ಸುಂದರವಾದ ಗುಲಾಬಿಯೊಂದು ಹಣ್ಣಾದರೆ -  ಎಂದು ಯಾರಿಗಾದರೂ ಅನ್ನಿಸಿದ್ದರೆ ಅದಕ್ಕೆ ಉತ್ತರವಾಗಿ ಸೇಬು ಇದೆ ಎಂಬುದು ತಕ್ಷಣಕ್ಕೆ ಹೊಳೆದಿರಲಾರದು ! ಗುಲಾಬಿಯ ಸಂಸಾರಕ್ಕೇ ಸೇರಿ ಅಷ್ಟೇ ಚೆಲುವನ್ನು ತನ್ನೊಳಗಿಟ್ಟುಕೊಂಡು, ಜೊತೆಗಷ್ಟು ಸಿಹಿಯ ರುಚಿಯನ್ನೂ ತುಂಬಿಕೊಂಡು ಮಾನವ ಕುಲವನ್ನೇ ಗೆದ್ದ ಹಣ್ಣು ಸೇಬು ಎಂದರೆ ತಪ್ಪಾಗಲಾರದು. ಅಲ್ಲಪ್ಪಾ ! ನಾವು ತಿನ್ನುವ ಸೇಬು ಹಣ್ಣೇ ಅಲ್ಲ! ಹಾಗಾದರೆ ತಿನ್ನುವುದೇನನ್ನು ಗೊತ್ತೇ?  ಹೌದು, ನಾವು ತಿನ್ನುವ ಸೇಬು ಹಣ್ಣಲ್ಲ, ಸಸ್ಯಶಾಸ್ತ್ರದ ಪ್ರಕಾರ ಅದು ಹೂವಿನಿಂದ ಅಂಡಾಶಯವು ಪರಾಗಸ್ಪರ್ಶಗೊಂಡು ಹುಟ್ಟಿದ ಭಾಗವಲ್ಲ. ಹೂವನ್ನು ಗಿಡಕ್ಕೆ ಹಿಡಿದಿಟ್ಟ ಪುಷ್ಪಪಾತ್ರೆ, ಇದನ್ನು ಥ್ಯಾಲಮಸ್‌ (Thalamus) ಎಂದು ಕರೆಯುತ್ತಾರೆ. ಸೇಬು ಒಂದು ಹುಸಿ ಹಣ್ಣು. ಹೂವಿನಿಂದ ಸಹಜವಾಗಿ ಹಣ್ಣಾಗುವ ಭಾಗ, ನಾವು ಸೇಬಿನಲ್ಲಿ ನಿಜಕ್ಕೂ ತಿನ್ನದ ಮಧ್ಯೆಯಿರುವ ಬೀಜದ ಭಾಗ ! ಹಣ್ಣನ್ನು ಬಿಟ್ಟು ಅದನ್ನು ಸುತ್ತುವರಿದ ಥ್ಯಾಲಮಸ್‌ ಅನ್ನು ತಿನ್ನುತ್ತೇವೆ. ಹೂವಿನ ಪುಷ್ಪಪಾತ್ರೆ ಯಿಂದ ರೂಪಾಂತರಗೊಂಡ ಫಲ - ಸೇಬು. ಸುಂದರವಾದ ಗುಲಾಬಿ, ಚೆಲುವಾಗಿಯೂ ಸಿಹಿಯಾಗಿಯೂ ಇರುವ ಸೇಬು ಎರಡೂ  ರೋಸೇಸಿಯೆ (Rosaceae) ಎಂಬ ಸಸ್ಯ ಕುಟುಂಬಕ್ಕೆ ಸೇರಿವೆ. ಸಸ್ಯಶಾಸ್ತ್ರೀಯ ಹೆಸರು-  ಮಾಲಸ್‌ ಡೊಮೆಸ್ಟಿಕಾ (Malus domestica) ಕುಟುಂಬ - ರೋಸೇಸಿಯೆ (Rosaceae)

