ಅಣ್ಣಯ್ಯನಿರುವಾಗ ಬನ್ನವು ಏತಕ್ಕೆ/
ಒಳಹೊರಗ ಕಾಯ್ವ ಶಿವನಾತ/
ತಂಗವ್ವ/
ನೆಮ್ಮದಿಲಿ ಉಸಿರ ಹೊರಚೆಲ್ಯಾಳು//
ಭಾರತ ದೇಶ ಸಂಸ್ಕೃತಿ-ಸಂಸ್ಕಾರಗಳ ನೆಲೆಬೀಡು, ಆಡೊಂಬಲವಾಗಿದೆ. ಇಲ್ಲಿ ಆಚರಿಸಲ್ಪಡುವ ಪ್ರತಿಯೊಂದು ಹಬ್ಬಕ್ಕೂ ಅದರದ್ದೇ ಆದ ಮಹತ್ವವಿದೆ. ಆಷಾಢ ಕಳೆದು ಬರುವ ಶ್ರಾವಣವೆಂದರೆ ಹಬ್ಬಗಳ ಮಾಸವೇ ಆಗಿದೆ. ‘ಶ್ರಾವಣವೆಂದರೆ ಶ್ರವಣ-ಧಾರಣ-ಸ್ಮರಣ-ಸ್ಫುರಣಗಳಿಗೆ ಪ್ರೋತ್ಸಾಹಿಸುವ, ಪ್ರೇರಣೆ ನೀಡುವ ತಿಂಗಳು. ಪವಿತ್ರವಾದ ಸಹೋದರತ್ವದ ಸಂಕೇತವಾದ ರಕ್ಷಾಬಂಧನ, ನೂಲುಹುಣ್ಣಿಮೆ ಅಥವಾ ನಾರಿಕೇಳ ಪೂರ್ಣಿಮೆ ಹಬ್ಬವೆಂದೂ ಕರೆಯುವ ಈ ಹಬ್ಬವನ್ನು ಶ್ರಾವಣ ಮಾಸದ ಹುಣ್ಣಿಮೆಯಂದು ಆಚರಿಸಲಾಗುವುದು. ಇಲ್ಲಿ ಹೊಸ ನೂಲಿಗೆ ಪ್ರಾಶಸ್ತ್ಯ. ದ್ವಿಜರು ಇದರ ಸಂಕೇತವಾಗಿ ಹೊಸ ಯಜ್ಞೋಪವಿತ ಧರಿಸುವರು. ಹೊಸತಾಗಿ ಉಪನಯನವಾದವರಿಗೆ ಮೊದಲ 'ಉಪಾಕರ್ಮ' ವಿಧಿ ವಿಧಾನದ ಮೂಲಕ ಜನಿವಾರ ಹಾಕಿಸುವರು, ಹೋಮಹವನಾದಿಗಳೂ ಇರುವುದು. ಕೆಲವೆಡೆ ಸಾಗರ ಕಿನಾರೆಯ ಜನ ನಾರಿಕೇಳ ಪೂರ್ಣಿಮೆ ಎಂದು ಆಚರಿಸುವರು. ನದಿ, ಸಮುದ್ರವನ್ನು ಪೂಜಿಸಿ, ತೆಂಗಿನಕಾಯಿಯನ್ನು ನೀರಿನಲ್ಲಿ ತೇಲಿಬಿಡುವರು. ತಮಗೆ ಅನ್ನ ನೀಡುವ ಸಮುದ್ರಕ್ಕೆ ಕೃತಜ್ಞತೆ ಸೂಚಿಸುವರೆಂಬ ಪ್ರತೀತಿಯಿದೆ.
