ಒಮ್ಮೆ ಯೋಚಿಸಿ, ಬೆಳಿಗ್ಗೆ ಎದ್ದು ಕೆಲಸ ಶುರು ಮಾಡುವಾಗ ನಿಮ್ಮ ಲ್ಯಾಪ್ಟಾಪ್ "ನನಗೆ ಇವತ್ತು ಕೆಲಸ ಮಾಡಲು ಮನಸ್ಸಿಲ್ಲ, ತಲೆನೋಯುತ್ತಿದೆ" ಎಂದು ಮುನಸಿಕೊಂಡರೆ? ಅಥವಾ ನೀವು ದಿನವಿಡೀ ಗೇಮ್ ಆಡುತ್ತಿದ್ದಾಗ ಅದು ಬೇಸರಗೊಂಡು ತಾನಾಗಿಯೇ ಬಂದ್ ಆದರೆ?
ಇದು ಯಾವುದೋ ಸೈ-ಫೈ ಸಿನಿಮಾದ ಫ್ಯಾಂಟಸಿ ಕಥೆಯಲ್ಲ. ಆಸ್ಟ್ರೇಲಿಯಾದ ಕೋರ್ಟಿಕಲ್ ಲ್ಯಾಬ್ಸ್ ವಿಜ್ಞಾನಿಗಳು ನಾವೆಲ್ಲರೂ ಬೆರಗಾಗುವಂತಹ ಒಂದು ಹೊಸ ಜಗತ್ತನ್ನು ಸೃಷ್ಟಿಸಿದ್ದಾರೆ. ಅವರು ಸಿಲಿಕಾನ್ ಚಿಪ್ಗಳ ಮೇಲೆಯೇ ನಿಜವಾದ ಜೀವಂತ ಮಾನವ ಮತ್ತು ಇಲಿಗಳ ನರಕೋಶಗಳನ್ನು ಬೆಳೆಸಿದ್ದಾರೆ! ವಿಜ್ಞಾನಿಗಳು ಪ್ರೀತಿಯಿಂದ ಈ ಹೊಸ ಜೀವಿಗೆ ಇಟ್ಟ ಹೆಸರು ಡಿಶ್ ಬ್ರೈನ್.
ಆ ಸೂಕ್ಷ್ಮ ನರಕೋಶಗಳ ಜಾಲಕ್ಕೆ ವಿದ್ಯುತ್ ಸಂಕೇತಗಳನ್ನು ನೀಡಿ, 'ಪಾಂಗ್' ಎಂಬ ವಿಡಿಯೋ ಗೇಮ್ ಆಡಲು ಬಿಟ್ಟಾಗ ನಡೆದ ಪವಾಡವಿದು. ನಾವು ಕೋಡಿಂಗ್ ಮಾಡಿ ಸೃಷ್ಟಿಸಿದ ಬಲಿಷ್ಠ AI ಒಂದಕ್ಕೆ ಈ ಗೇಮ್ ಕಲಿಯಲು ಮೂರುವರೆ ಗಂಟೆ ಬೇಕಾಯಿತು. ಆದರೆ ಈ ಚೂರು ಜೀವಂತ ಮಿದುಳು ಕೇವಲ ಐದೇ-ಐದು ನಿಮಿಷದಲ್ಲಿ ಸಂಪೂರ್ಣವಾಗಿ ಗೇಮ್ ಆಡುವುದನ್ನು ಕಲಿತುಬಿಟ್ಟಿತು! ಆ ಚಿಕ್ಕ ನರಕೋಶಗಳು ಗೊಂದಲವಿಲ್ಲದ ಶಾಂತ ವಾತಾವರಣಕ್ಕಾಗಿ ಹೆಣಗಾಡುತ್ತಾ, ತಾವಾಗಿಯೇ ಆಟದ ನಿಯಮವನ್ನು ಗ್ರಹಿಸಿದ ರೀತಿ ನಿಜಕ್ಕೂ ಬೆರಗು ಮೂಡಿಸುವಂತದ್ದು.
ಇಲ್ಲಿಂದ ಮುಂದಿನ ಪಯಣ ಎಲ್ಲೋ ಒಂದು ಕಡೆ ರೋಮಾಂಚನ...
