ಒಂದೊಮ್ಮೆ ಸ್ವತಂತ್ರವಾಗಲು
ಹೋರಾಡಿ ಸ್ವತಂತ್ರನಾದ ನಂತರ
ತನ್ನವರಿಂದಲೇ ಪೆಟ್ಟು
ತಿಂದು ಹಾರಾಡುವ ಕನಸ ಮರೆತವನು

ಸಾಯಬೇಕೇ, ಬದುಕು ಕೊನೆಯಾಗಲು
ಸಾಯುವ ಕಲ್ಪನೆಯೊಂದೆ
ಸಾಕಲ್ಲವೇ ಎಂದು ಬದುಕೋ ಸೆಲೆಯ
ಬಿಟ್ಟು ಜೀವಂತ ಶವವಾದವನು
*****

ಹಿರಿಯನ ಅಪ್ಪಣೆಗೆ
ಬೆಳೆಯುವುದಕ್ಕೆ ತಿಲಾಂಜಲಿಯಿಡುತ್ತಾ
ತಾನು ಕಂಡ ಕನಸುಗಳನು  
ಕನವರಿಕೆಗಳಿಗೆ ಮಾರುವವಳು  
 
ಅಳುವ ಹಸುಗೂಸುಗಳ ಮಧ್ಯೆ
ಮನದಾಳದ ಮಾತುಗಳ ಕೇಳದ,
ತನ್ನ ಮೈಯ ಮಾಂಸಗಳ
ಪಿಪಾಸುವಿಗೆ ನೊಂದು ಮಲಗಿದವಳು
***

ಬೆಳಕ ಕಂಡು ಎಲ್ಲರೂ ತನ್ನ
ದಾರಿಯಲ್ಲಿ ನಡೆಯಬೇಕೆಂಬ
ಕನಸು ಕಟ್ಟಿ ಬೆಳೆಸಿದವನು
ಬದುಕಿರುವವರೆಗೆ ಪಾಲಿಸಿದವನು

ಸತ್ತಾಗ ಜನರ ಕಣ್ಣಲ್ಲಿ ನೀರಾಗಿ ಸುರಿದು
ಮರೆತು ಹೋದವನು
ಪುನಃ ಕತ್ತಲ ದಾರಿಯ ಹಿಡಿದವರಿಗೆ
ಮಮ್ಮಲ ಮರುಗಿ ಆವಿಯಾದವನು  
***

ಒಡಲಾಳದ ಬೇಗೆಗೆ ಧ್ವನಿ ಕೊಡಲು
ಜೀವ ಸೃಷ್ಟಿ ಮಾಡಿ ಬೆಳೆಸುವವರು
ಮರೆವು ಎಂಬ ಕಾರಣಕ್ಕೆ
ಮನೆಯವರಿಂದ ಮರೆತೇ ಹೋದವರು

ಮನೆಯೆಂಬ ಸೆರೆಮನೆಯಲ್ಲಿ
ಕಾಲ ದೂಡುತ್ತಾ ಒಬ್ಬರೊಬ್ಬರ ಕೈ ಹಿಡಿದು
ಕಾಣದ ಮುಂದಿನ ಕನಸು ಕಾಣುವವರು
ಸಾಯಲು ಕಾಯುವವರು
***

ತನ್ನ ಹಕ್ಕುಗಳಿಗೊಸ್ಕರ ಹೋರಾಡಿ ಸೋತವರು
ಇನ್ನೊಬ್ಬರಿಗಾಗಿ ತನ್ನ ಕನಸುಗಳನ್ನು ಕೊಂದವರು
ಬಾಳೆಂಬ ಯುದ್ಧದಲ್ಲಿ ಹುತಾತ್ಮರಾದವರು!