ಮೂಲ: ನಾನು ಚಿಕ್ಕಂದಿನಲ್ಲಿ ಸೇಬು ಬ್ರಿಟಿಷರ ದೇಶದ ಹಣ್ಣು ಎಂಧೇ ತಿಳಿದಿದ್ದೆ. ಆದರೆ ಈ ಹಣ್ಣಿಗೆ ನಮ್ಮ ಸನಾತನ ಭಾರತದೇಶದ ಭಾಗವಾಗಿದ್ದ ಗಾಂಧಾರದೇಶವೇ ಮೂಲಸ್ಥಾನ ಎಂದು ತಿಳಿದು ಬಹಳ ಸಂತೋಷವಾಯಿತು. ಸೇಬಿನ ಇಂಗ್ಲೀಷ್ ನ ಹೆಸರಾದ ಆ್ಯಪಲ್‌ ಎಂದರೇನೇ ಹಣ್ಣು. ಸೇಬು ಮಧ್ಯ ಏಷಿಯಾದಲ್ಲಿ ವಿಕಾಸಗೊಂಡ ಸಸ್ಯ.

 “-ಸ್ತಾನ್”‌ ಎಂದು ಕೊನೆಗೊಳ್ಳುವ ದೇಶಗಳಾದ – ಕಜಕಿಸ್ತಾನ್‌, ತಜಕಿಸ್ತಾನ್‌, ಉಜ್ಬೆಕಿಸ್ತಾನ್‌, ಮುಂತಾದ ದೇಶಗಳನ್ನೊಳಗೊಂಡ ಪ್ರದೇಶ ಮಧ್ಯ ಏಷಿಯಾ. ಮೂಲತಃ ಕಜಕಿಸ್ತಾನ್‌ ದೇಶದ ಹೆಸರೇ “ಸೇಬಿನ ನೆಲ” ಎಂಬ ಅರ್ಥವುಳ್ಳದ್ದಾಗಿದೆ. “ಕಜಕ್‌” ಅಂದರೆ ಸೇಬುಗಳೇ ತುಂಬಿದ ಎಂದರ್ಥ! ಅಲ್ಲಿನ ವನ್ಯ ಮೂಲದಲ್ಲಿ ಈಗಲೂ ಇರುವ ಮಾಲಸ್‌ ಸಿಎವರಸೀ (Malus sieversii) ಎಂಬ ಪ್ರಭೇದದಿಂದ ಈಗ ಜಗತ್ತಿನಾದ್ಯಂತ ಬೆಳೆಯುತ್ತಿರುವ ಮಾಲಸ್‌ ಡೊಮೆಸ್ಟಿಕಾ (Malus domestica) ಪ್ರಭೇದವು ವಿಕಾಸಗೊಂಡಿದೆ. ದಟ್ಟ ಕೆಂಪು ಹಳದಿಯ ಮಿಶ್ರಣದ ಬಣ್ಣದ ಚೆಲುವಿಂದ ದುಂಡನೆಯ ಸೇಬುಗಳು ಮೂಲ ವನ್ಯತಳಿಗೆ ಹೆಚ್ಚು ಸಮೀಪವಾದುವು.

ಇತಿಹಾಸ: ಗ್ರೀಕ್‌ ದೊರೆ ಅಲೆಕ್ಸಾಂಡರ್‌ ಸೇಬಿನ ದೊಡ್ಡ ಹಣ್ಣುಗಳ ಆಯ್ಕೆಯಲ್ಲಿ ಭಾಗವಹಿಸಿ ಸಂತ ಅರಿಸ್ಟಾಟಲ್‌ಗೆ ಸೇಬಿನ ತಳಿಗಳನ್ನು ಕಳಿಸಿದ್ದ ಬಗ್ಗೆ  ಲಿಖಿತ ದಾಖಲೆಗಳು ಸಿಗುತ್ತವೆ.   ಕ್ರಿಸ್ತಪೂರ್ವ ಎರಡನೆಯ ಶತಮಾನದಲ್ಲಿಯೇ ರೋಮನ್ ದೊರೆಗಳು ಸೇಬಿನ ತಳಿಗಳನ್ನು ಬೆಳೆಸುವುದರಲ್ಲಿ ಬಹಳ ಆಸಕ್ತಿ ವಹಿಸಿದ್ದರು  ಎಂದು ಕಂಡುಬರುತ್ತದೆ.

