ನಮ್ಮ ನಮ್ಮ ಮನವ ಸಂತೈಸಿಕೊಳಬೇಕು......
ಅನುಭವಿಗಳು ಹೇಳಿದ್ದಾರೆ ಲೋಕದ ಡೊಂಕು ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ ಎಂದು. ಆದರೆ, ಇಂತಹ ಉದಾತ್ತ ತತ್ವವನ್ನು ಇಂದಿನ ನಾಗರಿಕ ಸಮಾಜದಲ್ಲಿ ದೀಪ ಹಚ್ಚಿ ಹುಡುಕಿದರೂ ಸಿಗುವ ಸಾಧ್ಯತೆ ಕಡಿಮೆ. ಇನ್ನೊಬ್ಬರ ಬಗ್ಗೆ ಆರೋಗ್ಯಕರ ಯೋಚನೆ, ಚಿಂತೆ ಮಾಡುವವರು ಬಹಳ ವಿರಳ. ತಮ್ಮ ಅಮೂಲ್ಯ ಸಮಯವನ್ನು ಇನ್ನೊಬ್ಬರ ಬಗ್ಗೆ ಏನೇನೋ ಕಲ್ಪನೆ ಮಾಡಿಕೊಳ್ಳುವುದಕ್ಕಾಗಿ ವಿನಿಯೋಗ ಮಾಡುತ್ತಿರುವುದು ಸಮಾಜದಲ್ಲಿ ಕಂಡು ಬರುತ್ತಿದೆ ಭೂಮಿ ಅಸ್ತಿತ್ವದಷ್ಟೇ ಸತ್ಯದ ಮಾತು.
ನಾಗರಿಕ ಸಮಾಜದಲ್ಲಿನ ನಾವುಗಳು (ಮನುಷ್ಯರು) ಎಂತಹ ವಿಚಿತ್ರ ಪ್ರಾಣಿಗಳು ಅಂತ. ಬುದ್ಧಿವಂತ ಪ್ರಾಣಿ ಎನಿಸಿಕೊಂಡಿರುವ ನಾವುಗಳು ನಿಜವಾಗಿಯೂ ಬುದ್ಧಿವಂತರಾ? ಎಂಬ ಪ್ರಶ್ನೆ ಮೂಡುತ್ತದೆ. ಈ ಪ್ರಶ್ನೆ ಮೂಡಲು ಒಂದು ಕಾರಣವೂ ಇದೆ. ನಮ್ಮ ಬಗ್ಗೆ ನಾವು ಎಂದಾದರೂ ಒಂದು ಕ್ಷಣವಾದರೂ ಚಿಂತೆ ಮಾಡಿದ್ದೀವಾ? ಎಂದರೆ ಇಲ್ಲ ಎಂಬುದು ಕಟುವಾದ ಸತ್ಯ. ಈ ಸತ್ಯವನ್ನು ನಾವು ಒಪ್ಪಿಕೊಳ್ಳಲೇ ಬೇಕು. ನಮ್ಮ ಬಗ್ಗೆ ನಾವು ಒಂದು ಕ್ಷಣವಾದರೂ ಯೋಚನೆ ಮಾಡಿದ್ದರೆ ಇಂದು ಬುದ್ದ, ಬಸವ, ಗಾಂಧಿ, ಅಂಬೇಡ್ಕರ ಸೇರಿದಂತೆ ಅನೇಕ ಆದಶ೯ ವ್ಯಕ್ತಿಗಳಂತೆ ಆಗದಿದ್ದರೂ ಅವರನ್ನು ಹೋಲುತ್ತಿದ್ದೇವು. ಆದರೆ, ಸಮಾಜದಲ್ಲಿ ಯಾರೂ ತಮ್ಮ ಬಗ್ಗೆ ಯೋಚನೆ ಮಾಡುವುದಿಲ್ಲ ಎಂಬ ಸತ್ಯವನ್ನು ನಾವು ಒಪ್ಪಿಕೊಳ್ಳಬೇಕು.