'ಕಾಡು ಹಾದಿಯ ಕತೆಗಳು'  ಇತ್ತೀಚೆಗೆ  ನಾನು  ಓದಿದ ಜೋಗಿಯವರ ಕತೆಗಳ ಪುಸ್ತಕ . ಜೋಗಿಕತೆಗಳನ್ನು ಓದಿ ಮೆಚ್ಚಿಕೊಂಡವರಿಗೆ ನಿರಾಸೆ ಇಲ್ಲ ; ಇಲ್ಲೂ   ಅನೇಕ ಒಳ್ಳೆಯ ಕತೆಗಳನ್ನು  ಕೊಟ್ಟಿದ್ದಾರೆ . ಕತೆ ಹೇಳುವ ಕಲೆ ಅವರಿಗೆ ಸಿದ್ಧಿಸಿದೆ .

'ಸಂಜಯನ ಆತ್ಮಹತ್ಯಾ ಪ್ರಕರಣವು'  ಒಮ್ಮೆ  ಓದಿದರೆ ಎಂದೂ ಮರೆಯದ ಕತೆ.  ಮೊದಲಿಗೆ ಶುರು ಅಗೋದು ಹೀಗೆ-

"ಸಂಜಯನಂಥ ಆರೋಗ್ಯವಂತ ಸ್ವಸ್ಥ ಮನಸ್ಸಿನ ವ್ಯಕ್ತಿಯನ್ನು  ಸಾಯಲು ಪ್ರೇರೇಪಿಸುವುದು ಎಷ್ಟು ಕಷ್ಟದ ಕೆಲಸ ಅನ್ನೋದು ನಿಮಗೆ ಗೊತ್ತಾಗಲಿಕ್ಕಿಲ್ಲ . ಆತನಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣಗಳೇ ಇರಲಿಲ್ಲ. ಅಂತಹ ಸಕಾರಣಗಳನ್ನು ಹುಡುಕುವುದು , ಅವನಿಗೆ ಮನದಟ್ಟು ಮಾಡಿಸುವುದು , ಈ ಕಾರ್ಯಕ್ರಮವನ್ನು ಜಾರಿಗೆ ತರುವ ವಿಧಾನಗಳ ಬಗ್ಗೆ ಯೋಚಿಸುವುದು , ಯೋಜಿಸುವುದು ಎಲ್ಲ ಮಾಡಬೇಕಿತ್ತು . ಅವನ ಹತ್ತಿರದ ಗೆಳೆಯರಾಗಿ  ಇಷ್ಟೂ ಮಾಡದಿದ್ದರೆ ನಿಜವಾದ ಸ್ನೇಹ ಎಂಬ ಮಾತಿಗೆ ಬೆಲೆ ಎಲ್ಲಿಂದ ಬರಬೇಕು ? "

 

ಅಯ್ಯಯ್ಯೋ , ಇದೇನಿದು?  ಮುಂದಿನದು ನೀವೇ ಓದುವುದು ಒಳ್ಳೇದು !

 

ಇನ್ನೊಂದು ಕತೆಯ  ಕೊನೆಯ ಭಾಗ ಇಲ್ಲಿದೆ.

ಕಾಲಿಂಗ್ ಬೆಲ್ ಸದ್ದಾಗಿ ಶಂಕರ ಕಣ್ತೆರೆದ. ಶಂಕರನ ಎದೆಗೊರಗಿ ಮಲಗಿದ್ದ ಶಾರದೆ ಎದ್ದು ನೈಟಿ ಕೊಡವಿಕೊಂಡು ಹೋಗಿ ಬಾಗಿಲು ತೆರೆದಳು.

ಶಂಕರನಿಗೆ ಎದೆ ನಡುಗತೊಡಗಿತು. ಮೈಯೆಲ್ಲ ಕಿವಿಯಾಗಿ ಮರುಕ್ಷಣದ ಮಾತಿಗಾಗಿ ಕಾದು ಕಂಪಿಸಿದ.

ಯಾವುದೇ  ನಡುಕ  ಇಲ್ಲದ ಸಹಜ ದನಿಯಲ್ಲಿ ಶಾರದೆ ಮಾತಾಡಿದ್ದು ಕೇಳಿಸಿತು.

'ಯಾಕಮ್ಮ ಇಷ್ಟು ತಡ ? ಯಾರು ಬಂದಿದ್ದಾರೆ ಗೊತ್ತೇನು?'

