ಒಮ್ಮೆ ೫-೬ರ ವಯಸ್ಸಿನ ಸಣ್ಣ ಮಗುವಿನ ಹತ್ತಿರ ಕೇಳಿದೆ "ನಿನಗೆ ತುಂಬಾ ಇಷ್ಟ,ಪ್ರೀತಿ ಯಾರ ಹತ್ತಿರ" ಎಂಬುದಾಗಿ. ತಕ್ಷಣ ಮಗು ಹೇಳಿದ ಮಾತು "ಚಾಮಿ" (ದೇವರು) ಹತ್ತಿರ. "ಯಾಕೆ ಪುಟ್ಟು "ಎಂದೆ. ಅಮ್ಮ ಹೇಳಿದ್ದಾರೆ "ಚಾಮಿ ಬೇನೆ ಆದಾಗ ಗುಣ ಮಾಡ್ತಾನಂತೆ, ಹಸಿವೆ ಆದಾಗ ಊಟ ಕೊಡ್ತಾನಂತೆ, ನಿದ್ದೆ, ನೀರು, ಮನೆ ಕೊಡ್ತಾನಂತೆ. ದೊಡ್ಡ ಆಗುವಾಗ ವಿದ್ಯೆ, ಕೆಲಸ ಕೊಡ್ತಾನಂತೆ. ದಿನಾ ಭಜನೆ ಮಾಡಿದರೆ, ಚಾಮಿ ಹೆಸರು ಹೇಳಿದರೆ ಜ್ವರ ಬರುದಿಲ್ಲವಂತೆ. ಪ್ರೀತಿ ಕೊಟ್ಟರೆ ಪ್ರೀತಿಯಿಂದ ಕಾಪಾಡುತ್ತಾನಂತೆ. ಎಷ್ಟೊಂದು ಅರಿತುಕೊಂಡಿದೆಯಲ್ಲ? ಈ ಮಗು ಅಂದುಕೊಂಡೆ. ಮನೆಯ ಹಿರಿಯರ ನಡೆನುಡಿಯೂ ಪರಿಣಾಮ ಬೀರಿರಬಹುದು. ಹೌದು, ಹೆತ್ತಮ್ಮನ ಪಾಠ, ಸಂಸ್ಕಾರದ ಫಲವಿದು. 'ಬಿತ್ತಿದಂತೆ ಬೆಳೆ' ಅಲ್ಲವೇ? ಮಗುವಿನ ಮುಗ್ದತೆಗೆ ಮನಸೋತು ತಲೆನೇವರಿಸಿದೆ. ಮಗು ಏನೂ ಅರಿಯದ, ಸ್ವಚ್ಛ ಮನದ ಸುಂದರ ಪುಷ್ಪ. ಅದೊಂದು ಬಿಳಿಯ ಖಾಲಿ ಹಾಳೆ. ಆದರೆ ಬೆಳೆದಂತೆ ನೋಡಿ, ಕೇಳಿ, ಅನುಕರಣೆ ಮಾಡಿ ಕಲಿಯುವುದು. ಮನೆಯ ಸದಸ್ಯರ ನಡೆನುಡಿಯನ್ನೇ ನೋಡುತ್ತಾ ತಾನೂ ಹಾಗೆಯೇ ಮಾಡಲು ಪ್ರಯತ್ನಿಸುತ್ತದೆ. ಹಾಗಾಗಿ ಮಗುವಿನೊಂದಿಗೆ ಇರುವವರು ಜಾಗ್ರತೆಯಾಗಿರಬೇಕು. ಮುಂದೆ ಸ್ನೇಹಿತರು, ಶಾಲೆ ಎಂದು ಬಹಳಷ್ಟು ಕಲಿಯುವುದು. ಒಂದು ವಯಸ್ಸಿನ ಹಂತಕ್ಕೆ ಬಂದಾಗ ತನ್ನದೇ ಸ್ವ ಆಲೋಚನೆಯ ಸಾಮರ್ಥ್ಯ ಬಂದಾಗ ಯಾರ ಮಾತೂ ರುಚಿಸದು. ಒಂದು ವೇಳೆ ರುಚಿಸಿದರೆ ಹೆತ್ತವರ ಸೌಭಾಗ್ಯವೇ ಸರಿ. ಸಂಸ್ಕಾರ ಒಳ್ಳೆಯದಾದರೆ ಹೆತ್ತವರಿಗೂ ಸಂತೋಷ. ನನ್ನ ಪರಿಚಯದ ದಂಪತಿಗಳು ಬಹಳ ವರ್ಷಗಳ ಕಾಲ ನೋಡಿ, ಅನಂತರ ಒಂದು ಮಗುವನ್ನು ದತ್ತು ತೆಗೆದುಕೊಂಡು ಸಾಕಿ ಬೆಳೆಸುತ್ತಿದ್ದಾರೆ. ಒಮ್ಮೊಮ್ಮೆ ಫೋನ್ ಸಂಭಾಷಣೆ ನಡೆದಾಗ ಮಗುವಿನ ಬಗ್ಗೆ ವಿಚಾರಿಸುವುದಿದೆ. ವಿದ್ಯಾಭ್ಯಾಸ ಸಾಧಾರಣ, ತಲೆಯೇ ಅಷ್ಟೆ ಎಂದಿದ್ದರು. ಈಗ ವರ್ಷ ೧೮ ಆದಾಗ ಹುಡುಗ ಪೂರ್ತಿ ಬದಲಾವಣೆ ಅಕ್ಕ ಹೇಳಿದರು. ಸ್ವಲ್ಪವೂ ಹೇಳಿದ್ದು ಕೇಳುವುದೇ ಇಲ್ಲ, ಮಕ್ಕಳಿಲ್ಲದೇ ಇದ್ದರೂ ಅದೊಂದು ನೋವು ಅಷ್ಟೆ, ಈ ಮಗುವನ್ನು ತೆಗೆದುಕೊಳ್ಳುವ ಕೆಲಸ ಬೇಡವಿತ್ತು, ದಿನಾ ಕಣ್ಣೀರಿನ ಬದುಕು ನಮ್ಮದು ಹೇಳುವಾಗ ಆ ತಂದೆಯ ಗಂಟಲುಬ್ಬಿ ಬಂದ ಅರಿವಾಯಿತೆನಗೆ. ಅತ್ಯಂತ ಸಂಸ್ಕಾರವಿದ್ದವರೂ, ಸಾತ್ವಿಕರೂ, ಭಜನೆ, ಪೂಜೆಯಿದ್ದ ಮನೆಯಾಗಿ ಹೀಗಾಯಿತಲ್ಲ ಎಂದು ಮರುಗಿದೆ. "ಗಿಡವಾಗಿಯೂ ಬಗ್ಗಲಿಲ್ಲ ಅಕ್ಕ, ಮರವಾದ ಮೇಲೆ ಹೇಗೂ ಇಲ್ಲ" ಎಂದರು. ನಾಲ್ಕು ಸಾಂತ್ವನದ ಮಾತುಗಳನ್ನಾಡಿದೆ. ಎಲ್ಲವೂ ಪಡೆದುಕೊಂಡು ಬಂದುದು ಅಲ್ವವೇ? 'ಪಾಲಿಗೆ ಬಂದದ್ದು ಪಂಚಾಮೃತ 'ಸ್ವೀಕರಿಸಿ ಮುಂದೆ ಸಾಗಬೇಕಷ್ಟೆ. ಸಾಧ್ಯವಾದಷ್ಟು ಎಡವದಂತೆ ನೋಡಿಕೊಳ್ಳೋಣ. ಎಡವಿದಾಗ ತಲೆಯ ಮೇಲೆ ಕೈಹೊತ್ತು ಕೂರದೆ ಹೊಂದಾಣಿಕೆಯ ಬದುಕನ್ನು ನಾವೇ ಕಂಡುಕೊಳ್ಳೋಣ,ಕಟ್ಟಿಕೊಳ್ಳೋಣ.
-ರತ್ನಾ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!