ನಮ್ಮ ತಾತ-ಮುತ್ತಜ್ಜಂದಿರ ಕಾಲದಲ್ಲಿ ನಮ್ಮ ಹೊಲದ ರೂಪವೇ ಬೇರೆಯಾಗಿತ್ತು. ಜಮೀನಿನಲ್ಲಿ ಬಣ್ಣ ಬಣ್ಣದ ಅವರೆ, ಹುರುಳಿ, ಭತ್ತ, ರಾಗಿ, ಹಸಿರು ತರಕಾರಿಗಳು ಮತ್ತು ಸಾಲಾಗಿ ನಿಂತ ತೆಂಗಿನ ಮರಗಳು ನಗುತ್ತಿದವಂತೆ. ಆದರೆ ಕಾಲ ಬದಲಾದಂತೆ, ಅವಿಭಕ್ತ ಕುಟುಂಬಗಳು ಒಡೆದು ಹೋದಂತೆ, ಮನೆಯಲ್ಲಿ ಕೆಲಸ ಮಾಡುವ ಕೈಗಳು ಕಡಿಮೆಯಾದವು. ಇಂದು ನನ್ನ ಅಪ್ಪ-ಅಮ್ಮ ಇಬ್ಬರೇ ಇಡೀ ತೋಟವನ್ನು ಕಾಯುತ್ತಿದ್ದಾರೆ. ನಾನು ಮತ್ತು ನನ್ನ ತಮ್ಮ ನಗರದ IT ಕೆಲಸದಲ್ಲಿದ್ದೇವೆ.

ಆಳುಗಳ ಅಭಾವ ಮತ್ತು ನಿರ್ವಹಣೆಯ ಸವಾಲುಗಳಿಂದಾಗಿ ಕೊನೆಗೆ ನಮ್ಮ ಹೊಲದಲ್ಲಿ ತೆಂಗು ಮತ್ತು ಅಡಿಕೆಗೆ ಮಾತ್ರ ಜಾಗ ಉಳಿಯಿತು. ತೆಂಗಿನ ಮರವನ್ನು ಸುಮ್ಮನೆ 'ಕಲ್ಪವೃಕ್ಷ' ಎಂದು ಕರೆಯುವುದಿಲ್ಲ. ನಾವು ಕೊಡುವ ಅಲ್ಪಸ್ವಲ್ಪ ಉಪಚಾರಕ್ಕೂ ಅದು ನಮ್ಮ ಕುಟುಂಬವನ್ನು ಬದ್ಧತೆಯಿಂದ ಸಲಹುತ್ತದೆ. ಅಲ್ಲಿಲ್ಲಿ ಅಪ್ಪ ನೆಟ್ಟ ಹಲಸು, ಮಾವು, ಪೇರಲ, ನೇರಳೆ, ಸಪೋಟ, ಎಳ್ಳಿಕಾಯಿ ಮತ್ತು ನಿಂಬೆ ಮರಗಳು ಬಾಲ್ಯದ ನೆನಪನ್ನು ಇಂದಿಗೂ ಹಸಿರಾಗಿಟ್ಟಿವೆ.

'ಪೂಜಾರಿ' ಎಂಬ ಹರಟೆ ಮಲ್ಲ

ನಮ್ಮ ಬಾಲ್ಯದ ದಿನಗಳಲ್ಲಿ ಹೊಲದ ಕೆಲಸಕ್ಕೆ ಬರುತ್ತಿದ್ದ 'ಪೂಜಾರಿ'ಯ ನೆನಪು ಇಲ್ಲದೆ ಈ ಕೃಷಿಯ ಕಥೆ ಆರಂಭ ಆಗುವುದಿಲ್ಲ. ಅವನು ನಮ್ಮ ಮುಖ್ಯ ಊರಿನವನಲ್ಲ. ನಮ್ಮ ಮನೆಯಲ್ಲಿ ಮತ್ತು ನಮ್ಮ ಊರಿನಲ್ಲಿ ನಾವು ಸಂಪೂರ್ಣ ಸಸ್ಯಾಹಾರ ಪಾಲಿಸುವುದರಿಂದ ಮತ್ತು ಜೀವಹಿಂಸೆಯನ್ನು ಒಪ್ಪದಿರುವುದರಿಂದ, ಮಾಂಸಹಾರಿ ಸೇವನೆ ಮಾಡುವವರು ಪ್ರತ್ಯೇಕವಾಗಿ ಇರುತ್ತಾರೆ. ಅವರ ಹಟ್ಟಿಯಲ್ಲಿ ಜಾತ್ರೆ-ಹಬ್ಬಗಳಾಗುವಾಗ ಮಾಂಸಹಾರ ಹೆಚ್ಚಿರುವುದರಿಂದ ನಾವು ಆ ಕಡೆ ಹೋಗುವುದಿಲ್ಲ. ಆದರೆ ಊರಿನ ಜಾತ್ರೆಯಲ್ಲಿ ಅವರು ನಮ್ಮ ಊರಿಗೆ ಬರುವುದಕ್ಕೆ ಯಾವುದೇ ಅಭ್ಯಂತರವಿಲ್ಲ.

