ನೊಂದ ಮನಕೆ ನಗುವಿನ

ಪರದೆ  ಎಳೆದು ಮತ್ತೆ

ಯತ್ನಿಸುತ್ತಿದ್ದೇನೆ ಆ

ಭಾವಗಳಿಗೆ ಜೀವ ತುಂಬಲು

ಗತಿಸಿ ಹೋದ ದಿನಗಳ

ನೆನಪ ಹೆಕ್ಕಿ ಹೆಕ್ಕಿ

ಕದ್ದು ಕದ್ದು ಹೆಣೆದು ಹೊಸೆದು

ಮತ್ತೆ ಮಗದೊಮ್ಮೆ ಇಳಿಸುತ್ತಿದ್ದೇನೆ

ನನ್ನ ಮನದಾಳವನು... ನನ್ನ

ಉಸಿರಿನಾಳಕ್ಕೆ... ನನ್ನ ಕವನದ ಮಡಿಲಿಗೆ

ಪುಟ್ಟ ಮಗುವನು ತಾಯಿಯ

ಮದಡಿಲಿಗಿಳಿಸಿದಂತೆ!

ಅಂದು ಇನ್ನು ಒಂದೇ ಬಾರಿ

ಎಂದು ನಾನು ಪರಭಾಷೆಯಲಿ

ಬರೆದ ಕವನವೇ ನನ್ನ

ಭಾವಗಳಿಗೆ ಜೀವ ತುಂಬಲು

ಒಲವ ಸೆಲೆಯಾಗಿದೆ!

ಎಲ್ಲಿಂದಲೋ ಹೆಕ್ಕಿ ತಂದ ಪದಗಳೇ

ಸ್ಪೂರ್ತಿಯ ಪುಷ್ಪಮಾಲೆಯಾಗಿದೆ..

ನನ್ನೀ ಮೌನ ಬರಹದಲಿ

ಕ್ರೋಧವೂ ಇಲ್ಲ ವಿರೋಧವೂ ಇಲ್ಲ..

ಇರುವುದು ಮುಗ್ಧ ಭಾವಗಳಿಗೆ

ಜೀವ ತುಂಬುವ ಯತ್ನ ಮಾತ್ರ ..

ಕಣ್ಣ ಕಟ್ಟೆಯೊಡೆದು ಕೆನ್ನೆಗಿಳಿಯಲು

ಯತ್ನಿಸಿದ ಕಂಬನಿಯ

ನಗುವಿನೊಡನೆ ಮತ್ತೊಮ್ಮೆ

ಬೆರೆಸಿಬಿಟ್ಟಿದ್ದೇನೆ!!

ಇದೀಗ ನನ್ನದೇನಿದ್ದರೂ ಭಾವಗಳೊಡನೆ

ಸಂವಹನ.. ಎದೆಯ

ಗೂಡೊಳು ಬಚ್ಚಿಟ್ಟ ಭಾವಗಳ

ಚತುರ್ದಶ ಲೋಕಗಳ ಸುತ್ತಿ

ಬಂದರೂ ಬನ್ನಿಸಲಸದಳ !

ಅದಕ್ಕಾಗಿಯೇ ಅಂದು ನನ್ನ ಹರಸಿದ

ತಾಳ್ಮೆಯ ಬೆನ್ನಟ್ಟಿ

ಪಯಣ ಬೆಳೆಸುತ್ತಿದ್ದೇನೆ

ಮತ್ತದೇ ಮುಗ್ಧ ಭಾವಗಳಿಗೆ

ಜೀವ  ತುಂಬಿ ಸುಟ್ಟು ಹೋದ

ಕನಸುಗಳ ಬೂದಿಯ ಮೂಲೆಗೆಸೆದು

ಬರೆಯುತ್ತಿದ್ದೇನೆ ಮತ್ತದೇ

ನಿರಾಳ ನಗುವಿನೊಂದಿಗೆ....