ಈ ಹಬ್ಬದ ಪೌರಾಣಿಕ ಹಿನ್ನೆಲೆ ಅವಲೋಕಿಸಿದರೆ ವ್ರತನೆಂಬ ದಾನವನ ಉಪಟಳದಿಂದ ತನ್ನವನಾದ ಪುರಂದರನ ಕಾಪಾಡಲು ಶಚಿಯು ತ್ರಿಮೂರ್ತಿಗಳಲ್ಲಿ ಓರ್ವನಾದ ವಿಷ್ಣುವನ್ನು ಧ್ಯಾನಿಸಿ,ವಿಶೇಷವಾದ ದಾರವನ್ನು ಪಡೆದು ಪುರಂದರನ ಮಣಿಕಟ್ಟಿಗೆ ರಕ್ಷೆಯಾಗಿ ಕಟ್ಟಿದಳಂತೆ. ಪಂಚವಲ್ಲಭೆ ಪಾಂಚಾಲಿಯು ಶ್ರೀಕೃಷ್ಣನಿಗೆ ದಾರವನ್ನು ಬಿಗಿದು ಸಹೋದರನಾಗಿ ಸ್ವೀಕರಿಸಿ, ಪಾಂಡವರ ರಕ್ಷಣೆ ಮಾಡೆಂದು ಪ್ರಾರ್ಥಿಸಿದಳಂತೆ. ಯಮನಿಗೆ ಸಹೋದರಿ ಯಮಿ ರಕ್ಷೆಯನ್ನು ಬಿಗಿದು ಆಶೀರ್ವಾದ ಬೇಡಿದಳಂತೆ. ಬಲಿ ಚಕ್ರವರ್ತಿಗೆ ರಾಖಿಯನ್ನು ಕಟ್ಟಿ ಮಾತೆ ಲಕ್ಷ್ಮೀದೇವಿ ತನ್ನ ಇನಿಯನನ್ನು ಬಂಧನದಿಂದ ಬಿಡಿಸಿದಳಂತೆ.
ಭ್ರಾತೃತ್ವದ ಅರ್ಥ ಬಹಳ ವಿಶಾಲವಾದುದು. ಸೋದರ ಸೋದರಿಯ ಪಾಲಿಗೆ ಅಪ್ಪನ ಸ್ಥಾನದಲ್ಲಿ ನಿಂತು ಜವಾಬ್ದಾರಿ ತೆಗೆದುಕೊಳ್ಳಬೇಕಾದ ಧೀಮಂತ ವ್ಯಕ್ತಿ. ಸೋದರ ಪ್ರೀತಿ, ವಾತ್ಸಲ್ಯ ಅನುಪಮ, ಅವರ್ಣನೀಯ, ಊಹೆಗೂ ನಿಲುಕದ್ದು, ಗಾಢವಾದ್ದು.ತನ್ನ ಪುಟ್ಟ ತಂಗಿಯನ್ನು ಕೈಹಿಡಿದು ಜಾಗ್ರತೆಯಿಂದ ನಡೆಸಿಕೊಂಡುಹೋಗುವ ಸನ್ನಿವೇಶದ ಕಲ್ಪನೆಯೇ ಸೊಗಸು.
ಬಂಧುತ್ವದ ಬೆಲೆ ಕಡಿಮೆಯಾಗುತ್ತಿರುವ ಕಾಲಘಟ್ಟದಲ್ಲಿ ಬಂದು ನಿಂತಿದ್ದೇವೆಯೇ ಎನುವ ಸಂಶಯ ಕಾಡತೊಡಗಿದೆ.ದೂರದರ್ಶನ ಸ್ಥಿರವಾಣಿ ಸಂಸ್ಕೃತಿಯಿಂದ ಚರವಾಣಿ,ಚಲಿಸುವ ವಾಣಿ ಪ್ರಪಂಚಕ್ಕೆ ಬಂದಾಗಿದೆ,ಸಂಬಂಧಗಳು ಕೇವಲ ಮೊಬೈಲ್ ಮಾತುಗಳಲ್ಲಿ ಅಡಗಿದೆ.ಕಳೆದುಕೊಂಡ ಬೆಸುಗೆ ಮತ್ತೆ ಚಿಗುರಲು ಈ 'ರಕ್ಷಾಬಂಧನ' ನಾಂದಿಯಾಗಬಹುದು.ಆಶ್ವಾಸನೆ,ವಿಶ್ವಾಸ,ನಂಬಿಕೆ ಮರಳಿ ತರುವ ಕೆಲಸವಾಗಲಿ.ಒಂಟಿತನ, ಖಿನ್ನತೆ, ಹತಾಶೆ, ಬೇಸರ ಕಾಡಿದಾಗ ಪರಸ್ಪರ ಸಹೋದರ ಸಹೋದರಿಯಲ್ಲಿ ತನಗಾಗುವ ಮನಸ್ಸಿನ ತುಮುಲಗಳನ್ನು ಮನಬಿಚ್ಚಿ ಹೇಳಿಕೊಳ್ಳಬಹುದು. ಹೃದಯದಲ್ಲಡಗಿದ ಬೇನೆ-ಬೇಸರಿಕೆ ಹೊರಬರಬಹುದಲ್ಲವೇ? ತಾಯಿ, ಸಹೋದರಿಗಿರುವ ತಾಳ್ಮೆ ಮತ್ತೊಬ್ಬರಿಗೆ ಬರಲು ಸಾಧ್ಯವಿಲ್ಲ. ಬೆನ್ನು ತಟ್ಟಿ ಪ್ರೋತ್ಸಾಹಿಸುವವರು ಬೇಕು. ಇದುವೇ ಸೋದರ-ಸೋದರಿಯರ ಮಧುರ ಬಾಂಧವ್ಯದ ಗುಟ್ಟು. ಶಾಶ್ವತ ಸಂಬಂಧದ ನಡುವೆ ಇತರರ ಪ್ರವೇಶ ಸಲ್ಲದು, ಬರಲೂ ಬಾರದು.