ಸೇಬಿನ ಕೃಷಿ: ಈಗ ಹೆಚ್ಚಾಗಿ ಕೃಷಿಗೆ ಒಳಗಾಗಿರುವ ಮಾಲಸ್‌ ಡೊಮೆಸ್ಟಿಕಾ (Malus domestica) ಪ್ರಭೇದದಲ್ಲಿ ಸಾಕಷ್ಟು ವೈವಿಧ್ಯವಿರುವ ಸ್ಥಳೀಯ ತಳಿಗಳಿವೆ. ಒಂದು ಅಂದಾಜಿನಂತೆ ಸುಮಾರು 7500ಕ್ಕೂ ಹೆಚ್ಚು ತಳಿಗಳು ಜಗತ್ತಿನಾದ್ಯಂತ ಹಬ್ಬಿವೆ. ಭಾರತೀಯ ಕಾಶ್ಮೀರ ಹಿಮಾಚಲ ಪ್ರದೇಶ- ಸೇಬಿನ ತಳಿಗಳು ಹೆಚ್ಚು ಸಿಹಿಯನ್ನು ಒಳಗೊಂಡ ತಳಿಗಳು. ಇತರೆಡೆ ಹುಳಿ, ಹುಳಿ ಮಿಶ್ರಿತ ಸಿಹಿಯವು. . ಹಸಿರು, ಹಳದಿ, ಬಿಳಿ, ಹಳದಿ ಮಿಶ್ರಿತ ಕೆಂಪು, ದಟ್ಟ ಕೆಂಪು, ಕಪ್ಪು ಮುಂತಾದ ಬಣ್ಣ ಬಣ್ಣದ ಸೇಬಿನ ತಳಿಗಳು ಹೆಸರುವಾಸಿ.

ಸೇಬಿನ ಮರವು ಸಾಮಾನ್ಯವಾಗಿ  6 ರಿಂದ 15 ಅಡಿಗಳಷ್ಟು ಎತ್ತರಕ್ಕೆ ಬೆಳೆಯಬಲ್ಲದು. ಆದರೂ ವನ್ಯ ಮೂಲದಲ್ಲಿ 30 ಅಡಿಗಳಿಗೂ ಹೆಚ್ಚು ಎತ್ತರಕ್ಕೆ ಬೆಳೆದ ಉದಾಹರಣೆಗಳು ಸಾಕಷ್ಟಿವೆ. ಬಹುತೇಕ ಸೇಬಿನ ತಳಿಗಳು ಸ್ಥಳೀಯತೆಯನ್ನು ಮೆರೆಯುತ್ತಿರುವ ಹಿನ್ನೆಲೆಯಲ್ಲಿಯೇ ನಾವು ಸಿಮ್ಲಾ ಸೇಬು, ಕಾಶ್ಮೀರದ ಸೇಬು, ಫ್ಯೂಜಿ ಆಪಲ್‌ ಎಂದೆಲ್ಲಾ ಕರೆಯುತ್ತೇವೆ. ಭಾರತೀಯ ಬಳಕೆಯಲ್ಲಿ ತರಕಾರಿಯಾಗಿ ಬೇಯಿಸಿ ಬಳಸುವ ಸೇಬುಗಳು ಜನಪ್ರಿಯತೆಯನ್ನು ಪಡೆದಿಲ್ಲ. ಏನಿದ್ದರೂ ತಿನ್ನುವ ಸಿಹಿಯಾದ ಹಣ್ಣು… ಹೆಚ್ಚೆಂದರೆ ಜ್ಯೂಸ್‌ ಮಾಡಿಯೂ ಬಳಸುವ ಹಿಮಾಚಲದ ಸೇಬುಗಳು,

ಕಾಶ್ಮೀರದ  ಕೆಂಪು ಚೆಲುವ ಸೇಬು ಹಣ್ಣಿನ ನ ಕೃಷಿಯನ್ನು ಕರ್ನಾಟಕದಲ್ಲಿಯೂ ಕೆಲವು ಉತ್ಸಾಹಿ ರೈತರು 2010 ರಲ್ಲಿ ಕೃಷಿ ವಿಜ್ಞಾನಿ ಡಾ. ಪರ್ಮಾರ್‌ ಅವರ ಸಲಹೆಯಂತೆ ಕೃಷಿ ಆಸಕ್ತರ ಜೊತೆಗೆ ಸೇರಿ ಕೊಡಗು ಚಿಕ್ಕಮಗಳೂರು ಹಾಗೂ ರಾಮನಗರದಲ್ಲಿ ಸೇಬು ಸಸಿಗಳನ್ನು ನೆಟ್ಟಿದ್ದಾರೆ.

