ಅತ್ತು ಬಿಡು ಗೆಳತಿ ಅತ್ತು ಬಿಡು 
ಮನದ ಎಲ್ಲ ದುಗುಡ ಅಳಿದು 
ಮನವು ನಿರಾಳವಾಗುವ ತನಕ 
ಅತ್ತು ಬಿಡು ಗೆಳತಿ ಅತ್ತು ಬಿಡು
 
ಮನದ ಪರದೆ ಸರಿಸಿ
ನನ್ನಿಂದ ಮುಚ್ಚಿಟ್ಟ ನೂರು ಮಾತನೊಮ್ಮೆ 
ಹೇಳಿ ಬಿಡು ಗೆಳತಿ ಹೇಳಿ ಬಿಡು
ಅಂತರಾಳದ ದುಗುಡ ಎನ್ನ ಮುಂದೆ ತೋಡುತ
ಅತ್ತು ಬಿಡು ಗೆಳತಿ ಅತ್ತು ಬಿಡು
 
ನಿನ್ನ ಸುಖದಲ್ಲಿಲ್ಲದಿದ್ದರು ಬೇಡ ಪಾಲು 
ನಿನ್ನ ಕಷ್ಟದಲ್ಲಿ ಅರ್ಧದಷ್ಟಾದರೂ ಪಾಲು ನನಗೇ ಕೊಡು
ಗಟ್ಟಿಯಾಗಿ ಒಮ್ಮೆ ತಬ್ಬಿಬಿಡು ಗೆಳತಿ 
ತಬ್ಬಿ ಜೋರಾಗಿ ಅತ್ತು ಬಿಡು 
ನಿನ್ನ ಕಂಬನಿಯಲಿ ಎನ್ನ ಹೆಗಲು ತೋಯಲಿ ಬಿಡು
 
ಮನದ ಎಲ್ಲ ನೋವು ಅಳಿದು ಅಂತರಾಳವು ಹಗುರಾದ ಮೇಲೆ 
ನಕ್ಕು ಬಿಡು ಗೆಳತಿ ಒಮ್ಮೆ ನಕ್ಕು ಬಿಡು 
ಆ ನಗುವಿನಾ ನೆನಪು ನನ್ನೆದೆಯಲಿ ಅಚ್ಚಳಿಯದೆ ಉಳಿಯಲಿ ಬಿಡು
ನೆನಪು ಎನ್ನೆದೆಯಲಿ ಎಂದೆಂದೂ ಉಳಿಯಲಿ ಬಿಡು.