ಸ್ವರ್ಣಗೌರಿ ವ್ರತವನ್ನು ಭಾದ್ರಪದ ಶುದ್ಧ ತ್ರತೀಯಾದಂದು ಅಥವಾ ತದಿಗೆಯಂದು ಆಚರಿಸುವರು. ಪ್ರತಿಯೊಂದು ಆಚರಣೆಯ ಹಿಂದೆ ಸಹ ಒಂದು ಘಟನೆ, ಒಂದು ಕಥೆ ಏನಾದರೂ ಇರುತ್ತದೆ. ಈ ಸ್ವರ್ಣಗೌರಿಯನ್ನು ಮಣ್ಣಿನಿಂದಾಗಲಿ, ನದಿಯಲ್ಲಿ ತೆಗೆದ ಮರಳಿನಿಂದಾಗಲಿ ಅಥವಾ ಹರಿದ್ರಾಗೌರಿ ಕಲಶದಲ್ಲಿ ಆವಾಹಿಸಿ ಮಾಡುವುದು ಸಂಪ್ರದಾಯ.ಸ್ಕಂದ ಪುರಾಣದ ದಾಖಲೆಯಂತೆ, ಪ್ರಪಂಚದ ಜನರ ಶ್ರೇಯೋಭಿವೃದ್ಧಿಗಾಗಿ ಷಣ್ಮುಖ ಸ್ವಾಮಿಗೆ ಪರಶಿವನು ಹೇಳಿದಂಥ ವ್ರತಾಚರಣೆಯೇ ವಿಶೇಷವಾದ ‘ಸ್ವರ್ಣಗೌರಿ ವ್ರತ’ .
ಸಕಲ ಇಷ್ಟಾರ್ಥಗಳನ್ನು ನೀಡುವ, ಮಹಾಪುಣ್ಯಕರವಾದ ವ್ರತ. ಅತ್ಯಂತ ಶ್ರದ್ಧಾಭಕ್ತಿಯಲ್ಲಿ, ಆ ಪರಶಿವೆಯನ್ನು ಪೂಜಿಸುವುದು ವಿಶೇಷ. ಆಧ್ಯಾತ್ಮಿಕವಾಗಿ ನೋಡಿದರೆ ನಮ್ಮಲ್ಲಿರುವ ಒರಟುತನವನ್ನು ಹೊರಹಾಕಿ, ಒಳ್ಳೆಯದನ್ನು ಗೆಲ್ಲುವ, ಇಚ್ಛಾಶಕ್ತಿಯನ್ನು ವೃದ್ಧಿಸುವ, ಆತ್ಮ-ಪರಮಾತ್ಮನ ಸಮ್ಮಿಲನ, ಸಮನ್ವಯದ ಪ್ರತೀಕ. ವಿವಾಹಿತ ಮಹಿಳೆ ತವರು ಮನೆಗೆ ಬರುವ ಬಹುದೊಡ್ಡ ಸಂಭ್ರಮ.
ಗೌರಿ ಅಂದರೆ ಆದಿಶಕ್ತಿ, ಮಹಾಮಾಯೆ ಆಕೆ ಶಿವನ ಶಕ್ತಿ ಯೂ ಹೌದು. ಚಿತ್ತಶುದ್ಧಿಯ ಸಂಕೇತ. ನಿರಾಕಾರ ಸ್ವರೂಪಿಣಿ ಮಹಾಗೌರಿ.ಬ್ರಹ್ಮಾಂಡ ಕ್ಕೆ ಮೂಲವೇ ಆಕೆ.
ಚಂದ್ರಪ್ರಭನೆಂಬ ಅರಸನೋರ್ವ ಸತ್ಯಧರ್ಮದಲ್ಲಿ ಎತ್ತಿದ ಕೈ. ಈರ್ವರು ರಾಣಿಯರನ್ನು ಹೊಂದಿದ್ದ ಅರಸನು, ಒಮ್ಮೆ ಬೇಟೆಗೆ ಹೋದವನು, ವಿಶ್ರಾಂತಿ ಪಡೆಯಲು ರಮಣೀಯವಾದ ಪ್ರದೇಶವನ್ನು ಅರಸುತ್ತಾ ಹೋದಾಗ, ಅಲ್ಲಿ ಕೆಲವು ಅಪ್ಸರ ಸ್ತ್ರೀಯರು ದೇವತಾ ಪೂಜೆ, ವ್ರತಾಚರಣೆ ಮಾಡುವುದನ್ನು ಕಂಡನು. ಅವರು ವ್ರತದ ನೇಮನಿಷ್ಠೆಯನ್ನು ತಿಳಿಸಿ, ಅರಸನ ಕೈಗೆ ಒಂದು ಹಳದಿ ದಾರವನ್ನು ಬಿಗಿದರು.
