“ಸ್ವಾತಂತ್ರ್ಯ” ಎಂಬ ಪದವೇ ದೇಹದ ಕಣಕಣದಲ್ಲಿ ನವಚೈತನ್ಯ, ನವೋಲ್ಲಾಸ ಮೂಡಿಸುವಂತಿದೆ. ಈ ಸ್ವಾತಂತ್ರ್ಯ ಹೋರಾಟದ ಹಿಂದಿನ ಕೆಚ್ಚು, ಕಿಚ್ಚು, ಹೋರಾಟ, ಹಿಂಸೆ, ಅಸಹಕಾರ, ತ್ಯಾಗ, ತಾಳ್ಮೆ, ಬಲಿದಾನ, ಅಹಿಂಸಾತತ್ವ, ಉಪವಾಸ, ಕೆರಳುವಿಕೆ, ಅಡಗುವಿಕೆ ಈ ಎಲ್ಲವನ್ನೂ  ಬಿಡಿಸಿ ತೆರದಿಟ್ಟರೆ ಮೈ ರೋಮಾಂಚನಗೊಳ್ಳುವುದಲ್ಲವೇ? ಇಲ್ಲಿ ನಾವು ನೋಡುವುದು ಓರ್ವ ಮನುಷ್ಯನ ಸ್ವಾರ್ಥವಲ್ಲ. ಅವನ ಅಥವಾ ಅವಳ ಮಾತುಗಳ ಹಿಂದಿನ ಶಕ್ತಿ ಸಾಮರ್ಥ್ಯ, ಪ್ರೇರಣೆ, ಪ್ರೋತ್ಸಾಹ, ದಿಟ್ಟತನ, ಸ್ವಾತಂತ್ರ್ಯ ಹೋರಾಟದ ಕಿಚ್ಚು ಎಲ್ಲೆಡೆ ಹೊತ್ತಿ ಉರಿಯುತ್ತಿರುವ ಕಾಲದಲ್ಲಿ, ನಾಡು, ನುಡಿ, ದೇಶ ರಕ್ಷಣೆಗಾಗಿ ‘ಝಾನ್ಸಿ ರಾಣಿ ಲಕ್ಷ್ಮೀ ಬಾಯಿ’ ಸ್ವಾತಂತ್ರ್ಯದ ಕಿಚ್ಚಿನಲ್ಲಿ ಧುಮುಕಿ ಬ್ರಿಟಿಷ್ ಸರಕಾರದ ವಿರುದ್ಧ ಹೋರಾಡಿದ ವೀರ,ಧೀರ,ಧೀಮಂತ ಮಹಿಳೆ. ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ “ಸಿಪಾಯಿದಂಗೆ” ಯಲ್ಲಿ ಅತ್ಯಂತ ವೀರಾವೇಶದಿಂದ ಹೋರಾಡಿದ ಇವರನ್ನು ಮರೆಯಲು ಸಾಧ್ಯವೇ? ಕ್ರೌರ್ಯ ಹಾಗೂ ದಕ್ಷತೆಯ ಗುಣಗಳು ಹೋರಾಟದಲ್ಲಿ ಎದ್ದು ಕಾಣುತಿತ್ತು. ಅಜರಾಮರವಾಗಿ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತನ್ನನ್ನು ಅರ್ಪಿಸಿಕೊಂಡ ವೀರ ಮಹಿಳೆ.

