ಪತ್ರಿಕೆಗಳು, ಮಾಧ್ಯಮ ವರದಿಗಳು, ಅಂತರ್ಜಾಲ ನೋಡಿದರೆ ಕಾಣುವುದೊಂದೇ ವಿಷಯ, ಕೊಲೆ, ಸುಲಿಗೆ, ಮೋಸ, ವಂಚನೆ, ನಿರಾಸೆ, ಪ್ರೇಮ ವೈಫಲ್ಯ, ಏಕಮುಖ ಪ್ರೀತಿ, ಕೊನೆಗೆ 'ಆತ್ಮಹತ್ಯೆ'. ಯುವ ಜನಾಂಗ ಎತ್ತ ಸಾಗುತ್ತಿದೆ? ಯಾಕೆ ಹೀಗೆ? ಎಂದು ಕುಳಿತು ಯೋಚಿಸಿದರೆ ಇದಕ್ಕೆಲ್ಲ ನಾವೇ ಎಳೆದ ಪರಿಧಿಗಳು, ಲಕ್ಷ್ಮಣರೇಖೆ ಕಾರಣ ಅನ್ನಿಸುತ್ತದೆ. ಮಕ್ಕಳನ್ನು ಸಡಿಲ ಬಿಟ್ಟೆವು, ಶಾಲೆಯ ಶಿಕ್ಷೆಗೆ ಶಿಕ್ಷಕರನ್ನು ಅವಮಾನಿಸಿದೆವು, ಸ್ವಾತಂತ್ರ್ಯದ ಹಾದಿಯಲ್ಲಿ ಸ್ವೇಚ್ಛಾಚಾರ ಕಾಣಿಸಿತು. ಕಾನೂನಿನಲ್ಲಿ ಕಠಿಣ ಶಿಕ್ಷೆ ಕನಸಿನ ಮಾತಾಯಿತು. ಮನೆಯ ಭಾವನಾತ್ಮಕ ಸಂಬಂಧಗಳು ಉತ್ತರ-ದಕ್ಷಿಣವಾಯಿತು. ಮಾನಸಿಕ ಸಮತೋಲನ ತಾಳತಪ್ಪಿತು. ೨-೩ ಮಕ್ಕಳನ್ನು ಪಡೆದ ತಾಯಿ ಸಹ ಜೊತೆಗಾರನೊಂದಿಗೆ ಹೋಗುವುದೆಂದರೆ ಏನರ್ಥ? ಜೊತೆಗೆ ಕೈಹಿಡಿದವನ ಉಸಿರನ್ನೇ ನಿಲ್ಲಿಸುವುದನ್ನೂ ಓದುತ್ತಿದ್ದೇವೆ. ಮಮತಾಮಯಿ, ವಾತ್ಸಲ್ಯದ ದೇವತೆ, ಕರುಣೆ, ಪ್ರೀತಿ, ಆರ್ದ್ರತೆ, ಸಹಕಾರ, ಸಹಬಾಳ್ವೆ, ಕ್ಷಮೆ ಗುಣಗಳಿರಬೇಕಾದ ಹೆಂಗಸರು ಹೀಗೆಲ್ಲ ಆಗುವುದೆಂದರೇನು? ನಾವೆಲ್ಲ ಚಿಕ್ಕವರಿರುವಾಗ ಮನೆಯಲ್ಲಿ ೨೦-೩೦ ಜನರು. ಎಲ್ಲರಿಗೂ ತಿಂಡಿ, ಊಟ, ಮನೆಕೆಲಸದಲ್ಲಿ ದಣಿಯುವ ಮನೆಯ ಹೆಂಗಸರು ಕೊನೆಗೆ ಮಾಡಿದಡುಗೆ ಕಡಿಮೆಯಾಗಿ ನೀರು ಕುಡಿದ ದಿನಗಳನ್ನು, ಅದರಲ್ಲಿಯೂ ತೃಪ್ತಿಯನ್ನು ಹೊಂದಿದ್ದನ್ನು ಕಣ್ಣಾರೆ ಕಂಡಿದ್ದೇನೆ. (ಕಾರಣ ಆಗೆಲ್ಲ ನೆಂಟರಿಷ್ಟರು ಫೋನ್ ಮಾಡಿ ಬರುವ ಕಾಲವಲ್ಲ, ಫೋನೂ ಇರಲಿಲ್ಲ) ಹಾಗಾದರೆ ಈ ಕ್ರೌರ್ಯ, ಕ್ರೂರತ್ವ, ನಾನು ಬದುಕಿದರೆ ಸಾಕು ಎನ್ನುವ ಮನೋಕಾಮನೆ, ಕಾನೂನಿನ ಚೌಕಟ್ಟು ವಿಧಿಗಳು ತಿಳಿದಿದ್ದರೂ ಇದೆಲ್ಲ ಏನೆಂದೇ ತಿಳಿಯುತ್ತಿಲ್ಲ. ಓದಿದ್ದು, ಸ್ವಂತ ಸಂಪಾದನೆ ಕಾರಣವೇ? ಏನು ಮಾಡಿದರೂ ಕೇಳುವವರಿಲ್ಲ, ಕೇಳಬಾರದು ಎನ್ನುವುದೇ? ಗಂಡು ಮಕ್ಕಳು ಸಹ ಕಡಿಮೆಯಲ್ಲ, ನೋಡುತ್ತಿದ್ದೇವಲ್ಲ? ಕಾನೂನಿನಲ್ಲಿ, ಶಿಕ್ಷೆ ಪ್ರಕಟಿಸುವಲ್ಲಿ ಲಿಂಗ ತಾರತಮ್ಯ ಬೇಡ. ಸಮಾನ ಶಿಕ್ಷೆ ವಿಧಿಸಬೇಕು. ಹೆಣ್ಣೆಂಬ ಮಮಕಾರ ಅಗತ್ಯವಿಲ್ಲ. ಇರುವ ಒಂದೆರಡು ಮಕ್ಕಳನ್ನು ಹೀಗೆ ಉಸಿರು ನಿಲ್ಲಿಸಿದರೆ ಹೆತ್ತವರ ಪಾಡೇನು? ಜನ ಸಾಮಾನ್ಯರು, ಊರ ಮುಖಂಡರು, ಸಂಘ-ಸಂಸ್ಥೆಗಳು, ಮುಖ್ಯವಾಗಿ ಶಿಕ್ಷಣ, ಆರೋಗ್ಯ, ಪೋಲೀಸ್ ಇಲಾಖೆಗಳು, ಮಠಮಾನ್ಯಗಳು, ಧರ್ಮಕೇಂದ್ರಗಳು, ಜ್ಞಾನಿಗಳೆನಿಸಿಕೊಂಡವರು, ಮನೆಯ ಹಿರಿಯ  ಸದಸ್ಯರು, ಹೆತ್ತವರು ಒಟ್ಟಾಗಿ ತಿಳಿ ಹೇಳುವ ಕಾಲ ಬಂದಿದೆ. 'ಒಂದನ್ನು ಪಡೆಯಲು ಇನ್ನೊಂದನ್ನು ತ್ಯಾಗ ಮಾಡಬೇಕಂತೆ'. ಸ್ವಲ್ಪ ಕಠಿಣವಾಗೋಣ, ನಯವಾಗಿ ಮನವರಿಕೆ ಮಾಡೋಣ. ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದ ನಾನು ಎಷ್ಟೋ ಸಲ ಹೆತ್ತವರ (ಅದರಲ್ಲೂ ತಾಯಂದಿರ) ಬೈಗುಳ, ಶಾಪ ತಿಂದವಳೇ. ಆದರೆ ಅವರ ಮಕ್ಕಳನ್ನು ತಿದ್ದಿ ತೀಡಿ ಸರಿದಾರಿಗೆ ತರುವುದು ನನ್ನ ಕರ್ತವ್ಯ ಎಂದು ತಿಳಿದು ಅವರು ಹೇಳಿದ್ದನ್ನು ಮನಸ್ಸಿಗೆ ಹಚ್ಚಿಕೊಳ್ಳುತ್ತಿರಲಿಲ್ಲ. ಆಗೆಲ್ಲ ಮನೆಕೆಲಸ ಕೊಡಬೇಕಾಗಿತ್ತು. ಅದನ್ನು ಬರೆಯದೆ ಬರುವ ಮಕ್ಕಳನ್ನು 'ಯಾಕೆ' ಎಂದು ವಿಚಾರಿಸಿದರೂ ಅಧ್ಯಾಪಕರದೇ ತಪ್ಪು ಎನ್ನುವ ಅಭಿಪ್ರಾಯ ಹೆತ್ತವರದಾಗಿತ್ತು. "ನೀವು ಬರೆಯಲು, ಓದಲು ಹೇಳಬಾರದು, ಅವನು/ಳು ಮಾಡಿದ ಕೆಲಸ ಸಾಕು" ಹೇಳುತ್ತಿದ್ದರು. ಮತ್ತೆ ಹೇಗೆ ಹೇಳಿ? ಇಲ್ಲಿ ತಮ್ಮ ತಲೆಗೆ ತಾವೇ ಕಲ್ಲು ಚಪ್ಪಡಿ ಹಾಕಿಕೊಂಡವರು ಹೆತ್ತವರಲ್ಲವೇ? ಸ್ವಯಂ ಕಡಿವಾಣ ಬೇಕು. ಐಶ್ವರ್ಯದ ದಾಹವಿರಬಾರದು. ಮನುಷ್ಯರನ್ನು ಮನುಷ್ಯರಾಗಿಯೇ ನೋಡುವುದು, ವ್ಯವಹರಿಸುವುದು,ಮಾನವೀಯ ಮೌಲ್ಯಗಳೊಂದಿಗೆ ಜೀವಿಸುವುದು, ಪರಸ್ಪರ ಹೊಂದಾಣಿಕೆ ಗೌರವಗಳೊಂದಿಗೆ ಬಾಳುವುದು ಮುಖ್ಯ.

-ರತ್ನಾ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