ಪ್ರಕೃತಿ ಮಾತೆ ಜನುಮದಾತೆ ಸಸ್ಯಶಾಮಲೆ
ಶಾಂತಲೆ ತನ್ನೊಡಲಲ್ಲಿ ಬಚ್ಚಿಟ್ಟುಕೊಂಡಿದ್ದಳು
ಸುಂದರ ವಿಪಿನದ ಒಲವಿನ ಸೆಲೆ....
ಬಾನೆತ್ತರಕೆ ಬೆಳೆದು ನಿಂತ ಪಚ್ಚೆ ಮರಗಳ ಸಾಲೆ
ನೀಡಿತ್ತು ಆ ಮರಿಗುಬ್ಬಚ್ಚಿಗೊಂದು ನೆಲೆ....
ನಗರೀಕರಣದ ಛಾಯೆಯಲಿ ಯಾರೋ ಎಸೆದ ಕಲ್ಲು
ಮುಗ್ಧ ಗುಬ್ಬಚ್ಚಿಯ ಕಾಲು ಮುರಿದಿತ್ತು....
ಗುಬ್ಬಚ್ಚಿ ನೋವಿನಿಂದ ಚೀರಿತ್ತು...
ಸತ್ಯ ಬಂದು (ಅ)ನಾಗರೀಕರ ಅಂತರಾತ್ಮದ ಬಾಗಿಲು
ತಟ್ಟಿ ನುಡಿದಿತ್ತು "ಇದಾವ ಪರಿಯ ನ್ಯಾಯ?"
ಆದರೂ ಕೇಳುವವರಿಲ್ಲ ಮುಗ್ಧ ಗುಬ್ಬಚ್ಚಿಯ ವೇದನೆಯ
ಎಲ್ಲವೂ ಇಲ್ಲಿ ಅಯೋಮಯ...
ಗುಬ್ಬಚ್ಚಿ ಮೌನವಾಗಿಯೇ ಹರಿಸಿತ್ತು ಕಂಬನಿ
ಯಾರೂ ಆಲಿಸಲೇ ಇಲ್ಲ ಅದರ ನೋವಿನ ದನಿ
ಮೊಳಗಿತ್ತು ಪಾಶ್ಚಾತ್ಯ ಸಂಗೀತದ ಅಬ್ಬರ
ಕುಣಿದು ಕುಪ್ಪಳಿಸಿತ್ತು ಮಾನವರ (?) ಪರಿವಾರ
ಹೊತ್ತಿಳಿಯುತ್ತಿದ್ದಂತೆ ಎಲ್ಲಿಗೋ ತೆರಳಿದ್ದ
ಹಿರಿಗುಬ್ಬಚ್ಚಿ ಬಂತು ಮರಳಿ ಗೂಡಿಗೆ...
ಮರಿಗುಬ್ಬಚ್ಚಿ ಹಿರಿಯಣ್ಣನ ಕಣ್ಣಲ್ಲಿ ಹುಡುಕಾಡಿತ್ತು
ಒಲವಿನ ಒಸಗೆ...... ಹಿರಿಗುಬ್ಬಚ್ಚಿ ಕಣ್ಣಲ್ಲೇ
ಕೆಂಡ ಕಾರುತ್ತಾ ಮರಿಗುಬ್ಬಚ್ಚಿಯ ರೆಕ್ಕೆ ಕತ್ತರಿಸಿತ್ತು
"ಅದಾವ ತಪ್ಪಿಗಾಗಿ ನನಗೀ ಶಿಕ್ಷೆ?"
ಎಂದು ಕಣ್ಣಲ್ಲಿ ನೋವಿನ ತೇರನೇ ತುಂಬಿ
ಎಳೆಗುಬ್ಬಚ್ಚಿ ಹಿರಿಯಣ್ಣನ ಮುಖ ನೋಡಿತ್ತು
ಮರಿಗುಬ್ಬಚ್ಚಿಯದೇನಿದ್ದರೂ ಮುಗ್ಧ ಲೋಕ
ಕ್ರೋಧದೊಳಗಣ ವ್ಯಂಗ್ಯವನರಿಯದ ಸ್ನಿಗ್ಧ ಲೋಕ
"ಅಂದು ಕೈ ತಟ್ಟಿ ನಲ್ಮೆಯಿಂದ ಮಾತು ಕೊಟ್ಟ
ನನ್ನ ಹಿರಿಯಣ್ಣನೇತಕೆ ನನ್ನ ರೆಕ್ಕೆ ಕತ್ತರಿಸಿದ "
ಎಳೆಗುಬ್ಬಚ್ಚಿ ಯೋಚಿಸುತ್ತಲೇ ಇತ್ತು
ಮೌನರೋದನದಿಂದಾಗಿ ಎದೆನೋವು ರಾತ್ರಿ ಕಾಡಿತ್ತು...
ಆದರೆ ಈ ನಿತ್ಯ ನಿರ್ಮಲೆಯ ಹಸಿರು ಸೀರೆ
ಹರಿದು ಹೋಗಿ ಮಹಲುಗಳ ಮೇಲೆ ಮಹಲುಗಳು
ಬೆಳೆದು ವಾಹನಗಳ ಸದ್ದು ಕಿವಿತಮಟೆಯ ಹರಿದು
ಆಹ್ವಾನವೀಯಲು ಅನುವಾಗಿತ್ತು ಆಮ್ಲಮಳೆಗೆ!
ಆದರೂ ಮರಿಗುಬ್ಬಚ್ಚಿ ಸುಮ್ಮನೆ
ಯೋಚಿಸುತ್ತಲೇ ಇತ್ತು...
"ನನ್ನ ಹಿರಿಯಣ್ಣನೇತಕೆ ನನ್ನ ರೆಕ್ಕೆ ಕತ್ತರಿಸಿದ ?"
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!