ಒಂದು ವೃಕ್ಷದಿಂದ ಎಷ್ಟೊಂದು ಪ್ರಯೋಜನವಿದೆ. ಅದೇ ವೃಕ್ಷ ಉರುಳಿದಾಗ ನಷ್ಟವೂ ಆಗಬಹುದು (ವಾಹನ, ಮನುಷ್ಯರು, ಮನೆ, ಕೊಟ್ಟಿಗೆ, ತೋಟ ಇತ್ಯಾದಿಗಳು) ಹಾಗೆಂದು ಗಿಡ ನೆಡುವುದನ್ನು ಬಿಡಲಾರೆವು ಅಲ್ಲವೇ? ತನಗೆ ದ್ರೋಹವೆಸಗಿದರೂ ಮರ ಉಪಕಾರವೇ ಮಾಡುವುದು, ಅಪಾಯಕ್ಕೆ ಕಾರಣ ನಮ್ಮ ಸ್ವಾರ್ಥ ಮತ್ತು ಅಜಾಗ್ರತೆ ಹೊರತು ಮರವಲ್ಲ. ಕೆಲವು ವಿಘ್ನ ಸಂತೋಷಿಗಳಿಗೆ ಅನ್ಯರ ಕಾಲೆಳೆದು ಚಂದ ನೋಡುವುದೇ ಕೆಲಸ. ಇತರರನ್ನು ನಿಂದಿಸುವುದು, ಅವಹೇಳನ ಮಾಡುವುದರಿಂದ ಅವರೇ ಸಣ್ಣವರಾಗುತ್ತಾರೆಂಬ ಪ್ರಜ್ಞೆಯಿಲ್ಲ. ತಾನೇ ದೊಡ್ಡವ, ಬಹಳ ತಿಳಿದವನೆಂಬ ಮದವೇಕೆ? ಮದವೇರಿದವ ಮಣ್ಣು ಮುಕ್ಕಿದ ಉದಾಹರಣೆ ಬೇಕಾದಷ್ಟಿದೆ. ಬೇರೆಯವರ ನಿಂದನೆಯಲ್ಲಿ ಉತ್ಕರ್ಷೆ ಸಿಗಬಹುದೆಂಬ ಅಭಿಲಾಷೆ ಬೇಡ. ಸುಶಿಕ್ಷಿತ ಯಾವತ್ತೂ ಮೃಗೀಯದಂತೆ ವರ್ತಿಸಲಾರ. ವರ್ತಿಸಿದರೆ ಅವನು ಸುಶಿಕ್ಷಿತನಾಗಲು ಅನರ್ಹನೇ ಸರಿ. ಕೂಗಾಡುವ ಮಂದಿ ಹಲವರಿರಬಹುದು ನಮ್ಮೊಂದಿಗೆ. ಆದರೆ ಮಾತನಾಡುವವರೂ ಬೆರಳೆಣಿಕೆಯವರಿರಬಹುದೆಂಬ ವಿಶ್ವಾಸವೇ ನಮ್ಮನ್ನು ಕಾಪಾಡುತ್ತದೆ ಎನ್ನುವ ನಂಬಿಕೆಯಿರಲಿ. ಸಂಯಮ ಬದುಕಿನೊಂದಿಗೆ ಪ್ರತಿಕ್ಷಣ ಹೆಜ್ಜೆಹಾಕಲಿ. ಯಾರಿಗೂ, ಯಾವ ಕ್ಷಣವೂ ಅಂಜಬೇಕಾದ್ದಿಲ್ಲ. ವೃಕ್ಷದ ಗುರಿಯಂತೆ ನಮಗೂ ತಲುಪಬೇಕಾದ ಗುರಿ ಕಣ್ಣೆದುರು ಇರಬೇಕು. ಕಾಲೆಳೆಯುವವರು, ಜಗ್ಗುವವರು ನಗಣ್ಯ, ಅವರು ಅವರ ಪಾಡಿಗೆ ಇರಲಿ. ಅಪಾಯ ಆಗದಂತೆ ನಾವು ಜಾಗ್ರತೆ ವಹಿಸಬೇಕು. ಮನದಲ್ಲಿ ಅಡಗುವ ನಕಾರಾತ್ಮಕ ಭಾವನೆಗಳು, ಹಠ ಸಾಧಿಸುವುದು, ಒಂದು ಕೈ ನೋಡೋಣ ಎನ್ನುವುದು ಸಹ ಹೀಗೆಯೇ. ಅದನ್ನೆಲ್ಲ ಬೆಳೆಸುತ್ತಾ ಹೋದರೆ ಇಲ್ಲದ ರೋಗಗಳ ಗೂಡು ನಮ್ಮೀ ದೇಹ ಆಗಬಹುದು. ನಾಲ್ಕು ಚಂದದ ಮಾತುಗಳನ್ನಾಡಲು ಹಣ ಕೊಡಬೇಕೇ? ವೇದಧರ್ಮ ಏನು ಹೇಳುತ್ತದೆ "ಪರರಿಗೆ ಸದಾ ಉಪಕಾರ ಮಾಡು, ಕೇಡು ಬಗೆಯದಿರು,ಪೀಡಿಸದಿರು" ಎಂಬುದಾಗಿ. ಆದಕಾರಣ ಸಾಧ್ಯವಾದರೆ ಕೈಗೆ ಕೈ ಜೋಡಿಸೋಣ, ಸಹಕರಿಸೋಣ, ಚಂದ ನೋಡಿ ನಗುವುದು ಬೇಡ. ಎಲೆಗಳೆಲ್ಲ ಉದುರಿದ ಮರವನ್ನು ನೋಡಿ ವ್ಯಂಗ್ಯವಾಡಿದರೆ ನಮಗೆ ನಾವೇ ಅಪಚಾರ ಮಾಡಿದಂತೆ. ನಾಳೆಯ ದಿನ ಹಸಿರಿನಿಂದ ಕಂಗೊಳಿಸಬಹುದು, ಕಾಯುವ ತಾಳ್ಮೆ ಬೇಕು. ಹಣ್ಣಿನ ಸ್ವಲ್ಪ ಭಾಗ ಹಾಳಾಗಿದೆ ಎಂದು ಹಣ್ಣನ್ನೇ ಎಸೆಯುವುದಿಲ್ಲ. ಕತ್ತರಿಸಿ ಆ ಭಾಗವನ್ನೆಸೆದು ಒಳ್ಳೆಯದನ್ನು ತಿನ್ನಬಹುದು. ನಮ್ಮಲ್ಲಿರುವ ಸಣ್ಣಪುಟ್ಟ ದೋಷಗಳನ್ನು ದೊಡ್ಡದು ಮಾಡದೆ, ಸಾಧ್ಯವಾದರೆ ಸರಿಪಡಿಸುವ, ಇಲ್ಲವೇ ಬಿಟ್ಟುಬಿಡುವ. ಬಂಧುಗಳೇ, ನೆರಳು, ಫಲ, ಗಾಳಿ, ನೀರು, ಆಶ್ರಯ ನೀಡುವ ವೃಕ್ಷವಾಗೋಣ.
-ರತ್ನಾ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!