೧೮೨೯ರ ನವಂಬರ ೧೯ ರಂದು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಈಕೆಯ ಹೆಸರು ಮಣಿಕರ್ಣಿಕಾ. ಬಾಲ್ಯದಲ್ಲಿ ತಂದೆಯವರ ಮೂಲಕ ಯುದ್ಧವಿದ್ಯೆಯನ್ನು ಕಲಿತಳು. ತನ್ನ ೧೪ನೆಯ ವಯಸ್ಸಿಗೆ ಮಹಾರಾಜ ರಾಜ ಬಾಲಗಂಗಾಧರ ರಾವ್ ನನ್ನು ಮದುವೆಯಾಗಿ, ಅನಂತರ ಹೆಸರು ಲಕ್ಷ್ಮೀಬಾಯಿ ಎಂದಾಯಿತು. ತನ್ನ ಗಂಡು ಮಗುವನನ್ನು ಜನಿಸಿದ ನಾಲ್ಕು ತಿಂಗಳೊಳಗೆ ಕಳಕೊಂಡಳು.ಈ ಆಘಾತದಲ್ಲಿ ಕೈ ಹಿಡಿದ ಪತಿ ಮರಣಿಸಿದನು. ದಾಮೋದರ ರಾವ್  ಎನುವ ಹೆಸರಿನ ಹುಡುಗನನ್ನು ದತ್ತು ಪಡೆದಳು. ಆದರೆ ರಾಜನ ರಕ್ತ ಸಂಬಂಧಿ ಅಲ್ಲ, ಅಧಿಕಾರ ನೀಡಬಾರದೆಂದು ಈಸ್ಟ್ ಇಂಡಿಯಾ ಕಂಪೆನಿಯ ಲಾರ್ಡ್ ಡಾಲ್ ಹೌಸಿಯು ರಾಣಿಗೆ ಪಿಂಚಣಿ ಹಣದ ಆಸೆ ತೋರಿಸಿ, ಕೋಟೆ ಬಿಟ್ಟು ಹೋಗಲು ಹೇಳಿದರು. 1857ರ ಮೀರತಿನ ಸಿಪಾಯಿದಂಗೆಯಲ್ಲಿ ಬಂಡಾಯವೇಳುವ ಲಕ್ಷಣಗಳು ತಲೆದೋರಿತು. ಇದುವೇ 'ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವೆಂದು' ಕರೆಯಲ್ಪಟ್ಟಿತು. ಮುಂದೆ ಝಾನ್ಸಿಯನ್ನು ಬ್ರಿಟಿಷ್ ಸೈನಿಕರು ಮುತ್ತಿಗೆ ಹಾಕಿ ಯುದ್ಧವೇ ನಡೆದಾಗ, 3ನೇ ದಿನ ರಾಣಿ ರಾತ್ರಿಯ ಸಮಯ ಕೋಟೆ ಒಡೆದು ಅನುಯಾಯಿಗಳೊಂದಿಗೆ ತಪ್ಪಿಸಿಕೊಂಡಳು. ತನ್ನ ದತ್ತುಪುತ್ರನೊಂದಿಗೆ ಗ್ವಾಲಿಯರಿನಲ್ಲಿ ತಾಂತ್ಯಾಟೋಪಿಯ ಸಹಕಾರದೊಂದಿಗೆ ಹೋರಾಟ ನಡೆಸುತ್ತಿರುವಾಗ ರಾಣಿಯು 18 ಜೂನ್ 1858 ರಂದು ವೀರಮರಣವನಪ್ಪಿದಳು.

ಅತಿ ಬುದ್ಧಿವಂತೆ, ನಿಷ್ಠಾವಂತೆ, ಸೌಂದರ್ಯವತಿ, ಸುಶೀಲೆ, ದೃಢನಿಷ್ಠೆಯ ರಾಣಿಯಾಗಿದ್ದಳೆಂದು ಉಲ್ಲೇಖವಿದೆ. 1857ರ ಸಿಪಾಯಿದಂಗೆಯಲ್ಲಿ ಹೋರಾಡಿದ ವೀರಮಹಿಳೆ. ರಾಣಿಗೆ ಗೌರವ ಸಲ್ಲಿಕೆ ಮತ್ತು ನೆನಪಿಗಾಗಿ ಗ್ವಾಲಿಯರ್ ನಲ್ಲಿ ಆಕೆ ಕುದುರೆ ಸವಾರಿ ಮಾಡುತ್ತಿರುವ ದೊಡ್ಡ ಕಂಚಿನ ವಿಗ್ರಹ ಇರಿಸಲಾಗಿದೆ. ಭಾರತೀಯ ಸೈನ್ಯ ತನ್ನ ಮಹಿಳಾ ಪಡೆಗೆ  ರಾಣಿಯ ಹೆಸರನ್ನಿಟ್ಟಿದೆ. ಇಂದಿನ ಸ್ವಾರ್ಥ ತುಂಬಿದ ಈ ಜಗದಲ್ಲಿ ನಿಸ್ವಾರ್ಥದ ಭಂಡಾರವಾದ, ದೇಶದ ಮಣ್ಣಿನ ಕಣಕಣಕ್ಕಾಗಿ ಹೋರಾಡಿದ ಕೆಚ್ಚೆದೆಯ ರಾಣಿ 'ಧ್ರುವತಾರೆ' ಎಂದರೂ ತಪ್ಪಾಗಲಾರದು. ಬೃಹತ್ ಆಂಗ್ಲರ ಸೇನೆಗೆ ಹೆದರದೆ, ನಮ್ಮ ದೇಶದ ವೀರ ಧೀರ ಕಲಿತನದಿ ಧುಮ್ಮಿಕ್ಕಿ ಹೋರಾಡಿದ ಝಾನ್ಸಿಯ ಈ ಮಾತೆಗೆ ಪುಣ್ಯದಿನದಂದು ಮನದುಂಬಿದ ನಮನಗಳು. 

-ರತ್ನಾ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