ಈತಿನಿಗೆ ಇನ್ನೊಂದು ಹೆಸರು `ರಾಕಿ`. ಕೆ.ಜಿ.ಎಫ್ ನ ರಾಕಿ ಭಾಯ್ ಅಲ್ಲ, ಅಲಿಯಾಸ್ `ರಾಕೇಶ್`. ಕೆಲಸಕ್ಕಿಂತ ಮಾತಿನಲ್ಲೇ ಹೆಚ್ಚು ಆಸಕ್ತಿ. ಒಮ್ಮೆ ಮಾತನಾಡಲು ಶುರು ಮಾಡಿದರೆ ಕೆಲಸದ ಆಯಾಸ ಮರೆಸುವುದಿರಲಿ, ಕೆಲಸವನ್ನೇ ಮರೆಸಿಬಿಡುತ್ತಿದ್ದ! ಅವನು ಆಡುವ ಮಾತುಗಳಲ್ಲಿ ಅರ್ಧಕ್ಕರ್ಧ ಸುಳ್ಳುಗಳೇ ತುಂಬಿರುತ್ತಿದ್ದರೂ, ಅದನ್ನು ಒಳ್ಳೆ ಕಲೆಯುಂತೆ ನುಡಿಯುತ್ತಿದ್ದ. ನನ್ನ ಅಮ್ಮ ಯಾವಗಲು ಅವನಿಗೆ ಹೆಳುತ್ತಿದ್ದರು... "ನೀನು ತೋಟದ ಕೆಲಸಕ್ಕೆ ಬರುವ ಬದಲು ಸಿನಿಮಾಗೆ ಸೇರಿಬಿಟ್ಟಿದ್ದರೆ, ಇಷ್ಟೊತ್ತಿಗೆ ಜಗ್ಗೇಶ್ ನ ಮೀರುಸ್ತಿದ್ದೆ" ಅಂತ.

ಅವನಿಗೆ ಬದುಕಿನಲ್ಲಿ ಬೆಳೆಯಬೇಕೆಂಬ ಹಂಬಲವಿತ್ತು. ಆದರೆ ಕುಡಿತದ ದಾಸನಾಗಿ ಬದುಕು ಹಾಳುಮಾಡಿಕೊಂಡ. ಊರಿನ ಎಲ್ಲಾರು ಅವನನ್ನು ದೂರಿದರೆ ಹೊರತು ಅವನನ್ನು ತಿದ್ದಲು ಯಾರು ಮುಂದೆ ಬರಲಿಲ್ಲ. ನನ್ನ ಅಪ್ಪ ಅವನ ಮೇಲಿದ್ದ ನಂಬಿಕೆಯಿಂದ ಬೈಕ್ ಕೊಡಿಸಿದರು. ಕುಡಿದು ಆಕ್ಸಿಡೆಂಟ್ ಮಾಡಿಕೊಂಡು ಹೊಟ್ಟೆಗೆ ದೊಡ್ಡ ಆಪರೇಷನ್ ಮಾಡಿಸಿಕೊಂಡ. ಕೊನೆಗೆ ನಾನು ಮತ್ತು ಅಪ್ಪ ಅವನ ಜೊತೆ ಮಾತನಾಡುವುದನ್ನೇ ಬಿಟ್ಟು, ತಪ್ಪನ್ನು ನೆನಪಿಸಿದಾಗ ಅವನಿಗೆ ಅರಿವಾಯಿತು. ಈಗ ಸ್ವತಃ ತಾನಾಗಿಯೇ ರಿಹ್ಯಾಬಿಲಿಟೇಶನ್ ಕೇಂದ್ರಕ್ಕೆ ಸೇರಿಕೊಂಡಿದ್ದಾನೆ.

