ಮೊದಲು ಆಳಾಗುವುದನ್ನು ಕಲಿಯಿರಿ, ಆಗ ನಾಯಕನಾಗುವ ಅರ್ಹತೆ ತಾನಾಗಿಯೇ ಬರುತ್ತದೆ  ಈ ಬಂಗಾರದಷ್ಟೇ ಬೆಲೆ ಬಾಳುವ ಮಾತುಗಳನ್ನಾಡಿದವರು ಬೇರಾರು ಅಲ್ಲ ಸ್ವಾಮಿ ವಿವೇಕಾನಂದರು. ಹೌದಲ್ವಾ? ಆಳಾಗಿ ದುಡಿಯದೆ ಅರಸನಾಗುವುದು ಹೇಗೆ? ಬದುಕ ಹಾದಿಯ ಕಷ್ಟ-ಸುಖ, ನೋವು-ನಲಿವಿನ ಅನುಭವವಿರಬೇಕು. ಹಸಿದವನಿಗೆ ಮಾತ್ರ ಅನ್ನದ ಮಹತ್ವ ತಿಳಿಯಬಹುದು. ಉದರ ತುಂಬಿ ತೇಗುವವಗೆ ಅನ್ನದ ಬೆಲೆ ಅರಿವಿಗೆ ಬಾರದು. ನಮ್ಮ ಯಶಸ್ಸು ನಮ್ಮ ಪ್ರಯತ್ನ ಮತ್ತು ಸಂಕಲ್ಪದ ಮೇಲೆ ನಿಂತಿದೆ. ಕನಸು ಕಾಣುವುದು ತಪ್ಪಲ್ಲ, ಅದನ್ನು ನನಸಾಗಿಸುವ ದಿಕ್ಕಿನತ್ತ ಹೆಜ್ಜೆಯೂರೋಣ. ಕಂಡ ಕಲ್ಪನೆಗಳನ್ನು ಸಾಕಾರಗೊಳಿಸುವತ್ತ ನಮ್ಮ ಪ್ರಯತ್ನವಿರಲಿ. ಧೈರ್ಯ, ಮುನ್ನುಗ್ಗುವ ಛಲ, ಸಾಧಿಸಬಲ್ಲೆನೆಂಬ ಮನೋಬಲವಿರಲಿ. 'ಬಿಳಿ ಕಾಲರಿನ'  ಕೆಲಸವೇ ಆಗಬೇಕೆಂಬ ಬಯಕೆಯೇನೋ ಸಹಜ. ಆದರೆ ಮೊದಲು ಸಿಕ್ಕಿದ ಕೆಲಸದಲ್ಲಿ ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ದುಡಿದರೆ ಮುಂದೆ ಒಳ್ಳೆಯದಾಗಬಹುದೆಂಬ ನಂಬಿಕೆಯಿರಬೇಕು. ಸಂಬಳ ಕಡಿಮೆ ಎನ್ನುವ ಕೀಳರಿಮೆ ಬೇಡ. ಹೊಲ, ಗದ್ದೆ, ತೋಟದ ಕೃಷಿ ಯಾರಿಗೂ ಬೇಡ. ಇದ್ದವರು ನಕಾರ ಹೇಳುವುದು ಕಾಣುತ್ತದೆ. ಇಲ್ಲದವರಿಗೆ ಹೇಗೂ ಇಲ್ಲ. ಇದೇ ಮುಂದುವರಿದರೆ ಮುಂದೆ ಏನಾಗಬಹುದೆಂಬ ಯೋಚನೆ. ಎಲ್ಲವೂ ಹಣ ಕೊಟ್ಟರೆ ಸಿಗುತ್ತದೆ ಎನ್ನುವ ಭ್ರಮೆ. ಭ್ರಮೆ ಕಳಚಿದಾಗ ಶೂನ್ಯ  ಮಾತ್ರ. ನಮ್ಮ ಹಿರಿಯರ ಕಷ್ಟದ ದಿನಗಳನ್ನು ಒಮ್ಮೆ ಜ್ಞಾಪಿಸಿಕೊಳ್ಳೋಣ. ಪ್ರತಿ ಮಗುವಿಗೂ ಊಟದ ಹಿಂದಿನ ಗಳಿಕೆ ಮುಂದಿನ ಪರಿಸ್ಥಿತಿಯನ್ನು ತಿಳಿಸೋಣ.

-ರತ್ನಾ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