಸ್ಥಳೀಯ ವಿಜಯಾ ಬ್ಯಾಂಕ್ನವರು ಕೂಡಾ ಬೀಜವನ್ನು ತರಿಸಿ ತಮ್ಮ ಗ್ರಾಹಕರಿಗೆ ಉಚಿತವಾಗಿ ಹಂಚಿದರು. ದುರಾದೃಷ್ಟವಶಾತ್ ಆ ಬೀಜಗಳ ಗುಣಮಟ್ಟ ಸರಿಯಾಗಿಲ್ಲದೆಯೋ ಅಥವಾ ಬೆಳೆಸುವಲ್ಲಿ ಕ್ರಮ ತಪ್ಪಿಯೋ ಹಲವರ ಬಹುಪಾಲು ಬೀಜಗಳು ಮೊಳಕೆ ಬರಲೇ ಇಲ್ಲ
ಅದೇ ವರುಷ ಹೈಬ್ರಿಡ್ ಕಲ್ಲಂಗಡಿ ಬೀಜವನ್ನು ಅಭಿವೃದ್ಧಿ ಪಡಿಸಲು ಇಂಡೋ ಅಮೇರಿಕನ್ ಹೈಬ್ರಿಡ್ ಸೀಡ್ಸ್ ಕಂಪೆನಿಯವರು ನನಗೆ ಸಹಕರಿಸಿದರು. ಒಂದು ವರುಷ ಚೆನ್ನಾಗಿ ಫಸಲು ಬ೦ತು. ಆದರೆ ಇಲ್ಲಿಯ ಕಾರ್ಮಿಕರ ದುಬಾರಿ ಮಜೂರಿಯಿಂದಾಗಿ ಮತ್ತು ನನಗೆ ಸಿಕ್ಕಿದ ಬೆಲೆಯಿಂದಾಗಿ ಅದು ಲಾಭದಾಯಕವಾಗಿ ಕಾಣಲಿಲ್ಲ.
ಈಗಲೂ ಪೊಳಲಿ ಸುತ್ತಮುತ್ತ ಒಳ್ಳೆಯ ಬಚ್ಚಂಗಾಯಿಯನ್ನು ಬೆಳೆಯುತ್ತಿದ್ದಾರೆ. ಮಧು ತಳಿ ಮಾಯವಾಗಿದೆ. ಬದಲಿಗೆ ಅದೇ ಕಂಪೆನಿಯ ‘ಪಟ್ಟಾನೆಗರಾ’ ತಳಿ ಪ್ರಾಮುಖ್ಯ ಪಡೆದಿದೆ. ಇದಲ್ಲದೆ ಮಹಿಕೋ ಕಂಪೆನಿಯ ಕೆಲವು ತಳಿಗಳು ಮತ್ತು ‘ಅರ್ಕ್ಮಾಣಿಕ್’ ಎಂಬ ತಳಿ ಕಾಣುತ್ತಿವೆ.
ಈಗ ಕಲ್ಲಂಗಡಿ ಬೆಳೆಗೂ ಸಹ ಯಾವುದೋ ಒಂದು ರೋಗ ತಗಲಿದ್ದು, ಅದನ್ನು ಬೆಳೆಯುವುದೇ ದೊಡ್ಡ ಸಮಸ್ಯೆಯಾಗಿದೆ. ಕೀಟನಾಶಕಗಳನ್ನು ಬಳಸದೆ ಬೇರೆ ದಾರಿಯಿಲ್ಲವಾಗಿದೆ.
ಅದೊಂದು ವರುಷದ ಕಹಿ ಘಟನೆಯನ್ನು ಮರೆಯಲಾಗದು. ಪೊಳಲಿ ಜಾತ್ರೆಗಾಗಿ ನಾನು ಬೆಳೆದಿದ್ದ ಕಲ್ಲಂಗಡಿ ಹಣ್ಣುಗಳು ಕೊಯ್ಲಿಗೆ ತಯಾರಾಗಿದ್ದವು. ಮರುದಿನ ಕೊಯ್ಲು ಮಾಡಿ, ಪ್ರತಿ ವರುಷದಂತೆ ಕೆಲವರಿಗೆ ಪುಕ್ಕಟೆಯಾಗಿ ಕೊಡಬೇಕೆಂದು ಮತ್ತು ಉಳಿದ ಕಲ್ಲಂಗಡಿ ಹಣ್ಣುಗಳನ್ನು ಪೊಳಲಿ ಜಾತ್ರೆಯಲ್ಲಿ ಮಾರಬೇಕೆಂದು ಕಾದಿದ್ದೆ. ಆದರೆ ಮರುದಿನ ಮುಂಜಾನೆ ನನಗೆ ಆಘಾತ. ಒಂದು ಸಮುದಾಯದ ಮೂರ್ನಾಲ್ಕು ಯುವಕರು ನನ್ನ ಹೊಲಕ್ಕೆ ಬಂದು, ಸುಮಾರು 200 ಕಲ್ಲಂಗಡಿ ಹಣ್ಣುಗಳನ್ನೆಲ್ಲ ಗೋಣಿಗಳಿಗೆ ತುಂಬಿಸಿ ಕದ್ದೊಯ್ದರು! ನಾನು ಪ್ರತಿಭಟಿಸಿದರೂ ಅವರು ತಮ್ಮ ಕೆಟ್ಟ ಕೆಲಸ ನಿಲ್ಲಿಸಲಿಲ್ಲ. ನನ್ನ ಮೂರು ತಿಂಗಳ ಶ್ರಮವೆಲ್ಲ ಆ “ಕಳ್ಳರ” ದುರ್ನಡತೆಗೆ ಬಲಿಯಾಗಿತ್ತು. ಒಂದು ವರುಷ ನಾನು ಬೆಳೆಸಿದ್ದ ಕಲ್ಲಂಗಡಿ ಹಣ್ಣುಗಳನ್ನು ಮಾರಾಟಗಾರರು ತೀರಾ ಕಡಿಮೆ ಬೆಲೆಗೆ ಕೇಳಿದಾಗ ಅವನ್ನೆಲ್ಲ ಅಡ್ಡೂರಿನವರಿಗೆ ಪುಕ್ಕಟೆಯಾಗಿ ಹಂಚಿದ್ದ ನನಗೆ ಆ “ಕಳ್ಳರು" ಒಂದು ಕಲ್ಲಂಗಡಿಯನ್ನೂ ಉಳಿಸದೆ ಎಲ್ಲವನ್ನೂ ಕದ್ದೊಯ್ದರು. ಆನಂತರ ಕಲ್ಲಂಗಡಿ ಕೃಷಿ ಮಾಡಲು ನನ್ನಲ್ಲಿ ಯಾವ ಉತ್ಸಾಹವೂ ಉಳಿಯಲಿಲ್ಲ.
ಮೂರ್ನಾಲ್ಕು ವರುಷಗಳ ಹಿಂದೊಮ್ಮೆ ಹಳೆಯ ಘಟನೆಗಳು ನೆನಪಾಗಿ ಪೊಳಲಿ ಜಾತ್ರೆಗೆ ಹೋಗಿದ್ದೆ. ಈಗ ಮುಂಚಿನಂತಿಲ್ಲ. ಜಾತ್ರೆಯಲ್ಲಿ ಬಚ್ಚಂಗಾಯಿಯ ವೈಭವ ಕಡಿಮೆಯಗಿದೆ. ಐಸ್ಕ್ರೀಂ ಅದರ ಸ್ಥಾನವನ್ನು ಆಕ್ರಮಿಸಿವದೆ. ಅಲ್ಲದೆ ಸಂತೆಯ ಸ್ಥಳವೂ ಕಿರಿದುಗೊಂಡಿದೆ.
ಟಿಪ್ಪಣಿ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆ ಮಾರ್ಚ್-ಏಪ್ರಿಲ್ ತಿಂಗಳುಗಳಲ್ಲಿ ಸುಮಾರು ಒಂದು ತಿಂಗಳು ಜರಗುತ್ತದೆ. “ಎಷ್ಟು ದಿನಗಳ ಜಾತ್ರೆ?” ಎಂಬುದನ್ನು ನಿರ್ಧರಿಸಲು ನಿರ್ದಿಷ್ಟ ವಿಧಿವಿಧಾನಗಳನ್ನು ಶತಮಾನಗಳಿಂದ ಅನುಸರಿಸಲಾಗುತ್ತಿದೆ. 2026ರಲ್ಲಿ 29 ದಿನಗಳ ಜಾತ್ರೆ ಎಂದು ಘೋಷಿಸಲಾಯಿತು. ಅದರ ಅನುಸಾರ ಮಾರ್ಚ್ 14ರಂದು “ಕೊಡಿ” (ಪೊಳಲಿ ಧ್ವಜ) ಏರಿಸಲಾಯಿತು. ಮರುದಿನ ಮಾರ್ಚ್ 15ರಂದು ಶುರುವಾದ ಜಾತ್ರೆ ಏಪ್ರಿಲ್ 11ರಂದು ರಥೋತ್ಸವ ಹಾಗೂ 29ನೇ ದಿನ ಏಪ್ರಿಲ್ 12ರಂದು “ಆರಾಟ”ದೊಂದಿಗೆ ಮುಕ್ತಾಯವಾಯಿತು.
ಫೋಟೋ 1ಮತ್ತು 2: ತಿನ್ನಲಿಕ್ಕಾಗಿ ಕತ್ತರಿಸಿಟ್ಟ ಕಲ್ಲಂಗಡಿ ಹಣ್ಣಿನ ತುಂಡುಗಳು ಮತ್ತು ಬಲಿತ ಎರಡು ಕಲ್ಲಂಗಡಿ ಹಣ್ಣುಗಳು
ಆಕರ ಪುಸ್ತಕ: ಅಡ್ಡೂರು ಶಿವಶಂಕರರಾಯರ ಎಂಬತ್ತರ ಕೊಯ್ಲಿನ ಕಾಳುಗಳು
ಲೇಖಕರು: ಅಡ್ಡೂರು ಕೃಷ್ಣ ರಾವ್ ಮತ್ತು ನಾ. ಕಾರಂತ ಪೆರಾಜೆ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!