ಅಂಗಳದಿ ರಂಗೋಲಿಯನಿಡುವಾಗ

ಕದ್ದು ಕದ್ದು ನೋಡಿದವರು.... ಮುಡಿಗೆ ಹೂವ ಮುಡಿಸಿ

ಮನಕೆ ತಂಪನೆರೆದವರು....

ಇವರೇ ನನ್ನವರು....

ತವರಿಗೆಂದು ಹೋದಾಗ

ನನ್ನೇ ನೆನೆ ನೆನೆದು ಸೋತವರು....

ಮರುದಿನ ಮೌನದಲಿ ಹಿತ್ತಿಲಿಗೆ ಹೋದಾಗ

ನಗು ನಗುತ ಅಲ್ಲೇ ನಿಂದವರು....

ಇವರೇ ನನ್ನವರು......

ಕುಡಿ ನೋಟ ಬೀರುವರು ಕಣ್ಣಲ್ಲೇ ಕೇಳುವರು

ಮಂದ ನಗೆಯಲಿ ಕರೆಯುವರು.....

ಇವರೇ ನನ್ನವರು......

ಬಂಗಾರದಾ ಮನವು ಸಿಂಗಾರದಾ ಮನೆಯು

ಮಗುವಿನಂತೆ ಕಾಳಜಿಯ ಮಾಡುವರು....

ಇವರೇ ನನ್ನವರು......

ಅಂತರಂಗ ಹಾಲು,ಮೇಲೆ ಮೇಲೆ ಒರಟು

ಕಲ್ಪವೃಕ್ಷದಾ ಗುಣದವರು......

ಇವರೇ ನನ್ನವರು...........

ನನಗಾಗಿ ಬಂದವರು ನನ್ನೊಳಗೆ ಇರುವವರು

ನನ್ನ ಸೆರಗ ಹಿಡಿದು ಹಿಂದಿಂದೆ ಬರುವವರು......

ಇವರೇ ನನ್ನವರು......

ಜನ್ಮ ಜನ್ಮದ ನಂಟು ಕೊರಳಿಗೆ ಮೂರು ಗಂಟು

ಎರಡು ಮನಗಳ ಮಾತು ನೂರೆಂಟು....

ಸುಖ ದುಃಖಗಳಿಗಿವರು ಸಮಭಾಗಿಯಾದವರು

ಇವರೇ ಇವರೇ ನನ್ನವರು.....

 

 

 

ಪ್ರತಿ.........