ನಾನು ಚಿಕ್ಕವನಿದ್ದಾಗ  ನನಗೆ ಕಾಲುಗಳೂ  ಮಾತುಗಳೂ  ತಡವಾಗಿ   ಬಂದವು.ಅಷ್ಟೇ  ಅಲ್ಲದೇ  ಮೂರು ವರ್ಷಕ್ಕೊಮ್ಮೆ  ನಮ್ಮ  ತಂದೆಗೆ ವರ್ಗವಾಗಿ ಊರು ಬದಲಿಸುತ್ತಿದ್ದೆವು. ಹಾಗಾಗಿ    ಗೆಳೆಯರ  ಒಡನಾಟ ನನಗೆ ಒದಗಲೇ ಇಲ್ಲ . ಇದು ತಿಳಿದಾಗಲೇ ತಿದ್ದಿಕೊಳ್ಳಬಹುದಿತ್ತು ಅನ್ನಿ . ಆದರೆ  ತಿಳಿದಾಗ ಜೀವನದ ಬಹುಭಾಗ  ಕಳೆದೇ  ಹೋಗಿತ್ತು .  ಹೀಗೆ  ಕಳೆದ ಭಾಗದಲ್ಲಿ ನಾನೇನು ಮಾಡಿದೆ ಅಂತೀರಾ?  ಪುಸ್ತಕಗಳ ನಡುವೆ ಕಳೆದೆ .  ನಾನು ಪುಸ್ತಕ  ಓದುವುದನ್ನು    ಕಂಡವರು ಜಾಣ ಎಂದು ಹೊಗಳಿ  ಅದರಲ್ಲೇ  ತೊಡಗಿ ಇರುವಂತೆ ಮಾಡಿದರು .  ಈಗ  ನನಗೆ ನಲವತ್ತಾರು.   ಈಗ  ನಾಲ್ಕೈದು  ವರ್ಷದ ಹಿಂದೆ   ಒಂದು  ಪದಚರಿತ ಎಂಬೋ ಪುಸ್ತಕವನ್ನು ಓದಿದೆ .  ಅದು ನನ್ನ ಕಣ್ಣು ತೆರೆಸಿತು . ಅದು ಜೀನ್  ಪಾಲ್ ಸಾರ್ತೃ  ನದು . ಅವನದೂ ನನ್ನ ಕತೆಯೇ.  ಅವನೂ ಓದು ಬರಹದಲ್ಲೇ  ತನ್ನ  ಜೀವನ ವ್ಯರ್ಥವಾದದ್ದನ್ನು  ೫೫  ವರ್ಷಕ್ಕೆ ತಿಳಿದುಕೊಂಡನು.  ಆದರೆ ಅವನ ಪುಸ್ತಕ ಓದಿ  ಅವನಿಗಿಂತ   ನಾನು ಸ್ವಲ್ಪ  ಬೇಗ- ಅಂದರೆ  ಏಳೆಂಟು ವರ್ಷ ಮೊದಲು- ಜಾಣನಾದೆ .   ಅವನು ಹೀಗೆ  ಬರೆದನು - "ಸ್ವಲ್ಪವೂ  ನನಗೆ ಯೋಗ್ಯಳಲ್ಲದ ಹೆಣ್ಣಿಗಾಗಿ ನನ್ನ  ಜೀವನವನ್ನು ಹಾಳು ಮಾಡಿಕೊಂಡಂತಾಯಿತು' .  ಈ ವಾಕ್ಯ  ನನ್ನ ಮನಸ್ಸಿಗೆ ಹಿಡಿಸಿ ಅದನ್ನು ನನ್ನ   ಗೂಗಲ್  ಟಾಕ್  ನಲ್ಲಿ ಸ್ಟೇಟಸ್  ಮೆಸೇಜ್  ಆಗಿ ಹಾಕಿಕೊಂಡೆ ,  ನನ್ನ   ಸಹೃದಯೀ    ಸಂಬಂಧಿಗಳೊಬ್ಬರು ಅದನ್ನ   ತಪ್ಪರ್ಥ ಮಾಡಿಕೊಂಡು  ,  ' ಅದೆಲ್ಲ   ಜೀವನದಲ್ಲಿ   ಆಗೋದೇ , ಆ  ಮೆಸೇಜ್  ತೆಗೆದುಹಾಕು ' ಅಂತ ನನಗೆ ಸಮಾಧಾನ ಹೇಳಿದರು !   