ಕೆರೆಯ ದಂಡೆ, ನೀರಾವರಿ ಮತ್ತು ಸೋಲಾರ್

ತುರುವೇಕೆರೆ ತಾಲೂಕಿನ ಮಾಚೇನಹಳ್ಳಿಯ ನಮ್ಮ ತೋಟದ ಪಕ್ಕದಲ್ಲೇ 'ಸಾರಿಗೇಹಳ್ಳಿ ಕೆರೆ' ಇದೆ. ಕೆರೆಯ ಏರಿಯ ಕೆಳಗೆ ಮಣ್ಣು ಎಷ್ಟು ಫಲವತ್ತಾಗಿದೆ ಎಂದರೆ, ಒಂದು ಹಿಡಿ ಮಣ್ಣು ಬಗೆದರೆ ಸಾಕು, ಅಲ್ಲಿ ಕಡಿಮೆ ಅಂದರು ೩-೪ ಎರೆ ಹುಳಗಳು ಸಿಗುತ್ತವೆ (ಇದು ನಮ್ಮ ತೋಟದಲ್ಲಿ ಮಾತ್ರ). ಏಕೆಂದರೆ ನಾವು ಕೆಮಿಕಲ್ ಗೊಬ್ಬರವನ್ನು ಬಳಸುವುದಿಲ್ಲ. ಅಲ್ಲಿ ನಾವು ಅಡಿಕೆಯನ್ನು ಬೆಳೆಯುತ್ತೇವೆ. ಆದರೆ ಸ್ವಲ್ಪ ದೂರವಿರುವ ನಮ್ಮ ತೆಂಗಿನ ತೋಟಕ್ಕೆ ನೀರು ಹಾಯಿಸುವುದೇ ಒಂದು ದೊಡ್ಡ ಕಲೆ. ಜಮೀನನ್ನು ಸಣ್ಣ ಸಣ್ಣ ‘ಮಡಿ’ಗಳನ್ನಾಗಿ ವಿಂಗಡಿಸಿ, 'ಉದಿ' ಎಂಬ ಮಣ್ಣಿನ ಏರಿಗಳನ್ನು ಕಟ್ಟಿ ಪ್ರತಿ ರಾತ್ರಿ ಸರದಿಯಂತೆ ಬೋರ್‌ವೆಲ್ ನೀರನ್ನು ಹಾಯಿಸುತ್ತೇವೆ.

ಅಪ್ಪ ಹೇಳುತ್ತಿದ್ದರು—ಹಿಂದೆಲ್ಲಾ ಮಳೆ ಬಂದರೆ ಇಡೀ ಕೆರೆ ಒಂದೇ ರಾತ್ರಿಗೆ ತುಂಬಿ ಹೊಲಕ್ಕೆಲ್ಲಾ ನೀರು ನುಗ್ಗುತ್ತಿತ್ತಂತೆ! ಆದರೆ ಕಳೆದ 20 ವರ್ಷಗಳಲ್ಲಿ ಅಂತಹ ಮಳೆಯನ್ನು ನಾವು ನೋಡಿಯೇ ಇಲ್ಲ. ಕೆಲವೊಮ್ಮೆ ನಮ್ಮ ಊರಿನಲ್ಲಿ ಮಳೆಯಾದರೆ ನಮ್ಮ ಹೊಲಕ್ಕೆ ಮಳೆ ಬಿದ್ದಿದೆಯೋ ಇಲ್ಲವೋ ಎಂಬುದೇ ಗೊತ್ತಾಗುವುದಿಲ್ಲ.

