ರಾಷ್ಟ್ರೀಯ ವೈದ್ಯರ ದಿನ' ನಮ್ಮ ರಾಷ್ಟ್ರದಲ್ಲಿ ಕರ್ತವ್ಯ ಸಲ್ಲಿಸುತ್ತಿರುವ ವೈದ್ಯರೆಲ್ಲರಿಗೂ ಶುಭಾಶಯಗಳು.
'ವೈದ್ಯೋ ನಾರಾಯಣ ಹರಿ:' ಎಂದು ನಂಬಿಕೆ ಮತ್ತು ವಿಶ್ವಾಸವಿಟ್ಟವರು ನಾವು. ನಮ್ಮ ಪರಂಪರೆಯೇ ಹಾಗೆ. ವೈದ್ಯರೆಂದರೆ ಭಗವಂತನಿಗೆ ಸಮಾನ. ಜೀವದ ಉಸಿರನ್ನು ಡಾಕ್ಟ್ರ ಕೈಗಿತ್ತು, ಅವರ ಮಾತಿನ ಭರವಸೆಗೆ ನಿಟ್ಟುಸಿರು ಚೆಲ್ಲುತ್ತೇವೆ.(ನಕಲಿ ವೈದ್ಯರನ್ನು ಬದಿಗೊತ್ತೋಣ). ಹಗಲಿರುಳೆನ್ನದೆ ದುಡಿಯುವ, ದೇವರ ಸ್ಥಾನದಲ್ಲಿರುವ ಎಲ್ಲ ವೈದ್ಯರನ್ನು ಈ ಸಂದರ್ಭದಲ್ಲಿ ನಾವು ನೆನಪಿಸುವುದು ಜನ ಸಾಮಾನ್ಯರಾದ ನಮ್ಮ ಕರ್ತವ್ಯ ಸಹ.
ಪಶ್ಚಿಮ ಬಂಗಾಳದ ಡಾ.ಬಿಧನ್ ಚಂದ್ರ ರಾಯ್ ಮಹಾನ್ ವೈದ್ಯರು, ಸ್ವಾತಂತ್ರ್ಯ ಹೋರಾಟಗಾರರು, ಪ್ರಾಣದ ಬಗ್ಗೆ ಯಾವುದೇ ಮೋಹವಿಟ್ಟುಕೊಳ್ಳದೆ, ಬಡವ-ಬಲ್ಲಿದ ಭೇದ ತೋರದೆ, ನೊಂದವರ ಬದುಕಿಗೆ ನವ ಚೈತನ್ಯ ಮರಳಿ ಬರುವಂತೆ ಕರ್ತವ್ಯ ಸಲ್ಲಿಸಿದ ಮಹಾಶಯರ ಜನ್ಮ ದಿನವೂ ಇಂದೇ, ಮರಣಿಸಿದ ದಿನವೂ ಇಂದೇ. ಅವರ ಜನ್ಮ ಮತ್ತು ಮರಣದ ದಿನದ ಗೌರವಾರ್ಥವಾಗಿ ಈ ದಿನ 'ರಾಷ್ಟ್ರೀಯ ವೈದ್ಯರ ದಿನ' ದೇಶಾದ್ಯಂತ ಆಚರಿಸಿ, ಕೃತಜ್ಞತೆ ಸಲ್ಲಿಸಲಾಗುತ್ತಿದೆ.
ಕಾಯಿಲೆ ಬರುವ ಮೊದಲೇ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಯ ಮಾಹಿತಿ, ವೈದ್ಯರಿಗೆ ವೇದಿಕೆಗಳಲ್ಲಿ ಪ್ರಶಸ್ತಿ ನೀಡಿ ಗೌರವಿಸುವುದು, ಆರೋಗ್ಯ ಜಾಗೃತಿ ಮತ್ತು ಜಾಗ್ರತೆ ಮೂಡಿಸುವುದು, ಹೊಸ ವೈರಸ್ ಗಳಿಂದಾಗಿ ಬರುವ ರೋಗಗಳು ಅವುಗಳ ಬಗ್ಗೆ ಸಾರ್ವಜನಿಕವಾಗಿ ಮಾಹಿತಿ ನೀಡಿ ಎಚ್ಚರಿಸುವುದು,ಉಚಿತ ಸಲಹೆಗಳನ್ನು ನೀಡುವುದು ಮುಂತಾದ ಕಾರ್ಯಕ್ರಮ ಹಮ್ಮಿಕೊಂಡು ಗೌರವ ಸಲ್ಲಿಸುವರು. ಹೊಸ ಹೊಸ ಸಂಶೋಧನೆಗಳಿಗೆ ವೈಜ್ಞಾನಿಕವಾಗಿ ಉತ್ತೇಜನ ನೀಡುವರು. ಕೊರೋನಾ ಸಂದರ್ಭ ಹೋರಾಟದ ಬದುಕು ವೈದ್ಯರದ್ದು, ಜನಸಾಮಾನ್ಯರದ್ದಾಗಿತ್ತು ಅಲ್ಲವೇ? ಕಾಯಿಲೆಯ ಆಳ-ಅಗಲ ಗೊತ್ತಿರುವವರು ವೈದ್ಯರು. ನಾವು ಅತ್ಯಂತ ತುರ್ತು ಸಂದರ್ಭದಲ್ಲಿ ರೋಗಿಯನ್ನು ವೈದ್ಯರಿಗೊಪ್ಪಿಸಿ ಮುಳ್ಳ ಮೇಲೆ ನಿಂತವರ ಹಾಗಿರುತ್ತೇವೆ. ನಮ್ಮ ಮನಸ್ಥಿತಿಯನ್ನು ಅರ್ಥೈಸಿಕೊಳ್ಳುವ ಭಗವಂತನೇ ನಮಗೆ ಆ ಸಂದರ್ಭದಲ್ಲಿ ವೈದ್ಯರೆನ್ನಬಹುದು. ಹಗಲಿರುಳು ದುಡಿಯುವ ವೈದ್ಯರನ್ನೆಲ್ಲ ಈ ದಿನದಂದು ಸ್ಮರಿಸುತ್ತಾ ಗೌರವ ಸಲ್ಲಿಸೋಣ.
-ರತ್ನಾ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!