ಮಧ್ಯ ಏಷಿಯಾದ  ಮೂಲ ನಿವಾಸಿಗಳು ಪತ್ತೆ ಹಚ್ಚಿ ಮನುಕುಲಕ್ಕೆ ಸೌಂದರ್ಯದ ಹಣ್ಣಾಗಿ ಒದಗಿಸಿದ ನಂತರ ಇತರೆಡೆಗೆ ಹಬ್ಬಿಕೊಂಡಿದೆ. ಇಂದಿಗೂ ಅತಿ ಹೆಚ್ಚು ಸೇಬು ಬೆಳೆಯುವ ದೇಶವೆಂದರೆ ಚೀನಾ. ಹೆಚ್ಚೂ ಕಡಿಮೆ ಜಗತ್ತಿನ 35% ನಷ್ಟು ಹಣ್ಣುಗಳನ್ನು ಚೀನಾ ಒಂದೇ ಒದಗಿಸುತ್ತದೆ. ನಂತರದ ದೇಶಗಳಲ್ಲಿ ಕ್ರಮವಾಗಿ ಅಮೇರಿಕಾ, ಇರಾನ್, ಟರ್ಕಿ, ಇಟಲಿ ಹಾಗೂ ಭಾರತಗಳು ಬರುತ್ತವೆ.  ಜಗತ್ತಿನಾದ್ಯಂತ 60 ರಿಂದ 70 ದಶಲಕ್ಷ ಟನ್ನುಗಳ ಸೇಬು ಹಣ್ಣಿನ ಉತ್ಪಾದನೆಯನ್ನು ಹೆಚ್ಚೂ ಕಡಿಮೆ 7ರಿಂದ 8 ಸಾವಿರ ತಳಿಗಳು ನಿರ್ವಹಿಸುತ್ತವೆ.  ಇಂಗ್ಲೇಡಿನ ರಾಷ್ಟ್ರೀಯ ಹಣ್ಣು ಸಂರಕ್ಷಣಾ ತೋಟವೊಂದರಲ್ಲೇ ಸುಮಾರು 2100 ಸೇಬಿನ ತಳಿಗಳನ್ನು ಸಂಗ್ರಹಿಸಲಾಗಿದೆ.   ಅಮೆರಿಕೆಯಲ್ಲಿ ಜನಿಸಿದ ಜಾನಿ ಆ್ಯಪಲ್ಸೀಡ್ 1774ರ , ಜೀವಮಾನವಿಡೀ ಬ್ರಹ್ಮಚಾರಿಯಾಗಿದ್ದು ಕೇವಲ ಸೇಬಿನ ಪ್ರಸಾರ ಮತ್ತು ಸಸಿ ನೆಡುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು.

ಸೇಬು ಹಣ್ಣಿನ ಆರೋಗ್ಯ ಲಾಭಗಳು: ದಿನಕ್ಕೊಂದು ಸೇಬು ವೈದ್ಯರನ್ನು ದೂರವಿರಿಸುವುದು" ಎಂಬ ನಾಣ್ಣುಡಿ ನಮಗೆಲ್ಲಾ ಚಿರಪರಿಚಿತವಾಗಿದೆ. ಸೇಬಿನಲ್ಲಿ ಹಲವಾರು ಆರೋಗ್ಯಕರ ಪ್ರಯೋಜನಗಳಿದ್ದು ಈ ಕಾರಣದಿಂದಲೇ ವಿಶ್ವದಲ್ಲಿಯೇ ಅತಿ ಹೆಚ್ಚು ಸೇವಿಸಲ್ಪಡುವ ಫಲವಾಗಿದೆ. ಸೇಬಿನಲ್ಲಿ ಅಧಿಕ ಪ್ರಮಾಣದ ಆಂಟಿಆಕ್ಸಿಡೆಂಟುಗಳು, ಎಲ್ಲ ಬಣ್ಣದ ಹಣ್ಣುಗಳಂತೆ ಇದರಲ್ಲಿಯೂ ಫ್ಲೇವನಾಯ್ಡುಗಳು ಹಾಗೂ ಪೋಷಕಾಂಶಗಳಿದ್ದು ಕ್ಯಾನ್ಸರ್ ಅಭಿವೃದ್ದಿಕೊಳ್ಳುವ, ಹೃದಯದ ಕಾಯಿಲೆ ಹಾಗೂ ಮಧುಮೇಹದ ಸಾಧ್ಯತೆಯನ್ನು ತಗ್ಗಿಸುತ್ತದೆ.