'ಯಾರೇ'

'ಶಂಕರಣ್ಣ'

 

 

ಇನ್ನಾವುದೋ ಕತೆಯಲ್ಲಿ ಬರುವ ಸಾಲುಗಳು ಇವು :-

ವ್ಯಕ್ತಿ ಅನಾದಿಕಾಲದಿಂದ ಅನೂಚಾನ ನಡೆಸಿಕೊಂಡು ಬರುತ್ತಿರುವ ಅಸಂಖ್ಯ ಕ್ರಿಯೆಗಳಲ್ಲಿ ಯಾವುದನ್ನು ಯಾತಕ್ಕಾಗಿ ಮಾಡುತ್ತಿದ್ದಾನೆ ಅನ್ನುವುದನ್ನು ಎಲ್ಲೂ ಉಲ್ಲೇಖಿಸಿದಂತಿರಲಿಲ್ಲ .

ಪ್ರತಿ ಕಲಾವಿದನ ಪ್ರತಿಯೊಂದು ಸೃಷ್ಟಿಯೂ ಅವನ ದೀರ್ಘ ಆತ್ಮಚರಿತ್ರೆಯ ಬಿಡಿಭಾಗಗಳು ಅಷ್ಟೇ .

ಈ ಕತೆ ಅನ್ನೋದು ಬೇರೆ ಬೇರೆ ಬದುಕನ್ನು ಬದುಕುತ್ತಾ ಬೆಳೆಯುವ ಕ್ರಿಯೆ ಅಷ್ಟೇ. ನೀನು ಕತೆ ಬರೆಯೋ ನೆಪದಲ್ಲಿ ನಿನ್ನದಲ್ಲದ ಬದುಕನ್ನು ಬದುಕ್ತೀಯ . ನಾವು ಓದೋ ನೆಪದಲ್ಲಿ ಬೇರೆಯವರ ಬದುಕಿನಲ್ಲಿ ಪ್ರವೇಶ ಮಾಡ್ತೀವಿ.

 

'ಓ ಗಾಳಿಯೇ,  ಕತೆಯನೊರೆದು ಮುಂದಕೆ ತೆರಳು'   ಕತೆಯಲ್ಲಿ  ಒಟ್ಟೂ  ಕತೆಗಳ ಬಗ್ಗೆ ಹೀಗೆ ಬರೆದಿದ್ದಾರೆ .

ಗಾಳಿ ಹೇಳುವ ಕತೆ ನಿಜ ಇದ್ದರೂ ಇದ್ದೀತು , ಸುಳ್ಳಿದ್ದರೂ ಇದ್ದೀತು. ಗಾಳಿ   ಕತೆ ಹೇಳುವ ಮಾತು ಮಾತ್ರ ನಿಜ .  ಗಾಳಿಗೆ  ನಮ್ಮ ನಿಮ್ಮ ಹಾಗೆ ಮಾನವೀಯ ಮೌಲ್ಯಗಳು, ತಪ್ಪು ಸರಿಯ ಕಲ್ಪನೆ ಇಲ್ಲದಿರುವುದರಿಂದ ಅದು ಬರೀ ಕತೆಯನ್ನಷ್ಟೇ  ಹೇಳುತ್ತದೆ.  ತನ್ನ ಅನುಭವವನ್ನು ಹೇಳಿ ಅದನ್ನೂ ಸೇರಿಸಿ ಕತೆಯನ್ನು ಶ್ರೇಷ್ಠವಾಗಿಯೋ, ಹೃದಯವಿದ್ರಾವಕವಾಗಿಯೋ, ರಂಜನೀಯವೋ  ಆಗಿಸಲು ಯತ್ನಿಸುವುದಿಲ್ಲ.

ನೀವೂ ಕೇಳಿ ಕಿವಿಗೊಡಿ... ಗಾಳಿ ಹೇಳಿದ ಕತೆ ಅದನ್ನು ಹಾಗೇ ನಮಗೆಲ್ಲ ತಿಳಿಸಿ, ಗಾಳಿಯ ಹಾಗೇ ನಿರಂಬಳವಾಗಿ ... ನಿರಾವಲಂಬಿಯಾಗಿ...

ಕತೆ ಹೇಳಿ ತೆರಳಿ.  ಕಾಯದೇ ... ಪ್ರತಿಕ್ರಿಯೆಗೆ , ಮೆಚ್ಚುಗೆಗೆ, ಅನುಕಂಪಕ್ಕೆ, ....