ಒಂದು 20 ನಿಮಿಷೆ ಬೆರ್ಸಿರಬಹುದು, ನಾನಂತೂ ಹಿಂದೆ ನೋಡದೆ ಬರೀ ಶಬ್ಧದ ಗ್ರಹಿಕೆಯಿಂದಲೇ ಸುಮ್ನೆ ಓಡ್ತಿದ್ದೆ (ನಾನು ಹಾಗೆ ಓಡ್ತಿದ್ದನ್ನ ನೋಡಿದ ನಮ್ಮ ಮನೆಯ ಚಿಕ್ಕ ಈಗ್ಲೂ ನೆನೆಸಿಕೊಂಡು ನಗಾಡ್ತಿರ್ತಾನೆ). ಸ್ವಲ್ಪ ಹೊತ್ತಾದ ಮೇಲೆ ತಿರುಗಿ ನೋಡಿದೆ, ನಮ್ಮಪ್ಪ ಸುಸ್ತಾಗಿ ನಿಂತಿದ್ರು. ಇನ್ನು ವಾಪಸ್ ಮನೆಗೆ ಹೋದ್ರೆ ಹೊಡ್ದೇ ಹೊಡೀತಾರೆ ಅಂದ್ಕೊಂಡು ಸಾಯಂಕಾಲದ ಹೊತ್ತಿಗೆ ಸಿಟ್ಟು ಸ್ವಲ್ಪವಾದ್ರೂ ಕಡಿಮೆ ಆಗಿರತ್ತೆ ಅಂದ್ಕೊಂಡು ಕೆಳಗಿರೋ ನಮ್ಮಣ್ಣನ ಮನೆಗೆ ಕದ್ದು ಹೋದೆ.
ರಾತ್ರಿ ವಾಪಸ್ ಮನೆಗೆ ಬಂದೆ, ಸದ್ಯ ಅಪ್ಪನ ಕೈಲಿ ಕಡಲೆಕಡ್ಡಿ ಬರ್ಲು ಇರ್ಲಿಲ್ಲ. ಸ್ವಲ್ಪ ಹೊತ್ತು ಕಾಯ್ದಿದ್ದು ಅನುಕೂಲನೇ ಆಯ್ತು, ಒದೆ ತಿನ್ನೋದ್ರಿಂದ ಉಳಿದುಕೊಂಡೆ. ಆದ್ರೆ ಬೈಗುಳ ಎದುರಿಸುವುದಕ್ಕೆ ಸಿದ್ಧನಾಗಬೇಕಿತ್ತು, ನನ್ನನ್ನು ನೋಡಿದ್ದೆ ತಡ 'ಹೊಟ್ಟೆಗೆ ಅನ್ನ ತಿಂತೀರೋ .... ತಿಂತೀರೋ, ನಿಮ್ಗೆಲ್ಲ ಯಾಕೆ ಬೇಕು ಗದ್ದೆ ತೋಟ, ಹೇಳೋ ಒಂದು ಕೆಲ್ಸನೂ ನೆಟ್ಟಗೆ ಮಾಡೋಲ್ಲ, ನಾಳೆಗೆ ಬೇಸಾಯಕ್ಕೆ ಏನು ಮಾಡೋದು ಈಗ. ಬೆಳ್ಗೆ ಬೇಗ ಎದ್ದು ಕಾಲೋನಿಗೆ ಹೋಗಿ ಮಂಜ, ಚಿಕ್ಕನ್ನ ಕರ್ಕೊಂಡು ಬಾ ಅಂತ ಅಂದ್ರು. ಮಲೆನಾಡಲ್ಲಿ ಅದೂ ಮಳೆಗಾಲದಲ್ಲಿ ಬೆಳ್ಗೆ 6ಕ್ಕೆ ಎದ್ದು ಹೋಗೋದು ಬಾರೀ ಕಷ್ಟದ ಕೆಲಸ. ಆ ಚಳಿಗೆ, ರಗ್ಗು ಹೊದ್ಕೊಂಡು ಮಲ್ಗಿದ್ರೆ ಎದ್ದೇಳೋಕೆ ಮನ್ಸೇ ಬರೋಲ್ಲ. ಏನು ಮಾಡೋದು, ವಿಧ್ ಇಲ್ಲ 'ನಾ ಮಾಡಿದ ಕರ್ಮ ಎನಗೆ' ಅಂದ್ಕೊಂಡು ಮಾರನೇ ದಿನ ಬೇಗ ಎದ್ದು ಹೋಗಿ ಅವ್ರಿಗೆ ಹೇಳಿ ಬಂದೆ.
ಒಂದೆರಡು ದಿನಗಳಾದ ಮೇಲೆ ಹಂಡ ಯಾರ್ದೋ ತೋಟದಲ್ಲಿ ಸಿಕ್ತು.
...................................
ಮಳೆಗಾಲದಲ್ಲಿ, ತೋಟಗಳಲ್ಲಿ ಚಕೋತ ಮೂಸಂಬಿ ಕಿತ್ತಲೆ ತುಂಬಾ ಹಣ್ಣುಗಳು ಇರ್ತಿದ್ವು. ನಮ್ಮ ಏರಿಯಾದಲ್ಲಿ ನಾವೊಂದು ಏಳೆಂಟು ಮಕ್ಕಳದ್ದೇ ಕಾರುಬಾರು. ಸಾಮಾನ್ಯವಾಗಿ, ಬೇರೆಯವರ ತೋಟದಲ್ಲಿ ಕದಿಯಬೇಕಾದ ಪ್ರಸಂಗ ಬರ್ತಿತ್ತು. ಮರ ಹತ್ತುವುದರಲ್ಲಿ ಪಳಗಿದ್ದ ನಾನು (ಈಗ ಮರೆತುಹೋಗಿದೆ) ಹತ್ತಿ ಹಣ್ಣುಗಳನ್ನು ಕೀಳಬೇಕಾಗುತ್ತಿತ್ತು. ಒಂದಿನ ಎಲ್ಲಾ ಸೇರಿ, ಒಂದು ತೋಟಕ್ಕೆ ನುಗ್ಗಿದೆವು (ಒಳ್ಳೆ ಕಾಡೆಮ್ಮೆ, ಕಾಡು ಕೋಣ ಹೋಗೋ ರೀತಿ ಹೇಳ್ತಾನಲ್ಲ ಅಂದ್ಕೊಂಡಿದ್ರೆ, ನಿಜ, ಹಾಗೇ ನುಗ್ತಿದ್ವಿ).
ಕೆಂಪು ಚಕೋತ ಮರ ಕಣ್ಣಿಗೆ ಬಿತ್ತು, ಆದರೆ ಹಣ್ಣುಗಳು ತುದಿಯಲ್ಲಿದ್ವು. ಹತ್ತಿದೆ, ಒಂದೇ ಕೊನೆ ಎರಡು ಇಬ್ಭಾಗವಾಗಿತ್ತು. ನಾನು ತುದಿ ತಲುಪಬೇಕು ಅಂದ್ರೆ ಎರಡೂ ಕೊನೆಗೆ ಕಾಲಿಟ್ಟು ಮೇಲೆ ಹೋಗ್ಬೇಕಾಗಿತ್ತು....
ಪ್ರತಿಕ್ರಿಯೆ (3)