ಸೇಬಿನಲ್ಲಿರುವ ಪೋಷಕಾಂಶಗಳ ವಿವರ:

ಪ್ರತಿ ನೂರು ಗ್ರಾಂ ಸೇಬುಹಣ್ಣಿನಲ್ಲಿ, 0.54 ಕಿಲೋ ಕ್ಯಾಲೋರಿ ಶಕ್ತಿ ಇದೆ. ಉಳಿದಂತೆ ಇದರಲ್ಲಿರುವ ಇತರ ಪೋಷಕಾಂಶಗಳೆಂದರೆ: 0.41 ಗ್ರಾಂ ಪ್ರೋಟೀನ್, 14.05 ಗ್ರಾಂ ಕಾರ್ಬೋಹೈಡ್ರೇಟ್, 2.1 ಗ್ರಾಂ ಕರಗುವ ನಾರು 10.33 ಗ್ರಾಂ ಸಕ್ಕರೆ, 8 ಮಿಲಿಗ್ರಾಮ್ ಸಕ್ಕರೆ, 0.15 ಮಿಲಿಗ್ರಾಂ ಕಬ್ಬಿಣ, 107 ಮಿಲಿಗ್ರಾಂ ಪೊಟ್ಯಾಶಿಯಂ, 2.0 ಮಿಲಿಗ್ರಾಂ ವಿಟಮಿನ್ ಸಿ, 41ಐಯು ವಿಟಮಿನ್ ಎ.

ಸೇಬುಗಳ ಆರೋಗ್ಯಕರ ಪ್ರಯೋಜನಗಳು: 

1, ಸೇಬು ಹಣ್ಣನ್ನು ಸಿಪ್ಪೆ ಸಹಿತ ತಿನ್ನಿ, ಸೇಬು ರಕ್ತದಲ್ಲಿಯ ಕೆಟ್ಟ ಕೊಲೆಸ್ಟ್ರಾಲ್ ತಗ್ಗಿಸಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸುವ ಮೂಲಕ ಹೃದಯದ ಕಾಯಿಲೆ ಆವರಿಸುವ ಸಾಧ್ಯತೆಯನ್ನು ತಗ್ಗಿಸುತ್ತದೆ..ಹೃದಯದ ಆರೋಗ್ಯವನ್ನುವೃದ್ಧಿಸುತ್ತದೆ.

2. ಸೇಬಿನಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಇರುವ ಕಾರಣ ಹೆಚ್ಚು ಹೊತ್ತಿನವರೆಗೆ ಹೊಟ್ಟೆ ತುಂಬಿದ ಭಾವನೆ ಮೂಡಿಸಿ ತೂಕ ಕಳೆದುಕೊಳ್ಳಲು ನೆರವಾಗುತ್ತದೆ

3. ಸೇಬಿನಲ್ಲಿರುವ ಪಾಲಿಫೆನಾಲ್ ಆಂಟಿ ಆಕ್ಸಿಡೆಂಟುಗಳು ಮಧುಮೇಹ ಆವರಿಸುವ ಸಾಧ್ಯತೆಯನ್ನು ತಗ್ಗಿಸುತ್ತವೆ.

