ನಾನು ಅಂದರೆ ಯಾರು?
ನಿಮ್ಮ ಪಾಲಿಗೆ ನಾನು ಅಂದರೆ ಈ ಮನೆಯಲ್ಲಿರೋನು,
ಅಥವಾ ನಿಮ್ಮ ಜತೆ ವ್ಯವಹರಿಸೋ ನನ್ನ ಮನಸ್ಸು.
ಇಷ್ಟು ದಿನ ಈ ಕಡೆ ಗಮನ ಇರಲಿಲ್ಲ.
ಮೊನ್ನೆ ತಾನೆ ಎದ್ದು ನೋಡಿದೆ,
ನನಗೇ ಗೊತ್ತಿಲ್ಲದ ಕೋಣೆಗಳಲ್ಲಿ
ಮೂಲೆಗಳಲ್ಲಿ ಸಂದಿಗೊಂದಿಗಳಲ್ಲಿ
ಕೊನೆಗೆ ಕಾಲಿಡುವಲ್ಲೆಲ್ಲ
ಏನೇನೆಲ್ಲ ತುಂಬಿಕೊಂಡಿದೆ ಇಲ್ಲಿ?
ಯಾವಾಗ ಇಷ್ಟೆಲ್ಲ ಸೇರಿಕೊಂಡಿದೆ , ನನಗೆ ಗೊತ್ತಿಲ್ಲದೆ?
ಅದರಲ್ಲಿ ನಿಜಕ್ಕೂ ಬೇಕಾಗಿರೋದು ಎಷ್ಟು, ?
ಬೇಡವಾದುದು ಎಲ್ಲ ಏಕಿರಬೇಕು ಇಲ್ಲಿ.
ಒಂದೊಂದಾಗಿ ನೋಡಿ ಬೇಕಿದ್ದುದನಷ್ಟೆ ತೆಗೆದಿಟ್ಟುಕೊಂಡೆ, ಅದು ಬಲುಕಡಿಮೆ.
ಬೇಡವಿದ್ದುದೆ ಬಹಳ,ಎಸೆದುಬಿಟ್ಟೆ ಅಂಗಳಕ್ಕೆ.
ಅಷ್ಟೇ ಅಲ್ಲ ಅಲ್ಲಿಂದಲೂ ಸಾಗಿಸಿಬಿಟ್ಟೆ , ಕಣ್ಣ ಪರಿಧಿಯಿಂದ ದೂರ.
ಧೂಳು, ಕಸ , ಹುಳ , ಹುಪ್ಪಟೆ ಎಲ್ಲ ಕಳೆದು
ಈಗ ಲಕ ಲಕ, ಮನೆ ದೊಡ್ಡದೆನಿಸುತ್ತದೆ!
ಕಿಟಕಿ ಬಾಗಿಲು ತೆರೆದಿಟ್ಟಿದ್ದೇನೆ, ಗಾಳಿ ಬೆಳಕಿಗೆ.
ಆದರೆ ಧೂಳು,ಕಸ , ಹುಳ-ಹುಪ್ಪಟೆ ಮತ್ತೆ
ಸೇರದ ಹಾಗೆ ನಿತ್ಯ ನೋಡುತ್ತಿರಬೇಕು ಅಷ್ಟೆ.
(ಇಷ್ಟ ಆದರೆ ಇದನ್ನೂ ನೋಡಿ- ಜ್ಞಾನೋದಯ! )
ಪ್ರತಿಕ್ರಿಯೆ (2)