ಕರ್ಮವು ಆತ್ಮವಿಕಸನಕ್ಕೆ ದಾರಿ ಅಂತೆ. ಓದುತ್ತಿರುವುದೇ ನನ್ನ ಕರ್ಮ ಮತ್ತು ಧರ್ಮ ಇರಬಹುದು.( ನೋಡಿ - "ದರೋಡೆಕೋರನ ಧರ್ಮ?" - http://sampada.net/blog/shreekantmishrikoti/24/02/2010/24162 ) ಯಾಕೆಂದರೆ ಓದಲು ಸಮಯ ಇದೆ, ಅನುಕೂಲ ಇದೆ, ಓದು ನನಗೆ ಇಷ್ಟ ಮತ್ತು ಓದುವುದನ್ನು ಬಿಟ್ಟು ಬೇರೇನನ್ನೂ ಮಾಡಲಾರೆನೇನೋ !
ನಾನು ಈ ತನಕ ಓದಿದ್ದು ಅತಿ ಆಯಿತೋ ಏನೋ ಅಂತ ಸ್ವಲ್ಪ ಕಡಿಮೆ ಮಾಡಿದ್ದೆ . ನನ್ನ ಪುಸ್ತಕ ಸಂಗ್ರಹವನ್ನು ಬಹುಮಟ್ಟಿಗೆ ಕರಗಿಸಿದ್ದನ್ನು ಹಿಂದೆ ಯಾವಾಗಲೋ ಬರೆದಿದ್ದೇನೆ. " ನಿಮಗೆ ಓದಿನಿಂದ ಅಜೀರ್ಣ ಆಗಿದೆ. ( ಅದಕ್ಕೆ ಹೀಗೆ ಮಾತಾಡ್ತೀರಿ!- ಇದು ಅವರ ಸ್ವಗತ ಇರಬಹುದು!!)" ಅಂತ ಯಾರೋ ಒಂದು ಧಾರ್ಮಿಕ ವಿಷಯಕ್ಕೆ ನನ್ನ ಅಭಿಪ್ರಾಯ ಕೇಳಿ ಅದನ್ನ ಮೆಚ್ಚದೆ ಕಮೆಂಟಿಸಿದ್ದೂ ಅಯಿತು. ಇರಲಿ.
ಇದೀಗ ಕೀರ್ತಿನಾಥ ಕುರ್ತಕೋಟಿಯವರ 'ಕನ್ನಡ ಸಾಹಿತ್ಯ ಸಂಗಾತಿ' ತಿರುವಿ ಹಾಕಿದೆ. ಎಷ್ಟೋ ವರುಷಗಳ ಹಿಂದೆ ಕೊಂಡಿದ್ದು . ಓದಲು ಆಗಿರಲಿಲ್ಲ. ಅದರಲ್ಲಿ ಕನ್ನಡದ ಪ್ರಮುಖ ಕೃತಿಗಳ , ಕೃತಿಕಾರರ ಬಗೆಗೆ ಪಾಂಡಿತ್ಯಪೂರ್ಣ ಬರಹಗಳಿವೆ, 'ಪಾಂಡಿತ್ಯಪೂರ್ಣ' ಅಂದರೆ ಗೊತ್ತಾಯಿತಲ್ಲ - ನನಗೆ ಬಹುಭಾಗ ತಿಳಿಯಲಿಲ್ಲ!. ನನ್ನ ಯೋಗ್ಯತೆ ಕಡಿಮೆ. ಆದರೆ ನಾನು ಹೊಸದಾಗಿ ತಿಳಿದುಕೊಂಡಿದ್ದು ಇದು-ಸಾವಿರಕ್ಕೂ ಹೆಚ್ಚು ವರ್ಷಗಳ ಕನ್ನಡ ಸಾಹಿತ್ಯ ಬಹಳ ಮೇಲ್ಮೆಯನ್ನು ಸಾಧಿಸಿದೆ. ಕನ್ನಡ ಸಾಹಿತ್ಯ ಅಂದರೆ ಬರೀ ಧಾರ್ಮಿಕ, ಪೌರಾಣಿಕ,ರಾಜರುಗಳ ವರ್ನನೆ,ಕತೆ ಅಲ್ಲ. ನಾನು ಶಾಲೆಯಲ್ಲಿ ಕಲಿಯುವಾಗ ೮,೯,೧೦ ನೇ ತರಗತಿಗೆ ಸಂಸ್ಕೃತ ಮೊದಲಭಾಷೆಯಾಗಿದ್ದುದು ನನ್ನನ್ನ್ನು ಹಳೆಗನ್ನಡದಿಂದ ವಂಚಿತನನ್ನಾಗಿಸಿತು. ಹಾಗಾಗಿ ನಾನು ಈವರೆಗೆ ಹೊಸಗನ್ನಡವನ್ನಷ್ಟೇ ಓದಿಕೊಂಡಿರಬೇಕಾಯಿತು. ಈಗ 'ಕನ್ನಡ ಸಾಹಿತ್ಯ ಸಂಗಾತಿ' ತಿರುವಿ ಹಾಕಿ ಹಳಗನ್ನಡ ಕಲಿಯಬೇಕು, ಕಡೇಪಕ್ಷ ಕನ್ನಡದ ಮೇರುಕೃತಿಗಳ ಗದ್ಯರೂಪವನ್ನಾದರೂ ಓದಬೇಕು ಅನಿಸಿದೆ. ಹಳೆಗನ್ನಡ ಶೈಲಿಯನ್ನು ಸ್ವಲ್ಪ ತಿಳಿದುಕೊಳ್ಳಲು ಓದಿಸಿಕೊಂಡು ಹೋಗುವಂತ ಪತ್ತೇದಾರಿ ಕತೆಯಂತಿರುವ ನಡುಗನ್ನಡದ ಕೆಂಪುನಾರಾಯಣನ ಮುದ್ರಾಮಂಜೂಷವನ್ನು ಕೈಗೆತ್ತಿಕೊಂಡಿರುವೆ. ಹಳೆಗನ್ನಡದ ಪುಸ್ತಕಗಳನ್ನು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಹುಡುಕಿನೋಡಬೇಕಿದೆ.
ಪ್ರತಿಕ್ರಿಯೆ (2)