ಇದನ್ನು ಗಮನಿಸಿದ್ದೀರಾ ? (http://thatskannada.oneindia.in/nri/wkc/new-jersey/2010/0906-akka-wkc-new-jersey-kannada-sahithya-goshti.html)
ಕತೆ ಕವನ ಕಾದಂಬರಿ ಮುಂತಾದ ಕಲ್ಪನಾ ಸಾಹಿತ್ಯದ ಅತೀವ ಮೋಹಕ್ಕೆ ಸೆರೆಯಾದ ಕನ್ನಡ ಸಾಹಿತಿಗಳ ಮನೋಧರ್ಮದಿಂದಾಗಿ ಕನ್ನಡಿಗರು ಪರಿತಪಿಸಬೇಕಾದ ಸನ್ನಿವೇಶ ಬಂದಿದೆ ಎಂದು ಖ್ಯಾತ ಸಂಶೋಧಕ ಡಾ. ಎಂ.ಎಂ.ಕಲಬುರ್ಗಿ ಭಾನುವಾರ ಅಮೆರಿಕದಲ್ಲಿ ವಿಷಾದಪಟ್ಟರು. ಘಟನಾ ಸಾಹಿತ್ಯವನ್ನು ಅಲಕ್ಷ್ಯ ಮಾಡಿದುದರಿಂದ ಕನ್ನಡ ನಾಡು ನುಡಿ ಗಡಿಗಳಿಗೆ ಇವತ್ತು ಅನೇಕ ಬವಣೆಗಳು ಬಂದೆರಗಿವೆ ಎಂದು ಅವರು ಖೇದ ವ್ಯಕ್ತಪಡಿಸಿದರು.ಸಾಹಿತ್ಯಗೋಷ್ಠಿಯೊಂದರಲ್ಲಿ ಮಾತನಾಡುತ್ತಿದ್ದ ಅವರು ಕನ್ನಡ ನಾಡಿಗರ ಬವಣೆಗಳಿಗೆ ಕಾರಣ ಹುಡುಕುತ್ತಿದ್ದರು. ಕತೆ-ಕಾವ್ಯಗಳು ಅರಿವಿನ ಹರವನ್ನು ವೃದ್ಧಿಸುತ್ತದೆ ಆದರೆ ಅಸ್ಮಿತೆಯನ್ನು ಕಂಡುಕೊಳ್ಳಲಾರದು ಎಂಬುದು ಅವರ ವ್ಯಾಖ್ಯಾನ. ನಮ್ಮ ಅನೇಕ ಕನ್ನಡ ಬರಹಗಾರರು ಪುರಾಣಗಳನ್ನು ಹೇಳುವ ಅವಸರದಲ್ಲಿ ಘಟನಾ ಸಾಹಿತ್ಯವನ್ನು ಮೂಲೆಗುಂಪಾಗಿಸಿದ್ದಾರೆಂದು ಡಾ.ಕಲಬುರ್ಗಿ ನುಡಿದರು.ಕನ್ನಡ ನಾಡಿಗೆ ಇವತ್ತು ಬಂದೊದಗಿರುವ ಆಪತ್ತುಗಳನ್ನು ಡಾ.ಕಲಬುರ್ಗಿ ತಮ್ಮ ಸುದೀರ್ಘ ಭಾಷಣದಲ್ಲಿ ಪಟ್ಟಿ ಮಾಡುತ್ತ ಹೋದರು.ಕಾವೇರಿಯಿಂದಮಾ ಗೋದಾವರಿವರಮಿರ್ಪ ನಾಡದಾ ಕನ್ನಡನಾಡು ಇವತ್ತು ಮೂವತ್ತು ಜಿಲ್ಲೆಗಳಿಗೆ ಸೀಮಿತವಾಗಿರುವ ದುರಂತವನ್ನು ನೆನೆದು ಕಲಬುರ್ಗಿ ವಿಷಣ್ಣರಾದರು. ಶಿವಾಜಿಯು ಕನ್ನಡ ನೆಲದ ಭೋಂಸ್ಲೆ ಮನೆತನದ ಒಬ್ಬ ಧೀರ ಎಂದು ಯಾರ ಬಳಿ ಹೇಳಲಿ? ಕಾಲಕಾಲಕ್ಕೆ ಕನ್ನಡ ನಾಡಿನ ಇತಿಹಾಸಗಳನ್ನು ದಾಖಲಿಸುವಲ್ಲಿ ಕನ್ನಡ ಬರಹಗಾರರು ಆಸ್ಥೆ ವಹಿಸಿದ್ದರೆ ಇಂಥ ಗೋಜಲುಗಳನ್ನು ನಾವು ನೋಡಬೇಕಾಗಿರಲಿಲ್ಲ. ಇತಿಹಾಸ ಬರೆಯುವ ಮಹತ್ವವನ್ನು ಕನ್ನಡಿಗರು ಮನಗಾಣದೆ ಇರುವುದು ವಿಷಾದಕರ ಎಂದು ಕಲಬುರ್ಗಿ ಹೇಳಿದರು.
ಪ್ರತಿಕ್ರಿಯೆ (5)