ಬೋರ್‌ವೆಲ್‌ನಲ್ಲೇನೋ ನೀರಿದೆ, ಆದರೆ ವಿದ್ಯುತ್ ದೊಡ್ಡ ಆಟವಾಡಿಸುತ್ತಿತ್ತು. 3-ಫೇಸ್ ಕರೆಂಟ್ ಯಾವಾಗ ಬರುತ್ತೋ ಎಂದು ಅಪ್ಪ ರಾತ್ರಿಯಿಡೀ ನಿದ್ದೆಗೆಟ್ಟು, ಸೈಕಲ್ ಏರಿ ಹೊಲಕ್ಕೆ ಓಡುತ್ತಿದ್ದರು. ಸಿಂಗಲ್ ಫೇಸ್ ಇದೆಯೋ, ಫುಲ್ ಫೇಸ್ ಇದೆಯೋ ಎಂದು ನೋಡಬೇಕು, ಮೋಟಾರ್ ಸ್ಟಾರ್ಟರ್ ಕಳ್ಳತನವಾಗದಂತೆ ಕಾಯಬೇಕು. ಇತ್ತೀಚೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸೋಲಾರ್ ಯೋಜನೆ ಬಂದ ಮೇಲಷ್ಟೇ ಅಪ್ಪನಿಗೆ ರಾತ್ರಿ ನಿರಾಳ ನಿದ್ದೆ ಸಿಗುತ್ತಿರುವುದು.

ಪಾಳೇಕರ್ ಪದ್ಧತಿ ಮತ್ತು ಜೀವಾಮೃತ ಗೊಬ್ಬರ

ನಮ್ಮ ತೋಟಕ್ಕೆ ನಾವು ನೀರು ಮಾತ್ರವಲ್ಲ, ಸರಿಯಾದ ಪೋಷಕಾಂಶಗಳನ್ನೂ ನೀಡುತ್ತೇವೆ. ಆದರೆ ಅದಕ್ಕೆ ನಾವು ಯಾವುದೇ ರಾಸಾಯನಿಕ ಗೊಬ್ಬರಗಳನ್ನು ಬಳಸುವುದಿಲ್ಲ! ಸುಮಾರು 10-15 ವರ್ಷಗಳ ಹಿಂದೆ ನಾವೂ ಕೆಮಿಕಲ್ ಗೊಬ್ಬರಗಳನ್ನು ಹಾಕುತ್ತಿದ್ದೆವು. ಆದರೆ ಕೃಷಿ ತಜ್ಞ ಸುಭಾಷ್ ಪಾಳೇಕರ್ ಅವರ ನೈಸರ್ಗಿಕ ಕೃಷಿ ಪದ್ಧತಿಯ ಬಗ್ಗೆ ತಿಳಿದುಕೊಂಡ ಮೇಲೆ ರಾಸಾಯನಿಕಗಳಿಗೆ ಸಂಪೂರ್ಣ ಗುಡ್ ಬೈ ಹೇಳಿದೆವು.

ನಾವು ಗಿಡಗಳಿಗೆ ‘ಜೀವಾಮೃತ’ ಎಂಬ ದ್ರವ ರೂಪದ ಸಾವಯವ ಗೊಬ್ಬರವನ್ನು ನೀಡುತ್ತೇವೆ. ದೇಶಿ ಹಸುವಿನ ಸಗಣಿ, ಗಂಜಲ, ಬೆಲ್ಲ, ದ್ವಿದಳ ಧಾನ್ಯದ ಹಿಟ್ಟು (ಕಡಲೆ ಹಿಟ್ಟು) ಮತ್ತು ಫಲವತ್ತಾದ ಮಣ್ಣನ್ನು ನೀರಿಗೆ ಬೆರೆಸಿ ಜೀವಾಮೃತ ತಯಾರಿಸಲಾಗುತ್ತದೆ. ಈಗಂತೂ ನೇರವಾಗಿ ಬಕೆಟ್‌ನಲ್ಲಿ ಕಲಸಿ ಬಳಸುವ ರೆಡಿ-ಮಿಕ್ಸ್ ಪ್ಯಾಕೇಟ್‌ಗಳು ಸಿಗುತ್ತವೆ. ಇದನ್ನು ನಾವು ದೊಡ್ಡ ನೀರಿನ ಟ್ಯಾಂಕ್‌ನಲ್ಲಿ ಕರಗಿಸಿ, ನೇರವಾಗಿ ಡ್ರಿಪ್ ಪೈಪ್‌ಗಳ ಮೂಲಕವೇ ಪ್ರತಿಯೊಂದು ತೆಂಗು ಮತ್ತು ಅಡಿಕೆ ಮರದ ಬುಡದಿಂದ ಐದು ಫೀಟ್ ದೂರಕ್ಕೆ ಹಾಯಿಸುತ್ತೇವೆ. ಇದರಿಂದ ಜಮೀನಿನ ಮಣ್ಣಿನ ಜೈವಿಕ ಗುಣಮಟ್ಟ ಹೆಚ್ಚಿ, ನೆಲದಲ್ಲಿ ಎರೆ ಹುಳಗಳು ಜಾಸ್ತಿ ಬೆಳೆಯುತ್ತಾವೆ. ಯಾವುದೇ ಕೆಮಿಕಲ್ ಇಲ್ಲದೆ ತೆಂಗು, ಅಡಿಕೆ ಮರಗಳು ದಟ್ಟವಾಗಿ ಬೆಳೆಯುತ್ತವೆ.