4. ಸೇಬಿನಲ್ಲಿರುವ ರಕ್ಷಣಾ ರಾಸಾಯನಿಕಗಳು ಅಥವಾ ಫೈಟೋ ಕೆಮಿಕಲ್ಸ್ ಕ್ಯಾನ್ಸರ್ ಉಂಟಾಗುವ ಸಾಧ್ಯತೆಯನ್ನು ತಗ್ಗಿಸುತ್ತವೆ.

5. ಮೆದುಳಿನ ಆರೋಗ್ಯವನ್ನು ವೃದ್ಧಿಸುತ್ತದೆತನ್ಮೂಲಕ ಸ್ಮರಣಶಕ್ತಿ ಹೆಚ್ಚುತ್ತದೆ ಹಾಗೂ ಅಲ್ಜೀಮರ್ಸ್ ಕಾಯಿಲೆಯ ಸಾಧ್ಯತೆಯನ್ನು ತಗ್ಗಿಸುತ್ತದೆ.

6.ಸೇಬಿನಲ್ಲಿ ಆಂಟಿ ಆಕ್ಸಿಡೆಂಟುಗಳು ಸಮೃದ್ದವಾಗಿದ್ದು ಅಸ್ತಮಾ ಕಡಿಮೆಗೊಳಿಸುವಲ್ಲಿ ತಮ್ಮ ನೆರವನ್ನು ನೀಡುತ್ತವೆ.

7.ಸೇಬಿನಲ್ಲಿರುವ ಆಂಟಿ ಆಕ್ಸಿಡೆಂಟ್ ಮತ್ತು ಉರಿಯೂತ ನಿವಾರಕ ಸಂಯುಕ್ತಗಳು ಮೂಳೆಗಳ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತವೆ . ಮೊತ್ತವಾಗಿ ಮೂಳೆಗಳ ಆರೋಗ್ಯವನ್ನು ವೃದ್ಧಿಸುತ್ತವೆ. ವಯಸ್ಕ ಮಹಿಳೆಯರಿಗೆ ಕ್ಯಾಲ್ಸಿಯಂ ಉತ್ಪತ್ತಿಯ ಪ್ರಮಾಣ ಕಡಿಮೆ ಇರುವುದರಿಂದ ಇವರು  ಹೆಚ್ಚಾಗಿ ಸೇವಿಸಬೇಕು.

8. ಸೇಬಿನ ಸೇವನೆಯು ತ್ವಚೆ ಮತ್ತು ಕೂದಲ ಆರೋಗ್ಯವನ್ನು ವೃದ್ಧಿಸುತ್ತದೆ

9. ಗರ್ಭಿಣಿಯರು ದಿನಕ್ಕೊಂದು ಸೇಬು ತಪ್ಪದೇ ತಿಂದರೆ ಹುಟ್ಟುವ ಮಗುವಿನ ಮೆದುಳಿನ ಆರೋಗ್ಯವನ್ನು ವೃದ್ಧಿಸುತ್ತದೆ

10.  ಸೇಬು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಇದು ನಮ್ಮ ಕರುಳುಗಳಲ್ಲಿರುವ ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾಗಳಿಗೆ ಉತ್ತಮವಾಗಿದೆ. ಅಲ್ಲದೇ ಈ ನಾರು ದೊಡ್ಡ ಕರುಳಿನಲ್ಲಿ ಹಾದು ಹೋಗುವಾಗ ಆರೋಗ್ಯಕರ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.

ಅಪಾಯ: 

ಸೇಬಿನ ಬೀಜಗಳಲ್ಲಿ ಸ್ವಲ್ಪ ಪ್ರಮಾಣದ ವಿಷಕಾರಿ ಅಂಶಗಳು ಇರಬಹುದು. ಬೀಜಗಳ ಸೇವನೆಯಿಂದ ಅಲ್ಪ ಪ್ರಮಾಣದ ಅನಾರೋಗ್ಯ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ಸೇಬನ್ನು ಸೇವಿಸುವಾಗ ಬೀಜಗಳನ್ನು ತೆಗೆದು ತಿನ್ನಿ.

(ಆಧಾರ) -ಜಯಂತಿ ಕೈಪು

ಚಿತ್ರ ಕೃಪೆ: ಇಂಟರ್ನೆಟ್ ತಾಣ