ಮನುಷ್ಯರು ತಮ್ಮ ತಮ್ಮ ಬಗ್ಗೆ ಯೋಚನೆ ಮಾಡಿದ್ದರೆ ಇಂದು ಅವರೆಲ್ಲ ಮಹಾತ್ಮರು ಆಗುತ್ತಿದ್ದರು ಎನ್ನುವುದು ನನ್ನ ಅಭಿಪ್ರಾಯ. ಮನುಷ್ಯನ ಈ ಕೆಟ್ಟ ಚಟವು ಇನ್ನೊಬ್ಬರಿಗೆ ಎಂತಹ ನೋವನ್ನು ಉಂಟು ಮಾಡುತ್ತದೆ ಎಂಬುದಕ್ಕೆ ನಾನು ಹಲವಾರು ನಿದಶ೯ನಗಳನ್ನು ಕಣ್ಣಾರೆ ಕಂಡಿರುವುದರಿಂದಲೇ ಈ ಪ್ರಶ್ನೆ ಕಟ್ಟಿಗೆಯಲ್ಲಿನ ಹುಳು ಕೊರೆದಂತೆ ನನ್ನ ಮನಸ್ಸಿನಲ್ಲಿ ಕೊರೆಯಲು ಆರಂಭಿಸಿದೆ. ಇದು ಮನುಷ್ಯನ ಸಹಜ ಗುಣ ಎನ್ನಬೇಕೋ ಅಥವಾ ಕೆಟ್ಟ 'ಚಟ' ಎನ್ನಬೇಕೋ ಎಂಬ ಗೊಂದಲದ ಪ್ರಶ್ನೆ ನನ್ನನ್ನು ಆಗಾಗ ಕಾಡುತ್ತಲೇ ಇದೆ. ಈ ಗೊಂದಲದ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದಕ್ಕಾಗಿ ನನ್ನ ಮನದಲ್ಲಿ ಕೊರೆಯುತ್ತಿರುವ ಪ್ರಶ್ನೆಯನ್ನು ಬರಹದ ಮೂಲಕ ತಮ್ಮ ಮುಂದೆ ಇಡುತ್ತಿದೇನೆ.
ಸಮಾಜದಲ್ಲಿನ ಬಹುತೇಕರ ಜನರನ್ನು ಉದಾಹರಣೆಗೆ ತೆಗೆದುಕೊಂಡರೆ ತನ್ನೆದುರಿಗೆ ಕಾಣುವ ವ್ಯಕ್ತಿಗಳ ಬಗ್ಗೆ ಯೋಚನೆ ಮಾಡುತ್ತಾರೆ ಹೊರತು, ತಮ್ಮ ಬಗ್ಗೆ ಯೋಚನೆ ಮಾಡುವುದಿಲ್ಲ. ಆದರೆ, ಆ ವ್ಯಕ್ತಿಯು ಯೋಚನೆ ಮಾಡುವ ವಿಚಾರ ಲಹರಿ ಆರೋಗ್ಯಕರವಾಗಿರುತ್ತದೆ ಎಂಬುದು ದೂರದ ಮಾತು. ಹೀಗೆಂದ ಮಾತ್ರಕ್ಕೆ ಇನ್ನೊಬ್ಬರ ಬಗ್ಗೆ ಒಳ್ಳೆಯ ಯೋಚನೆ ಮಾಡುವವರು ಇಲ್ಲ ಎಂದು ನನ್ನ ವಾದ ಅಲ್ಲ. ಅಂತಹ ಜನರು ತುಂಬ ಕಡಿಮೆ ಎಂಬುದು ನನ್ನ ಅಭಿಪ್ರಾಯ.