ಶ್ರೀಗಂಧದ ಕಳ್ಳರು ಮತ್ತು ಅಪ್ಪನ ಹಠ

ಆದರೆ ವಿದ್ಯುತ್‌ಗಿಂತ ದೊಡ್ಡ ಸಮಸ್ಯೆ 'ಶ್ರೀಗಂಧದ ಕಳ್ಳರು'. ನಮ್ಮ ಹೊಲದಲ್ಲಿ ಶ್ರೀಗಂಧದ ಗಿಡಗಳು ಕಳೆಯಂತೆ ತಾವಾಗಿಯೇ ಬೆಳೆಯುತ್ತವೆ. ಆದರೆ ಈ ಸಂಘಟಿತ ಕಳ್ಳರ ಗ್ಯಾಂಗ್ ಇಡೀ ಊರಿನ ಹೊಲಗಳನ್ನು ಮತ್ತೆ ಪಕ್ಕದ ಊರುಗಳನ್ನು ರಾತ್ರಿ ವೇಳೆ ಸರ್ವೇ ಮಾಡುತ್ತದೆ. ಮಳೆಯುರಿವ ರಾತ್ರಿಗಳಲ್ಲಿ ಬಂದು, ಗಿಡದ ಬುಡವನ್ನು ಸ್ವಲ್ಪ ಕತ್ತರಿಸಿ ವಾಸನೆ ನೋಡಿ, ಶ್ರೀಗಂಧದ ಸುವಾಸನೆ ಬಂದರೆ ಸಾಕು—ಸಣ್ಣ ಗಿಡವಿದ್ದರೂ ಕತ್ತರಿಸಿ ಕೊಂಡೊಯ್ಯುತ್ತಾರೆ. ಅವರು ಮಾರಕಾಸ್ತ್ರಗಳೊಂದಿಗೆ 10-15 ಜನರ ಗುಂಪಿನಲ್ಲಿ ಬರುತ್ತಾರೆ.

ಇದಕ್ಕೆಲ್ಲಾ AI ಮತ್ತು ಆಧುನಿಕ ಸೆಕ್ಯೂರಿಟಿ ತಂತ್ರಜ್ಞಾನಗಳು ಪರಿಹಾರ ನೀಡಬಹುದು ಎಂಬುದು ನನ್ನ ಆಸೆ. ಆದರೆ ಅಪ್ಪನದ್ದು ಬೇರೆಯದೇ ಸ್ವಭಾವ—ಅವರ ಜಮೀನಿನಲ್ಲಿ ಯಾರೋ ಬಂದು ಅಕ್ರಮವಾಗಿ ಕೈಹಾಕುವುದು ಅವರ ಸ್ವಾಭಿಮಾನಕ್ಕೆ ತಾಗುವ ವಿಚಾರ. ಹೀಗಾಗಿ "ಯಾರೋ ಬಂದು ಕಡಿಯುವುದಕ್ಕಿಂತ ನಾನೇ ಗಿಡಗಳನ್ನು ತೆಗೆದುಹಾಕುತ್ತೇನೆ" ಎಂದು ಕಳೆಯಂತೆ ಶ್ರೀಗಂಧದ ಗಿಡಗಳನ್ನು ಕತ್ತರಿಸಿಹಾಕುತ್ತಾರೆ.