ಇನ್ನೇನು ಬಂದೇ ಬಿಟ್ಟಿತು ೧೫ ತಾರೀಕು. ಎಲ್ಲಿ ಹೋದರೂ ಪುಟ್ಟಪುಟ್ಟ ರಾಷ್ಟ್ರಧ್ವಜ, ಅಂಗಿಗೆ ಸಿಕ್ಕಿಸುವ ನಮ್ಮದೇಶದ ಸಣ್ಣ ಮಾಡೆಲ್ ಗಳು, ಧ್ವಜಗಳು (ಈ ವರ್ಷ ಫ್ಯಾನ್ ಸಹ ಕಂಡ ಹಾಗಾಯಿತು) ರಸ್ತೆಯ ಇಕ್ಕೆಲಗಳ ಅಂಗಡಿಗಳಲ್ಲಿ ರಾಶಿರಾಶಿ ಕಾಣುತ್ತಿದೆ. ಬಣ್ಣವೆಂದರೆ ಮಕ್ಕಳಿಗೆ ಆಕರ್ಷಣೆ, ಮೌಲ್ಯವರಿಯದ ವಯಸ್ಸದು. ಮಕ್ಕಳಿಗಂತೂ ಇದನ್ನು ಕೊಳ್ಳುವುದರಲ್ಲಿ ಆಸಕ್ತಿ, ಸಂತೋಷ. ಆದರೆ ಕೊಂಡ ಮೇಲೆ ಹಿರಿಯರೇ ಗಮನಹರಿಸಬೇಕಷ್ಟೆ. ಎಲ್ಲೆಂದರಲ್ಲಿ ಬಿಸಾಡುವುದೂ ಕಾಣುತ್ತದೆ. ಇದನ್ನು ಕಂಡಾಗ ಮನಸ್ಸಿಗೆ ನೋವಾಗುತ್ತದೆ. ದಯವಿಟ್ಟು ಸಿಕ್ಕಸಿಕ್ಕಲ್ಲಿ ಎಸೆಯದಂತೆ ಹಿರಿಯರೇ ನೋಡಿಕೊಳ್ಳಬೇಕಷ್ಟೆ. ರಾಷ್ಟ್ರಲಾಂಛನಗಳಿಗೆ ಗೌರವ ಕೊಡುವುದು ಪ್ರತಿಯೋರ್ವ ಭಾರತೀಯ ಪ್ರಜೆಯ ಆದ್ಯ ಕರ್ತವ್ಯ. ಮಕ್ಕಳಿಗೂ ತಿಳಿಸಿ ಹೇಳುವುದು ದೊಡ್ಡವರ ಜವಾಬ್ದಾರಿ. ಬರೇ ಹಕ್ಕುಗಳಿಗಾಗಿ ಹೋರಾಡುವುದಲ್ಲ, ಜೊತೆಗೆ ಕರ್ತವ್ಯದ ಪ್ರಜ್ಞೆಯೂ ಇರಬೇಕಲ್ಲವೇ? ಪ್ಲಾಸ್ಟಿಕ್ ನಿಷೇಧ ಬಾಯಿಮಾತಿನಲ್ಲಿ ಮಾತ್ರ. ಅದು ಮಣ್ಣಿನಡಿ ವರ್ಷಾನುಗಟ್ಟಲೆಯಿದ್ದರೂ ಕರಗದು. ಬಟ್ಟೆಯದ್ದು, ಕಾಗದದ್ದು ಆದರೆ ಮಣ್ಣಿಗೆ ಸೇರಬಹುದು.(ನಮ್ಮ ಪರಿಸರವನ್ನು ನಾವೇ ಹಾಳುಮಾಡಿಕೊಂಡು, ವಿವಿಧ ರೋಗಗಳಿಗೆ ಆಹ್ವಾನಕ್ಕೆ ದಾರಿ ಮಾಡಿಕೊಡಬಾರದು, ಉಸಿರಿಗೂ ಕುತ್ತು ಬರಬಹುದು. ಕೊರೋನಾ ಸಮಯದಲ್ಲಿ 'ಆಮ್ಲಜನಕ' ದ ಅವಶ್ಯಕತೆಯ ಬಗ್ಗೆ ನಲುಗಿದ ವಿಚಾರ ನಮ್ಮೆಲ್ಲರ ಕಣ್ಣು ತೆರೆಸಿದೆಯಲ್ಲ? ಮತ್ತೂ ನಾವು ಕಣ್ಣಿದ್ದೂ ಕುರುಡರಾಗುತ್ತಿದ್ದೇವೆ. ಪ್ಲಾಸ್ಟಿಕ್ ಗೆ ವಿದಾಯ ಹೇಳೋಣ. ಪ್ರತಿ ಮನೆಯವರು ಈ ವಿಷಯದಲ್ಲಿ ಜಾಗ್ರತೆ ವಹಿಸೋಣ-ಜಾಗೃತಿ ಮೂಡಿಸೋಣ.
-ರತ್ನಾ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!