"ಚಂದಮಾಮ"
ನಿಮಗೆಲ್ಲ ತಿಳಿದಿದ್ದೇ ಚಂದಮಾಮ ಮಾಸಿಕ ಪತ್ರಿಕೆ. ಈ ಬಾರಿ ಪುಸ್ತಕ ಸಮ್ಮೇಳನದಲ್ಲಿ ನಾವು ಚಂದಮಾಮ ಮಾಸ ಪತ್ರಿಕೆಗೆ ಚಂದಾದಾರರಾದೆವು (ಮಗ ಓದಲೆಂದು). ನಂತರ ಪ್ರತಿ ತಿಂಗಳು ಚಂದಮಾಮ ಮನೆಗೆ ತಪ್ಪದೇ ಬಂದು ಬೀಳುತ್ತಿತ್ತು. ಅದರಲ್ಲಿ ಕೆಲವು ಕಥೆಗಳು ನಾನು ಕೂಡ ಓದುತ್ತಿದ್ದೆ.
ಹೀಗೆ ಒಂದು ದಿನ ಕಚೇರಿಯಲ್ಲಿ ಚಂದಮಾಮ ಅಂತರ್ಜಾಲ ತಾಣವನ್ನು ನೋಡಲೆಂದು www.chandamama.com ಗೆ ಹೋದೆ. ಎಲ್ಲ ಗುಂಡಿಯನ್ನು ಒತ್ತಿ ನೋಡಿದೆ. ಭಾಷಾವಿಭಾಗದಲ್ಲಿ ಕನ್ನಡದಲ್ಲಿ ಬಿಟ್ಟು ತಮಿಳು, ತೆಲುಗು ಹಾಗೂ ಆಂಗ್ಲ ಭಾಷೆಯಲ್ಲಿ ಮಾತ್ರ ಇದ್ದವು. ಅಲ್ಲೇ ಸ್ವಲ್ಪ ತಡಕಾಡಿ ಅವರನ್ನು ಸಂಪರ್ಕಿಸಲು ಮಿಂಚೆಯ ವಿಳಾಸ ಹುಡುಕಿದೆ. ಆ ಮಿಂಚೆಯ ವಿಳಾಸಕ್ಕೆ ೧೫ನೇ ಜುಲೈ ೨೦೦೯ರಂದು ([email protected]) ನನ್ನ ಕಚೇರಿಯ ಮಿಂಚೆಯಿಂದ ಒಂದು ಮಿಂಚೆಯನ್ನು ಕಳುಹಿಸಿದೆ. ಆ ಮಿಂಚೆಯಲ್ಲಿ ಚಂದಮಾಮ ತಾಣದಲ್ಲಿ ಕನ್ನಡದಲ್ಲಿ ಲಭ್ಯವಿಲ್ಲದಿರುವಿಕೆಯನ್ನು ಹಾಗೂ ಅದರಿಂದ ನಿರಾಸೆ ಮೂಡಿದ ಬಗೆಯನ್ನು ವ್ಯಕ್ತಪಡಿಸಿದೆ.
ಮರುದಿನ ಅಂದರೆ ೧೬ನೇ ಜುಲೈ ೨೦೦೯ ರಂದು ಸುಮಾರು ೧೦:೫೦ಕ್ಕೆ ಸೌಮ್ಯ ಭಾರದ್ವಾಜ್, ಕಂಟೆಂಟ್ ಹೆಡ್, ಆನ್ಲೈನ್ ಚಂದಮಾಮ ಇಂಡಿಯಾ ಲಿಮಿಟೆಡ್, ಚೆನ್ನೈ, ಇವರಿಂದ ನನಗೊಂದು ಮಿಂಚೆ ಬಂದಿತು. ಅದರಲ್ಲಿ ಕನ್ನಡದಲ್ಲಿ ಇಲ್ಲದಿರುವ ಬಗ್ಗೆ ಕ್ಷಮೆ ಕೋರುತ್ತ, ಇನ್ನು ಎರಡು ವಾರದಲ್ಲಿ ಕನ್ನಡದಲ್ಲಿ ಲಭ್ಯವಾಗಲಿದೆಯೆಂದು, ಹಾಗೂ ಅದರ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ ಎಂದು ಮರುತ್ತರ ಕಳುಹಿಸಿದರು. ತಕ್ಷಣ ನಾನು ನನ್ನ ಸಹುದ್ಯೋಗಿಗಳಿಗೆ ಬಂದಿದ್ದ ಮಿಂಚೆಯನ್ನು ಅವರಿಗೂ ಕಳಿಸಿದೆ. ಅದರಲ್ಲಿ ಒಬ್ಬ ಸಹುದ್ಯೋಗಿಯಂತು ಮೆಚ್ಚುಗೆ ವ್ಯಕ್ತಪಡಿಸುತ್ತ "ಚಂದಮಾಮ ಸಂಸ್ಥೆ ಸಾಕಷ್ಟು ಸಮಸ್ಯೆಗಳಿಗೆ ಸಿಕ್ಕಿ ಬಿದ್ದಿತು. ಮೂಲದಲ್ಲಿರುವ ಯಾರಿಗೂ ಅದನ್ನು ಮುಂದುವರೆಸಲು ಆಸಕ್ತಿ ಇರಲಿಲ್ಲ. ಅಮೇರಿಕದ ವೈಟ್ ಡಿಸ್ನಿಯವರು ಅದನ್ನು ಕೊಂಡುಕೊಳ್ಳುವ ಲೆಕ್ಕದಲ್ಲಿದ್ದರು, ಸದ್ಯ ಅದು ಮುರಿದು ಬಿತ್ತು. ಆಮೇಲೆ ಅದನ್ನು ಭಾರತದ್ದೇ ಒಂದು ಸಂಸ್ಥೆ ಅದನ್ನು ತೆಗೆದುಕೊಂಡಿತು. ಆದರೂ ಅದು "ಚಂದಮಾಮ ಇಂಡಿಯಾ ಲಿಮಿಟೆಡ್" ಅಂತ ಇರುತ್ತದೆ" ಎಂದು ಹೇಳಿದರು.
ಎರಡು ವಾರಗಳ ನಂತರ ನಾನು ಚಂದಮಾಮ ತಾಣವನ್ನು ತೆರೆದು ನೋಡಿದಾಗ ಕನ್ನಡದಲ್ಲಿ ಲಭ್ಯವಿರಲಿಲ್ಲ. ಮತ್ತೊಂದು ಮಿಂಚೆ ಕಳುಹಿಸಿದೆ. ಅದಕ್ಕೆ ಸೌಮ್ಯರವರು ಎಲ್ಲ ಸಿದ್ದಗೊಳ್ಳುತ್ತಿದೆ ಎಂದು ಮರುತ್ತರ ಕೊಟ್ಟರು. ಅತಿ ಶೀಘ್ರದಲ್ಲೆ ಕನ್ನಡದಲ್ಲಿ ಲಭ್ಯವಾಗುವುದು ಎಂದು ಮಿಂಚೆಯ ಮೂಲಕ ತಿಳಿಸಿದರು.
ಇದಾದ ನಂತರ ನಾನು ಕೂಡ ಕೆಲಸದ ಒತ್ತಡದಿಂದಾಗಿ ಚಂದಮಾಮ ತಾಣವನ್ನು ನೋಡಲಾಗಲಿಲ್ಲ. ಇಂದು ಅಂದರೆ (೨ನೇ ಸೆಪ್ಟೆಂಬರ್ ೨೦೦೯) ಚಂದಮಾಮ ತಾಣವನ್ನು ತೆರೆದು ನೋಡಿದರೆ ಸ್ವಲ್ಪ ಬದಲಾವಣೆಯೊಂದಿಗೆ, ಕನ್ನಡ ಭಾಷೆಯನ್ನೂ ಕೂಡ ಸೇರಿಸಿರುವುದನ್ನು ನೋಡಿ ಬಹಳ ಸಂತೋಷವಾಯಿತು. ಮುಂದೆ ಓದುವುದನ್ನು ಬಿಟ್ಟು ಮೊದಲು ಇದನ್ನು ನನ್ನ ಮಿತ್ರರೊಂದಿಗೆ ಹಂಚಿಕೊಳ್ಳೋಣವೆಂದೆನಿಸಿದ ಪ್ರಭಾವವೇ ಈ ಬರಹ.
ಚಂದಮಾಮದ ತಾಣದ ವಿಳಾಸ: http://www.chandamama.com/lang/index.php?lng=KAN
ನಿಮ್ಮ ಪ್ರತಿಕ್ರಿಯೆಗಳನ್ನು ತಿಳಿಸಿ.
ಪ್ರತಿಕ್ರಿಯೆ (1)