   ಬಹುಶ:  ಯಾರ  ಹತ್ತಿರವೂ ಇಲ್ಲದ ಪುಸ್ತಕರಾಶಿ  ನನ್ನಲ್ಲಿತ್ತು  . ಅಂದಿನಿಂದ  ಕರಗಿಸುತ್ತ  ಇದ್ದೇನೆ. ಎಲ್ಲವನ್ನೂ ಓದಬೇಕು,  ಎಲ್ಲವನ್ನೂ ತಿಳಿಯಬೇಕು , ಒಳ್ಳೆಯ ಪುಸ್ತಕಗಳೆಲ್ಲಾ ನನ್ನ  ಬಳಿ ಇರಬೇಕು ಎಂಬ  ದುರಾಸೆಯನ್ನು ತೊರೆದಿದ್ದೇನೆ.  ನಾನೇನು  ಸಾಹಿತಿಯೇ ? ಪ್ರೊಫೆಸರನೇ ? ನನ್ನ  ಹತ್ತಿರ ಏಕೆ ಇಷ್ಟೊಂದು ಪುಸ್ತಕಗಳು ?    ಮೂರ್ಮೂರು   ತಿಂಗಳಿಗೆಲ್ಲ   ಐದು ನೂರು ಸಾವಿರ  ರೂಪಾಯಿಯ ಪುಸ್ತಕ ಖರೀದಿಸುವುದನ್ನು ನಿಲ್ಲಿಸಿದ್ದೇನೆ,  ಅಷ್ಟೇ    ಅಲ್ಲ  ಇರುವ  ಪುಸ್ತಕಗಳನ್ನು  ವಿಲೇವಾರಿ ಮಾಡುತ್ತಿದ್ದೇನೆ.  ಮತ್ತೆ ಮತ್ತೆ ಓದಬೇಕು ಎಂಬಂತಹ ಪುಸ್ತಕಗಳನ್ನಷ್ಟೇ  ಇಟ್ಟುಕೊಳ್ಳುತ್ತ   , ಆವತ್ತು ದುಡ್ಡುಕೊಟ್ಟು  ಕೊಂಡಿದ್ದೇನೆ  ಎಂಬ   ಮಮಕಾರವನ್ನು    ಬಿಟ್ಟು   , ಯಾರು ಇವನ್ನು ಓದುವರು, ಯಾರಿಗೆ ಪುರುಸೊತ್ತು , ಆಸಕ್ತಿ ಇದೆ?  ನಾನಿರುವ ಈ ಮುಂಬೈಯಲ್ಲಿ    ಹೇಗೆ ವಿಲೇವಾರಿ ಮಾಡಲಿ   ? ಯಾರು ಇವನ್ನು ಕೊಳ್ಳುವರು,  ಎಂಬುದರ ಬಗ್ಗೆ ತಲೆಗೆ ಹಚ್ಚಿಕೊಳ್ಳದೇ  ದಿನಪತ್ರಿಕೆಗಳ   ಜತೆಗೆ  ರದ್ದಿ ಹಾಕುತ್ತಿದ್ದೇನೆ .   ಅಲ್ಲಿ ಬೇಕಾದ ಪುಟಗಳನ್ನು ಹರಿದುಕೊಂಡು ಇಟ್ಟಿದ್ದೇನೆ.  ಕೆಲ ಪುಟಗಳಿಗಾಗಿ   ಇಡೀ   ಪುಸ್ತಕವನ್ನು  ಇಟ್ಟುಕೊಳ್ಳುವುದೇ ?   
ಇದೇ  ನನ್ನ   ಭವಿಶ್ಯಕಾರನಾದ   ಬೇಜಾನ್ ದಾರೂವಾಲನು ನಾಲ್ಕೈದು    ವರ್ಷಗಳಿಂದ  ಹೇಳುತ್ತಿರುವ ನನ್ನ   ಸ್ಪಿರಿಚುವಲ್   ಡೆವೆಲಪ್ಮೆಂಟ್  ಇರಬಹುದು !  ಇನ್ನೇನು ಕೊನೆಯ ಹಂತ  ತಲುಪಿದ್ದೀನಿ . ಇನ್ನು ಕೆಲದಿನಗಳ  ನಂತರ ನನ್ನ ಮನೆಗೆ ಬಂದವರಿಗೆ   ಉಳಿದೆಲ್ಲ  ಜನರ ಮನೆಯಲ್ಲಿ ಕಂಡಷ್ಟೇ   - ಬೆರಳೆಣಿಕೆಯ  ಸಂಖ್ಯೆಯ -  ಪುಸ್ತಕಗಳು  ಕಾಣುವುವು!!     ನಾನೂ  ಈ  ರೀತಿಯಾಗಿ ಪ್ರಮುಖಧಾರೆ/ವಾಹಿನಿ ( ಅಂದ್ರೆ   ಮೇನ್ ಸ್ಟ್ರೀಂ )ಗೆ ಬರುವೆನು.  

ಈಗ  ನನ್ನ  ಮೇಲೆ  ಪ್ರಭಾವ ಬೀರಿದ , ಸುಖ ಕೊಡುವ ಬಹಳ ಒಳ್ಳೆಯ ಕೆಲ ಪುಸ್ತಕಗಳ  ಸಂಗ್ರಹ ನನ್ನಲ್ಲಿದೆ  ಮತ್ತು   ನನ್ನ   ಓದಿನಲ್ಲಿ ನಾನು ಕಂಡುಕೊಂಡ ವಿಶೇಷಗಳನ್ನು , ಒಳ್ಳೆಯ ವಿಷಯವನ್ನು   ಸಂಪದದ ಮೂಲಕ   ಕೆಲವು ಜನರೊಂದಿಗೆ ಹಂಚಿಕೊಂಡಿದ್ದೇನೆ,  ಓದಿನಿಂದ ನನಗೆ ವೈಯುಕ್ತಿಕವಾಗಿ  ಸಾಕಷ್ಟು  ಲಾಭವೂ  ಆಗಿದೆ  ಎಂಬುದೂ ನಿಜ, (    ನಿಜವಾದ  ಜಾಣತನ ಇಲ್ಲದಿದ್ದರೂ    ಓದಿನಿಂದ ಬಂದ ತಿಳಿವಳಿಕೆಯಿಂದ ದಡ್ಡತನವನ್ನು ಮರೆಮಾಚಿ  ಜಾಣ ಎನ್ನಿಸಿಕೊಳ್ಳಬಹುದು!! )  ಇವೆಲ್ಲ  ನನಗಾದ ನಷ್ಟದ ಎದುರಿಗಿನ ಲಾಭಗಳು.