ಒಬ್ಬನು ಒಂದು ಮಠದ ಅನುಯಾಯಿ - ಅವನು ಒಬ್ಬಳನ್ನು ಪ್ರೀತಿಸಿ ಮದುವೆಯಾಗಬಯಸಿದ್ದಾನೆ. ಆದರೆ ಅದಕ್ಕೆ ಆ ಮಠಾಧಿಪತಿಯ ಸಮ್ಮತಿಯಿಲ್ಲ. ಇನ್ನೊಂದು ಮಠಾಧಿಪತಿಯು ಈ ಮಠಾಧಿಪತಿಯ ಮೇಲಿನ ಪೈಪೋಟಿಯಿಂದ ಈ ಮದುವೆಗೆ ಬೆಂಬಲಿಸುತ್ತಾನೆ. ಮುಂದೇನು ಆಗುತ್ತದೆ ? ಆ ಸಂಗತಿ ಬಿಡಿ. ಈ ಸಂದರ್ಭದಲ್ಲಿ ಹೀಗೊಂದು ಮಾತು -
'ಸ್ವಮಠೇ ನಿಧನಂ ಶ್ರೇಯಃ , ಪರಮಠ್ಠೇ ಭಯಾವಹಃ ' ಅಂತ ಶ್ರೀಕೃಷ್ಣನೇ ಹೇಳಿದ್ದಾನೆ'. ಈ ಲೇಖನ ಕನ್ನಡದ ಪ್ರತಿಭಾವಂತ ಮತ್ತು ಸದಭಿರುಚಿಯ ಶ್ರೇಷ್ಠ ಹಾಸ್ಯಕ್ಕೆ ಹೆಸರಾದ ಅ.ರಾ. ಸೇ. ಅವರದ್ದು. ಈ ವಾಕ್ಯವನ್ನು ಮೆಚ್ಚಿದ ನಾನು ಇಬ್ಬರು ಮೂವರು ಗೆಳೆಯರಿಗೆ whatsapp ಮೂಲಕ ಕಳಿಸಿದೆನು.
ಅವರು ಈ ವಾಕ್ಯವನ್ನು ಆಸ್ವಾದಿಸುವುದು ಇರಲಿ. (ಅವರು ಸಂಸ್ಕೃತ ಬಲ್ಲವರು). ಅವರಿಗೆ ಅರ್ಥವೇ ಆದ ಹಾಗೆ ಕಾಣಲಿಲ್ಲ. ಹಾಗಂತ ಹೇಳಲೂ ಇಲ್ಲ. ಏನೂ ಪ್ರತಿಕ್ರಿಯೆ ನೀಡಲಿಲ್ಲ.
ಇನ್ನೊಬ್ಬ ಗೆಳೆಯ ಸೈನ್ಯ , ಕಾಶ್ಮೀರ , ಚೀನಾ ಮುಂತಾದ ಅಂತರ್ರಾಷ್ಟ್ರೀಯ ಸಂಗತಿಗಳ ಬಗೆಗೆ ನನಗೆ ಅನೇಕ ಇಂಗ್ಲೀಷ್ ಬರಹಗಳನ್ನು ಕಳಿಸುತ್ತಿರುತ್ತಾನೆ. ಅವನಿಗೆ ಕಾಶ್ಮೀರ ಸಮಸ್ಯೆಯನ್ನು ಸೂಚಿಸುವ , 'ಕೊರವಂಜಿ' (ಹಿಂದೆ ಇದ್ದ ಹಾಸ್ಯ ಪತ್ರಿಕೆ - ಈಗ ಅಪರಂಜಿ ಪತ್ರಿಕೆ ಇದೆ) ಯ ಬರಹ ವೊಂದನ್ನು ಕಳಿಸಿದೆ. ಆಮೇಲೆ ಅರ್ಥವಾಯಿತೆ ಅಂತ ಕೇಳಿದೆ. ಆಗಿರಲಿಲ್ಲ ಅನ್ನುವುದು ತಿಳಿಯಿತು.' ಕಾಶ್ಮೀರ ಸಮಸ್ಯೆ ಬಗ್ಗೆ ಇದೆ, ನೋಡಪ್ಪಾ ' ಅಂತ ಹೇಳಿದೆ. details Please ಅಂತ ಕೇಳಿದ ಪುಣ್ಯಾತ್ಮ! ಏನೂಂತ ವಿವರಿಸುವುದು ?
ಇಂತಹ ಸುಸಂಸ್ಕೃತ ಹಾಸ್ಯವನ್ನು ಅರಿತು ನಲಿಯುವ ಮಂದಿ ಎಂದೂ ಕಡಿಮೆ ಸಂಖ್ಯೆಯವರೇ ! ಸಮಾನಧರ್ಮವಿದ್ದ ಒಬ್ಬ ಸಿಕ್ಕಿದರೆ ಸಾಕು ನಕ್ಕು ನಲಿಸಬಹುದು. ಸಂತೆಯನ್ನು ಕಟ್ಟಿಕೊಂಡು ನಮಗೇನು ? ಅಂತ ಕೊರವಂಜಿಯನ್ನು ಆರಂಭಿಸಿದ ರಾ.ಶಿ. ಅವರು ಒಂದೆಡೆ ಹೇಳುತ್ತಾರೆ.
ಪ್ರತಿಕ್ರಿಯೆ (1)