ಕೇವಲ ಬಂಧಿಸುವ ಬಣ್ಣದ ದಾರವಾಗದೆ ಭಾವನೆಗಳ ಗುಚ್ಛವಾಗಲಿ, ಮೌಲ್ಯಗಳ ಸೇತುವಾಗಲಿ. ಇತಿಹಾಸದತ್ತ ನೋಡಿದರೆ ವೀರ ಸಾವರ್ಕರ್ ಸಾಮೂಹಿಕವಾಗಿ ಸಕಲರಿಗೂ ಅರಶಿನ ಕುಂಕುಮ ಕೊಡಿಸಿ,ಭರವಸೆಯನ್ನು ನೀಡಿದ ಉಲ್ಲೇಖವಿದೆ.ವೀರ ಭಗತ್ ಸಿಂಗನಿಗೆ ಆಶ್ರಯ ಕಲ್ಪಿಸಿದ ದುರ್ಗಾದೀದಿ, ತಾನಾಜಿ ಕುಟುಂಬಕ್ಕೆ ಸಹೋದರನಾಗಿ ಬೆಂಬಲವಿತ್ತ ಛತ್ರಪತಿ ಶಿವಾಜಿ, ಲಕ್ಷ್ಮೀಬಾಯಿ ರಣಸಿಂಹಿಣಿಯನ್ನು ವೀರವನಿತೆಯಾಗಿ ರೂಪಿಸಿದ ತಾತ್ಯಾಟೋಪಿ ಸಹೋದರನ ಸ್ಥಾನ ನೀಡಿ ಹರಸಿದ್ದು ಎಲ್ಲವನ್ನೂ ಓದುವಾಗ ಮೈರೋಮಾಂಚನಗೊಳಿಸುವುದು. ಐತಿಹಾಸಿಕ ಮಾಹಿತಿಯಂತೆ ಕೆಲವು ರಾಜರು ಶತ್ರು ರಾಜರನ್ನು ಸದೆಬಡಿಯಲು ಹವಣಿಸಿ, ಅನಂತರ ಅವರ ಮಗಳಂದಿರೋ, ಸಹೋದರಿಯರೋ ಇದ್ದರೆ ರಾಖಿಯನ್ನು ಕಟ್ಟಿ, ವೈರ ಮರೆತು ಒಗ್ಗೂಡುತ್ತಿದ್ದರಂತೆ. ರಾಖಿಯನ್ನು ಕಟ್ಟಿದ ಸಹೋದರಿಯರಿಗಾಗಿ ಪ್ರಾಣತ್ಯಾಗ ಮಾಡಿದ ಕಥೆಗಳಿವೆ. ಅಣ್ಣ-ತಮ್ಮಂದಿರಿಗೆ,ಅಕ್ಕ-ತಂಗಿಯರು ರಕ್ಷೆಯಾಗಿ ರಾಖಿಯನ್ನು ಈ ಕೆಳಗಿನ ಸ್ತೋತ್ರವನ್ನು ಹೇಳುವುದರ ಮೂಲಕ ಮಣಿಕಟ್ಟಿಗೆ ಬಿಗಿಯುತ್ತಾರೆಂದು ಧರ್ಮಶಾಸ್ತ್ರದಲ್ಲಿದೆ. ಇಂದಿನ ನಮ್ಮ ಧಾರ್ಮಿಕ ಹಿನ್ನೆಲೆಯಲ್ಲಿ ಉಪನಯನ,ಮದುವೆ, ವ್ರತಪೂಜೆ,ಯಜ್ಞ-ಯಾಗಾದಿಗಳಲ್ಲಿ 'ರಕ್ಷೆ ' ಕಟ್ಟುವ ಪದ್ಧತಿ ಬಂದಿರಬಹುದು ಕಾಣುತ್ತದೆ.