ಅರಮನೆಗೆ ಬಂದ ಅರಸನ ಬಲದ ಕೈಯಲ್ಲಿ ಕಟ್ಟಿದ್ದ ದಾರವನ್ನು ಹಿರಿಯ ರಾಣಿಬಿಚ್ಚಿ ಎಸೆದದ್ದು ಒಂದು ಒಣಗಿದ ಗಿಡದ ಮೇಲೆ ಬಿದ್ದು, ಆ ಗಿಡ ಚಿಗುರಿ ನಳನಳಿಸಿತಂತೆ. ಕಿರಿಯ ಪತ್ನಿ ಆ ದಾರವನ್ನು ತಂದು, ಪತಿಯ ಮಾತಿನಂತೆ ವ್ರತ ಆಚರಿಸಿ ಶ್ರೇಯಸ್ಸು ಹೊಂದಿದಳಂತೆ. ಹಿರಿಯ ರಾಣಿ ಅಸಡ್ಡೆ ಮಾಡಿ ದೂಷಿಸಿದ ಕಾರಣ, ಹಲವು ರೀತಿಯ ಕಷ್ಟಗಳಿಗೆ ಈಡಾಗಿ, ಗಣೇಶನ ದರ್ಶನಕ್ಕಾಗಿ ತೆರಳಿ, ಗೌರೀ ದರ್ಶನ ಸಿಗದೆ, ಉಪವಾಸದಿಂದ ವರಲಕ್ಷ್ಮೀ ದರ್ಶನವಾಗಿ ತಿರಸ್ಕರಿಸಲ್ಪಟ್ಟು, ಕಠಿಣವಾದ ಸ್ವರ್ಣ ಗೌರಿ ವ್ರತವನ್ನು ಆಚರಿಸಿ, ಮುಂದೆ ಕೈವಲ್ಯ ಪದವಿ ಹೊಂದಿದಳು ಎಂದು ಸ್ಕಂದ ಪುರಾಣದ ಕಥೆ.
ಪುರಾಣಗಳ ಕಥೆಯನ್ನು ನಂಬುವುದು ಬಿಡುವುದು ಅವರವರ ಧೋರಣೆಗೆ ಒಳಪಟ್ಟದ್ದು. ನಮ್ಮ ಭಾರತೀಯ ಸಂಸ್ಕೃತಿ, ಆಚಾರ-ವಿಚಾರ, ಸಂಪ್ರದಾಯಗಳೆಲ್ಲ ಒಂದು ಸೀಮಿತ ಚೌಕಟ್ಟಿನೊಳಗೆ, ಹಿರಿಯರಿಂದಲೇ ನಡೆದುಕೊಂಡು ಬಂದ ಹಾದಿಯಲಿ ಸಾಗುತ್ತಿದೆ. ಹಾಗೆಂದು ಮೌಢ್ಯತನಕ್ಕೆ ಮಣೆ ಹಾಕಬಾರದು. ಕಷ್ಟ ಪಡಬೇಕು, ಗಳಿಸಬೇಕು, ಉಣ್ಣಬೇಕು.
ನಿರಾಕಾರ ಸ್ವರೂಪಿಣಿ ಗೌರಿಯನ್ನು ಹಸಿರುಡುಗೆ ತೊಡಿಸಿ, ನಮ್ಮಲ್ಲಿದ್ದ ಆಭರಣದಿಂದ ಅಲಂಕರಿಸಿ ಪೂಜೆ ವ್ರತ ಮಾಡಿ, ನೈವೇದ್ಯ ಅರ್ಪಿಸಿ ನಂತರ ಆಹಾರ ಸೇವಿಸುವರು. ಬ್ರಹ್ಮಾಂಡಕ್ಕೆ ಮೂಲವೆನಿಸಿದ ದೇವಿಯನ್ನು ಶ್ರದ್ಧಾಭಕ್ತಿಗಳಿಂದ ಭಜಿಸೋಣ.
-ರತ್ನಾ ಕೆ.ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!