ಸಮಾಜದ ಬಹುಪಾಲು ಜನರು ಇನ್ನೊಬ್ಬರ ಬಗ್ಗೆ ಚಿಂತಿಸಿ ಚಿಂತಿಸಿ ಸೊರಗುತ್ತಾರೆ. ಇನ್ನು ಕೆಲವರು ಇನ್ನೊಬ್ಬರ ಯೋಚನೆ, ಕಲ್ಪನೆ ಮಾಡಿಕೊಳ್ಳುವುದೇ ಹವ್ಯಾಸ ಮಾಡಿಕೊಂಡಿರುತ್ತಾರೆ. ಉದಾಹರಣೆಗೆ, ಒಬ್ಬ ವ್ಯಕ್ತಿ ಚೆನ್ನಾಗಿದ್ದರೂ ಕಷ್ಟ, ಇಲ್ಲದಿದ್ದರೂ ಕಷ್ಟ. ಒಳ್ಳೆಯದು ಮಾಡಿದರೂ ಕಷ್ಟ. ಅವನು ಹಾಗೆ, ಇವನು ಹೀಗೆ. ಅವಳು ಹಾಗೆ, ಇವಳು ಹೀಗೆ ಎಂದು ಆಡಿಕೊಳ್ಳುವುದಕ್ಕೆ ಕೆಲವರು ತಮ್ಮ ಮನೆಯ ವಯಕ್ತಿಕ ಕೆಲಸವನ್ನು ಬಿಟ್ಟು ಯೋಚನೆ ಮಾಡುತ್ತಾರೆ. ಇದು ಆರೋಗ್ಯಕರ ಯೋಚನೆ ಅಲ್ಲವೆಂದು ಗೊತ್ತಿದ್ದರೂ ಅವರು ಈ ರೋಗಕ್ಕೆ ಅಂಟಿಕೊಳ್ಳುತ್ತಿರುವುದು ಅವರ ಮನಸಿನ ದುಬ೯ಲತೆ ಮತ್ತು ಸರಿಯಾದ ಮಾಗ೯ದಶ೯ದ ಕೊರೆಯೂ ಕಾರಣವಾಗಿರಬಹುದು. ಹೀಗೆ, ಯೋಚನೆ ಮಾಡುವುದಕ್ಕೆ ವ್ಯಯಿಸುವ ಸಮಯವನ್ನು ತಮ್ಮ ಶ್ರೇಯೋಭಿವೖದ್ಧಿಗೆ ವ್ಯಯಿಸಿದರೆ ಎಷ್ಟು ಉಪಯೋಗ ಆಗುತ್ತದೆ. ಆದರೆ, ಅದಕ್ಕೆ ಅವರು ಮನಸು ಮಾಡುವುದಿಲ್ಲ. ಇಂತಹ ನಡತೆಯು ಸಮಾಜದ ಮುಗ್ಧ ಮಕ್ಕಳಲ್ಲಿ ಯಾವ ರೀತಿಯಾಗಿ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದನ್ನು ಅಥ೯ ಮಾಡಿಕೊಳ್ಳದಷ್ಟು ಆಳವಾಗಿ ಅದರಲ್ಲಿ ಲೀನವಾಗಿರುತ್ತಾರೆ. ತಮ್ಮ ಬಗ್ಗೆ ಕ್ಷಣ ಕಾಲ ಯೋಚನೆ ಮಾಡಿದರೂ ಸಹ ಏನೇನೋ ಸಾಧನೆ ಮಾಡಬಹುದು. ಆದರೆ, ಸಮಾಜದ ಜನತೆಯ ಮನೋದೌಬ೯ಲ್ಯ ದಿನೇ ದಿನೇ ಬೆಳೆಯುತ್ತಿದೆ. ನಮ್ಮ ಬಗ್ಗೆ ನಾವು ಯಾಕೆ ಯೋಚನೆ ಮಾಡುವುದಿಲ್ಲ... ಯಾಕೆ ಹೀಗೆ ಎಂದು ಪ್ರತಿಯೊಬ್ಬರೂ ಎಂದುಕೊಳ್ಳುತ್ತಿಲ್ಲ. ಯಾಕೆ ಹೀಗೆ.... ಎಂಬುದೇ ಬಿಡಿಸಲಾಗದ ಪ್ರಶ್ನೆಯಾಗಿದೆ. ಎಲ್ಲಿಯವರೆಗೂ ನಾವು ನಮ್ಮ ಬಗ್ಗೆ ಚಿಂತಿಸುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಅಭ್ಯುದಯದವಾಗದು.
-----------------------------------------------------------------------------
ಪ್ರತಿಕ್ರಿಯೆ (3)