ನಾಳೆ 2050 ರ ಹೊತ್ತಿಗೆ ನಮ್ಮ ಬದುಕು ಹೇಗಿರಬಹುದು ಎಂದು ಕಲ್ಪಿಸಿಕೊಳ್ಳಿ. ನಿಮ್ಮ ಕಂಪ್ಯೂಟರ್ಗೆ ಹ್ಯಾಂಗ್ ಆದಾಗ ಟೆಕ್ ಸಪೋರ್ಟ್ಗೆ ಕರೆ ಮಾಡಿದರೆ, ಅವರು "ಅದಕ್ಕೆ ಚಾರ್ಜರ್ ಹಾಕಿ" ಎಂದು ಹೇಳುವ ಬದಲು, "ಪಾಪ ಅದಕ್ಕೆ ನಿದ್ದೆ ಬಂದಿದೆ, ಸ್ವಲ್ಪ ಗ್ಲೂಕೋಸ್ ನೀರು ಕೊಟ್ಟು ವಿಶ್ರಾಂತಿ ಕೊಡಿ" ಎನ್ನಬಹುದು. ಹೊಸ ಗೇಮ್ ಆಡಲು ಕೂತಾಗ ನಿಮ್ಮ PC ಬ್ರೈನ್ "ಇವತ್ತು ನನಗೆ ಮೂಡ್ ಇಲ್ಲ, ನಾಳೆ ಆಡೋಣ" ಎಂದು ನಿಮ್ಮನ್ನೇ ರಿಜೆಕ್ಟ್ ಮಾಡಬಹುದು. ಎಲ್ಲಕ್ಕಿಂತ ವಿಚಿತ್ರ ಎಂದರೆ, ನಾಳೆ ನಮ್ಮ ಕಂಪ್ಯೂಟರ್ಗಳಿಗೆ ಸೈಬರ್ ವೈರಸ್ ದಾಳಿ ಮಾಡುವುದಿಲ್ಲ, ಬದಲಿಗೆ ನಿಜವಾದ ವೈರಲ್ ಫೀವರ್ ಬಂದು, ನಾವು ಅದಕ್ಕೆ ಸಿರಪ್ ಹುಯ್ಯಬೇಕಾಗಬಹುದ?!
ಆದರೆ ಈ ಹೊಸ ತಂತ್ರಜ್ಞಾನ ನಮಗೆ ತರಲಿರುವ ಭರವಸೆ ಸಣ್ಣದದಲ್ಲ. ಇಂದಿನ ದೈತ್ಯ AI ಸೂಪರ್ ಕಂಪ್ಯೂಟರ್ಗಳು ನದಿಗಳ ಹರಿವನ್ನೇ ಇಂಗಿಸುವಷ್ಟು ವಿದ್ಯುತ್ ನುಂಗುತ್ತಿವೆ. ಆದರೆ ಜೀವಂತ ಮಿದುಳು ಕಾರ್ಯನಿರ್ವಹಿಸುವುದು ಕೇವಲ ಒಂದು ಸಣ್ಣ ಬಲ್ಬ್ಗೆ ಬೇಕಾಗುವಷ್ಟು, ಅಂದರೆ 20 ವ್ಯಾಟ್ ವಿದ್ಯುತ್ನಲ್ಲಿ! ಆಲ್ಝೈಮರ್ಸ್, ಮಿರ್ಗಿ ರೋಗಗಳಂತಹ ಭಯಾನಕ ಕಾಯಿಲೆಗಳಿಗೆ ಮದ್ದು ಹುಡುಕಲು ಇನ್ಮುಂದೆ ಮೂಕ ಪ್ರಾಣಿಗಳ ಮೇಲೆ ರಕ್ತಸಿಕ್ತ ಪ್ರಯೋಗಗಳನ್ನು ಮಾಡುವ ಅಗತ್ಯವೇ ಇರುವುದಿಲ್ಲ. ಈ ಪುಟ್ಟ ಜೈವಿಕ ಚಿಪ್ಗಳೇ ಕೋಟಿ ಕೋಟಿ ಜೀವಗಳನ್ನು ಉಳಿಸಬಹುದು.
ಆದರೂ ಮನಸ್ಸಿನ ಮೂಲೆಯಲ್ಲಿ ಒಂದು ಪ್ರಶ್ನೆ ಕಾಡದೇ ಇರದು. ನಾಳೆ ಈ ಜೀವಂತ ಜೀವಕೋಶಗಳಿಗೆ ನೋವಿನ ಅನುಭವವಾದರೆ? ಅವುಗಳಿಗೆ ಭಾವನೆಗಳು ಮೂಡಿದರೆ? ನಮಗಾಗಿ ದುಡಿಯುವ ಈ ಡಿಜಿಟಲ್ ಮಿದುಳುಗಳಿಗೆ ಉಸಿರಿದ್ದರೂ ಸ್ವತಂತ್ರ ಬದುಕಿರಲ್ಲವಲ್ಲ ಎಂಬ ಅಪರಾಧಿ ಪ್ರಜ್ಞೆ ಕಾಡಿದರೆ ಏನು ಮಾಡುವುದು?
ವಿಜ್ಞಾನ ನಮಗಾಗಿ ಜೈವಿಕ ಕಂಪ್ಯೂಟಿಂಗ್ನ ಹೊಸ ಬಾಗಿಲನ್ನಂತೂ ತೆರೆದಿದೆ. ಇನ್ಮುಂದೆ ನಾವು ಕಂಪ್ಯೂಟರ್ಗಳನ್ನು ಬರೀ ಚಾರ್ಜ್ ಮಾಡುವುದಿಲ್ಲ, ಬಹುಶಃ ಪ್ರೀತಿಯಿಂದ ಸಾಕಿ ಬೆಳೆಸಬೇಕಾಗಬಹುದು!
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!