ಯೇನ ಬದ್ಧೋ ಬಲೀ ರಾಜಾ ದಾನವೇಂದ್ರೋ ಮಹಾಬಲ:/
ತೇನ ತ್ವಾಂ ಪ್ರತಿಬಧ್ನಾಮಿ ರಕ್ಷೇ ಮಾಚಲ, ಮಾಚಲ//
ಸರ್ವ ರೋಗೋಪಶಮನಂ ಸರ್ವಾಶುಭವಿನಾಶಿನಂ/
ಸಕೃತ್ ಕೃತೇನಾಬ್ದಮೇಕಂ ಯೇನ ರಕ್ಷಾ ಕೃತೋಭವೇತ್//
ರಕ್ಷಾ ಬಂಧನದ ಮಹತ್ವವನ್ನು ಈ ಶ್ಲೋಕ ಸಾರುತ್ತದೆ. ಸರ್ವರೋಗಗಳನ್ನೂ ದೂರಮಾಡುವುದಲ್ಲದೆ, ಎಲ್ಲಾ ಅಶುಭಗಳನ್ನೂ ನಿವಾರಿಸುವುದು. ಎಲ್ಲಾ ದುಷ್ಟಶಕ್ತಿಗಳಿಂದ ರಕ್ಷಿಸು ಎನ್ನುವ ಪ್ರಾರ್ಥನೆಯೊಂದಿಗೆ ರಕ್ಷೆಯನ್ನು ಕಟ್ಟಿ 'ರಕ್ಷಾ ಬಂಧನ' ಆಚರಿಸಿ ಸಂಭ್ರಮಿಸುವರು. ಪರಸ್ಪರ ಉಡುಗೊರೆ ನೀಡುವರು.
ಇದು ಒಂದು ರೀತಿಯ ರಕ್ಷಾ ಕವಚದಂತೆ. ಧಾರ್ಮಿಕ ಹಿನ್ನೆಲೆ ನಂಬಿಕೆಯಂತೆ, ಏನೇ ಕಷ್ಟ ಬಂದರೂ ಸಹೋದರರ ರಕ್ಷಣೆಯಿದೆ ಎನ್ನುವ ನಂಬಿಕೆ,ವಿಶ್ವಾಸ ಸಹೋದರಿಯರಿಗೆ.ಸೋದರಿಗೆ ಅಣ್ಣತಮ್ಮಂದಿರ 'ನಾನಿದ್ದೇನೆ,ಹೆದರದಿರು' ಎನುವ ಆಶ್ವಾಸನೆ ಇದರ ಹಿನ್ನೆಲೆ ಮತ್ತು ಸಂಕೇತ.ಭರವಸೆಗಳ ಹೂರಣ,ಸಂಬಂಧಗಳನ್ನು ಗಟ್ಟಿಗೊಳಿಸುವಿಕೆ.ಅಕ್ಷತೆಯ ಮೂಲಕ ಆಶೀರ್ವಾದ.ದೇಶ,ಭಾಷೆ,ಜನಾಂಗ,ಜಾತಿ,ಧರ್ಮ-ಪಂಥಗಳ ಹೆಸರಿನಲ್ಲಿ ಸಂಘರ್ಷ ಮಾಡದೆ,ಸಮಾಜದ ಏಕತೆ,ಅಖಂಡತೆ,ಐಕ್ಯತೆ, ಸ್ನೇಹ, ಸಹಕಾರ, ಪರಸ್ಪರ ಗೌರವ, ರಾಷ್ಟ್ರರಕ್ಷಣೆಯೊಂದಿಗೆ ನಮ್ಮ ಸಹೋದರಿಯರ ಮಾನ-ಪ್ರಾಣದ ರಕ್ಷಣೆ, ಪರಸ್ತ್ರೀ --ಪುರುಷರಲ್ಲಿ ಸೋದರ ಮನೋಭಾವ ಬೆಳೆಸಿಕೊಳ್ಳಬೇಕಾದ್ದು ಇಂದು ಅಗತ್ಯವಾಗಿದೆ. ಬಂಧುಗಳೇ,"ಸ್ನೇಹ ಸಂಜೀವಿನಿ ಮಂತ್ರ" ವನ್ನು ಸಾರುವ ಪವಿತ್ರವಾದ 'ರಕ್ಷಾಬಂಧನ' ಹಬ್ಬವನ್ನು ಎಲ್ಲರೊಂದಾಗಿ ಖುಷಿಯಿಂದ ಆಚರಿಸಿ ಸಂಭ್ರಮಿಸೋಣ. ಎಲ್ಲರಿಗೂ ಒಳಿತಾಗಲಿ.
ಸಂಗ್ರಹ:(ಪುರಾಣ,ಇತಿಹಾಸ ಅನುಭವಗಳ ನೆನಪಿನಕ್ಷರಗಳ ತೋರಣದ ಹೂರಣದಿಂದ)
-ರತ್ನಾ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!