ಮಹಾಭಾರತ ಯುದ್ಧ ಮುಗಿದ ಮೇಲೆ ಸ್ವಲ್ಪ ಕಾಲಕ್ಕೆ ಕೃಷ್ಣ ಮತ್ತು ಉತ್ತುಂಗಋಷಿ ಭೆಟ್ಟಿ ಆಗುತ್ತಾರೆ. ಮಾತಿನ ನಡುವೆ ಆ ಋಷಿ ಕೇಳುತ್ತಾನೆ-ಅಂದ ಹಾಗೆ ಪಾಂಡವರು ಕೌರವರು ಹ್ಯಾಗಿದ್ದಾರೆ? ಜಗಳ ಮುಗಿದಿದೆಯಾ? ಈಗಲಾದರೂ ಅನ್ಯೋನ್ಯವಾಗಿದ್ದಾರಾ?
ಪಾಪ, ಯುದ್ಧದ ಸುದ್ದಿ ಯಾವುದೂ ಅವನಿಗೆ ಗೊತ್ತೇ ಇರುವದಿಲ್ಲ!
ಕೃಷ್ಣ ಎಲ್ಲ ಸಂಗತಿಯನ್ನ ಅವನಿಗೆ ತಿಳಿಸಿದಾಗ ಋಷಿಗೆ ಸಿಟ್ಟು ಬಂದು ಬೈದೇ ಬಿಡುತ್ತಾನೆ. "ನೀನಿದ್ದೂ ಇಂಥ ಯುದ್ಧ ನಡೆಯೋಕೆ ಬಿಟ್ಟೆ ಅಂದರೆ, ಏನರ್ಥ? ಕಳ್ಳ ಕಣಯ್ಯಾ ನೀನು. ನಾನು ನಿನ್ನ ಸುಮ್ನೆ ಬಿಡೋದಿಲ್ಲ. ಶಾಪ ಕೊಡ್ತೀನಿ" ಅಂತ ಗದರಿಸುತ್ತಾನೆ.
ಕೃಷ್ಣ ಅವನನ್ನು ಹೇಗೋ ಸಮಾಧಾನ ಮಾಡುತ್ತಾನೆ. 'ಒಂದು ವರ ಕೇಳು ಕೊಡ್ತೀನಿ,ಏನು ಬೇಕೋ ಕೇಳು' ಅಂತಾನೆ. "ಅವನು ಎಲ್ಲಾ ಕಂಡಿದ್ದೀನಿ, ಬಿಡಯ್ಯಾ ,  ವರ-ಗಿರ ಏನೂ ಬೇಡ" ಅಂತಾನೆ. ಕೊನೆಗೆ ಕೃಷ್ಣನ ಬಲವಂತಕ್ಕೆ  "ನನಗೆ ನೀರಡಿಕೆಯಾದಾಗಲೆಲ್ಲ ಕುಡಿಯಲಿಕ್ಕೆ ನೀರು ಸಿಗಲಿ" ಅಂತ ಕೇಳಿ ವರ ಪಡೆದುಕೊಳ್ಳುತ್ತಾನೆ.


ಮುಂದೊಂದು ಸಲ ಮರುಭೂಮಿಯಲ್ಲಿ ಸುಡುಬಿಸಿಲಲ್ಲಿ ಅಲೆಯುವಾಗ ವಿಪರೀತ ನೀರಡಿಕೆಯಾಗಿ ಎಲ್ಲೂ ನೀರು ಸಿಗದೆ ಈ ವರ ನೆನಪು ಮಾಡಿಕೊಳ್ಳುತ್ತಾನೆ. ತಕ್ಷಣ ಅವನ ಮುಂದೆ ಒಬ್ಬ ತುಂಬಾ ಕೊಳಕಾದ ದುರ್ನಾತದ ಬೇಡ ಕಾಣಿಸಿಕೊಂಡು ನೀರು ಕೊಡುತ್ತಾನೆ-ಇವನು ಒಲ್ಲೆ ಅಂತ ಅವನನ್ನು ಬೈದು ಅಟ್ಟುತ್ತಾನೆ. ಅವನು ಮಾಯವಾಗುತ್ತಾನೆ. ಆಮೇಲೆ ಕೃಷ್ಣನನ್ನು ಆಕ್ಷೇಪಿಸುತ್ತಾನೆ. "ಒಬ್ಬ ಅಸ್ಪ್ರಶ್ಯನ ಹತ್ತಿರ ನೀರು ಕಳಿಸೋದಾ ನೀನು? ಇದೇನಾ ನಿನ್ನ ವರ? "
ಕೃಷ್ಣ ಹೇಳಿದ-"ನೀನು ನೀರು ಬಯಸಿದ ತಕ್ಷಣ ನಾನು ಅಮೃತವನ್ನು ಕೊಡು ಅಂತ ಇಂದ್ರನಿಗೆ ಹೇಳಿದೆ. ಅದನ್ನ ಮಾನವರಿಗೆ ಕೊಡಲಾಗದು ಎಂದ. ನಾನು ಒತ್ತಾಯಿಸಿದ ಮೇಲೆ ಒಪ್ಪಿಕೊಂಡ. ಆದರೆ ನೀನು ನಿಜವಾಗಿಯೂ ತಿಳಿವಳಿಕಸ್ಥ ಹೌದೋ ಅಲ್ಲವೋ ಪರೀಕ್ಷಿಸಿ ಕೊಡುವುದಾಗಿ ಹೇಳಿದ. ಅಂಥ ಪರೀಕ್ಷೆಯೇನೂ ಬೇಕಾಗಿಲ್ಲ, ಉತ್ತುಂಗ ಮಹಾಪುರುಷ, ಜ್ಞಾನಿ, ಅವನಿಗೆ ಎಲ್ಲಾ ಮಾನವರೂ ಒಂದೇ ಅಂತ ಪಂಥ ಕಟ್ಟಿದ್ದೆ. ಬೇಡನ ವೇಷದಲ್ಲಿ ಬಂದವನು ಇಂದ್ರನೇ. ನೀನು ಜ್ಞಾನಿ, ಈ ಸ್ಪಶ್ಯ, ಅಸ್ಪ್ರಶ್ಯತೆಯ ಎಲ್ಲೆಯನ್ನು ನೀನು ಮೀರಿದವ ಅಂತ ತಿಳಿದಿದ್ದೆ. ನಿನ್ನ ನಡತೆಯಿಂದ ನಾನು ಸೋತು ತಲೆ ತಗ್ಗಿಸುವ ಹಾಗೆ ಮಾಡಿದೆ".

ಇದು ಜೋಗಿಯವರು ತಮ್ಮ ಪುಸ್ತಕ  'ಕಥಾಸಮಯ'ದಲ್ಲಿ ಹೇಳಿದ ಒಂದು ಕತೆ.