ಅಚ್ಚ ಕನ್ನಡ ಪದಗಳು
ಈ ಬಗ್ಗೆ ನನ್ನ ಕೆಲವು ವಿಚಾರಗಳಿವೆ .
೧. ಅಚ್ಚ ಕನ್ನಡ ಪದಕೋಶ ಎಂಬ ಪುಸ್ತಕ ಇದೆಯಂತೆ. ಅದನ್ನು, ಅಂಥ ಪುಸ್ತಕಗಳನ್ನು ಹುಡುಕಿ, ನೋಡೋಣ . ಅಂದರೆ ಮತ್ತೆ ಮತ್ತೆ ’ಅದನ್ನೇ ಕಂಡುಹಿಡಿವ’ ಕೆಲಸ ತಪ್ಪುವದು .
೨. ಶಬ್ದಕೋಶದಿಂದಲೋ , ಹಳೆಗನ್ನಡದಿಂದಲೋ , ದ್ರಾವಿಡಿಯನ್ ಎಟಿಮಾಲಾಜಿಕಲ್ ಡಿಕ್ಷನರಿಯಿಂದಲೋ ಶಬ್ದವನ್ನು ಹುಡುಕುವ ಬದಲು , ನಮ್ಮ ಹಿರಿಯರಿಂದ , ಹಳ್ಳಿಗರಿಂದ ಬಳಕೆಯಲ್ಲಿನ ಶಬ್ದಗಳನ್ನು ಹುಡುಕಿ ತೆಗೆಯುವದು ಒಳ್ಳೆಯದು. ಆಗ ಆ ಶಬ್ದಗಳನ್ನು ಬಳಸಿದ ವಾಕ್ಯಪ್ರಯೋಗಗಳನ್ನೂ ತಿಳಿಸಿದರೆ ಅದನ್ನು ನೆನಪಿನಲ್ಲಿಡಲು , ಮರು ಬಳಕೆಗೆ ತರಲು ಆಸಕ್ತರಿಗೆ ಅನುಕೂಲವಾಗುವದು. ( ಅಯ್ಯೋ , ನಾನು ಹಳ್ಳಿಯಲ್ಲಿ ಹುಟ್ಟಿ ಹಳ್ಳಿಗರ ನಡುವೆ ಬೆಳೆಯಲಿಲ್ಲವಲ್ಲ ... ಆಗ ನಿಮಗೆಲ್ಲ ಹೆಚ್ಚು ನೆರವಾಗಬಹುದಿತ್ತು.)
೩. ತೀರ ಅಪರಿಚಿತ ಶಬ್ದವನ್ನು ಬಳಕೆಗೆ ತರಲಾಗದು. ಇನ್ನೊಬ್ಬರನ್ನು ಒಪ್ಪಿಸಲೂ ಆಗದು.
೪. ಉದಾಹರಣೆಗೆ ನಿರಿಗೆ - ಶಬ್ದ ತಗೊಳ್ಳೋಣ - ಮುಖದ ಮೇಲಿನ ನಿರಿಗೆಗಳು , ಸೀರೆಯ/ಧೋತರದ ನಿರಿಗೆಗಳು ಗೊತ್ತು. ಅದನ್ನು ಹೊಸ ಅರ್ಥದಲ್ಲಿ ಟ್ಯಾಬ್ಗೋ ಇನ್ನಾವುದಕ್ಕೋ ಬಳಸಲು ಮನಸ್ಸು ಹಿಂಜರಿಯುತ್ತದೆ.
ಅದೇ ಹಣಕ್ಕೆ ಬದಲಾಗಿ ದುಡ್ಡು / ರೊಕ್ಕ ಬಳಸಲು ಹೇಳಬಹುದು . ತಕ್ಕ ಉದಾಹರಣೆಗಳನ್ನೂ ಕೊಡಬಹುದು. - ದಾಸರ ರೊಕ್ಕ ಬಲು ದುಕ್ಕ ಕಾಣಕ್ಕ ಎಂದೋ , ಉತ್ತರ.ಕರ್ನಾಟಕದಲ್ಲಿನ ಬಳಕೆಯನ್ನೋ ತೋರಿಸಬಹುದು.)
