ಎಲ್ಲಿ ಕೇಳಿದರೂ ಈಗ ಬರಿಯ ಹಿಂಜರಿತದ ಮಾತು
ಎರಡಡಿ ಮುಂದಿಟ್ಟು ಒಂದು ಹಿಂದಕ್ಕಿಡುವ ಮಾತು
ಅಮೇರಿಕದಲ್ಲೆಲ್ಲೋ ಭೂಕಂಪ ಆದರೆ ನಮಗಿಲ್ಲಿ ನಡುಕ
ಹೊಂದಾಣಿಕೆಯ ಬಾಳ್ವೆಗೆ ಉದಾಹರಣೆ ಬೇರೆ ಬೇಕಾ
ಪ್ರತೀ ಸಲದಂತೆ ವರ್ಷದ ಅಂತ್ಯದಲಿ ಏರಿಸಿದ್ದ ಸಂಬಳ
ಈ ಹಿಂಜರಿತದಿಂದ ಹಿಂಪಡೆದು ತಂದರಲ್ಲಾ ತಳಮಳ
ಏರಿಸಿದ್ದ ಅಷ್ಟಕ್ಕೂ ಮತ್ತಷ್ಟನ್ನು ಕೂಡಿಸಿ ಹಿಂದೆ ಪಡೆದರು
ಬಳೆ ತೊಡಿಸ ಬಂದವರು ನಮ್ಮ ಹಸ್ತವನೇ ನುಂಗಿದರು
ಮನೆಯ ಪರಿಸ್ಥಿತಿ ಕೇಳಿದರೆ ಹೇಳಲೇನಿಲ್ಲ ಕತೆ ಬೇರೆ
ಮುಂಜಾವಿನ ಕಾಫಿಯ ಬದಲಿಗೆ ಈಗ ಅಲ್ಲಿ ಬಿಸಿ ನೀರೆ
ಅಕ್ಕಿಯ ಬದಲಿಗೆ ಈಗ ಬರಿಯ ರಾಗಿ ಗೋಧಿಯ ತಿಂಡಿ
ರುಚಿ ಸತ್ತ ನಾಲಗೆಗೆ ದಿನವೂ ತಿಂದಂತಾಗುತ್ತಿದೆ ಹಿಂಡಿ
ಪೇಟೆಯಲ್ಲಿರುವ ಹೋಟೇಲುಗಳ ಬೋರ್ಡು ಓದಿಕೊಂಡು
ಬಂದರಿಲ್ಲಿ ನಮಗೆ ಗಂಜಿ ಜೊತೆಗೆ ಉಪ್ಪಿನಕಾಯಿ ತುಂಡು
ಇನ್ನೆಷ್ಟು ದಿನ ಸಹಿಸಬೇಕಿದೆಯೋ ಹಿಂಜರಿತದ ಈ ಬವಣೆ
ಹೀಗೆಯೇ ಮುಂದುವರೆದರೆ ನಾಳೆ ಹೇಗೋ ಏನೋ ಕಾಣೆ
ಪ್ರತಿಕ್ರಿಯೆ (7)