ಸಂಸ್ಕೃತದ ಸಿದ್ಧ - ಇಂಗ್ಲೀಷಿನ ರೆಡಿ , ಉರ್ದು/ಪಾರ್ಸಿ ಮೂಲದ ತಯಾರಿ ಬದಲಿಗೆ , ಬದಲಿಗೆ ಕನ್ನಡದ ಸಜ್ಜು ಬಳಸಲು ಸೂಚಿಸುವದಿದ್ದಲ್ಲಿ ..’ಕೊಡಲಿಕ್ಕೆ ರೊಕ್ಕ ಸಜ್ಜು ಮಾಡಬೇಕಲ್ಲಾ ?’ ಎಂಬಂಥ ಪ್ರಯೋಗ ತೋರಿಸಬಹುದು.
ಪ್ರತಿಕ್ರಿಯೆ (1)
ತೆರೆಮರೆಗೆ ಸರಿದುಹೋದುದನ್ನ ಮತ್ತೆ ಮುಖ್ಯವಾಹಿನಿಗೆ ತರಲೇಬೇಕು. ಅದನ್ನು ನಾವುಗಳು (ಅದರಲ್ಲೂ ಬೇರೆ ಬೇರೆ ಸೀಮೆಯವರು ಸೇರಿ)ಜವಾಬ್ದಾರಿಯಾಗಿ ಸ್ವೀಕರಿಸಬೇಕು... ಅಂದ ಹಾಗೆ ಕೆಳಗಿನ ಕೆಲವೊಂದು ಸರಳ ಪದಗಳು ನನಗೆ ಸರಿಯನಿಸಿದವು . ಬಹುಷಃ ಅವುಗಳು ಸಂಸ್ಕೃತ ಪದಗಳೂ ಆಗಿರಬಹುದು (ನನಗೆ ಸಂಸ್ಕೃತ ಗೊತ್ತಿಲ್ಲ).
ಅವು ಹೀಗಿವೆ. Apply - ಅನ್ವಯಿಸಿ (ಉದಾ: ಈ ಗುಣಗಳು ರಾವಣನಂತವರಿಗೆ ಮಾತ್ರ ಅನ್ವಯಿಸುತ್ತವೆ..)
Random -
1) ಕ್ರಮರಹಿತ - ಕ್ರಮಬದ್ಧವಾಗಿಲ್ಲದ
2) (ಮನ)ತೋಚಿದ - ಮನಕ್ಕೆ ತೋಚಿದ, ಮನಸ್ಸಿಗೆ ಬಂದಂತ, (ಉದಾ: ಮನಸ್ಸಿಗೆ ತೋಚಿದಂತೆ ಆಯ್ದುಕೊ)
3) ಮನವೀ(ಯು)ವ - (ಮನಸ್ಸು + ಈಯುವ) ಮನಸ್ಸಿನಿಂದ ಹುಟ್ಟಿದ..
Password - ಗುಪ್ತ ಪದ, ರಹಸ್ಯ ಪದ (ಪ್ರವೇಶಪದ ಅಷ್ಟೊಂದು ಸರಿಯನಿಸುವುದಿಲ್ಲ)
ಧನ್ಯವಾದಗಳೊಂದಿಗೆ,
ವಿನಾಯಕ ಖವಾಸಿ. “ಕನ್ನಡಕ್ಕಾಗಿ ಕೈ ಎತ್ತು, ನಿನ್ನ ಕೈ ಕಲ್ಪವೃಕ್ಷವಾಗುವುದು,
ಕನ್ನಡಕ್ಕಾಗಿ ಧ್ವನಿ ಎತ್ತು, ಅಲ್ಲಿ ಪಾಂಚಜನ್ಯ ಮೊಳಗುವುದು.“ – ಕುವೆಂಪು.